ಲಕ್ಕೇನಹಳ್ಳಿ ಎತ್ತಿನ ಹೊಳೆ ಉದ್ದೇಶಿತ ಜಲಾಶಯ ನಿರ್ಮಾಣಕ್ಕೆ ರೈತರ ಬಾರಿ ವಿರೋಧ

ದೊಡ್ಡಬಳ್ಳಾಪುರ: ತಾಲೂಕಿನ ಲಕ್ಕೇನಹಳ್ಳಿಯಲ್ಲಿ ಎತ್ತಿನಹೊಳೆ ಉದ್ದೇಶಿತ ಜಲಾಶಯ ನಿರ್ಮಾಣ ಕಾಮಗಾರಿ ಬಹಳ ಬರದಿಂದ ಸಾಗುತ್ತಿದೆ. ಲಕ್ಕೇನಹಳ್ಳಿಯಲ್ಲಿ ಡ್ಯಾಂ ನಿರ್ಮಾಣವಾದರೆ ಡ್ಯಾಂ ಸುತ್ತಾಮುತ್ತ ಇರುವ ಕೆಲವೊಂದು ಹಳ್ಳಿಗಳು ಮುಳುಗಡೆಯಾಗುತ್ತವೆ. ಮುಳುಗಡೆಯಾಗುವ ಹಳ್ಳಿಗಳಲ್ಲಿ ಜನರು ವಾಸ ಮಾಡಲು ಆಗುವುದಿಲ್ಲ. ಆದ್ದರಿಂದ ಈ ಹಳ್ಳಿಗಳ ಜನರಿಗಾಗಿ ಪರ್ಯಾಯವಾಗಿ ಹೊಸ ಹಳ್ಳಿ‌ ಸೃಷ್ಟಿ ಮನೆ, ಜಮೀನು ನೀಡುತ್ತೇವೆ. ಇದಕ್ಕೆ ಎಲ್ಲರು ಸಹಕರಿಸಬೇಕೆಂದು ಸರ್ಕಾರ ತಿಳಿಸಿದೆ.

ಸರ್ಕಾರದ ಈ ನಿರ್ಧಾರಕ್ಕೆ ಇಲ್ಲಿನ ರೈತರು, ನಿವಾಸಿಗಳು ಭಾರಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ನಮಗೆ ಸರ್ಕಾರ ನೀಡುವ ಅಂಗೈ ಅಗಲ ಭೂಮಿ, ಮನೆ ಬೇಡ, ನಮ್ಮ ನಮ್ಮ ಹಳ್ಳಿಗಳಲ್ಲೇ ನಾವು ವಾಸ ಮಾಡುತ್ತೇವೆ. ನಮ್ಮ ಜಮೀನಿನಲ್ಲೇ ಉತ್ತಿಬಿತ್ತು ಬೆಳೆ ಬೆಳೆಬೆಳೆದು ಜೀವನ ಸಾಗಿಸುತ್ತೇವೆ. ನಾವು ಹುಟ್ಟಿ ಬೆಳೆದ ಜಾಗವನ್ನು ಯಾವುದೇ ಕಾರಣಕ್ಕೂ ಬಿಟ್ಟು ಕೊಡುವುದಿಲ್ಲ ಎಂದು ಒಕ್ಕೊರಲಿನಿಂದ ಹೇಳಿದ್ದಾರೆ.

ಸಾಸಲು ಹೋಬಳಿಯಲ್ಲಿ ಹೆಚ್ಚಾಗಿ ಭೂಮಿತಾಯಿಯನ್ನು ನಂಬಿ ಬದುಕುತ್ತಿದ್ದೇವೆ. ನಮಗೆ ವ್ಯವಸಾಯ ಬಿಟ್ಟರೆ ಬೇರೇನು ಬರುವುದಿಲ್ಲ. ಸುಮಾರು 10 ಕೋಟಿಗೂ ಹೆಚ್ಚು‌ ವಹಿವಾಟಿನ ಅಡಿಕೆ ಬೆಳೆ ಬೆಳೆಯುತ್ತೇವೆ. ಈಗಿದ್ದಾಗ ಇಲ್ಲಿ ಡ್ಯಾಂ ನಿರ್ಮಾಣ‌ ಮಾಡಿ‌ ನಮ್ಮ‌ ಬದುಕನ್ನು‌ ನಾಶ ಮಾಡಲು‌ ಸರ್ಕಾರ ಮುಂದಾಗಿದೆ ಎಂದು ಆಕ್ರೋಶ‌ವ್ಯಕ್ತಪಡಿಸಿದರು.

