ಅರೆಬೊಮ್ಮನಹಳ್ಳಿ ಗ್ರಾಮ ಪಂಚಾಯತಿ ಅವಾಂತರ — ನಡುರಸ್ತೆಯಲ್ಲೇ ಗಲಾಟೆ ಮಾಡಿಕೊಂಡ ಅಧ್ಯಕ್ಷ ಹಾಗೂ ಸದಸ್ಯರು
ದೊಡ್ಡಬಳ್ಳಾಪುರ :ಉಪವಿಭಾಗಾಧಿಕಾರಿಗಳಿಗೆ ಸಾಮೂಹಿಕ ರಾಜೀನಾಮೆ ನೀಡುತ್ತೇವೆ ಎಂದು ಬಂದು ನಡು ರಸ್ತೆಯಲ್ಲಿ ಪಂಚಾಯತಿ ಅಧ್ಯಕ್ಷನಿಗೆ ಸದಸ್ಯರು ಹೊಡೆದಿದ್ದಾರೆ ಅವರಿಂದ ತಪ್ಪಿಸಿಕೊಳ್ಳಲು ದೊಡ್ಡಬಳ್ಳಾಪುರ ತಾಲ್ಲೂಕಿನ ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ತ್ಯಾಮಗೊಂಡ್ಲು ಹೊಬಳಿಯ ಅರೆಬೊಮ್ಮನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಅಡಗಿಕುಳಿತಿರುವ ಘಟನೆ ಸಂಭವಿಸಿದೆ
ದೊಡ್ಡಬಳ್ಳಾಪುರ ತಾಲ್ಲೂಕಿನ ಉಪವಿಭಾಗಾಧಿಕಾರಿಗಳ ಕಚೇರಿಯಲ್ಲೇ ನಾವು ರಾಜೀನಾಮೆ ನೀಡುತ್ತೇವೆ ಬನ್ನಿ ಎಂದು ನಮ್ಮ ಪಂಚಾಯತಿಯ ಸದಸ್ಯರು ನನ್ನನ್ನು ಕರೆದುಕೊಂಡು ಬಂದು ತಾಲ್ಲೂಕು ಕಚೇರಿ ಮುಂಭಾಗ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಅರೆಬೊಮ್ಮನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ರಂಗಸ್ವಾಮಿ ಆರೋಪಿಸಿದ್ದಾರೆ.
ಅರೆಬೊಮ್ಮನಹಳ್ಳಿ ಪಿ ಡಿ ಒ ಮತ್ತು ಸದಸ್ಯರ ವಿರುದ್ಧ ಆರೋಪಿಸಿರುವ ಅವರು ಪಂಚಾಯತಿಯಲ್ಲಿ ಮಿತಿ ಮೀರಿದ ಭ್ರಷ್ಟಾಚಾರ ನೆಡೆಯುತ್ತಿದೆ ನಾನು ಅಧ್ಯಕ್ಷನಾದ ನಂತರ ನಿಲ್ಲಿಸಲು ಸಾಕಷ್ಟು ಪ್ರಯತ್ನ ಮಾಡಿದ ಹಿನ್ನಲೆ ನನ್ನ ಮೇಲೆ ಈ ಕೃತ್ಯಕ್ಕೆ ಸದಸ್ಯರು,ಪಿ ಡಿ ಒ ಸೇರಿದಂತೆ ಹಲವರು ಪ್ರಯತ್ನಿಸಿದ್ದಾರೆ, ನನ್ನ ರಕ್ಷಣೆಗಾಗಿ ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಅವಿತುಕೊಂಡೆ ಈಗ ಪೊಲೀಸ್ ಸಿಬ್ಬಂದಿ ಬಂದಿದ್ದಾರೆ ಠಾಣೆಯಲ್ಲಿ ಈ ಕುರಿತು ದೂರು ಸಲ್ಲಿಸಲಿದ್ದು, ತಪ್ಪು ಮಾಡಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ನನಗೆ ನ್ಯಾಯ ಕೊಡಿ ಎಂದು ಮನವಿ ಮಾಡಿದ್ದಾರೆ.
ಅರೆಬೊಮ್ಮನಹಳ್ಳಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಶೈಲೇಂದ್ರ ಮಾತನಾಡಿ ಹಾಲಿ ಅಧ್ಯಕ್ಷ ರಂಗಸ್ವಾಮಿ ಮಾಡಿರುವ ಎಲ್ಲಾ ಆರೋಪಗಳು ಸತ್ಯಕ್ಕೆ ದೂರವಾದವು ಕೇವಲ ಅಧಿಕಾರದ ಆಸೆಯಿಂದಾಗಿ ನಮ್ಮ ಮೇಲೆ ಹಾಗೂ ಸದಸ್ಯರ ಮೇಲೆ ಇಲ್ಲಸಲ್ಲದ ಆರೋಪವನ್ನು ಮಾಡುತ್ತಿದ್ದಾರೆ ಸತ್ಯ ಸತ್ಯತೆ ಏನೆಂಬುದು ತನಿಕೆಯಲ್ಲಿ ಬಯಲಾಗಲಿದೆ . ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಸುಳ್ಳು ಆರೋಪ ಮಾಡುವ ಮೂಲಕ ಪಂಚಾಯಿತಿಯ ಹಾಲಿ ಅಧ್ಯಕ್ಷರು ಎಲ್ಲರಿಗೂ ಮೋಸ ಮಾಡಲು ಹೊರಟಿದ್ದಾರೆ ಈ ಕುರಿತು ಅವರು ಆತ್ಮವಲೋಕನ ಮಾಡಿಕೊಳ್ಳಲಿ ಎಂದರು.