ಗಡ್ಡದನಾಯಕನಹಳ್ಳಿಗೆ ಹೋಗುವ ರಸ್ತೆಗೆ ಡಾಂಬರೀಕರಣ ಮಾಡುವಂತೆ ಸ್ಥಳೀಯರ ಒತ್ತಾಯ
ವಿಜಯಪುರ: ಪಟ್ಟಣದ ಬೈಪಾಸ್ ರಸ್ತೆಯ ಮೂಲಕ, ಗಡ್ಡದನಾಯಕನಹಳ್ಳಿ ಗ್ರಾಮದ ಕಡೆಗೆ ಸಂಚರಿಸುವ ರಸ್ತೆಯು ತೀರಾ ಹದಗೆಟ್ಟಿದ್ದು, ಈ ರಸ್ತೆಗೆ ಸಿಮೆಂಟ್ ಕಾಂಕ್ರೀಟ್ ಮಾಡಿಕೊಡುವಂತೆ ಹಲವಾರು ಬಾರಿ ಮನವಿಗಳು ಕೊಟ್ಟರೂ, ಏನೂ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.
ಹೋಬಳಿಯ ಗಡ್ಡದನಾಯಕನಹಳ್ಳಿ, ತಿಮ್ಮನಹಳ್ಳಿ, ಚಿಕ್ಕತತ್ತಮಂಗಲ, ದೊಡ್ಡತತ್ತಮಂಗಲ, ಹಳಿಯೂರು, ಯಲಿಯೂರು, ಮುಂತಾದ ಕಡೆಗಳಿಗೆ ಸಂಚರಿಸುವ ರಸ್ತೆಯಾಗಿದ್ದು, ರಸ್ತೆಯುದ್ಧಕ್ಕೂ ಗುಂಡಿಗಳು ಬಿದ್ದಿವೆ. ರಸ್ತೆ ಜಲ್ಲಿ ಕಲ್ಲುಗಳಿಂದ ಕೂಡಿವೆ. ಗುಂಡಿಗಳಿಗೆ ತಾತ್ಕಾಲಿಕವಾಗಿ ಜಲ್ಲಿ ತುಂಬಿಸಿದ್ದಾರೆ. ಮಳೆ ಬಿದ್ದರೆ ಈ ರಸ್ತೆಯಲ್ಲಿ ಸಂಚರಿಸುವುದು ತುಂಬಾ ಕಷ್ಟವಾಗುತ್ತದೆ. ಸುತ್ತಮುತ್ತಲಿನ ಹಳ್ಳಿಗಳಿಂದ ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳನ್ನು ಹತ್ತಿಸಿಕೊಂಡು ಬರುವ ಶಾಲಾ ವಾಹನಗಳು, ಇದೇ ರಸ್ತೆಯಲ್ಲಿ ಸಂಚರಿಸುತ್ತಿವೆ. ರಸ್ತೆಗಳು ಸರಿಯಾಗಿಲ್ಲದ ಕಾರಣ, ವಾಹನಗಳ ಶುಲ್ಕವನ್ನು ಏರಿಕೆ ಮಾಡಿದ್ದಾರೆ. ಇದರಿಂದ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಖರ್ಚು ಬರುತ್ತಿದೆ ಎಂದು ಸ್ಥಳೀಯರಾದ ನಾರಾಯಣಸ್ವಾಮಿ, ಅಭಿಷೇಕ್, ನಂಜುಂಡಪ್ಪ ಹೇಳಿದರು.
ಸ್ಥಳೀಯ ಮುಖಂಡ ನಾಗರಾಜ್ ಮಾತನಾಡಿ, ಈ ಭಾಗದ ಹಳ್ಳಿಗಳಲ್ಲಿ ಸಂಚರಿಸಲು ಸಾರಿಗೆ ಬಸ್ಸುಗಳಿಗೆ ಸಚಿವ ಕೆ.ಹೆಚ್.ಮುನಿಯಪ್ಪ ಅವರು ಚಾಲನೆ ನೀಡಿದ್ದರು. ಕೆಲವು ತಿಂಗಳುಗಳ ಕಾಲ ಮಾತ್ರವೇ ಸಂಚರಿಸಿದವು. ಪುನಃ ಬರಲೇ ಇಲ್ಲ. ಅನಿವಾರ್ಯವಾಗಿ ಈ ರಸ್ತೆಗಳಲ್ಲಿ ಸಂಚರಿಸಬೇಕಾಗಿದೆ. ರೈತರು, ತೋಟಗಳಲ್ಲಿ ಬೆಳೆದಿರುವ ಬೆಳೆಗಳನ್ನು ಪಟ್ಟಣಕ್ಕೆ ಸಾಗಾಣಿಕೆ ಮಾಡಬೇಕಾದರೂ ಬೇರೆ ದಾರಿಯಿಲ್ಲದೆ ಇದೇ ರಸ್ತೆಯಲ್ಲಿ ಸಂಚರಿಸಬೇಕಾಗಿದೆ. ಈಗಲಾದರೂ ಈ ರಸ್ತೆಗೆ ಡಾಂಬರೀಕರಣ ಮಾಡಿಸಿಕೊಡಬೇಕು ಎಂದು ಒತ್ತಾಯಿಸಿದರು.
ಈ ರಸ್ತೆಯನ್ನು ಅಭಿವೃದ್ಧಿ ಪಡಿಸಿ, ಡಾಂಬರೀಕರಣ ಮಾಡಲು ಕ್ರಿಯಾಯೋಜನೆ ತಯಾರಿಸಿ, ಕಳುಹಿಸಲಾಗಿದೆ. ಇನ್ನೂ ಅನುದಾನ ಬಿಡುಗಡೆಯಾಗದ ಕಾರಣ, ರಸ್ತೆಗೆ ಡಾಂಬರೀಕರಣ ಮಾಡಿಲ್ಲ. ಕ್ರಿಯಾಯೋಜನೆ ಅನುಮೋದನೆಗೊಂಡು, ಅನುದಾನ ಬಿಡುಗಡೆಯಾಗಿದ್ದು, ಕೆ.ಆರ್.ಡಿ.ಎಲ್. ನವರಿಂದ ಡಾಂಬರೀಕರಣ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.