ಮಾಧ್ಯಮಗಳು ಸತ್ಯವನ್ನು ಮರೆಮಾಚುವ ಕೆಲಸ ಮಾಡಬಾರದು–ಮುಖ್ಯಮಂತ್ರಿ ಸಿದ್ದರಾಮಯ್ಯ
*ಬೆಂಗಳೂರು:* ಮಾಧ್ಯಮಗಳು ವಸ್ತುಸ್ಥಿತಿಯನ್ನು ಜನರ ಮುಂದೆ ಇಡಬೇಕೇ ವಿನಃ, ಸತ್ಯವನ್ನು ಮರೆಮಾಚುವ ಕೆಲಸ ಮಾಡಬಾರದೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.
ಅವರು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸುಲೋಚನಾ ಸಭಾಂಗಣದಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾದ ಪತ್ರಿಕಾ ದಿನಾಚರಣೆ 2025, ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ವಿತರಣೆ ಹಾಗೂ ಮುಖ್ಯಮಂತ್ರಿಗಳ ಮಾಧ್ಯಮ ಸಂಜೀವಿನಿ ಯೋಜನೆ ಉದ್ಘಾಟಿಸಿ ಮಾತನಾಡಿದರು.
ಮಾಧ್ಯಮಗಳು ದೀನ, ದಮನಿತರ ದನಿಯಾಗಿ ಕೆಲಸ ಮಾಡಬೇಕು. ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರು ಸಂವಿಧಾನದಲ್ಲಿ ನ್ಯಾಯ, ಸಮಾನತೆ ಎತ್ತಿಹಿಡಿದಿದ್ದರು. ಮಾಧ್ಯಮಗಳು ಸಹಿತ ಮೌಲ್ಯಗಳನ್ನು ಉಳಿಸಿ ಜನಪರ ದನಿಯಾಗಬೇಕು ಎಂದರು.
ನಮಗೆ ಈ ಕ್ಷಣ ಅಗತ್ಯವಿರುವುದು ಜಾತಿ ರಹಿತ, ಮಾನವೀಯ ಮೌಲ್ಯಗಳುಳ್ಳ ಸಮಾಜ. ಆದರೂ ಕೆಲವರು ದ್ವೇಷ, ಅಸಹನೆಯಿಂದ ಸಮಾಜದ ಸ್ವಾಸ್ಥ್ಯವನ್ನು ನಾಶ ಪಡಿಸುವ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ನಾವು ಯಾವುದೇ ಆಸ್ಪದ ನೀಡಬಾರದು. ಇತ್ತೀಚೆಗೆ ಸುಳ್ಳು ಸುದ್ದಿಗಳು ಮಾಧ್ಯಮಗಳಲ್ಲಿ ರಾರಾಜಿಸುತ್ತಿವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಲ್ಕನೇ ಅಂಗ ಎನಿಸಿರುವ ಪತ್ರಿಕಾರಂಗಕ್ಕೆ ಬಹಳಷ್ಟು ಜವಾಬ್ದಾರಿಗಳಿವೆ. ಕಾಸಿಗಾಗಿ ಸುದ್ದಿ, ಸುಳ್ಳು ಸುದ್ದಿಗೆ ಮಾಧ್ಯಮಗಳು ಕಡಿವಾಣ ಹಾಕುವುದು ಮುಖ್ಯ. ಪತ್ರಿಕಾ ಸ್ವಾತಂತ್ರ್ಯವನ್ನು ಉತ್ತಮವಾಗಿ ಬಳಸಿಕೊಂಡ ಒಟ್ಟು 180 ದೇಶಗಳ ಪೈಕಿ ಭಾರತ 151 ನೇ ಸ್ಥಾನದಲ್ಲಿದೆ. ಇದು ಉತ್ತಮ ಬೆಳವಣಿಗೆಯಲ್ಲ. ಮಾಧ್ಯಮದವರಾಗಿ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಿ, ತಮ್ಮ ಕೆಲಸವನ್ನು ಆತ್ಮಾವಲೋಕನ ಮಾಡಬೇಕು. ಮೌಢ್ಯವನ್ನು ತೊಡೆದು ಹಾಕಿ ವೈಚಾರಿಕತೆ ಬೆಳೆಸಿಕೊಳ್ಳಬೇಕು. ಸುಳ್ಳು ಸುದ್ದಿ ನಿಯಂತ್ರಣಕ್ಕೆ ಸರ್ಕಾರ ಸದ್ಯದಲ್ಲೇ ಕಾಯ್ದೆ ತರಲಿದೆ ಎಂದು ತಿಳಿಸಿದರು.
