ಧರ್ಮಸ್ಥಳದಲ್ಲಿ ನಡೆದಿರುವ ಪ್ರಕರಣಗಳ ನ್ಯಾಯಾಂಗ ತನಿಖೆಗೆ ಒತ್ತಾಯಿಸಿ ಜುಲೈ 24 ರಂದು ಪ್ರತಿಭಟನೆ

ದೊಡ್ಡಬಳ್ಳಾಪುರ : ಧರ್ಮಸ್ಥಳದಲ್ಲಿ ನಡೆದಿರುವ ನೂರಾರು ಮಹಿಳೆಯರು, ಯುವತಿಯರ ಅತ್ಯಾಚಾರ ಮತ್ತು ನಿಗೂಢ ಕೊಲೆ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒತ್ತಾಯಿಸಿ ಜನಾಗ್ರಹ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದೇವೆ ಎಂದು ಸಂವಿಧಾನ ರಕ್ಷಣೆಗಾಗಿ ನಾಗರೀಕರ ವೇದಿಕೆ ತಿಳಿಸಿದೆ.

ನಗರದ ಖಾಸಗಿ ಕನ್ವೆನ್ಷನ್ ಹಾಲ್ ನಲ್ಲಿ ಸಭೆ ನಡೆಸಿದ ಹಲವು ಪ್ರಗತಿಪರ ಸಂಘಟನೆಗಳ ಮುಖಂಡರು
ರಾಜ್ಯದ ಬೆಳ್ತಂಗಡಿಯ ಧರ್ಮಸ್ಥಳದಲ್ಲಿ ಕಳೆದ ಹಲವು ವರ್ಷಗಳಿಂದ ಮಹಿಳೆಯರು ಮತ್ತು ಯುವತಿಯರ ಅತ್ಯಾಚಾರ ಮತ್ತು ನಿಗೂಢ ಸಾವುಗಳನ್ನು ಸಂಭವಿಸುತ್ತಿವೆ ಎಂಬ ಆರೋಪಗಳು ಕೇಳಿಬರುತ್ತಿವೆ. ಇದನ್ನು ಗಂಭೀರವಾಗಿ ಪರಿಗಣಿಸದ ಸರ್ಕಾರ ಮತ್ತು ಪೊಲೀಸ್ ಇಲಾಖೆ ಮೌನವಾಗಿ ಕುಳಿತಿದೆ. ಆನೆ ಮಾವುತನ ಕೊಲೆ ಪ್ರಕರಣ, ಸೌಜನ್ಯ, ಅನನ್ಯ ಭಟ್ ಪ್ರಕರಣಗಳಿಗೆ ನ್ಯಾಯ ಸಿಗದಿರುವುದು ನಮ್ಮ ಕಣ್ಣ ಮುಂದೆ ಇದೆ. ಧರ್ಮಸ್ಥಳ ವ್ಯಾಪ್ತಿಯಲ್ಲಿ ಕಳೆದ ಹಲವಾರು ವರ್ಷಗಳಿಂದ ನಡೆದಿರುವ ಅತ್ಯಾಚಾರ, ಕೊಲೆ, ನಿಗೂಢ ಸಾವು ಮತ್ತು ಕಣ್ಮರೆ ಪ್ರಕರಣಗಳನ್ನು ನ್ಯಾಯಾಂಗ ತನಿಖೆ ನಡೆಸುವಂತೆ ಒತ್ತಾಯಿಸಿ ಬೃಹತ್ ಜನಾಗ್ರಹ ಪ್ರತಿಭಟನೆ ನಡೆಸಲು ತೀರ್ಮಾಸಿದರು.

ಧರ್ಮಸ್ಥಳದಲ್ಲಿ ಕಳೆದ ಹಲವಾರು ವರ್ಷಗಳಿಂದ ನೂರಾರು ಮಹಿಳೆಯರು ಮತ್ತು ಯುವತಿಯರ ನಿಗೂಢ ಅತ್ಯಾಚಾರ ಹಾಗೂ ಕೊಲೆಯಾಗಿದೆ. ಈ ವಿಚಾರವನ್ನು ಆಳುವ ಸರ್ಕಾರಗಳು ಏನೂ ನಡೆದೆ ಇಲ್ಲ ಎಂಬಂತೆ ವರ್ತಿಸುತ್ತಿವೆ. ಇಂತಹ ಅಮಾನವೀಯ ಘಟನೆಯನ್ನು ಖಂಡಿಸಬೇಕಾದುದು ನಾಗರೀಕರಾದ ನಮ್ಮ ಜವಾಬ್ದಾರಿಯಾಗಿದೆ. ನೂರಾರು ಹೆಣ್ಣು ಮಕ್ಕಳ ಅತ್ಯಾಚಾರ ಮತ್ತು ನಿಗೂಢ ಕೊಲೆ ಪ್ರಕರಣಗಳನ್ನು ನ್ಯಾಯಾಂಗದ ಮೇಲ್ವಿಚಾರಣೆ ತನಿಖೆಗೆ ಒತ್ತಾಯಿಸಿ ದಿನಾಂಕ 24-07-2025 ರ ಗುರುವಾರ ಮಧ್ಯಾಹ್ನ 12 ಗಂಟೆಗೆ ದೊಡ್ಡಬಳ್ಳಾಪುರ ನಗರದ ತಾಲ್ಲೂಕು ಕಚೇರಿ ವೃತ್ತದಲ್ಲಿ ಜನಾಗ್ರಹ ಪ್ರತಿಭಟನೆ ನಡೆಸಲಿದ್ದು, ಎಲ್ಲಾ ಸಮಾನ ಮನಸ್ಕರು, ವಿದ್ಯಾರ್ಥಿಗಳು, ಯುವಜನರು, ಮಹಿಳೆಯರು ಕಾರ್ಮಿಕರು, ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.

ಸಭೆಯಲ್ಲಿ ಸಂವಿಧಾನ ರಕ್ಷಣೆಗಾಗಿ ನಾಗರೀಕರ ವೇದಿಕೆಯ ಸಂಚಾಲಕರಾದ ಆರ್.ಚಂದ್ರತೇಜಸ್ವಿ,ಎನ್.ರಾಜುಸಣ್ಣಕ್ಕಿ, ಕನ್ನಡ ಪಕ್ಷದ ರಾಜ್ಯ ಮುಖಂಡ ಸಂಜೀವ ನಾಯ್ಕ, ಸಿಪಿಐಎಂ ತಾಲ್ಲೂಕು ಕಾರ್ಯದರ್ಶಿ ರುದ್ರಾರಾಧ್ಯ, ಛಲವಾದಿ ಮಹಾಸಭಾ ತಾಲ್ಲೂಕು ಅಧ್ಯಕ್ಷ ಗುರುರಾಜಪ್ಪ, ಮುಖಂಡರಾದ ಚೌಡಪ್ಪ ಉಪಸ್ಥಿತರಿದ್ದರು.