*ಜ.15ರಿಂದ ಹೇಮಗಿರಿ ಭಾರೀ ದನಗಳ ಜಾತ್ರೆ ಆರಂಭ: ರೈತರಿಗೆ ಹಾಗೂ ಜಾನುವಾರುಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸಿಕೊಡಲು ಶಾಸಕ ಹೆಚ್.ಟಿ.ಮಂಜು ಸೂಚನೆ*
ಕೆ.ಆರ್.ಪೇಟೆ,ಡಿ.07: ಇತಿಹಾಸ ಪ್ರಸಿದ್ದ ಹೇಮಗಿರಿ ದನಗಳ ಜಾತ್ರೆ(ಜಾನುವಾರುಗಳ ಜಾತ್ರೆ) 2026ನೇ ಜನವರಿ 15ರಿಂದ ಪ್ರಾರಂಭವಾಗಲಿದ್ದು ಹೇಮಗಿರಿ ಶ್ರೀ ಕ್ಷೇತ್ರ ರಕ್ಷಕ ಶ್ರೀ ಕಲ್ಯಾಣ ವೆಂಕಟರಮಣಸ್ವಾಮಿಯ ಬ್ರಹ್ಮ ರಥೋತ್ಸವ ಜನವರಿ 25ರಂದು ನಡೆಯಲಿದೆ. ತೆಪ್ಪೋತ್ಸವವು ಹೇಮಾವತಿ ನದಿಯಲ್ಲಿ ಜ.29ರಂದು ನಡೆಯಲಿದೆ ಹಾಗಾಗಿ ದನಗಳ ಜಾತ್ರೆಗೆ ಬರುವ ಜಾನುವಾರುಗಳಿಗೆ, ರೈತರಿಗೆ ಹಾಗೂ ರಥೋತ್ಸವಕ್ಕೆ ಆಗಮಿಸುವ ಭಕ್ತಾಧಿಗಳಿಗೆ ಎಲ್ಲ ರೀತಿಯ ಮೂಲ ಸೌಲಭ್ಯಗಳನ್ನು ಯಾವುದೇ ಕೊರತೆಯಾಗದಂತೆ ಕಲ್ಪಿಸಿಕೊಡಬೇಕು ಎಂದು ಶಾಸಕ ಹೆಚ್.ಟಿ.ಮಂಜು ಅವರು ತಾಲೂಕು ಆಡಳಿತಕ್ಕೆ ಸೂಚನೆ ನೀಡಿದರು.
ಅವರು ಕೆ.ಆರ್.ಪೇಟೆ ಪಟ್ಟಣದ ಮಿನಿ ವಿಧಾನಸೌಧದ ಸಭಾಂಗಣದಲ್ಲಿ ನಡೆದ ಹೇಮಗಿರಿ ದನಗಳ ಜಾತ್ರೆ ಹಾಗೂ ಬಿಲ್ಲೇನಹಳ್ಳಿ ಶ್ರೀ ಗವಿರಂಗನಾಥಸ್ವಾಮಿ ದನಗಳ ಜಾತ್ರೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹೇಮಗಿರಿ ದನಗಳ ಜಾತ್ರೆಯಲ್ಲಿ ಲಕ್ಷಾಂತರ ರಾಸುಗಳು ಆಗಮಿಸುತ್ತವೆ. ಈ ಜಾತ್ರೆಗೆ ತಮಿಳುನಾಡು, ಕೇರಳ, ಆಂಧ್ರ ಮಹಾರಾಷ್ಟç ರಾಜ್ಯಗಳಿಂದಲೂ ಲಕ್ಷಾಂತರ ಜಾನುವಾರುಗಳನ್ನು ರೈತರು ಕರೆ ತರುತ್ತಾರೆ. ಹಾಗಾಗಿ ಜಾತ್ರೆಯ ಆರಂಭಕ್ಕೆ ಕನಿಷ್ಠ ನಾಲ್ಕೆöÊದು ದಿನಗಳ ಮುಂಚೆಯೇ ಜಾತ್ರಾ ಮಾಳದಲ್ಲಿ ವಿದ್ಯುತ್ ವ್ಯವಸ್ಥೆಯನ್ನು ಚೆಸ್ಕಾಂ ಇಲಾಖೆಯ ಅಧಿಕಾರಿಗಳು ಮಾಡಬೇಕು. ಬಂಡಿಹೊಳೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ದೇವಸ್ಥಾನದ ಸುತ್ತ ಹಾಗೂ ಜಾತ್ರೆ ಕಟ್ಟುವ ಜಾತ್ರಾಮಾಳದಲ್ಲಿ ಬೆಳೆದಿರುವ ಅನುಪಯುಕ್ತ ಗಿಡಗಂಟಿಗಳನ್ನು ಕತ್ತರಿಸಿ ಸ್ವಚ್ಚಗೊಳಿಸುವ ಮೂಲಕ ಜಾನುವಾರುಗಳನ್ನು ಕಟ್ಟಲು ಅವಕಾಶವಾಗುವಂತೆ ನೋಡಿಕೊಳ್ಳಬೇಕು. ಜಾತ್ರೆ ನಡೆಯುವ ಸಂದರ್ಭದಲ್ಲಿ ರೈರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ನೀರಾವರಿ ಇಲಾಖೆಯ ಅಧಿಕಾರಿಗಳು ಜಾತ್ರೆಯು ಆರಂಭವಾಗುವುದಕ್ಕೆ ಮೊದಲು ಕಾಲುವೆಯಲ್ಲಿ ಹೇಮಾವತಿ ನೀರನ್ನು ಹರಿಸುವ ಮೂಲಕ ಜಾನುವಾರುಗಳಿಗೆ ಕುಡಿಯುವ ನೀರಿಗೆ ತೊಂದರೆಯಾಗದAತೆ ಸೂಕ್ತ ವ್ಯವಸ್ಥೆ ಮಾಡಬೇಕು ಎಂದರು.
ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ರಥೋತ್ಸವಕ್ಕೆ ಬೇಕಾಗುವ ಎಲ್ಲಾ ವ್ಯವಸ್ಥೆಗಳು ಮತ್ತು ಹೇಮಗಿರಿ ಜಾತ್ರೆಗೆ ಸಂಪರ್ಕ ಕಲ್ಪಿಸುವ ಎಲ್ಲಾ ಗ್ರಾಮಗಳ ರಸ್ತೆಯ ಗುಂಡಿಗಳನ್ನು ಮುಚ್ಚಬೇಕು ಮತ್ತು ರಸ್ತೆ ಬದಿಯಲ್ಲಿ ಬೆಳೆದಿರುವ ಗಿಡಗಂಟೆಗಳನ್ನು ತೆರವು ಮಾಡಬೇಕು. ಪೊಲೀಸ್ ಇಲಾಖೆ ಜೊತೆ ರಸ್ತೆ ಅಗಲೀಕರಣ ಮತ್ತು ತಿರುವುಗಳಲ್ಲಿ ರಸ್ತೆಗಳಿಗೆ ಸಿಗ್ನಲ್ ತೋರಿಸುವ ರೀತಿಯಲ್ಲಿ ಯಾವುದೇ ಫಲಕ ಅಳವಡಿಸಿ ಅಪಘಾತ ಸಂಭವಿಸದೇ ಇರುವ ರೀತಿ ಸೂಚನಾ ಫಲಕಗಳನ್ನು ಆಳವಡಿಸಿ ಎಂದರು.
