*ಡಾಲು ರವಿ ರಾಜಕೀಯ ನೆಲೆಯಿಲ್ಲದ ಅವಕಾಶವಾದಿ ರಾಜಕಾರಣಿ?
ಕೆ.ಆರ್.ಪೇಟೆ: ತಾಲ್ಲೂಕು ಟಿಎಪಿಸಿಎಂಎಸ್ ನಿರ್ದೇಶಕರಾದ ಬಿ.ಎಂ.ಕಿರಣ್ ಅವರು ಕಿಕ್ಕೇರಿ ಹೋಬಳಿಯ ಜೆಡಿಎಸ್ ಮುಖಂಡರನ್ನು ಶಾಸಕರ ಚೇಲಾಗಳು ಎಂದು ಟೀಕಿಸಿದ್ದಾರೆ. ಇದು ಬಿ.ಎಂ.ಕಿರಣ್ ಅವರ ದುರ್ವರ್ತನೆಯನ್ನು ತೋರುತ್ತದೆ. ಇವರು ಟಿ.ಎ.ಪಿ.ಸಿ.ಎಂ.ಎಸ್ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಿಗೆ ಮತದಾನ ಮಾಡುವ ಮೂಲಕ ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದಾರೆ. ಆದರೂ ನಾನು ಜೆಡಿಎಸ್ ಪಕ್ಷದ ಮುಖಂಡ ಎಂದು ಹೇಳಿಕೊಳ್ಳುತ್ತಿರುವುದು ನಾಚಿಕೆಗೇಡು ಎಂದು ಕಿಕ್ಕೇರಿ ಹೋಬಳಿಯ ಜೆಡಿಎಸ್ ಪಕ್ಷದ ಮುಖಂಡರು ಟೀಕಿಸಿದರು.
ಅವರು ಕೆ.ಆರ್.ಪೇಟೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ತಾಲ್ಲೂಕು ಟಿಎಪಿಸಿಎಂಎಸ್ ಅಧ್ಯಕ್ಷ ಬಲದೇವ್, ಜೆಡಿಎಸ್ ಮುಖಂಡರಾದ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಕೃಷ್ಣೇಗೌಡ, ತಾಲ್ಲೂಕು ಟಿ.ಎ.ಪಿ.ಸಿ.ಎಂ.ಎಸ್ ನಿರ್ದೇಶಕ ಕೆ.ಬಿ.ಮಧು, ಕಿಕ್ಕೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ.ಬಿ.ಶೇಖರ್, ಅಂಕನಹಳ್ಳಿ ಅಣ್ಣೇಗೌಡ, ಮಾರ್ಗೋನಹಳ್ಳಿ ಶಿವಣ್ಣ, ಮಂಜು, ಚಂದ್ರೇಗೌಡ, ಆನೆಗೊಳ ನಂಜೇಶ್, ಅಂಕನಹಳ್ಳಿ ಪ್ರವೀಣ್, ಜುಜ್ಜಲಕ್ಯಾತನಹಳ್ಳಿ ಬಸವರಾಜು, ಐಕನಹಳ್ಳಿ ಗಿರೀಶ್, ಕಿಕ್ಕೇರಿ ರಾಘು, ಟಿಎಪಿಸಿಎಂಎಸ್ ಪರಾಜಿತ ಅಭ್ಯರ್ಥಿಗಳಾದ ಕರಿಶೆಟ್ಟಿ, ಕಾಂತರಾಜು, ಹಿರಿಯ ಜೆಡಿಎಸ್ ಮುಖಂಡರಾದ ಬೇಲದಕೆರೆ ನಂಜಪ್ಪ ಮತ್ತಿತರರು ಬಿ.ಎಂ.ಕಿರಣ್ ಅವರು ಪಕ್ಷ ವಿರೋಧಿ ಚಟುವಟಿಕೆ ಮಾಡಿರುವುದು ಹಲವು ದಾಖಲೆಗಳಲ್ಲಿ ಸಾಬೀತಾಗಿದೆ. ಆದರೂ ಈಗ ನಾನು ಪಕ್ಷ ವಿರೋಧಿ ಚಟುವಟಿಕೆ ಏನೂ ಮಾಡಿಲ್ಲ. ನಿಷ್ಟಾವಂತ ಕಾರ್ಯಕರ್ತ ಎಂದು ಬಿಂಬಿಸಿಕೊಳ್ಳುತ್ತಾ ಕಿಕ್ಕೇರಿ ಹೋಬಳಿಯ ಜೆಡಿಎಸ್ ಮುಖಂಡರನ್ನು ಟೀಕಿಸುತ್ತಿರುವುದು ಖಂಡನೀಯವಾದುದು. ಇದು ಮುಂದುವರೆಸಿದರೆ ಬಿ.ಎಂ.ಕಿರಣ್ ಅವರಿಗೆ ತಕ್ಕ ಪಾಠ ಕಲಿಸಬೇಕಾಗುತ್ತದೆ. ಶಾಸಕರಾದ ಹೆಚ್.