ಮ್ಯಾಗ್ಸಸೆ ಪ್ರಶಸ್ತಿ ವಿಜೇತ, ಹಿರಿಯ ಪತ್ರಕರ್ತರಾದ ಪಿ. ಸಾಯಿನಾಥ್ ಮಾತನಾಡಿ, 40 ವರ್ಷಗಳ ಹಿಂದೆ ಚಾಲ್ತಿಯಿದ್ದ ಪತ್ರಿಕೋದ್ಯಮ ಈಗಿಲ್ಲ. ಈಗ ಕಾಪ್ರೋರೇಟ್ ವಲಯದೊಳಗೆ ಪತ್ರಿಕಾರಂಗ ತೆರೆದುಕೊಳ್ಳುತ್ತಿದೆ. ಮಾರ್ಚ್ 31, 2021ಕ್ಕೆ ದೇಶದ ಮಾಧ್ಯಮಗಳು ಒಟ್ಟು 2.51 ಟ್ರಿಲಿಯನ್ ಬಂಡವಾಳ ಹೊಂದಿದೆ. ಕೆಲವೇ ವ್ಯಕ್ತಿಗಳಲ್ಲಿ ದೇಶದ 70 ಮೀಡಿಯಾಗಳು ವಶವಾಗಿದೆ. 4 ನೇ ದೊಡ್ಡ ಆರ್ಥಿಕತೆ ಹೊಂದಿರುವ ನಮ್ಮ ರಾಷ್ಟ್ರದಲ್ಲಿನ 211 ಮಿಲಿಯನೇರ್ ಗಳಿಂದ ಶೇ.25ರಷ್ಟು ಜಿಡಿಪಿ ಉತ್ಪತ್ತಿಯಾಗುತ್ತಿದೆ. ಮಾಧ್ಯಮಗಳೂ ಆರ್ಥಿಕವಾಗಿ, ಸಬಲಗೊಂಡರೂ ಸುದ್ದಿಯ ಪ್ರಸಾರ ಹಾಗೂ ಗುಣಮಟ್ಟ ಕಡಿಮೆಯಾಗುತ್ತಿದೆ. ಈ ಕಾರ್ಪೋರೇಟ್ ಜಗತ್ತು ಬಹುತೇಕ ಮಾಧ್ಯಮಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಂಡಿದ್ದು, ಇದರಿಂದ ಸತ್ಯ, ಸಮಂಜಸ ಸುದ್ದಿ ಪ್ರಸಾರಕ್ಕೆ ಧಕ್ಕೆ ಉಂಟಾಗುತ್ತಿದೆ. ಕೋವಿಡ್-19 ಸಂದರ್ಭದಲ್ಲಿ ಸುಮಾರು 4000 ಪತ್ರಕರ್ತರು ತಮ್ಮ ಕೆಲಸವನ್ನು ಕಳೆದುಕೊಂಡರು. ಮಾಧ್ಯಮಗಳು ಸಹ ತನ್ನ ವ್ಯಾಪಾರಿ ಮನೋಭಾವ ದಿಂದ ನೈಜ ಪತ್ರಿಕೋದ್ಯಮವನ್ನು ಮರೆತಂತಿದೆ. ಇದು ಪತ್ರಕರ್ತ ಹಾಗೂ ಮಾಧ್ಯಮ ಈ ಇಬ್ಬರ ಭವಿಷ್ಯಕ್ಕೂ ಮಾರಕವೆಂದು ತಿಳಿಸಿದರು.
