ತವರು ಮನೆಯ ಅಮೂಲ್ಯ ರತ್ನವೇ ಬಾಗಿನ..

ಮಂಡ್ಯ:ತವರೂರ ಮನೆ ನೋಡ ಬಂದೆ, ತಾಯ ನೆನಪಾಗಿ ಕಣ್ಣೀರ ತಂದೆ” ಈ ಹಾಡು ಕೇಳುತ್ತಿದ್ದಂತೆ ಕಣ್ಣಂಚಲ್ಲಿ ನೀರಿಳಿದು ಬಿಡುತ್ತದೆ. ಪ್ರತಿ ಹೆಣ್ಣಿಗೆ ತವರು ಮನೆ ಎಂದರೆ ಸ್ವರ್ಗವಿದ್ದಂತೆ. ತವರೂರಿನ ಮಣ್ಣಿಗೂ ಹೆಣ್ಣಿಗೂ ಇರುವ ನಂಟು ಬಿಡಿಸಲಾಗದು._

_ಶಿವನು ಹಿಮವಂತನ ಮಗಳು ಪಾರ್ವತಿ ದೇವಿಯನ್ನುವರಿಸಿದ. ಬಳಿಕ ಭೂ ಲೋಕದಿಂದ ದೇವಲೋಕಕ್ಕೆ ಕರೆದುಕೊಂಡು ಹೋದಾಗ ಪಾರ್ವತಿ ದೇವಿಗೆ ಮನಸ್ಸಿಗೆ ತುಂಬಾ ಬೇಸರವೆನಿಸುತ್ತದೆ. ಆಗ ಶಿವ ಬೇಸರಿಸಿಕೊಳ್ಳಬೇಡ, ಒಂದು ತಿಂಗಳು ಭೂ ಲೋಕದಲ್ಲಿ ಇದ್ದು ಬಿಡು, ಪ್ರತಿ ಮಂಗಳವಾರ ಎಲ್ಲರೂ ನಿನ್ನನ್ನು “ಮಂಗಳ ಗೌರಿ “ಎಂದು ಪೂಜಿಸಲಿ, ಪ್ರತಿ ವಾರವೂ ಗೌರಿ ಪೂಜೆ ನಡೆಯಲಿ, ನಾಲ್ಕು ವಾರದ ನಂತರ ಗೌರಿ ಹಬ್ಬ ಬರುತ್ತದೆ. ನಂತರ ಬರೋದು ಭಾದ್ರಪದ ಮಾಸದ ಮೂರನೇ ದಿನ, ಆದಾದ ನಾಲ್ಕನೇ ದಿನ ಗಣೇಶನೊಂದಿಗೆ ವಾಪಾಸು ಬಂದು ಬಿಡು ಎಂದು ಶಿವನ ಅಪ್ಪಣೆಯಾಗುತ್ತದೆ. ಹಾಗಾಗಿ ಇಂದಿಗೂ ಗೌರಿ ಬಂದ ಮೇಲೆಯೇ ಗಣೇಶನನ್ನು ಪ್ರತಿಷ್ಠಾಪಿಸಿ ಪೂಜಿಸುವುದು ಆಚರಣೆಯಲ್ಲಿದೆ. ಅಂದಿನಿಂದ ಮುತ್ತೈದೆಯರಿಗೆ ಬಾಗಿನವನ್ನು ಕೊಡುವ ಸಂಪ್ರದಾಯ ಪದ್ಧತಿ ಆಚರಣೆಯಲ್ಲಿದೆ, ಇಂದಿಗೂ ಜೀವಂತಿಕೆ ಹೊಂದಿದೆ. ಒಂದು ವೇಳೆ ಅಣ್ಣ ತಂಗಿ ಎಷ್ಟೇ ಮುನಿಸಿಕೊಂಡಿದ್ದರೂ ಬಾಗಿನ ಕೊಡುವ ನೆಪದಲ್ಲಾದರೂ ವರ್ಷಕ್ಕೊಮ್ಮೆ ಬಂದು ಹಾಲುಂಡ ಮನೆಯ ಉಡುಗೊರೆ, ಪ್ರೀತಿಯನ್ನು ಅಣ್ಣ ಉಣಿಸುತ್ತಾನೆ. ಇದರಲ್ಲಿ ಸಿಗುವ ಸುಖ, ಸಂತೋಷ, ನೆಮ್ಮದಿ ಹೆಣ್ಣು ಮಕ್ಕಳಿಗೆ ಬೇರೆ ಯಾವುದರಲ್ಲೂ ಸಿಗದು._