ಟಿ.ಮಂಜು ಅವರಿಂದ ಹಲವು ಭಾರಿ ಸಹಾಯ ಪಡೆದಿದ್ದಾರೆ ಆದರೂ ಶಾಸಕರು ಅದೆಲ್ಲವನ್ನು ಎಲ್ಲಿಯೂ ಹೇಳಿಕೊಂಡಿಲ್ಲ. ಸಹಿಸಿಕೊಂಡಿದ್ದಾರೆ ಕಾರಣವೇನೆಂದರೆ ಬಿ.ಎಂ.ಕಿರಣ್ ಶ್ರವಣಬೆಳಗೊಳ ಶಾಸಕರಾದ ಸಿ.ಎನ್.ಬಾಲಕೃಷ್ಣ ಹಾಗೂ ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕ ಚೋಳೇನಹಳ್ಳಿ ಪುಟ್ಟಸ್ವಾಮೀಗೌಡರ ಹತ್ತಿರದ ಸಂಬAಧಿ ಎಂಬ ಕಾರಣಕ್ಕೆ ಕಿಕ್ಕೇರಿ ಹೋಬಳಿಯಲ್ಲಿ ಜೆಡಿಎಸ್ ಪಕ್ಷದಲ್ಲಿ ಬೆಳೆಯಲಿ ಎಂದು ಎಲ್ಲಾ ರೀತಿಯಲ್ಲೂ ಸಪೋರ್ಟ್ ಮಾಡಿದ್ದಾರೆ. ಇದೆಲ್ಲವನ್ನು ಮರೆತು ಕಾಂಗ್ರೆಸ್ ದೋಣಿಯ ಮೇಲೆ ಸಾಗುತ್ತಿರುವ ವ್ಯಕ್ತಿಗಳೊಂದಿಗೆ ಗುರುತಿಸಿಕೊಂಡು ಟಿಎಪಿಸಿಎಂಎಸ್ ಚುನಾವಣೆಯಲ್ಲಿ ನಮ್ಮ ಜೆಡಿಎಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾದ ಮೂವರು ಅಭ್ಯರ್ಥಿಗಳು ಕೇವಲ 1ಮತಗಳ ಅಂತರದಿಂದ ಸೋಲಲು ಇವರು ಅಡ್ಡ ಮತದಾನ ಮಾಡಿ ನೇರ ಕಾರಣರಾಗಿದ್ದಾರೆ ಎಂದು ಬಿ.ಎಂ.ಕಿರಣ್ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
*ಕಿರಣ್ ಗೆ ಕೃಷ್ಣೇಗೌಡ ಸವಾಲು*: ಬಿ.ಎಂ.ಕಿರಣ್ ಅವರು ಯಾವುದೇ ಚುನಾವಣೆಯನ್ನು ನೇರವಾಗಿ ಎದುರಿಸಿಲ್ಲ. ಆನೆಗೊಳ ಸೊಸೈಟಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಕಾಂಗ್ರೆಸ್ ಪಕ್ಷದವರಿಗೆ 5ಸ್ಥಾನಗಳನ್ನು ಬಿಟ್ಟುಕೊಡುವ ಮೂಲಕ ಆನೆಗೊಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾಗಿ ಅವಿರ್ರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣೆ ನಡೆಸಿದ್ದರೆ ಎಲ್ಲಾ ಸ್ಥಾನಗಳಲ್ಲಿಯೂ ಜೆಡಿಎಸ್ ಪಕ್ಷದ ಅಭ್ಯರ್ಥಿಗಳೇ ಗೆಲ್ಲುತ್ತಿದ್ದರು. ಕಿರಣ್ ಅವರಿಗೆ ದರ‍್ಯ ಇದ್ದರೆ ಆನೆಗೊಳ ಸೊಸೈಟಿಯ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಿ, ನನ್ನ ವಿರುದ್ದ ಸ್ಪರ್ಧೆ ಮಾಡಿ ನನ್ನುನ್ನು ಎದುರಿಸಿ ಗೆದ್ದರೆ ನಾನು ರಾಜಕೀಯ ನಿವೃತ್ತಿ ಘೋಷಣೆ ಮಾಡಿ ಮನೆಯಲ್ಲಿರುತ್ತೇನೆ ಎಂದು ಕೃಷ್ಣೇಗೌಡ ಬಿ.ಎಂ.ಕಿರಣ್‌ಗೆ ಸವಾಲು ಹಾಕಿದರು.