ಹಿರಿಯ ಸಾಹಿತಿಗಳು ಹಾಗೂ ಸಂಸ್ಕೃತಿ ಚಿಂತಕರಾದ ರಹಮತ್ ತರೀಕೆರೆ ಮಾತನಾಡಿ ಸುದ್ದಿಯನ್ನು ನೋಡುವ ದೃಷ್ಟಿಕೋನ, ವ್ಯಾಖ್ಯಾನದಲ್ಲಿ ಹಲವು ವ್ಯತ್ಯಾಸಗಳಿರುತ್ತದೆ. ನಿಜ ಸುದ್ದಿಯನ್ನು ವ್ಯಾಖ್ಯಾನಿಸಿದಾಗ ಅದರಲ್ಲಿ ಹತ್ತು ಹಲವು ಪದರಗಳು ತೆರೆದುಕೊಳ್ಳುತ್ತದೆ. ಕಳೆದ 20 ವರ್ಷಗಳಿಗೆ ಹೋಲಿಸಿದರೆ ಮಾಧ್ಯಮಗಳು ಮಲಿನಗೊಂಡಿದೆ. ನೋಡುಗರನ್ನು ಹೆಚ್ಚಿಸುವ, ವ್ಯಾಪಾರೀಕರಣದಲ್ಲಿ ಕೆಲಸವನ್ನು ಕೆಲವೊಂದು ಮಾಧ್ಯಮ ಮಾಡುತ್ತಿದೆ. ಇದು ಸಮಾಜಕ್ಕೆ ಮಾರಕ. ಭಾಷೆಯನ್ನು ದ್ವೇಷಕ್ಕೆ ಬಳಸುವ ಕೆಲಸ ಮಾಡಬಾರದು. ಮಾಧ್ಯಮಗಳು ಅಶ್ಲೀಲ ಭಾಷೆ ಬಳಸಿ ಸಮಾಜವನ್ನು ವಿರೂಪಗೊಳಿಸಬಾರದು. ಮಾಧ್ಯಮ ಸ್ವಾತಂತ್ರ್ಯವನ್ನು ಸಹ ಸದ್ಭಳಕೆ ಮಾಡಬೇಕೇ ವಿನಃ ಅದನ್ನು ಸ್ವಾರ್ಥಕ್ಕೆ ಬಳಸಿಕೊಳ್ಳಬಾರದು. ಇತ್ತೀಚೆಗೆ ನಾಟಕ, ಸಿನಿಮಾ ಸೇರಿದಂತೆ ಇತರ ಮಾಧ್ಯಮಗಳಲ್ಲಿ ಸಹ ಭಾಷೆಯ ಸ್ವರೂಪ ಪತನ ಹೊಂದುತ್ತಿದ್ದು, ನಾವು ಎಚ್ಚೆತ್ತುಕೊಳ್ಳದಿದ್ದರೆ, ಇದರಿಂದ ದುಷ್ಪರಿಣಾಮ ಅನುಭವಿಸಬೇಕಾಗುತ್ತದೆ ಎಂದರು.
ಕನ್ನಡ ಮಾಧ್ಯಮ ಅಕಾಡೆಮಿಯ ಅಧ್ಯಕ್ಷರಾದ ಶ್ರೀಮತಿ ಆಯೇಷ್ ಖಾನಂ ಮಾತನಾಡಿ, ಇಂದು ಪತ್ರಿಕಾ ದಿನಾಚರಣೆಯ ಹುಟ್ಟು ಹಬ್ಬ. ಕನ್ನಡ ಪತ್ರಿಕೋದ್ಯಮದ ಇತಿಹಾಸಕ್ಕೆ 182 ವರ್ಷಗಳು ಸಂದಿವೆ. ಕನ್ನಡದ ಮೊದಲ ಪತ್ರಿಕೆ ಮಂಗಳೂರು ಸಮಾಚಾರ್ 1843ರ ಜುಲೈ 1 ರಿಂದ ಮಂಗಳೂರಿನಲ್ಲಿ ಬಾಸೆಲ್ ಮಿಷನ್ ಅವರ ಮುದ್ರಣಾಲಯದಿಂದ ಪ್ರಕಟವಾಯಿತು. ರೆವರೆಂಡ್ ಹರ್ಮನ್ ಮೋಗ್ಲಿಂಗ್ ಅವರು ಸಂಪಾದಕರಾಗಿದ್ದರು. ಜರ್ಮನ್ ಮತ ಪ್ರಚಾರಕರಾದ ಮೋಗ್ಲಿಂಗ್ ಅವರು ಕನ್ನಡ ಕಲಿತು ಸ್ಥಳೀಯ ಸಾಹಿತ್ಯ ಮತ್ತು ಶಿಕ್ಷಣದಲ್ಲಿ ಆಸಕ್ತಿ ಹೊಂದಿ ನಾಲ್ಕು ಪುಟಗಳ ನ್ನೊಳಗೊಂಡ ಮಂಗಳೂರು ಸಮಾಚಾರ್ ಪತ್ರಿಕೆಯನ್ನು ಪ್ರಕಟಿಸಿದರು. ವರ್ತಮಾನಗಳು, ವಾಚಕರ ವಾಣಿಗಳು, ಅಂಕಣಗಳನ್ನು, ಸಾಹಿತ್ಯಗಳನ್ನು ಕುರಿತು ಪತ್ರಿಕೆಯಲ್ಲಿ ಪ್ರಕಟವಾಗುತ್ತಿತ್ತು, ಎಂದು ಪತ್ರಿಕೋದ್ಯಮದ ಹಿನ್ನಲೆಯನ್ನು ತಿಳಿಸಿದರು.
ಮುಂಬೈ, ಕಾಸರಗೋಡು, ಛತ್ತೀಸ್ ಘಡ್, ದುಬೈ, ಅಮೆರಿಕಾದಲ್ಲಿ ಕನ್ನಡಿಗರು ಇರುವ ಜಾಗದಲ್ಲಿ ಕನ್ನಡ ಭಾಷೆ ಬೆಳೆದಿದೆ. ಸುಳ್ಳು ಸುದ್ದಿ ಪ್ರಸಾರ ಕುರಿತಂತೆ ಮಾಧ್ಯಮ ಅಕಾಡೆಮಿ ವತಿಯಿಂದ ಸೆಮಿನಾರ್ ಗಳನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಮಾತನಾಡಿ, ಮೂರು ದಶಕಗಳಿಂದ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ವಿತರಿಸುವ ಕುರಿತು ಬೇಡಿಕೆ ಇಡಲಾಗಿತ್ತು, ಇದನ್ನು ಮುಖ್ಯಮಂತ್ರಿಗಳು ಕಾರ್ಯರೂಪಕ್ಕೆ ತಂದಿದ್ದಾರೆ. ಅದೇ ರೀತಿ ಪತ್ರಕರ್ತರ ಆಸ್ಪತ್ರೆ ವೆಚ್ಚ ಭರಿಸಲು ಯೋಜನೆ ನೀಡಬೇಕು ಎಂದು ಬೇಡಿಕೆಗೆ ಸ್ಪಂದಿಸಿ “ಮುಖ್ಯಮಂತ್ರಿಗಳ ಮಾಧ್ಯಮ ಸಂಜೀವಿನಿ” ಯನ್ನು ಉದ್ಘಾಟಿಸಿ ನುಡಿದಂತೆ ನಡೆದಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಯೋಜನೆಯನ್ನು ಲೋಕಾರ್ಪಣೆಗೊಳಿಸಿ, ಫಲಾನುಭವಿಗಳಿಗೆ ಬಸ್ ಪಾಸ್ ವಿತರಿಸಿದರು. ಇದರಿಂದ 5500 ಕ್ಕೂ ಹೆಚ್ಚು ಗ್ರಾಮೀಣ ಪತ್ರಕರ್ತರು ಪ್ರಯೋಜನೆ ಪಡೆಯಲಿದ್ದು, 16 ಕೋಟಿ ವೆಚ್ವವಾಗಲಿದೆ. ಮುಖ್ಯಮಂತ್ರಿ ಮಾಧ್ಯಮ ಸಂಜೀವಿನಿಯಡಿ ಮಾನ್ಯತೆ ಪಡೆದ ಪತ್ರಕರ್ತರಿಗೆ ಹಾಗೂ ಅವರ ಅವಲಂಬಿತ ಕುಟುಂಬದ ಸದಸ್ಯರಿಗೆ 5 ಲಕ್ಷದವರೆಗೆ ನಗದು ರಹಿತ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಈ ಯೋಜನೆಯಡಿ ರಾಜ್ಯದ 2500 ಪತ್ರಕರ್ತರು ಸೇರ್ಪಡೆಯಾಗಿದ್ದು, ಪ್ರತಿ ವರ್ಷ ಇದಕ್ಕೆ 3.60 ಕೋಟಿ ವೆಚ್ಚವಾಗುತ್ತಿದ್ದು, ಈಗಾಗಲೇ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ನಲ್ಲಿ 6.79 ಕೋಟಿ ಠೇವಣಿ ಇರಿಸಲಾಗಿದೆ. ಅಲ್ಲದೆ ಫಲಾನುಭವಿಗಳಿಗೆ ಮಾಧ್ಯಮ ಅಕಾಡೆಮಿಯಂದ ಎಸ್ ಸಿ ಪಿ/ ಟಿಎಸ್ ಪಿ ಯೋಜನೆಯಡಿ ಮೋಜೋ ಕಿಟ್ ಸಹ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಮುಖ್ಯಮಂತ್ರಿಗಳ ಕಾರ್ಯದರ್ಶಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಾರ್ಯದರ್ಶಿ ಶ್ರೀಮತಿ ಬಿ.ಬಿ. ಕಾವೇರಿ, ವಾರ್ತಾ ಇಲಾಖೆ ಆಯುಕ್ತರಾದ ಹೇಮಂತ್ ಎಂ ನಿಂಬಾಳ್ಕರ್, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ. ಪ್ರಭಾಕರ್, ಕಂಠೀರವ ಸ್ಟುಡಿಯೋ ಅಧ್ಯಕ್ಷರಾದ ಮೊಹಬೂಬ್ ಪಾಷಾ, ಕರ್ನಾಟಕ ಪತ್ರಕರ್ತೆಯರ ಸಂಘ ಅಧ್ಯಕ್ಷರಾದ ಶ್ರೀಮತಿ ಪದ್ಮಾ ಶಿವಮೊಗ್ಗ, ಕರ್ನಾಟಕ ಮಾಧ್ಯಮ ಅಕಾಡೆಮಿ ಕಾರ್ಯದರ್ಶಿ ಸಹನಾ .ಎಂ ಸೇರಿದಂತೆ ಹಿರಿಯ ಗಣ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.