ಪಶುವೈದ್ಯ ಇಲಾಖೆ ಅಧಿಕಾರಿಗಳು ದನಗಳ ಜಾತ್ರೆಯ ಆವರಣದಲ್ಲಿ ಅಲ್ಲಲ್ಲಿ ತಾತ್ಕಾಲಿಕ ಪಶು ಆಸ್ಪತ್ರೆಗಳನ್ನು ತೆರೆಯಬೇಕು. ಜಾನುವಾರುಗಳಿಗೆ ಚಿಕಿತ್ಸೆಗೆ ಬೇಕಾಗುವ ಎಲ್ಲಾ ಔಷಧಿ ದಾಸ್ತಾನು ಮಾಡಿಕೊಳ್ಳಬೇಕು. ಅನಾರೋಗ್ಯ ಒಳಗಾದ ಯಾವುದೇ ರಾಸುಗಳಿಗೆ ಚಿಕಿತ್ಸೆ ತೊಂದರೆಯಾಗಬಾರದು. ತಾಲ್ಲೂಕಿನ ವಿವಿಧ ಪಶು ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಪಶುವೈದ್ಯರನ್ನು ಜಾತ್ರೆಗೆ ನಿಯೋಜನೆ ಮಾಡಬೇಕು. ಜಾತ್ರೆಗೆ ಬರುವ ಜಾನುವಾರುಗಳಿಂದ ಯಾವುದೇ ರೋಗಗಳು ಹರಡದಂತೆ ಮುನ್ನೆಚ್ಚರಿಕೆ ವಹಿಸಬೇಕು.
ಆರೋಗ್ಯ ಇಲಾಖೆಯ ಅಧಿಕಾರಿಗಳು ಜಾತ್ರಾ ಮಾಳದಲ್ಲಿ ತುರ್ತು ಚಿಕಿತ್ಸೆ ನೀಡಲು ತಾತ್ಕಾಲಿಕ ಆಸ್ಪತ್ರೆಯನ್ನು ತೆರೆಯಬೇಕು. ಜಾತ್ರೆ ಆರಂಭದಿAದ ಮುಕ್ತಾಯದ ವರೆಗೆ ಒಂದು 108ವಾಹನವನ್ನು ಜಾತ್ರೆಯ ಬಳಿ ನಿಲ್ಲಿಸುವ ವ್ಯವಸ್ಥೆ ಮಾಡಬೇಕು.
ಅಬಕಾರಿ ಇಲಾಖೆ ಅಧಿಕಾರಿಗಳು ರಥೋತ್ಸವದ ದಿನ ಹೇಮಗಿರಿ, ಬಂಡಿಹೊಳೆ ಸುತ್ತಮುತ್ತ ಇರುವ ಎಲ್ಲಾ ಮಧ್ಯದ ಅಂಗಡಿಗಳನ್ನು ಬಂದ್ ಮಾಡಿಸಬೇಕು. ಜೊತೆಗೆ ಅಕ್ಕಪಕ್ಕ ಪೆಟ್ಟಿಗೆ ಅಂಗಡಿಗಳಲ್ಲೂ ಮಧ್ಯ ಮಾರಾಟ ಮಾಡುವವರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಏಕೆಂದರೆ ಜಾತ್ರೆಗೆ ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದು ಅವರ ಸುರಕ್ಷತೆಯ ಹಿತದೃಷ್ಟಿ ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಹಾಗಾಗಿ ಪೊಲೀಸರ ಸಹಕಾರ ಪಡೆದು ಸೂಕ್ತ ವ್ಯವಸ್ಥೆ ಕಲ್ಪಿಸಿಕೊಳ್ಳಿ ಎಂದರು.