*ಡಾಲು ರವಿ ವಿರುದ್ದ ಬಲದೇವ್ ಟೀಕೆ*: ಮನ್‌ಮುಲ್ ನಿರ್ದೇಶಕರಾದ ಡಾಲು ರವಿ ತಾವು ನಿಷ್ಠಾವಂತ ಜೆಡಿಎಸ್ ಕಾರ್ಯಕರ್ತ ಎಂದು ಹೇಳಿಕೊಂಡಿದ್ದಾರೆ. ಇದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಎಂದು ತಾಲ್ಲೂಕು ಟಿಎಪಿಸಿಎಂಎಸ್ ಅಧ್ಯಕ್ಷ ಬಲದೇವ್ ತಿಳಿಸಿದರು. ಡಾಲು ರವಿ ತಾವು ಮನ್‌ಮುಲ್ ಚುನಾವಣೆಯಲ್ಲಿ ಗೆದ್ದ ಬಳಿಕ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷರಾದ ಸಿ.ಡಿ.ಗಂಗಾಧರ್ ಮತ್ತು ಇತರೆ ಕಾಂಗ್ರೆಸ್ ಪಕ್ಷದ ಮುಖಂಡರಿಂದ ಸನ್ಮಾನ ಸ್ವೀಕರಿಸಿ, ಮನ್‌ಮುಲ್ ಮತ್ತು ಡಿಸಿಸಿ ಬ್ಯಾಂಕ್ ಚುನಾವಣೆ ಫಲಿತಾಂಶದ ಬಳಿಕ ಕಾಂಗ್ರೆಸ್ ಮುಖಂಡರೊಂದಿಗೆ ಸೇರಿ ವಿಜಯೋತ್ಸವ ಆಚರಣೆ ಮಾಡಿದ್ದಾರೆ. ಡಿಸಿಸಿ ಬ್ಯಾಂಕಿನ ಮತ ಎಣಿಕೆ ಏಜೆಂಟ್ ಆಗಿಯೂ ಕರ್ತವ್ಯ ನಿರ್ವಹಿಸಿದ್ದಾರೆ ಆದರೂ ನಾನು ಜೆಡಿಎಸ್ ನಿಷ್ಠಾವಂತ ಕಾರ್ಯಕರ್ತ ಎಂದು ಹೇಳಿಕೊಂಡಿರುವುದು ರಾಜಕೀಯ ನೆಲೆಯಿಲ್ಲದ ರಾಜಕಾರಣಿ ಹಾಗೂ ಅವಕಾಶವಾದಿ ರಾಜಕಾರಣಿ ಎಂದು ಡಾಲು ರವಿ ವಿರುದ್ದ ಬಲದೇವ್ ಆಕ್ರೋಶ ವ್ಯಕ್ತಪಡಿಸಿದರು. ನೀವು ತಾಲ್ಲೂಕಿನಲ್ಲಿ ಯಾವ ರೀತಿ ಅವಕಾಶವಾದಿ ರಾಜಕಾರಣ ಮಾಡುತ್ತಿದ್ದೀರಿ ಎಂಬುದು ಎಲ್ಲರಿಗೂ ತಿಳಿದಿದೆ. ಮುಂದಿನ ದಿನಗಳಲ್ಲಿ ತಾಲ್ಲೂಕಿನ ಜನತೆ ತಮಗೆ ಸರಿಯಾದ ಪಾಠ ಕಲಿಸಲಿದ್ದಾರೆ. ನಮ್ಮ ಪಕ್ಷದ ಶಾಸಕರಾದ ಹೆಚ್.ಟಿ.ಮಂಜಣ್ಣ ಅವರು ಪ್ರಾಮಾಣಿಕ ರಾಜಕಾರಣ ಮಾಡುತ್ತಿದ್ದಾರೆ. 2028ಕ್ಕೆ ಮತ್ತೆ ಬಿ.ಫಾರಂ ಪಡೆದು ಮತ್ತೊಮ್ಮೆ ಶಾಸಕರಾಗುವುದು ಖಚಿತ. ಪಕ್ಷ ವಿರೋಧಿ ಚಟುವಟಿಕೆ ಮಾಡಿರುವ ನಿಮಗೆ ಜೆಡಿಎಸ್ ಪಕ್ಷದಲ್ಲಿ ಯಾವುದೇ ನೆಲೆ ಸಿಗುವುದಿಲ್ಲ. ಸುಮ್ಮನೇ ಏಕೆ ಜೆಡಿಎಸ್ ಮುಖಂಡ ಎಂದು ಹೇಳಿಕೊಂಡು ತಿರುಗುತ್ತೀರಿ, ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದರೆ ಯಾರಿಗೂ ತಿಳಿಯುವುದಿಲ್ಲ ಅಂದುಕೊಡಿದ್ದಾರೆ ಎಂದು ಡಾಲು ರವಿ ನಡೆಯನ್ನು ಬಲದೇವ್ ಹೇಳಿದರು.





