ಅರಣ್ಯವನ್ನು ಬೆಳೆಸುವ ಮೂಲಕ ನಮ್ಮ ಪರಿಸರವನ್ನು ಸಂರಕ್ಷಣೆ ಮಾಡಿಕೊಳ್ಳಬೇಕಿದೆ
ವಿಜಯಪುರ: ಪರ್ಯಾವರಣ ಸಂರಕ್ಷಣಾ ಗತಿ ವಿಧಿ ವಿಜಯಪುರ, ಹಾಗೂ ಗೋ ಸೇವಾ ಗತಿ ವಿಧಿ ಬೆಂಗಳೂರು ಗ್ರಾಮಾಂತರ ಜಿಲ್ಲೆ, ನಮ್ಮ ಪರಂಪರೆ ವಿಜಯಪುರ ಇವರ ಸಂಯುಕ್ತ ಆಶ್ರಯದಲ್ಲಿ ಬಸವೇಶ್ವರ ಬಡಾವಣೆಯ ಹತ್ತಿರ 4000 ಸಾವಿರ ಬೀಜದ ಉಂಡೆ ತಯಾರಿಸಿದರು.
ರಾಜ್ಯಾದ್ಯಂತ ಮಣ್ಣಿನ ಬೀಜದ ಉಂಡೆಗಳ ಬಳಕೆ ಸಮರ್ಪಕವಾಗಿ ಕಾರ್ಯಗತಗೊಳಿಸಿ, ನಾಡಿನ ಕಾಂಕ್ರಿಟ್ ನಡುವೆಯೂ ಹಸಿರು ಕಾಣುವ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ, ಬರಡು ಭೂಮಿ ಮತ್ತು ಅರಣ್ಯ ಪ್ರದೇಶಗಳಲ್ಲೂ ಸಹಾ ಗಿಡ-ಮರಗಳನ್ನು ಬೆಳೆಸುವ ಮಹತ್ತರವಾದ ಉದ್ದೇಶವನ್ನು ಹೊಂದಿದ್ದೇವೆ. ಇಂತಹ ಉತ್ತಮವಾದ ಕಾರ್ಯದಲ್ಲಿ ಪ್ರತಿಯೊಬ್ಬರೂ ಸ್ವಯಂ ಪ್ರೇರಿತರಾಗಿ ತೊಡಗಿಸಿಕೊಳ್ಳಬೇಕು ಎಂದು ಮುಖಂಡ ಬಿ.ಕೆ.ದಿನೇಶ್ ಹೇಳಿದರು.
ಅರಣ್ಯೀಕರಣ ಮಾಯವಾಗಿ, ಕಾಂಕ್ರೀಟ್ ಮಯವಾಗಿರುವುದರಿಂದ ದಿನೇ ದಿನೇ ತಾಪಮಾನ ಏರಿಕೆಯಾಗುತ್ತಿರುವುದರ ಜೊತೆಗೆ, ಮನುಷ್ಯರ ಜೊತೆಗೆ ಪ್ರಾಣಿ, ಪಕ್ಷಿಗಳು ವಾಸ ಮಾಡುವುದು ತೀರಾ ಕಷ್ಟವಾಗುತ್ತಿದೆ. ಇಂತಹ ಕಠಿಣವಾದ ಪರಿಸ್ಥಿತಿಯನ್ನು ಹೋಗಲಾಡಿಸಬೇಕೆಂದರೆ, ಅರಣ್ಯವನ್ನು ಪುನಃ ಬೆಳೆಸುವುದು ಅಗತ್ಯವಾಗಿದೆ. ಪ್ರತಿಯೊಬ್ಬ ನಾಗರಿಕರಿಗೆ ತಾವು ವಾಸಮಾಡುತ್ತಿರುವ ಭೂಮಿಯನ್ನು ಉಳಿಸಬೇಕೆನ್ನುವಂತಹ ಉತ್ತಮ ಮನಸ್ಥಿತಿ ಇರಬೇಕು. ಅರಣ್ಯವನ್ನು ಬೆಳೆಸುವ ಮೂಲಕ ನಮ್ಮ ಪರಿಸರವನ್ನು ಸಂರಕ್ಷಣೆ ಮಾಡಿಕೊಳ್ಳಬೇಕಿದೆ ಎಂದರು.
ಮುಖಂಡ ಎಸ್.ರವಿಕುಮಾರ್ ಮಾತನಾಡಿ, ನಾವು ತಯಾರಿಸುತ್ತಿರುವ 4 ಸಾವಿರ ಬೀಜದ ಉಂಡೆಗಳನ್ನು ಚನ್ನಗಿರಿ ಬೆಟ್ಟದಲ್ಲಿ ಹಾಕಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಈಗಾಗಲೇ ನಮ್ಮ ಪಟ್ಟಣದಲ್ಲಿ ಸರಕಾರಿ ಜಾಗಗಳಲ್ಲಿ, ಹಾಗೂ ರಸ್ತೆಗಳ ಇಕ್ಕೆಲುಗಳಲ್ಲಿ ಗಿಡಗಳನ್ನು ನೆಟ್ಟು ಪೋಷಣೆ ಮಾಡುತ್ತಿದ್ದೇವೆ. ಯುವಜನರೆಲ್ಲರೂ ಇಂತಹ ಉತ್ತಮ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಮುಖಂಡರಾದ ಶಿವಾಜಿರಾವ್, ದೀಪಾರಮೇಶ್, ಆಸ್ವಾದಂ ಸಂಸ್ಥೆಯ ಸ್ವಯಂ ಸೇವಕರು ಹಾಜರಿದ್ದರು.
ವಿಜಯಪುರ ಪಟ್ಟಣದಲ್ಲಿ ಬೀಜದ ಉಂಡೆಗಳನ್ನು ತಯಾರಿಸಿದ, ಸ್ಥಳೀಯರು