ಎತ್ತಿನಹೊಳೆ ಯೋಜನೆಗೆ ನಮ್ಮ ವಿರೋಧವಿಲ್ಲ. ಲಕ್ಕೇನಹಳ್ಳಿಯಲ್ಲಿ ಡ್ಯಾಂ‌ ನಿರ್ಮಾಣ ಮಾಡುವುದಕ್ಕೆ ನಮ್ಮ ವಿರೋಧವಿದೆ. ನಮ್ಮ ಪ್ರಾಣವಾದರೂ ಬಿಡುತ್ತೇವೆ ಡ್ಯಾಂ ನಿರ್ಮಾಣ ಮಾಡುವುದಕ್ಕೆ ಬಿಡುವುದಿಲ್ಲ ಎಂದು ಹೇಳಿದರು.

ದಯವಿಟ್ಟು ರೈತರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡಬೇಡಿ, ನಮಗೆ ಪರಿಹಾರ ಬೇಡ, ನಮಗೆ ನಮ್ಮ ಬದುಕು ಮುಖ್ಯ. ಆದ್ದರಿಂದ ಇಲ್ಲಿ ಡ್ಯಾಂ ನಿರ್ಮಾಣ ಮಾಡಿ ನಮ್ಮ ಬದುಕಿಗೆ ಕೊಳ್ಳಿ ಇಡಬೇಡಿ ಎಂದು ಮನವಿ ಮಾಡಿದರು.

ಜೂ.21ರಂದು ದೊಡ್ಡಬಳ್ಳಾಪುರ ತಾಲೂಕಿನ ಲಕ್ಕೇನಹಳ್ಳಿಯಲ್ಲಿ ಎತ್ತಿನಹೊಳೆ ಉದ್ದೇಶಿತ ಜಲಾಶಯ ನಿರ್ಮಾಣ ಕಾಮಗಾರಿಗಳ ಸ್ಥಳವನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಪರಿಶೀಲನೆ ನಡೆಸಿ. ಇದೇ ವೇಳೆ ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಿದರು. ಈ‌ ಸಭೆಯಲ್ಲಿ ಅವರು ಹೇಳಿದ ಮಾತುಗಳು ನಾವು ಕೇಳಿದ್ದೇವೆ ಅಷ್ಟೆ ನಮ್ಮ ಮಾತು, ನಮ್ಮ ಅಹವಾಲು ಸ್ವೀಕರಿಸದೇ ಸಭೆಯನ್ನು ಮುಕ್ತಾಯಗೊಳಿಸಿ ಹೊರಟು ಹೋದರು ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ದಾಸರಪಾಳ್ಯ ರಾಮಣ್ಣ, ವಕೀಲರಾದ ನರಸಿಂಹ ಗೌಡ, ಸಾಸಲು ಗ್ರಾಮ ಪಂಚಾಯ್ತಿ ಅಧ್ಯಕ್ಷ ನಂದಿನಿ ಪ್ರಸನ್ನ, ಗ್ರಾಮ ಪಂಚಾಯ್ತಿ ಸದಸ್ಯ ಗೋವಿಂದರಾಜ್, ಮುಖಂಡರಾದ ಲಕ್ಕಣ್ಣ, ರೈತ ಮುಖಂಡ ಸೇರಿದಂತೆ ಲಕ್ಕೇನಹಳ್ಳಿ ಸುತ್ತಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು.