ದಲಿತರು ದೇವಸ್ಥಾನ ಪ್ರವೇಶ ಹಿನ್ನೆಲೆ.. ದೇವಸ್ಥಾನಕ್ಕೆ ಬೀಗ ಹಾಕದೆ ಬಿಟ್ಟು ಹೋದ ಮುಖ್ಯಸ್ಥರು
ದೊಡ್ಡಬಳ್ಳಾಪುರ : ಅಸ್ಪೃಶ್ಯತೆ ಆಚರಣೆ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳಿಗೆ ದೂರು ನೀಡಿ, ಅಧಿಕಾರಿಗಳ ಸಮ್ಮುಖದಲ್ಲಿ ಶಾಂತಿ ಸಭೆ ನಡೆಸಿದ ದಲಿತರು ದೇವಾಲಯ ಪ್ರವೇಶ ಮಾಡಿದ ಬೆನ್ನಲ್ಲೇ ಸವರ್ಣಿಯರು ದೇವಸ್ಥಾನದ ಬಾಗಿಲು ಮುಚ್ಚದೆ ಅನಾಥವಾಗಿ ಬಿಟ್ಟು ಹೋದ ಘಟನೆ ನಡೆದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಗೂಳ್ಯ ಗ್ರಾಮದ ವೇಯಿಗಣ್ಣಮ್ಮ ದೇವಾಲಯಕ್ಕೆ ದಲಿತರಿಗೆ ಪ್ರವೇಶ ನಿರಾಕರಿಸುವ ಮೂಲಕ ಕಾನೂನುಬಾಹಿರವಾಗಿ ಅಸ್ಪೃಶ್ಯತೆ ಆಚರಣೆ ಮಾಡುತ್ತಿದ್ದ ಪ್ರಕರಣ ಬೆಳಕಿಗೆ ಬಂದಿತ್ತು.
ತಾಲೂಕಿನ ಗೂಳ್ಯ ಗ್ರಾಮದ ವೇಯಿಗಣ್ಣಮ್ಮ ದೇವಸ್ಥಾನಕ್ಕೆ ದಲಿತರಾದ ನಮಗೆ ಪ್ರವೇಶ ನಿರಾಕರಿಸಲಾಗುತ್ತಿದೆ, ನಮಗೆ ದೇವಸ್ಥಾನ ಪ್ರವೇಶಕ್ಕೆ ಅನುವು ಮಾಡಿಕೊಡಬೇಕು ಎಂದು ಗ್ರಾಮದ ಶಕುಂತಲಮ್ಮ ಅವರು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದರು.
ತಕ್ಷಣ ಎಚ್ಚೆತ್ತ ಜಿಲ್ಲಾ ಮತ್ತು ತಾಲ್ಲೂಕು ಆಡಳಿತ ಶುಕ್ರವಾರ ತಹಶಿಲ್ದಾರ್ ವಿಭಾ ವಿದ್ಯಾ ರಾಥೋಡ್ ನೇತೃತ್ವದಲ್ಲಿ ಗ್ರಾಮಕ್ಕೆ ಬೇಟಿ ನೀಡಿದ ಕಂದಾಯ, ಪೊಲೀಸ್ ಮತ್ತು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಸವರ್ಣಿಯರು ಮತ್ತು ದಲಿತರ ನಡುವೆ ಶಾಂತಿ ಸಭೆ ನಡೆಸಿ ದಲಿತರಿಗೆ ದೇವಸ್ಥಾನ ಪ್ರವೇಶಕ್ಕೆ ಅನುವು ಮಾಡಿಕೊಟ್ಟಿದ್ದರು.
ಎರಡೂ ಸಮುದಾಯಗಳ ನಡುವೆ ಶಾಂತಿ ಸಭೆ ನಡೆಸಿ, ಸಹೋದರತೆ ಮತ್ತು ಸಾಮರಸ್ಯದಿಂದ ಬದುಕುವಂತೆ ಹೇಳಿ ದಲಿತರನ್ನು ದೇವಸ್ಥಾನ ಪ್ರವೇಶ ಮಾಡಿಸಿ ಹಿಂದಿರುಗಿದ ನಂತರ ಸವರ್ಣಿಯರು ದೇವಸ್ಥಾನದ ಬಾಗಿಲು ಮುಚ್ಚದೆ, ಯಾರಿಗೂ ಜವಾಬ್ದಾರಿಯನ್ನೂ ನೀಡದೆ ಹೊರಟು ಹೋಗಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಹೆಸರು ಹೇಳಲಿಚ್ಚಿಸದ ದಲಿತ ವ್ಯಕ್ತಿಯೊಬ್ಬರು, “ಕಳೆದ ನೂರು ವರ್ಷಗಳಿಂದ ನಮ್ಮನ್ನು ಒಳಗೆ ಬಿಡುತ್ತಿರಲಿಲ್ಲ, ದೇವಸ್ಥಾನದ ಜಿರ್ಣೋದ್ದಾರಕ್ಕೆ ನಮ್ಮ ಸಮುದಾಯವೂ ಹಣ ನೀಡಿದೆ, ಆದರೂ ನಾವು ನಮ್ಮನ್ನು ಒಳಗೆ ಬಿಡಿ ಎಂದು ಕೇಳಿರಲಿಲ್ಲ, ಅಸ್ಪೃಶ್ಯತೆ ಆಚರಣೆಯಿಂದ ಮನನೊಂದ ದಲಿತ ಹೆಣ್ಣು ಮಗಳೊಬ್ಬರು ಈ ಅನಿಷ್ಟ ಆಚರಣೆಯನ್ನು ಸರ್ಕಾರದ ಗಮನಕ್ಕೆ ತಂದ ಕೂಡಲೇ ದೇವಾಲಯದ ಬಾಗಿಲು ಮುಚ್ಚದೆ ದೇವಸ್ಥಾನವನ್ನು ಅನಾಥವಾಗಿ ಬಿಟ್ಟು ಹೋಗಿದ್ದಾರೆ. ಹಗಲು ರಾತ್ರಿ ದೇವಸ್ಥಾನದ ಬಾಗಿಲು ಮುಚ್ಚದೆ ದೇವಾಲಯದಲ್ಲಿ ಏನಾದರೂ ಅವಘಡ ಸಂಭವಿಸಿದರೆ ಅದನ್ನು ದಲಿತರ ತಲೆಗೆ ಕಟ್ಟುವ ಹುನ್ನಾರ ನಡೆಸುತ್ತಿದ್ದಾರೆ” ಎಂದು ಆರೋಪಿಸಿದರು.
ಗೂಳ್ಯ ಗ್ರಾಮದಲ್ಲಿ ಒಟ್ಟು 250 ಮನೆಗಳಿವೆ. ಆ ಪೈಕಿ 150ಕ್ಕೂ ಹೆಚ್ಚು ಮನೆಗಳು ದಲಿತ ಸಮುದಾಯಕ್ಕೆ ಸೇರಿದ್ದು, ಗ್ರಾಮದೇವತೆ ವೇಯಿಗಣ್ಣಮ್ಮ ದೇವಾಲಯಕ್ಕೆ ದಲಿತರಿಗೆ ಪ್ರವೇಶ ನಿರಾಕರಿಸಲಾಗುತ್ತಿದೆ.
ಡಿಜಿಟಲ್ ಇಂಡಿಯಾ, ಮೇಕ್ ಇನ್ ಇಂಡಿಯಾ’ ಎಂದು ಹೇಳಿ ವಿಜ್ಞಾನಿಗಳು ಚಂದ್ರಲೋಕಕ್ಕೆ ಹೋಗಿ ಸಾಧನೆ ಮಾಡುತ್ತಿದ್ದರೆ, ಗ್ರಾಮಗಳಲ್ಲಿ ದಲಿತರ ಮೇಲಿನ ದೌರ್ಜನ್ಯಗಳು, ಜಾತಿ ನಿಂದನೆಗಳು ಎಗ್ಗಿಲ್ಲದಂತೆ ನಡೆಯುತ್ತಲೇ ಇದೆ. ಗೂಳ್ಯ ಗ್ರಾಮದಲ್ಲಿ ಹಬ್ಬ-ಹರಿದಿನಗಳಲ್ಲಿ ದಲಿತರನ್ನು ಅತ್ಯಂತ ಶೋಚನೀಯವಾಗಿ ನಡೆಸಿಕೊಳ್ಳಲಾಗುತ್ತಿದೆ. ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದರೂ, ದೇವಸ್ಥಾನದ ಹೊರಗಿನಿಂದಲೇ, ದೇವರನ್ನು ನೋಡಬೇಕಾದ ದುಸ್ಥಿತಿ ಇನ್ನೂ ಜೀವಂತವಾಗಿದೆ ಎಂದು ಗ್ರಾಮದ ದಲಿತರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ವೇಯಿಗಣ್ಣಮ್ಮ ದೇವಾಲಯದಲ್ಲಿ ಸವರ್ಣೀಯರು 100 ವರ್ಷಗಳಿಂದಲೂ ಪೂಜೆ ಸಲ್ಲಿಸುತ್ತಿದ್ದಾರೆ. ಆದರೆ ಇದುವರೆಗೂ ದಲಿತರಿಗೆ ಪ್ರವೇಶ ನೀಡಿಲ್ಲ.
ದೇವಾಲಯದಲ್ಲಿ ಪೂಜೆ ಮಾಡುತ್ತಿರುವ ಪೂಜಾರಿ ಬಚ್ಚೇಗೌಡ ಸೇರಿದಂತೆ ಸವರ್ಣೀಯ ವ್ಯಕ್ತಿಗಳು ದಲಿತರನ್ನು ‘ನೀವು ಹೊಲೆ ಮಾದಿಗರು ದೇವಾಲಯದ ಒಳಗೆ ಬಂದರೆ, ದೇವಸ್ಥಾನ ಮೈಲಿಗೆ ಆಗುತ್ತದೆ’ ಎಂದು ಜಾತಿ ನಿಂದನೆ ಮಾಡಿದ್ದಾರೆ ಎಂದು ಗ್ರಾಮದ ದಲಿತ ಮಹಿಳೆ ಶಕುಂತಲಮ್ಮ ಆರೋಪಿಸಿದ್ದಾರೆ.