_ಭಾರತೀಯ ಸಾಂಸ್ಕೃತಿಕ ಪರಂಪರೆಯಲ್ಲಿ ಪ್ರತಿಯೊಂದು ಹಬ್ಬ-ಹರಿದಿನ ಹಾಗೂ ಆಚರಣೆಗಳಿಗೆ ವೈಜ್ಞಾನಿಕ ಕಾರಣಗಳಿದೆ. ಸಾಂಸ್ಕೃತಿಕ ಹಿನ್ನೆಲೆಯೂ ಇದೆ. ಯುಗಾದಿ ಹಬ್ಬದಲ್ಲಿ ಬೇವು-ಬೆಲ್ಲ ತಿನ್ನುವುದಕ್ಕೂ ಕಾರಣವಿದೆ. ಹೌದು, ಯುಗಾದಿಯಲ್ಲಿ ಬೇವು-ಬೆಲ್ಲವನ್ನು ಸವಿಯುತ್ತೇವೆ, ಬೇವು ಎಂಬುದು ಕಹಿ, ಕಷ್ಟದ ಸೂಚಕ, ಬೇವು ನೈಸರ್ಗಿಕವಾಗಿ ದೊರೆಯುವಂತದ್ದು, ಆದರೆ ಬೆಲ್ಲವನ್ನು ನಾವೇ ತಯಾರಿಸಿಕೊಳ್ಳಬೇಕು, ಅಂದರೆ ಸತತ ಪರಿಶ್ರಮದೊಂದಿಗೆ ಕಾಯಕದ ಮಾಡಿದಾಗ ಬೆಲ್ಲವೆಂಬ ಸುಖ ನಮ್ಮದಾಗುತ್ತದೆ. ಹೀಗೇ ಎಲ್ಲಾ ಆಚರಣೆಗಳಿಗೂ ವೈಜ್ಞಾನಿಕ ಕಾರಣಗಳಿದೆ. ಹಾಗೆಯೇ ಗೌರಿ- ಗಣೇಶ ಹಬ್ಬದಲ್ಲಿ ಬಾಗಿನ ಕೊಡುವುದಕ್ಕೂ ವೈಜ್ಞಾನಿಕ ಕಾರಣಗಳಿದೆ. ಹಾಗಿದ್ದರೆ ಮುತ್ತೈದೆಯರಿಗೆ ಬಾಗಿನದ ಮಹತ್ವದ ಬಗ್ಗೆ ಮೆಲುಕು ಹಾಕೋಣ._

_ಸ್ವರ್ಣ ಗೌರಿ ಹಬ್ಬದ ಬಾಗಿನವನ್ನು ಬಿದಿರಿನ ಮೊರದಲ್ಲೇ ಕೊಡುವುದೂ ಒಂದು ವಿಶೇಷ ಮತ್ತು ಅರ್ಥಪೂರ್ಣ ಕೂಡ ಬಿದಿರು ಸ್ವಾಭಾವಿಕವಾಗಿ ಬೆಳೆಯುವಂತದ್ದು, ಬಿದಿರು ನೂರಾರು ಕುಡಿಗಳೊಂದಿಗೆ ಹರಡುತ್ತಾ ಹೇಗೆ ಬೆಳೆಯುತ್ತದೆಯೋ ಹಾಗೆಯೇ ನಿನ್ನ ವಂಶವೂ ಬೆಳೆಯಲಿ, ಉದ್ಧಾರವಾಗಲಿ ಎಂಬ ಕಾರಣಕ್ಕಾಗಿಯೇ ಬಿದಿರಿನ ಮೊರದಲ್ಲೇ ಭಾಗಿನ ಅರ್ಪಣೆ ಮಾಡುವುದು ವಿಶೇಷ. ಮೊರಕ್ಕೆ ಅರಿಶಿಣವನ್ನೇ ಬಳಸಲು ಕಾರಣವೂ ಇದೆ.ಆರಿಶಿಣಕ್ಕೆ ನಮ್ಮ ದೇಹದ ಮತ್ತು ಜೀವನದ ಧಾರಿದ್ರವನ್ನು ನಾಶ ಮಾಡುವ ಶಕ್ತಿ ಇದೆ. ಮದುಮಕ್ಕಳಿಗೆ, ಬಾಣಂತಿಯರಿಗೆ, ಹೆಣ್ಣು ಮಕ್ಕಳು ಮೈ ನೆರೆತಾಗ ಅರಿಷಿಣ ಹಚ್ಚಲಾಗುತ್ತದೆ, ಪ್ರತಿ ದಿನವೂ ಖಾಲಿ ಹೊಟ್ಟೆಯಲ್ಲಿ ಕಡಲೇ ಕಾಳಿನಷ್ಟು ಗಾತ್ರದ ಆರಿಶಿಣದ ಉಂಡೆಯನ್ನು ಮಾಡಿ ತುಪ್ಪದಲ್ಲಿ ಬೆರೆಸಿ ಸೇವಿಸಿ ಹೆಚ್ಚು ಪ್ರಮಾಣದ ನೀರನ್ನು ಕುಡಿದರೆ ದೇಹದೊಳಗಿನ ಧಾರಿ ಹೋಗುತ್ತದೆ, ಜೊತೆಗೆ ಪ್ರತಿ ನರ-ನಾಡಿಗಳಲ್ಲೂ ರಕ್ತ ಸಂಚಾರ ಸರಳವಾಗುತ್ತದೆ. ಇದು ದೇಹಕ್ಕೆ ಮದ್ದು ಕೂಡ. ಇದು ವೈಜ್ಞಾನಿಕ ಸತ್ಯ ಕೂಡ. ಹಾಗೆಯೇ ಕುಂಕುಮ ಲಕ್ಷ್ಮಿಯ ಸಂಕೇತ._

_ಅರಿಶಿಣ, ಕುಂಕುಮದಿಂದ ಸಿಂಗರಿಸಿದ ಮೊರದೊಳಗೆ ಬಾಳೆ ಎಲೆಯನ್ನಿಟ್ಟು ಮಹಾಲಕ್ಷ್ಮಿ ಸ್ವರೂಪವಾದ ಅರಿಶಿಣ-ಕುಂಕುಮ, ಶೃಂಗಾರ ಲಕ್ಷ್ಮಿಯಾದ ಕನ್ನಡಿ, ಧನಲಕ್ಷ್ಮಿಯ ಸ್ವರೂಪವಾದ ವೀಳ್ಯದೆಲೆ. ಹಾಗೆಯೇ ಕುಲ ದೇವರ ಪ್ರಾಪ್ತಿಗಾಗಿ ವಸ್ತ್ರ ದಾನ, ಇಷ್ಟಾರ್ಥ ಸಿದ್ದಿಗಾಗಿ ಅಡಕೆ ಹಾಗೂ ವಿಘ್ನ ನಿವಾರಣೆಗಾಗಿ ಪೂರ್ಣಫಲ ಸೇರಿದಂತೆ ನಾನಾ ರೀತಿಯ ಫಲವನ್ನಿಡಲಾಗುತ್ತದೆ, ಜೊತೆಗೆ ಅಕ್ಕಿ, ಕಡಲೆ ಬೇಳೆ, ತೊಗರಿ ಬೇಳೆ, ಹೆಸರು ಬೇಳೆ, ಉದ್ದಿನ ಬೇಳೆ, ರವೆ, ಉಪ್ಪು, ಹೂವು, ಊದುಬತ್ತಿ, ಐದು ಮಂಗಳಾರತಿ ಬತ್ತಿ, ಬಳೆ, ಬಿಚ್ಚಾಲೆ, ರವಿಕೆ ಕಣ, ಅಚ್ಚು ಬೆಲ್ಲ, ಬಾಳೆಹಣ್ಣು, ದಕ್ಷಿಣೆ ಇಡಲಾಗುತ್ತದೆ._

_ತೆಂಗಿನ ಕಾಯಿ ಪೂರ್ಣಪಲ, ಇದಕ್ಕೆ ವಿಭಿನ್ನವಾದ ಅರ್ಥವೂ ಇದೆ. ತೆಂಗಿನ ಕಾಯಿಯ ಸಿಪ್ಪೆ ಪ್ರಪಂಚವಿದ್ದಂತೆ, ನಾರು ಸಂಬಂಧವಿದ್ದಂತೆ, ಚಿಮ್ಮೊಳಗಿನ ತೆಂಗಿನ ಕೊಬ್ಬರಿ ಅದು ನಾವಿದ್ದಂತೆ, ಎಳನೀರು ಕಾಮ, ಕ್ರೋಧ, ಲೋಭ, ಮೋಹ, ಮಧ. ಮತ್ಸರ ಹೀಗೆ ಅರಿಷಡ್ವರ್ಗಗಳಿದ್ದಂತೆ. ನೀರನ್ನು ಭಗವಂತನಿಗೆ ಪ್ರೋಕ್ಷಣೆ ಮಾಡಿದಾಗ ಜೀವಾತ್ಮ ಪರಮಾತ್ಮನಲ್ಲಿ ವಿಲೀನವಾಗುತ್ತದೆ. ಇದು ತೆಂಗಿನ ಕಾಯಿಯ ಮಹಿಮೆ ಮತ್ತು ಮಹತ್ವ. ಅಕ್ಕಿ ಕೂಡ ಅನ್ನದಾನದ ಸೂಚಕ, ಹಾಗೆಯೇ ನಮ್ಮೆಲ್ಲ ಕಷ್ಟ-ಕಾರ್ಪಣ್ಯಗಳು ಪರಿಹಾರವಾಗಲಿ ಎಂಬ ಕಾರಣದಿಂದಾಗಿ ಅದರೊಟ್ಟಿಗೆ ವಿವಿಧ ಬೇಳೆ-ಕಾಳು ಸೇರಿದಂತೆ ಧಾನ್ಯಗಳನ್ನಿಡುವ ಪ್ರತೀತಿ ಇದೆ. ಹೀಗೆ ಭಾಗ್ಯ ಮತ್ತು ಲಕ್ಷ್ಮಿಯ ಸಂಕೇತದ ಮಂಗಳ ದ್ರವ್ಯಗಳನ್ನಿಟ್ಟು ಮೊದಲು ಸ್ವರ್ಣಗೌರಿಗೂ, ಆನಂತರ ಮುತ್ತೈದೆಯರಿಗೆ ಬಾಗಿನವನ್ನು ಕೊಡುವಂತ ಸಂಸ್ಕಾರ ಮತ್ತು ಸಂಸ್ಕೃತಿ ನಮ್ಮ ಸಂಪ್ರದಾಯದ ಹಿರಿಮೆ. ಇಂತಹ ಮಹತ್ವ ಸಾರುವ ಲಕ್ಷ್ಮಿ ಸ್ವರೂಪವಾದ ಬಾಗಿನ ಪಡೆದು ಸಂಭ್ರಮಿಸಿ, ಹೆತ್ತ ಮನೆಗೆ ಹರಸುವ ಗೌರಿ-ಗಣೇಶ ಹಬ್ಬಕ್ಕೆ ಹೋಗುವುದೆಂದರೆ ಮೂಟೆಯಷ್ಟು ಸಂಭ್ರಮ ಮದುವೆಯಾಗಿ ಎಷ್ಟೇ ವರ್ಷಗಳು ಕಳೆದಿದ್ದರೂ ತವರಿನ ಮಣ್ಣಲ್ಲಿ ಇಟ್ಟ ಮೊದಲ ಹೆಜ್ಜೆ. ಬಾಲ್ಯದಲ್ಲಿ ಕುಣಿದು ಕುಪ್ಪಳಿಸಿದ ಸಂಭ್ರಮ, ಅಲ್ಲಿನ ನಗು, ಅಳು ಹಾಗೆಯೇ ಎಲ್ಲದಕ್ಕೂ ಮಿಗಿಲಾದ ತಾಯಿಯ ಪ್ರೀತಿ ಇದೆಯಲ್ಲಾ ಆವೆಲ್ಲದರ ಸೆಳೆತವೇ ಹಾಲುಂಡ ಮನೆಯನ್ನು ಕೈ ಬೀಸಿ ಕರೆಯುತ್ತಲೇ ಇರುತ್ತದೆ. ಅತ್ಯಂತ ಶ್ರೀಮಂತ ಸಾಂಸ್ಕೃತಿಕ ಹಿರಿಮೆ ಹೊಂದಿದ ನಮ್ಮ ದೇಶದಲ್ಲಿ ಎಲ್ಲಾ ಹಬ್ಬಗಳಿಗಿಂತಲೂ ಅದ್ದೂರಿ ಹಾಗೂ ಕಲರ್ ಪುಲ್ ಹಬ್ಬವೆಂದರೆ ಅದು ಗೌರಿ -ಗಣೇಶ ಗಣೇಶನೆಂದರೆ ಮಹಾ ಬುದ್ದಿಶಾಲಿ, ಅದ್ಭುತ, ಅಗ್ರಪೂಜೆಗೆ ಅಧಿಪತಿ, ಗಣೇಶನ ದೊಡ್ಡ ಹೊಟ್ಟೆಯು ಔದಾರ್ಯದ ಸಂಕೇತ, ಇಡೀ ಬ್ರಹ್ಮಾಂಡ.