ಅಂಬೇಡ್ಕರ್ ಅವರ ಆದರ್ಶ ತತ್ವ ಪಾಲನೆ ಎಲ್ಲರ ಕರ್ತವ್ಯ: ನಗರಸಭಾ ಸದಸ್ಯೆ ನೀಲಮ್ಮ
ಚಾಮರಾಜನಗರ: ಡಾ.ಬಿಆರ್ ಅಂಬೇಡ್ಕರ್ ಅವರ ಆದರ್ಶ ತತ್ವಗಳನ್ನು ಪಾಲಿಸುವುದು ಎಲ್ಲರ ಕರ್ತವ್ಯ ಎಂದು 1ನೇ ವಾರ್ಡ್ ನ ನಗರಸಭಾ ಮಾಜಿ ಸದಸ್ಯೆ ನೀಲಮ್ಮ ಸೋಮವಾರಪೇಟೆ ತಿಳಿಸಿದರು.
ನಗರದ 1ನೇ ವಾರ್ಡ್ ನ ಸೋಮವಾರ ಪೇಟೆಯಲ್ಲಿ ನಡೆದ ಭಾರತರತ್ನ ಡಾ. ಬಿ. ಅರ್. ಅಂಬೇಡ್ಕರ್ ಅವರ 69ನೇ ಪರಿನಿರ್ವಾಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಡಾ. ಬಿಆರ್ ಅಂಬೇಡ್ಕರ್ ಅವರು ತಮ್ಮ ಅಮೂಲ್ಯವಾದ ಜೀವನವನ್ನು ದೀನ ದಲಿತರಿಗಾಗಿ ತ್ಯಾಗ ಮಾಡಿದವರು. ಆದ್ದರಿಂದ ದೀನ ದಲಿತರ ಪರವಾಗಿ ದುಡಿದ ಏಕೈಕ ವ್ಯಕ್ತಿ ಅವರಾಗಿದ್ದಾರೆ. ಅಂಬೇಡ್ಕರ್ ಅವರ 69ನೇ ಪರಿ ನಿರ್ವಾಣ ಕಾರ್ಯಕ್ರಮ ಆಚರಿಸುತ್ತಿರುವುದು ತುಂಬಾ ಸಂತೋಷ, ಅಂಬೇಡ್ಕರ್ ಅವರು ತತ್ವ ಸಿದ್ಧಾಂತದಡಿಯಲ್ಲಿ ಸಂವಿಧಾನವನ್ನು ರಚಿಸಿದಂತಹ ಮಹಾ ಚೇತನ, ಭರತ ಭೂಮಿಗೆ ಬೆಳಕನ್ನು ಹಚ್ಚಿದ ದಿನದಂದು ಅವರು ನೀಡಿದ ಬೆಳಕಲ್ಲಿ ಭಾರತ ದೇಶದ ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ಎಲ್ಲಾ ಧರ್ಮ, ಜಾತಿ ಮೀರಿದಂತಹ ಸಂವಿಧಾನವನ್ನು ನೀಡಿದ ಮಹಾನ್ ತ್ಯಾಗಿ ಅವರು ಎಂದರು.
ಸಮಾಜ ಸೇವಕ ಎಲ್. ಸುರೇಶ್ ಮಾತನಾಡಿ, ಡಾ.ಬಿಆರ್ ಅಂಬೇಡ್ಕರ್ ಅವರು ವಿಶ್ವ ಕಂಡ ಮಹಾನ್ ಚೇತನ, ಇತ್ತೀಚಿನ ದಿನಗಳಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡುತ್ತಿರುವುದು ಮಹಾ ಪಾಪ, ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯತಿ, ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆಗಳಲ್ಲಿ ಸಂವಿಧಾನದ ಬಗ್ಗೆ ತಿಳಿದವರು ಚುನಾವಣೆಯಲ್ಲಿ ಸೋಲನ್ನು ಅನುಭವಿಸಿ ಭ್ರಷ್ಟಾಚಾರ ರಾಜಕಾರಣಿಗಳನ್ನು ಗೆಲ್ಲಿಸುತ್ತಿರುವುದು ಒಂದು ವಿಪರ್ಯಾಸವಾಗಿದೆ. ಆದ್ದರಿಂದ ಮತದಾರರು ಡಾ. ಬಿಆರ್ ಅಂಬೇಡ್ಕರ್ ಅವರು ನೀಡಿರುವ ಸಂವಿಧಾನವನ್ನು ಗೌರವಿಸುವವರಿಗೆ ಮತ ನೀಡಿದರೆ ಅದು ಅವರಿಗೆ ನೀವು ಸಲ್ಲಿಸುವ ಗೌರವವಾಗಿರುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕ ರಾಜೇಂದ್ರ, ಮಹದೇವು, ಬಸವಣ್ಣ ಹಾಗೂ ಮಕ್ಕಳು ಸೇರಿದಂತೆ ಇತರರು ಭಾಗವಹಿಸಿದ್ದರು.
ವರದಿ: ಆರ್ ಉಮೇಶ್ ಮಲಾರಪಾಳ್ಯ