ಪೂಜಾರಿ ಬಚ್ಚೇಗೌಡ ದಲಿತರನ್ನು ದೇವಸ್ಥಾನದ ಬಾಗಿಲಿನಲ್ಲಿಯೇ ನಿಲ್ಲಿಸುವುದರಿಂದ ನಮಗೆ ತುಂಬಾ ನೋವಾಗುತ್ತದೆ. ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ ಸಂವಿಧಾನದಲ್ಲಿ ಎಲ್ಲರಿಗೂ ಬದುಕಲು ಸಮಾನ ಹಕ್ಕುಗಳನ್ನು ನೀಡಿದ್ದಾರೆ. ಆದರೆ ನಮ್ಮ ಹಳ್ಳಿಯಲ್ಲಿ ಮೇಲ್ಟಾತಿಗರ ದೌರ್ಜನ್ಯಗಳಿಂದ ನಮಗೆ ಸ್ವಾತಂತ್ರ್ಯ ದೇವಸ್ಥಾನ ಪ್ರವೇಶ ಸೇರಿದಂತೆ ಇನ್ನಿತರ ಹಕ್ಕುಗಳು ಸಿಕ್ಕಿಲ್ಲ ಮತ್ತು ನಮ್ಮ ಮೇಲಿನ ಶೋಷಣೆಗಳು ನಿಂತಿಲ್ಲ ಎಂದು ಬೇಸರಗೊಳ್ಳುತ್ತಾರೆ ಶಕುಂತಲಮ್ಮ.
‘ದೇವಸ್ಥಾನದೊಳಗೆ ಪ್ರವೇಶ ನೀಡಿ’ ಎಂದು ಮನವಿ ಮಾಡಿದರೆ, ನೀವು ದಲಿತರಿದ್ದೀರಿ, ದೇವಸ್ಥಾನದ ಒಳಗೆ ಬಂದರೆ ನಿಮಗೆ ಲಕ್ವಾ ಹೊಡೆಯುತ್ತದೆ. ನಿಮ್ಮ ಕುಟುಂಬಗಳು ಕಷ್ಟಕ್ಕೆ ಸಿಲುಕುತ್ತವೆ ಎಂದು ಹೆದರಿಸುತ್ತಾ ಸದ್ಯದಲ್ಲೇ ಊರ ಜಾತ್ರೆ ನಡೆಯಲಿದೆ. ಅದಕ್ಕೆ ಪ್ರತಿಮನೆಯಿಂದ ಕನಿಷ್ಠ 5 ಸಾವಿರ ರೂ.ಸಂಗ್ರಹ ಮಾಡುತ್ತಿದ್ದಾರೆ. ಜಾತ್ರೆ ಮಾಡಲು ದಲಿತರ ಹಣ ಬೇಕು, ಆದರೆ ದಲಿತರನ್ನು ಮಾತ್ರ ದೇವಸ್ಥಾನದ ಒಳಗೆ ಬಿಡುವುದಿಲ್ಲ, ದೇವರನ್ನು ಮುಟ್ಟುವುದಕ್ಕೂ ಬಿಡುವುದಿಲ್ಲ. ಕನಿಷ್ಠ ದೇವರ ಪ್ರಸಾದವನ್ನು ದಲಿತ ಸಮುದಾಯಕ್ಕೆ ಸರಿಯಾಗಿ ನೀಡುವುದಿಲ್ಲ ಎಂದು ದಲಿತರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದ ಮಹಿಳೆ:
ಗೂಳ್ಯ ಗ್ರಾಮದ ಅಸ್ಪೃಶ್ಯತೆ ಆಚರಣೆಯ ಕುರಿತು ಯಾವುದೇ ಅಧಿಕಾರಿಗಳು ಗಮನಹರಿಸದೇ ಇರುವುದು ದುರಂತ. ಕೂಡಲೇ ಜಿಲ್ಲಾಧಿಕಾರಿಗಳು ಗ್ರಾಮಕ್ಕೆ ಆಗಮಿಸಿ ಅಸ್ಪೃಶ್ಯತೆ ಆಚರಣೆ ನಿಲ್ಲಿಸಲು ಕ್ರಮ ಕೈಗೊಳ್ಳಬೇಕು. ದಲಿತರಿಗೆ ದೇವಸ್ಥಾನದ ಪ್ರವೇಶ ನೀಡಿ ನಮಗೆ ನ್ಯಾಯ ಕೊಡಿಸಬೇಕು ಎಂದು ಶಕುಂತಲಮ್ಮ ಜಿಲ್ಲಾಧಿಕಾರಿಗೆ ಪತ್ರ ಬರೆದು ಕೋರಿದ್ದರು.