ವಿದ್ಯಾರ್ಥಿಗಳು ಗುರುವಿನ ಮಾರ್ಗದರ್ಶನದಲ್ಲಿ ಸಾಗಬೇಕು

ಬೆಂಗಳೂರು: ವಿದ್ಯಾರ್ಥಿ ಜೀವನವು ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಒಂದು ಮರೆಯಲಾಗದ ಘಟ್ಟವಾಗಿದೆ ಎಂದು ಸರ್ಜಾಪುರದ ಎಸ್.ವಿ.ಬಿ ವಿದ್ಯಾ ಸಂಸ್ಥೆಯ ಖಜಾಂಚಿ ಎ.ಎನ್. ನಾಗರಾಜ್ ಶೆಟ್ಟಿ ತಿಳಿಸಿದರು.

ಇವರು ಬೆಂಗಳೂರಿನ ಸರ್ಜಾಪುರದ ಎಸ್.ವಿ.ಬಿ ಪಟೇಲ್ ಸ್ವಾತಂತ್ರ್ಯ ಪದವಿ ಪೂರ್ವ ಕಾಲೇಜಿನ ಆವಣದಲ್ಲಿ ವಾರ್ಷಿಕ ಚಟುವಟಿಕೆಗಳಾದ ಸಾಂಸ್ಕೃತಿಕ ಕ್ರೀಡೆ,ರಾಷ್ಟ್ರೀಯ ಸೇವಾ ಯೋಜನೆ, ಸ್ಕೌಟ್ ಮತ್ತು ಗೈಡ್ಸ್, ಯೂತ್ ರೆಡ್ ಕ್ರಾಸ್ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಗಳನ್ನು ಉದ್ಘಾಟಿಸಿ ಮಾತನಾಡಿ ಕಾಲೇಜು ಜೀವನವು ಶಾಲಾ ಜೀವನಕ್ಕಿಂತ ಹೆಚ್ಚು ಜವಾಬ್ದಾರಿ ಯುತವಾಗಿರುತ್ತದೆ ಮತ್ತು ವಿದ್ಯಾರ್ಥಿಗಳ ಆಸಕ್ತಿಯ ಕ್ಷೇತ್ರಗಳನ್ನು ಅನ್ವೇಷಿಸಲು ಹಾಗೂ ವೃತ್ತಿಜೀವನವನ್ನು ರೂಪಿಸಿಕೊಳ್ಳಲು ಸಹಕಾರಿ ಯಾಗಲಿದೆ ಎಂದರು.

ಎಸ್.ವಿ.ಬಿ ಪಟೇಲ್ ಸ್ವಾತಂತ್ರ್ಯ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಟಿ.ಎನ್. ಶ್ರೀನಿವಾಸ ರೆಡ್ಡಿ ಮಾತನಾಡಿ ವಿದ್ಯಾರ್ಥಿಗಳ ಜೀವನದಲ್ಲಿ ಹಲವಾರು ಸವಾಲುಗಳ ಅವಕಾಶಗಳಿಂದ ತುಂಬಿದೆ. ಕಠಿಣ ಪರಿಶ್ರಮ,ಶಿಸ್ತು, ಮತ್ತು ಸಮಯ ನಿರ್ವಹಣೆಯ ಮೂಲಕ ವಿದ್ಯಾರ್ಥಿಗಳು ಈ ಹಂತವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದರೆ ತಮ್ಮ ಮುಂದಿನ ಭವಿಷ್ಯದ ಯಶಸ್ವಿ ಕಟ್ಟಿದ್ದ ಬುತ್ತಿ ಎಂದು ತಿಳಿಸಿದರು.

2024-25 ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದು ಕಾಲೇಜಿಗೆ ಹೆಸರು ತಂದುಕೊಟ್ಟ ವಾಣಿಜ್ಯ ವಿಭಾಗದ ವಿಸ್ಮಯ, ಚೇತನ್,ಸುಜಾತ ಹಾಗೂ ಕಲಾ ವಿಭಾಗದ ನಳಿನಿ ಇವರುಗಳಿಗೆ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಸಲ್ಲಿಸಿದ ಸಾಧಕರನ್ನು ಗೌರವಿಸಲಾಯಿತು ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿ ವಿದ್ಯಾರ್ಥಿನಿಯರು ಪ್ರಥಮ ಪಿಯುಸಿ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡುವ ಮೂಲಕ ಸ್ವಾಗತಿಸಿದರು.

ಕಾರ್ಯಕ್ರಮದ ಉಪಸ್ಥಿತಿಯಲ್ಲಿ ರಾಷ್ಟ್ರೀಯ ಯುವ ಯೋಜನೆಯ ರಾಜ್ಯ ಸಂಯೋಜಕ ಡಾ.ವಿ. ಪ್ರಶಾಂತ, ಗೌರಿಬಿದನೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕ ಚಿರಂಜೀವಿ, ನಿವೃತ್ತ ದೈಹಿಕ ಶಿಕ್ಷಕ ಶ್ರೀನಿವಾಸ್, ವಾಣಿಜ್ಯಶಾಸ್ತ್ರ ಉಪನ್ಯಾಸಕ ರಾಮರೆಡ್ಡಿ, ಎಸ್.ವಿ.ಬಿ ಪಟೇಲ್ ಸ್ವಾತಂತ್ರ್ಯ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಪ್ರೇಮ,ಪ್ರತಿಭಾ ಪ್ರೀತಿ,ರುದ್ರಣಿ, ಕವನ, ರೆಡ್ಡಪ್ಪ ಕೆ.ಆರ್ ಪುರಂ ನ ಕೇಮ್ ಬ್ರಿಡ್ಜ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂ ಸೇವಕ ಬಿ.ಸಿ.ಯಶ್ವಂತ್ ಹಾಗೂ ಎಸ್.ವಿ.ಬಿ ಪಟೇಲ್ ಸ್ವಾತಂತ್ರ್ಯ ಪದವಿ ಪೂರ್ವ ಕಾಲೇಜಿನ ಬೋಧಕ ಮತ್ತು ಬೋಧಕೇತರ ವರ್ಗದ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಾಜರಿದ್ದರು.