ಹರಕೆ ತೀರಿಸಲು ಆಂಧ್ರದ ಕಡಪಕ್ಕೆ ತೆರಳಿದ, ಕಾಂಗ್ರೆಸ್ ಮುಖಂಡರು.
ವಿಜಯಪುರ: ಕಳೆದ ವಿಧಾನಸಭಾ ಚುನಾವಣೆಯ ಸಮಯದಲ್ಲಿ, ದೇವನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಕೆ.ಹೆಚ್.ಮುನಿಯಪ್ಪ ಅವರು ಗೆಲುವು ಸಾಧಿಸಬೇಕು, ಸರಕಾರದಲ್ಲಿ ಸಚಿವರಾಗಬೇಕು ಎಂದು ಆಂಧ್ರ ಪ್ರದೇಶದ ಕಡಪ ನಗರದಲ್ಲಿರುವ ಸೂಫಿ ಸಂತರಾದ ಹಜರತ್ ಸೈಯದನಾ ಪೀರುಲ್ಲಾ ಮುಹಮ್ಮದ್ ಅಲ್ ಹುಸೈನಿ ಚಿಷ್ತಿ ಉಲ್ ಖಾದ್ರಿ ರಹಮತ್‍ಉಲ್ಲಾಹಿ ಅಲೈ ಉರುಫ್ ಅಮೀನ್ ಪೀರ್ ದರ್ಗಾದಲ್ಲಿ ಹರಕೆ ಹೊತ್ತುಕೊಂಡಿದ್ದ ಕಾಂಗ್ರೆಸ್ ಮುಖಂಡರು, ಹರಕೆ ತೀರಿಸಲು ಕಡಪಕ್ಕೆ ಪ್ರಯಾಣ ಬೆಳೆಸಿದರು.
ಈ ವೇಳೆ ಮಾತನಾಡಿದ ಕೆಪಿಸಿಸಿ ಕಾರ್ಯದರ್ಶಿ ವಿ.ಮಂಜುನಾಥ್ ಮಾತನಾಡಿ, ರಾಜ್ಯದ ಗುಲ್ಬರ್ಗಾದಲ್ಲಿರುವ ವಿಶ್ವಪ್ರಸಿದ್ಧ ಮಹಾನ್ ಸೂಫಿ ಸಂತರಾದ ಹಜರತ್ ಸೈಯದನಾ ಖ್ವಾಜಾ ಬಂದೆ ನವಾಜ್ ಗೇಸುದರಾಜ್ ರಹಮತ್‍ಉಲ್ಲಾಹಿ ಅಲೈ ಅವರ ಮರಿಮಗ ಹಾಗೂ ಬೀದರ್ ನಗರದಲ್ಲಿ ಇರುವ ಸೂಫಿ ಸಂತರಾದ ಹಜರತ್ ಸೈಯದನಾ ಖ್ವಾಜಾ ಅಬುಲ್ ಫೈಜ್ ರಹಮತ್‍ಉಲ್ಲಾಹಿ ಅಲೈ ರವರ ಮೊಮ್ಮಗ ಅವರಿಲ್ಲಿ ನಾವು ಹರಕೆ ಹೊತ್ತುಕೊಂಡು ಬಂದಿದ್ದೆವು. ನಮ್ಮ ಹರಕೆಯಂತೆ ಕೆ.ಹೆಚ್.ಮುನಿಯಪ್ಪ ಅವರು, ಶಾಸಕರಾಗಿ, ದೇವನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಸಚಿವರೂ ಆಗಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವೂ ಆಡಳಿತಕ್ಕೆ ಬಂದಿರುವುದರಿಂದ, ನಮ್ಮ ಹರಕೆಯನ್ನು ತೀರಿಸಿ, ಪ್ರಾರ್ಥಿಸಲು, ಜಾತಿ, ಮತ ಬೇಧವಿಲ್ಲದೆ, ಪಟ್ಟಣದ 23 ವಾರ್ಡುಗಳಲ್ಲಿನ ಕಾಂಗ್ರೆಸ್ ಮುಖಂಡರುಗಳು ಕಡಪಕ್ಕೆ ತೆರಳುತ್ತಿದ್ದೇವೆ ಎಂದರು.
ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಗೌಸ್ ಖಾನ್ ಮಾತನಾಡಿ, ಕಡಪದಲ್ಲಿನ ಸೂಫಿ ಸಂತರ ದರ್ಗಾಗೆ, ಮಾಜಿ ಪ್ರಧಾನಿಗಳಾದ ಇಂದಿರಾಗಾಂಧಿ, ಪಿ.ವಿ.ನರಸಿಂಹರಾವ್, ಸೇರಿದಂತೆ ವಿದೇಶಗಳಿಂದಲೂ ಅನೇಕ ಮಂದಿ ಗಣ್ಯರು, ಅಲ್ಲಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ ಎಂದರು.
ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷ ವಲ್ಲಿಜಾನ್ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ ಪಂಚ ಗ್ಯಾರಂಟಿ ಯೋಜನೆಗಳ ಮೂಲಕ ಬಡವರಿಗೆ ನ್ಯಾಯ ಒದಗಿಸುತ್ತಿದೆ. ಎಲ್ಲಾ ಸಮುದಾಯಗಳ ಏಳಿಗೆಗಾಗಿ ಅಭಿವೃದ್ಧಿ ಕಾರ್ಯಕ್ರಮಗಳು ನಡೆಯುತ್ತಿದ್ದು, ಮುಂದಿನ ಕಾಲದಲ್ಲೂ ಜನರಿಗೆ ಉತ್ತಮವಾದ ಆಡಳಿತ ಸಿಗಲಿ, ನಾಡು ಸಂಮೃದ್ಧಿಯಾಗಿರಲಿ ಎಂದು ಸಂತರಲ್ಲಿ ಪ್ರಾರ್ಥಿಸುತ್ತೇವೆ ಎಂದರು. 200 ಕ್ಕೂ ಹೆಚ್ಚು ಮಂದಿ ಕಾರುಗಳಲ್ಲಿ ದರ್ಗಾಗೆ ತೆರಳಿದರು.
ಟೌನ್ ಕಾಂಗ್ರೆಸ್ ಅಧ್ಯಕ್ಷ ವಿ.ಎಂ.ನಾಗರಾಜ್, ಪ್ರಧಾನಕಾರ್ಯದರ್ಶಿ ಎಸ್.ಮಂಜುನಾಥ್, ಪುರಸಭೆ ಸದಸ್ಯರಾದ ಎ.ಆರ್.ಹನೀಪುಲ್ಲಾ, ಎಂ.ರಾಜಣ್ಣ, ಎಂ.ನಾರಾಯಣಸ್ವಾಮಿ, ಸೈಯದ್ ಎಕ್ಭಾಲ್, ಮಧು(ಮಹದೇವ್), ಮಾಜಿ ಪುರಸಭೆ ಉಪಾಧ್ಯಕ್ಷ ಜೆ.ಎನ್.ಶ್ರೀನಿವಾಸ್, ವೇಣುಗೋಪಾಲ್, ಬಿ.ವಿ.ಕೃಷ್ಣಪ್ಪ, ಚಿಕ್ಕನಹಳ್ಳಿ ವೆಂಕಟೇಶಪ್ಪ, ಸೇರಿದಂತೆ ಮುಸ್ಲಿಂ ಸಮುದಾಯದ ಮುಖಂಡರುಗಳು ಹಾಜರಿದ್ದರು.