ಈ ವಿಘ್ನ ನಿವಾರಕನ ಉತ್ಸವವನ್ನು ಜಾತ್ಯಾತೀತವಾಗಿ, ಪಕ್ಷತೀತಾವಾಗಿ, ಧರ್ಮಾತೀತವಾಗಿ ಆಚರಿಸುತ್ತೇವೆ. ಗಣಪತಿಯನ್ನು ಪಾರ್ವತಿಯು ತನ್ನ ಮೈ ಮಣ್ಣಿನಿಂದ ಮಾಡಿದಳೆಂಬುದು ಪುರಾಣಗಳಲ್ಲಿ ಉಲ್ಲೇಖವಾಗಿದೆ. ಇದು ಗಣೇಶನಿಗೂ ಮಣ್ಣಿಗೂ ಇರುವ ಸಂಬಂಧದ ಸೂಚಕ. ಹಾಗಾಗಿ ಗಣೇಶನ ಹಬ್ಬದಂದು ಮಣ್ಣಿನಿಂದ ಮಾಡಿದ ಮೂರ್ತಿಯನ್ನು ಪೂಜಿಸುವುದು ತುಂಬಾ ಶ್ರೇಷ್ಠ. ಅಲ್ಲದೇ ರಾಸಾಯನಿಕ ಬಣ್ಣಗಳ ಲೇಪಿಸಿದ ಗಣೇಶಮೂರ್ತಿಯನ್ನು ನದಿ, ಕೆರೆ, ಬಾವಿ, ಹಳ್ಳಗಳಲ್ಲಿ ವಿಸರ್ಜಿಸಿದರೆ ಜಲ ಜೀವರಾಶಿಗಳ ಜೀವಕ್ಕೂ ಎರವಾಗುತ್ತದೆ, ಕುಡಿಯವ ನೀರು ವಿಷವಾಗಿ ಆರೋಗ್ಯಕ್ಕೆ ಹಾನಿಯುಂಟು ಮಾಡಬಹುದು. ಹಾಗಾಗಿ ಶಾಸ್ತ್ರ, ಪುರಾಣಗಳಲ್ಲಿ ಉಲ್ಲೇಖಿಸಿದಂತೆ ಮಣ್ಣಿನ ಗಣೇಶಮೂರ್ತಿಯನ್ನು ಪ್ರತಿಷ್ಟಾಪಿಸುವುದು ಒಳ್ಳೆಯದು. ಹಾಗೆಯೇ ಗಂಗೆಯೂ ಭೂಮಿಯ ಮೇಲಿನ ಪ್ರತಿ ಜಲಚರ, ಜೀವರಾಶಿಗಳಿಗೂ ಜೀವಜಲ ಉಣಿಸಿ ಜೀವ ಕಾಪಾಡುವಳು, ಆಕೆಯೂ ಸಂತೋಷದಿಂದ ಇರಬೇಕೆಂಬ ಕಾರಣದಿಂದ ವರ್ಷಧಾರೆಯಿಂದ ಮೈದುಂಬಿ ಹರಿಯುವಾಗ ಬಾಗಿನ ಅರ್ಪಣೆ ಮಾಡಲಾಗುತ್ತದೆ, ಪ್ರತಿ ಜೀವರಾಶಿಗೂ ಜೀವಜಲ ಉಣಿಸುವ ಗಂಗಾಮಾತೆಗೂ ಬಾಗಿನ ಅರ್ಪಿಸುವುದು ಹಿಂದೂ ಸಂಪ್ರದಾಯ, ಇಂತಹ ಅರ್ಥಪೂರ್ಣ ಹಬ್ಬವು ಸಂಪತ್ತು, ಉತ್ತಮ ಆರೋಗ್ಯ, ಸುಖ, ಶಾಂತಿ, ನೆಮ್ಮದಿಯನ್ನು ನೀಡಲಿ, ಗೌರಿ-ಗಣೇಶರ ಕೃಪಾಶೀರ್ವಾದ ನಮ್ಮೆಲ್ಲರ ಮೇಲಿರಲಿ ಎಂದು ಭಗವಂತನ್ನು ಪ್ರಾರ್ಥಿಸುತ್ತಾ ಸರ್ವರಿಗೂ ಗೌರಿ- ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು.

*_ವಿಶೇಷ ವರದಿಯೋಂದಿಗೆ: ಸಾಯಿಕುಮಾರ್. ಎನ್. ಕೆ_*