ವಿದ್ಯಾರ್ಥಿಯ ಜೀವನದಲ್ಲಿ ಸಮಯವನ್ನು ಸದುಪಯೋಗ ಮಾಡಿಕೊಂಡರೆ ಸಾಧಕರಾಗಲು ಸಾಧ್ಯ.

ವಿಜಯಪುರ: ಪ್ರತಿಯೊಬ್ಬ ವಿದ್ಯಾರ್ಥಿಯ ಜೀವನದಲ್ಲಿ ಸಮಯಪಾಲನೆ ಬಹಳ ಮುಖ್ಯವಾಗುತ್ತದೆ. ಶಿಕ್ಷಣ ಮತ್ತು ಸಮಯಕ್ಕೆ ಯಾರು ಹೆಚ್ಚು ಬೆಲೆ ಕೊಡ್ತಾರೋ ಅವರು ಜೀವನದಲ್ಲಿ ಉನ್ನತ ಸ್ಥಾನಕ್ಕೆ ಹೋಗುತ್ತಾರೆ ಎಂದು ಸ್ಪರ್ಶ ಟ್ರಸ್ಟ್ ನ ಕಾರ್ಯಕ್ರಮದ ಮುಖ್ಯಸ್ಥ ಮಂಜುನಾಥ್.ಎಸ್.ಪಿ. ಹೇಳಿದರು.
ಪಟ್ಟಣದ ಗಿರಿಜಾಶಂಕರ ಕಲ್ಯಾಣ ಮಂಟಪದಲ್ಲಿ ಪ್ರಗತಿ ಬಾಲಕಿಯರ ಕಾಲೇಜು ವತಿಯಿಂದ ಆಯೋಜಿಸಿದ್ದ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿರುವ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಅಭಿನಂದಿಸಿ ಅವರು ಮಾತನಾಡಿದರು.
ಜ್ಞಾನ ಸಾಧನೆ ಮಾಡಬೇಕಾದರೆ, ಸಮಯವನ್ನು ಸದುಪಯೋಗ ಮಾಡಿಕೊಳ್ಳಬೇಕು. ಅವಕಾಶ ಸಿಕ್ಕಿದಾಗ ಸಾಧನೆ ಮಾಡದೆ, ಅವಕಾಶ ವಂಚಿತರಾಗುತ್ತಿರುವವರೇ ಹೆಚ್ಚಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಮಂದಿ ಮಗ್ನರಾಗುತ್ತಿದ್ದಾರೆ. ಶೈಕ್ಷಣಿಕವಾಗಿ ಸಾಧನೆ ಮಾಡುವುದಕ್ಕೆ ಇದು ಅಡ್ಡಿಯಾಗುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಎಷ್ಟು ಲಾಭವಿದೆಯೋ ಅಷ್ಟೇ ನಷ್ಟವೂ ಸಂಭವಿಸುತ್ತಿದೆ. ಆದ್ದರಿಂದ ವಿದ್ಯಾರ್ಥಿಗಳು ಮತ್ತು ಪೋಷಕರು ತುಂಬಾ ಎಚ್ಚರಿಕೆಯಿಂದ ಇರಬೇಕು. ಜೀವನದಲ್ಲಿ ಒಂದು ಬಾರಿ ಸೋತರೆ ಸುಮ್ಮನಾಗಬಾರದು. ಪುನಃ ಪ್ರಯತ್ನ ಮಾಡಿ, ಉತ್ತಮ ಸಾಧಕರಾಗಿರುವವರು ಸಾಕಷ್ಟು ಮಂದಿ ಇದ್ದಾರೆ. ಅವರೆಲ್ಲರೂ ನಿಮಗೆ ಮಾದರಿಯಾಗಬೇಕು ಎಂದರು.
ಪ್ರಗತಿ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಎಂ.ಸತೀಶ್ ಕುಮಾರ್ ಮಾತನಾಡಿ, ಗ್ರಾಮೀಣ ಭಾಗದಲ್ಲಿನ ಹೆಣ್ಣು ಮಕ್ಕಳು ಪ್ರೌಢಶಿಕ್ಷಣದ ನಂತರ ತಮ್ಮ ಶೈಕ್ಷಣಿಕ ಜೀವನವನ್ನು ಕೊನೆಗಾಣಿಸಿಕೊಳ್ಳುತ್ತಿದ್ದ ಕಾರಣ, ಹೆಣ್ಣು ಮಕ್ಕಳಿಗೆ ಕನಿಷ್ಟ ಪದವಿಯವರೆಗೂ ಶಿಕ್ಷಣ ಸಿಗಬೇಕು ಎನ್ನುವ ಕಾರಣದಿಂದ ಪ್ರಗತಿ ಶಿಕ್ಷಣ ಸಂಸ್ಥೆಯನ್ನು ಸ್ಥಾಪನೆ ಮಾಡಲಾಗಿದೆ. ಪ್ರತಿಯೊಬ್ಬ ಹೆಣ್ಣು ಮಗು ಕನಿಷ್ಟ ಪದವಿಯವರೆಗೂ ವ್ಯಾಸಂಗ ಮಾಡಿದರೆ, ತನ್ನ ಜೀವನ ಮಾತ್ರವಲ್ಲದೆ, ಇಡೀ ತನ್ನ ಕುಟುಂಬವನ್ನು ಪೋಷಣೆ ಮಾಡಿಕೊಳ್ಳಬಲ್ಲಳು. ಹೆಣ್ಣು ಮಕ್ಕಳೆಂದು ತಾತ್ಸಾರ ಮನೋಭಾವನೆಯಿಂದ ನೋಡುವವರ ಮುಂದೆ, ಈ ಸಂಸ್ಥೆಯಲ್ಲಿ ಓದಿದವರೂ ಉನ್ನತ ಸ್ಥಾನಗಳನ್ನು ಅಲಂಕರಿಸಿದ್ದಾರೆ ಎಂದರು.
2024-25 ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿರುವ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ, ಗೌರವಿಸಲಾಯಿತು. ಕಾಲೇಜಿನ ವಿದ್ಯಾರ್ಥಿನಿಯರು, ನೃತ್ಯ ಮಾಡಿ, ಸಂಭ್ರಮಿಸಿದರು. ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು, ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಕೋರಿದರು.
ಪ್ರಾಂಶುಪಾಲ ಮಧು.ಕೆ, ಉಪನ್ಯಾಸಕರಾದ ಮುನಿರಾಜು, ರೂಪಉದಯ್, ನೇತ್ರಾ, ಮಂಜುಳಾ, ಸುಷ್ಮಾ, ರಶ್ಮಿ, ಬಿಂದು, ವನಿತಾ, ಶಾಂತ, ಲಕ್ಷ್ಮೀ, ದೀಪಾ, ಸರೋಜ, ಹಾಗೂ ವಿದ್ಯಾರ್ಥಿಗಳ ಪೋಷಕರು ಹಾಜರಿದ್ದರು.