ನಾಗರಪಂಚಮಿಯ ಅಂಗವಾಗಿ ನಾಗರಕಲ್ಲುಗಳು, ಹುತ್ತಗಳಿಗೆ ವಿಶೇಷ ಪೂಜೆ

ವಿಜಯಪುರ: ಶ್ರಾವಣ ಮಾಸದಲ್ಲಿ ಬರುವ ಮೊದಲ ಹಬ್ಬವಾಗಿರುವ ನಾಗರ ಪಂಚಮಿಯ ಅಂಗವಾಗಿ ಪಟ್ಟಣ ಹಾಗೂ ಗ್ರಾಮೀಣ ಭಾಗದ ಹಳ್ಳಿಗಳಲ್ಲಿನ ನಾಗರಕಲ್ಲುಗಳಿಗೆ ಮಹಿಳೆಯರು ಭಕ್ತಿಭಾವದಿಂದ ಪೂಜೆ ಸಲ್ಲಿಸಿದರು.
ಹಳ್ಳಿಗಳಲ್ಲಿನ ಅರಳಿಕಟ್ಟೆಗಳಿಗೆ ತೆರಳಿದ ಮಹಿಳೆಯರು, ನಾಗರಕಲ್ಲುಗಳಿಗೆ ಹಾಗೂ ಹುತ್ತಗಳಿಗೆ ಅರಿಶಿನ ಮಿಶ್ರಿತ ಹಸಿದಾರಗಳನ್ನು ಸುತ್ತಿ, ಕಲ್ಲುಗಳಿಗೆ ಹಾಲೆರೆದು ಪೂಜೆ ಸಲ್ಲಿಸಿದರು. ಮನೆಗಳಲ್ಲಿ ಸಿಹಿ ತಿಂಡಿ, ತಿನಿಸುಗಳನ್ನು ತಯಾರಿಸಿ, ತಮ್ಮ ಸ್ನೇಹಿತರು, ಆಪ್ತರಿಗೆ ನೀಡಿ, ಸಂಭ್ರಮಿಸಿದರು.
ಧಾರ್ಮಿಕ ನಂಬಿಕೆಗಳ ಪ್ರಕಾರ, ನಾಗರ ಪಂಚಮಿ ಹಬ್ಬದ ದಿನದಂದು ನಾಗ ದೇವರನ್ನು ಪೂಜಿಸುವುದರಿಂದ ಸರ್ಪಗಳ ಮತ್ತು ಶಿವನ ಆಶೀರ್ವಾದ ದೊರೆಯುವುದು. ಇದರೊಂದಿಗೆ ಜನರು ಸಂತಾನ, ಶಾಂತಿ ಮತ್ತು ಸಮೃದ್ಧಿಯನ್ನು ಪಡೆದುಕೊಳ್ಳುತ್ತಾರೆ. ಈ ದಿನದಂದು ಸರ್ಪಗಳನ್ನು ಪೂಜಿಸುವುದರಿಂದ ಚರ್ಮ ರೋಗಕ್ಕೆ ಸಂಬಂಧಿಸಿದ ಕೆಲವೊಂದು ಸಮಸ್ಯೆಗಳು ಕೂಡ ಪರಿಹಾರವಾಗುತ್ತದೆ ಎನ್ನುವ ನಂಬಿಕೆಯಿದೆ.
ಅರ್ಚಕ ಮುರಳೀಧರ ಭಟ್ಟಾಚಾರ್ಯ ಅವರು, ನಾಗಪಂಚಮಿಯ ಕುರಿತು ಮಾತನಾಡಿ, ಶ್ರೀಕೃಷ್ಣನು ಯಮುನಾ ನದಿಯ ಆಳದಲ್ಲಿದ್ದ ಕಾಳಿ ನಾಗನನ್ನು ಮರ್ದನ ಮಾಡಿದ ದಿವಸ. ಅದೇ ದಿನವು ಶ್ರಾವಣ ಶುಕ್ಲ ಪಂಚಮಿಯಾಗಿತ್ತು. ಬಾಲ ಕೃಷ್ಣನು, ಯಮುನಾ ನದಿಯ ತೀರದಲ್ಲಿ ಆಡುತ್ತಿದ್ದಾಗ ಚೆಂಡು ನದಿ ದಂಡೆಯಲ್ಲಿದ್ದ ಮರದ ಕಾಂಡದಲ್ಲಿ ಸಿಕ್ಕಿ ಹಾಕಿಕೊಂಡಿರುತ್ತದೆ. ಆ ಚೆಂಡನ್ನು ಎತ್ತಿಕೊಳ್ಳಲು ಹೋದಾಗ ಕೃಷ್ಣನು ಜಾರಿ ನದಿಯಲ್ಲಿ ಬಿದ್ದನು. ಯುಮುನಾ ನದಿಯಲ್ಲಿ ಕಾಳಿ ಎಂಬ ಹಾವು ವಾಸವಾಗಿದ್ದು, ವಿಷಭರಿತವಾಗಿರುತ್ತದೆ. ಕೃಷ್ಣ ನದಿಗೆ ಬಿದ್ದಾಗ ಕಾಳಿ ಎಂಬ ಹಾವು ಅವನ ಮೇಲೆ ದಾಳಿ ಮಾಡುತ್ತದೆ. ಆಗ ಕೃಷ್ಣನು ಕಾಳಿಯ ವಿರುದ್ಧ ಹೋರಾಟ ಮಾಡುತ್ತಾನೆ. ಈ ವೇಳೆ ಕಾಳಿಯ ಹಾವಿಗೆ ಕೃಷ್ಣನು ಸಾಮಾನ್ಯ ಬಾಲಕನಲ್ಲ ಎಂದು ಅರಿವಿಗೆ ಬರುತ್ತದೆ. ಆಗ ಕಾಳಿ ಹಾವು ಕೃಷ್ಣನನ್ನು ತನ್ನನ್ನು ಕೊಲ್ಲಬೇಡವೆಂದು ಕೇಳಿಕೊಳ್ಳುತ್ತದೆ. ಕಾಳಿಯನ್ನು ಕ್ಷಮಿಸಿದ ಕೃಷ್ಣನು, ಜನರಿಗೆ ತೊಂದರೆ ಮಾಡಬೇಡ ಎಂದು ಬುದ್ಧಿವಾದ ಹೇಳಿ ಆ ಹಾವನ್ನು ಬಿಟ್ಟು ಬಿಡುತ್ತಾನೆ. ಹೀಗಾಗಿ, ಕೃಷ್ಣನು ಕಾಳಿ ನಾಗನನ್ನು ಮರ್ದನ ಮಾಡಿದ ದಿವಸದಂದು ನಾಗರಪಂಚಮಿ ಮಾಡಲಾಗುತ್ತದೆ ಎಂದು ವಿವರಿಸಿದರು.