ರಸ್ತೆಬದಿಯಲ್ಲಿನ ಅನಧಿಕೃತ ಅಂಗಡಿಗಳನ್ನು ತೆರವುಗೊಳಿಸಿ, ಸುಗಮ ಸಂಚಾರಕ್ಕೆ ಅನುವು ಮಾಡುವಂತೆ ಸೂಚನೆ
ವಿಜಯಪುರ: ಪಟ್ಟಣದಲ್ಲಿ ನಿರ್ಮಾಣವಾಗುತ್ತಿರುವ ರಸ್ತೆ ಅಭಿವೃದ್ಧಿ ಕಾಮಗಾರಿ ಹಾಗೂ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಉಂಟಾಗುತ್ತಿರುವ ಟ್ರಾಫಿಕ್ ಸಮಸ್ಯೆಗಳನ್ನು ಲೋಕಾಯುಕ್ತ ಪೊಲೀಸ್ ಇನ್ ಸ್ಪೆಕ್ಟರ್ ಹಾಲಪ್ಪಬಾಲದಂಡಿ, ವೀಕ್ಷಣೆ ಮಾಡಿದರು.
ಪುರಸಭೆಗೆ ಭೇಟಿ ನೀಡಿದ್ದ ಅವರು, ಸಾರ್ವಜನಿಕರು ಸಂಚರಿಸುವ ಮುಖ್ಯರಸ್ತೆಗಳ ಬದಿಗಳಲ್ಲಿ ಅನಧಿಕೃತವಾಗಿ ಅಂಗಡಿಗಳನ್ನು ಇಟ್ಟುಕೊಂಡಿರುವುದರಿಂದ ಉಂಟಾಗುತ್ತಿರುವ ಟ್ರಾಫಿಕ್ ಸಮಸ್ಯೆಯಿಂದಾಗಿ, ದಿನನಿತ್ಯ ಸಾರ್ವಜನಿಕರು, ಲೋಕಾಯುಕ್ತ ಕಚೇರಿಗೆ ದೂರುಗಳನ್ನು ಸಲ್ಲಿಸುತ್ತಿದ್ದಾರೆ. ಪ್ರತಿನಿತ್ಯ ಸಾರ್ವಜನಿಕರ ವಾಹನಗಳ ಸುಗಮ ಸಂಚಾರಕ್ಕೆ ತೀವ್ರ ಅಡ್ಡಿಯಾಗುತ್ತಿರುವ ಬಗ್ಗೆಯೂ ಜನರು ಆಕ್ಷೇಪಣೆ ಸಲ್ಲಿಸಿದ್ದಾರೆ.
ಪುರಸಭೆಯ ಅಧಿಕಾರಿಗಳು, ಪೊಲೀಸರ ಸಹಯೋಗದಲ್ಲಿ, ರಸ್ತೆಗಳ ಬದಿಯಲ್ಲಿರುವ ಎಲ್ಲಾ ಅಂಗಡಿಗಳನ್ನು ತೆರವುಗೊಳಿಸುವ ಮೂಲಕ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಗಮನಹರಿಸಬೇಕು. ಪದೇ ಪದೇ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದರೆ ಪುರಸಭೆಯ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸೂಚಿಸಿದರು.
ಪಟ್ಟಣದ ಹಳೇ ಕೆನರಾ ಬ್ಯಾಂಕ್ ರಸ್ತೆ, ವೆಂಕಟರಮಣಸ್ವಾಮಿ ದೇವಾಲಯದ ರಸ್ತೆ, ಬಸ್ ನಿಲ್ದಾಣ, ಹಾಗೂ ಚಿಕ್ಕಬಳ್ಳಾಪುರದ ರಸ್ತೆಗಳಲ್ಲಿ, ತಳ್ಳುವ ಗಾಡಿಗಳನ್ನು ರಸ್ತೆಗೆ ನಿಲ್ಲಿಸಿಕೊಂಡಿರುತ್ತಾರೆ, ಜನರು, ರಸ್ತೆಯಲ್ಲೆ ನಿಂತು ವ್ಯಾಪಾರ ವಹಿವಾಟು ನಡೆಸಬೇಕಾಗಿದೆ. ಶಿವಗಣೇಶ ಸರ್ಕಲ್ ನಲ್ಲಿ, ಶಾಲಾ, ಕಾಲೇಜುಗಳು ಬಿಟ್ಟಾಗ ತುಂಬಾ ಟ್ರಾಫಿಕ್ ಸಮಸ್ಯೆಯಾಗುತ್ತಿದೆ. ಗಾಂಧಿಚೌಕದ ರಸ್ತೆಯಲ್ಲಿ, ಒಂದು ದ್ವಿಚಕ್ರ ವಾಹನವೂ ಸಂಚಾರ ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ. ಇಲ್ಲಿ ಹೇಳೋರು, ಕೇಳೋರು ಯಾರು ಇಲ್ಲವೆಂದು ಸಾರ್ವಜನಿಕರು ದೂರಿದರು.
ಕೋಲಾರ ಮುಖ್ಯರಸ್ತೆಯಲ್ಲಿ ಅಗಲೀಕರಣ ಕಾಮಗಾರಿ ನಡೆಯುತ್ತಿದೆಯಾದರೂ, ಎರಡು ವರ್ಷಗಳಿಂದ ಕಾಮಗಾರಿ ನಡೆಯುತ್ತಿದ್ದು, ಧೂಳಿನಿಂದಾಗಿ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗಿದೆ. ವ್ಯಾಪಾರಿಗಳು, ವ್ಯಾಪಾರ ವಹಿವಾಟು ನಡೆಸಲು ಪರದಾಡುವಂತಾಗಿದೆ ಎನ್ನುವ ದೂರುಗಳೂ ಸಲ್ಲಿಕೆಯಾಗಿದ್ದರಿಂದ ಕೋಲಾರ ರಸ್ತೆಗೂ ಭೇಟಿ ನೀಡಿ ಪರಿಶೀಲನೆ ನಡೆಸಿ, ಸರಕಾರಕ್ಕೆ ವರದಿ ಸಲ್ಲಿಸಲಾಗುತ್ತದೆ ಎಂದರು.
ಲೋಕಾಯುಕ್ತರು ಬರುತ್ತಾರೆಂದು ವಾಹನಗಳು ಖಾಲಿ: ಪಟ್ಟಣಕ್ಕೆ ಲೋಕಾಯುಕ್ತ ಪೊಲೀಸರು ಬರುತ್ತಿದ್ದಾರೆ ಎನ್ನುವ ಮಾಹಿತಿ ಸಿಗುತ್ತಿದ್ದಂತೆ ಗಾಂಧಿಚೌಕದ ರಸ್ತೆಯಲ್ಲಿ, ಪ್ರತಿನಿತ್ಯ ನಿಲ್ಲಿಸುತ್ತಿದ್ದ ದ್ವಿಚಕ್ರ ವಾಹನಗಳನ್ನು ತರಾತುರಿಯಲ್ಲಿ ತೆರವುಗೊಳಿಸುವ ಕಾರ್ಯ ನಡೆಸಿದರು. ಗಾಂಧಿಚೌಕದಲ್ಲೂ ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸಿ, ಸಾರ್ವಜನಿಕರಿಗೆ ತೊಂದರೆ ಕೊಡಲಾಗುತ್ತಿದೆ ಎಂದು ಸ್ಥಳೀಯರು ದೂರಿದರು.
ಪುರಸಭೆ ಪ್ರಭಾರಿ ಮುಖ್ಯಾಧಿಕಾರಿ ಸತ್ಯನಾರಾಯಣ, ಪರಿಸರ ಅಭಿಯಂತರ ಶೇಖರ್ ರೆಡ್ಡಿ, ಸಹಾಯಕ ಸಬ್ ಇನ್ ಸ್ಪೆಕ್ಟರ್ ಸಾಧಿಕ್ ಪಾಷ, ಕಾನ್ ಸ್ಪೆಬಲ್ ಮಂಜುನಾಥ್ ಇದ್ದರು.