ಸಾರಿಗೆ ಇಲಾಖೆಯವರು ದನಗಳ ಜಾತ್ರೆ ನೋಡಲು ನಿತ್ಯ ಸಾವಿರಾರು ಮಂದಿ ಆಗಮಿಸುವ ಕಾರಣ, ರಥೋತ್ಸವ ಮತ್ತು ಜಾನುವಾರು ಜಾತ್ರೆ ವೇಳೆ ಅಗತ್ಯ ಬಸ್ಸುಗಳ ವ್ಯವಸ್ಥೆ ಮಾಡಬೇಕು. ಕಳೆದ ಬಾರಿ ನಡೆದಂತೆ ಜಾತ್ರಾ ಮಹೋತ್ಸವ ಈ ಬಾರಿಯೂ ಸುರಕ್ಷಿತವಾಗಿ ನಡೆಯಬೇಕು ಹಾಗಾಗಿ ನಿಮ್ಮೆಲ್ಲರ ಸಲಹೆ ಸೂಚನೆ ಪಡೆಯಲು ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಲಾಗುತ್ತಿದೆ. ಆದರೂ ಅಬಕಾರಿ ಅಧಿಕಾರಿ ದೀಪಕ್ ಸೇರಿದಂತೆ ಹಲವು ಅಧಿಕಾರಿಗಳು ಗೈರು ಹಾಜರಾಗಿರುವ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ ಶಾಸಕರಾದ ಹೆಚ್.ಟಿ.ಮಂಜು ಅವರು ಯಾವುದೇ ಸಮಸ್ಯೆಗಳಿದ್ದರೂ ತಹಸೀಲ್ದಾರ್ ಅಥವಾ ನನ್ನ ಗಮನಕ್ಕೆ ತರಬೇಕು. ಪ್ರಸಿದ್ದ ಹೇಮಗಿರಿ ಜಾನುವಾರುಗಳ ಜಾತ್ರೆ ಹಾಗೂ ರಥೋತ್ಸವ ಗತ ವೈಭವದಿಂದ ನಡೆಯಬೇಕು. ಯಾವುದೇ ಕೊರತೆ ಉಂಟಾಗಬಾರದು. ಹೇಮಾವತಿ ನದಿ ತೀರದಲ್ಲಿ ಯಾರೂ ಕೂಡ ನದಿಗೆ ಈಜಲು ಬಿಡದಂತೆ ಅಗ್ನಿಶಾಮಕ ದಳ ಸಿಬ್ಬಂದಿಗಳು ಈಜು ತಜ್ಞರು ಹಾಗೂ ಬೆಂಕಿ ಆರಿಸುವ ವಾಹನದೊಂದಿಗೆ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಜಾತ್ರಾ ನಡೆಯುವ ಹೇಮಾವತಿ ನದಿಯ ತೀರದಲ್ಲಿ ಕೈಗೊಳ್ಳಬೇಕು.
ಜಾತ್ರೆಗೆ ಬರುವ ರೈತರಿಗೆ ಹಾಗೂ ಭಕ್ತಾಧಿಗಳಿಗೆ ವಿವಿಧ ಇಲಾಖೆಗಳ ಸಹಕಾರ ಪಡೆದು ತಾತ್ಕಾಲಿಕ ಶೌಚಾಲಯ ಮತ್ತು ಬಟ್ಟೆ ಬದಲಾಯಿಸುವ ರೂಮ್‌ಗಳನ್ನು ನಿರ್ಮಿಸಿ ಅನುಕೂಲ ಮಾಡಿಕೊಡಬೇಕು ಎಂದು ಮುಜರಾಯಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕನ್ನಡ ಸಂಸ್ಕೃತಿ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿ ಜಾತ್ರೆಗೆ ಬರುವ ರೈತರಿಗೆ ರಾತ್ರಿಯ ವೇಳೆ ಮನರಂಜನಾ ಕಾರ್ಯಕ್ರಮ ರೂಪಿಸುವಂತೆ ಪತ್ರ ಬರೆಯುವಂತೆ ತಹಸೀಲ್ದಾರ್ ಅವರಿಗೆ ಸಲಹೆ ನೀಡಿದರು. ಹೇಮಾವತಿ ಸಹಕಾರ ಸಕ್ಕರೆ ಕಾರ್ಖಾನೆ ಸೇರಿದಂತೆ ಎಲ್ಲಾ ಇಲಾಖೆಗಳ ಸಹಕಾರ ಪಡೆದು ಜಾತ್ರೆಗೆ ಸಕಲ ಸಿದ್ಧತೆ ಮಾಡಿಕೊಳ್ಳಬೇಕು. ದೇವಸ್ಥಾನದ ಒಳಗೆ ಮತ್ತು ಹೊರಗೆ ಆಗಬೇಕಾದ ಸುಣ್ಣ-ಬಣ್ಣ, ಸ್ವಚ್ಚತೆ, ದೇವಾಲಯದ ಬಳಿ ಇರುವ ಸಮುದಾಯ ಭವನದ ಸ್ವಚ್ಚತೆ ಸೇರಿದಂತೆ ಜಾತ್ರೆಯ ಯಶಸ್ಸಿಗೆ ಬೇಕಾದ ಎಲ್ಲಾ ಅಗತ್ಯ ಕೆಲಸ ಕಾರ್ಯಗಳನ್ನು ಕೂಡಲೇ ಪ್ರಾರಂಭಿಸಬೇಕು. ಭಕ್ತಾದಿಗಳಿಗೆ ರಥೋತ್ಸವದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಪ್ರಸಾದ ವಿನಿಯೋಗ ನಡೆಯಲಿದೆ. ಇನ್ನು ತುರ್ತಾಗಿ ಆಗಬೇಕಾದ ಕೆಲಸ ಕಾರ್ಯಗಳ ಬಗ್ಗೆ ಅಧಿಕಾರಿಗಳು ನೇರವಾಗಿ ಸಂಪರ್ಕಿಸಿ ಆದರೊಂದಿಗೆ ಚರ್ಚಿಸಿ ಎಲ್ಲ ರೀತಿಯ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಶಾಸಕ ಹೆಚ್.ಟಿ.ಮಂಜು ತಾಲ್ಲೂಕು ಆಡಳಿತದ ಮುಖ್ಯಸ್ಥರಾದ ತಹಸೀಲ್ದಾರ್ ಡಾ.ಎಸ್.ಯು.ಅಶೋಕ್ ಅವರಿಗೆ ಸೂಚನೆ ನೀಡಿದರು.
ತಾಲೂಕಿನ ಎಲ್ಲಾ ಜನರು ಯಾವುದೇ ಜಾತಿ-ಭೇದ ಇಲ್ಲದೇ ಮತ್ತು ಪಕ್ಷಬೇದಗಳನ್ನು ಮಾಡದೆ ಎಲ್ಲರೂ ಸೇರಿ ಹೇಮಗಿರಿಯ ದನಗಳ ಜಾತ್ರೆ ಮತ್ತು ಶ್ರೀ ಗವಿರಂಗನಾಥಸ್ವಾಮಿ ಜಾತ್ರಾ ಮಹೋತ್ಸವವನ್ನು ಯಶಸ್ವಿಯಾಗಿ ನಡೆಸಲು ಎಲ್ಲರೂ ಕೈಜೋಡಿಸಬೇಕು ಎಂದು ಶಾಸಕರು ಮನವಿ ಮಾಡಿದರು.
ಗೋವುಗಳ ರಕ್ಷಾ ದೇವರಾದ ಬಿಲ್ಲೇನಹಳ್ಳಿಯ ಶ್ರೀ ಗವಿರಂಗನಾಥಸ್ವಾಮಿ ರಥೋತ್ಸವವು ಜ.16ರಂದು ನಡೆಯಲಿದೆ. ಜ.14ರಿಂದ 19ವರೆಗೆ ದನಗಳ ಜಾತ್ರೆಯು ನಡೆಯಲಿದೆ. ಹಾಗಾಗಿ ಗವಿರಂಗನಾಥ ಶ್ರೀ ಕ್ಷೇತ್ರದಲ್ಲಿ ರಂಗನಾಥಪುರ ಕ್ರಾಸ್ ಗ್ರಾಮ ಪಂಚಾಯಿತಿ, ಮುಜರಾಯಿ ಇಲಾಖೆ ಹಾಗೂ ಆ ಭಾಗದ ಗ್ರಾಮ ಲೆಕ್ಕಾಧಿಗಳು ದೇವಾಲಯದ ಆವರಣದಲ್ಲಿರುವ ಉದ್ಯಾನವನದ ಸ್ವಚ್ಚತೆ ಮಾಡಿಸಲು ಗವಿರಂಗನಾಥಸ್ವಾಮಿ ದೇವಾಲಯಕ್ಕೆ ಬರುವ ರಾಸುಗಳಿಗೆ ಹಾಗೂ ಭಕ್ತಾಧಿಗಳಿಗೂ ಸೂಕ್ತ ನೀರು ಮತ್ತು ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡಲು ವಿವಿಧ ಇಲಾಖೆಯ ಅಧಿಕಾರಿಗಳು ಸೂಕ್ತ ಕ್ರಮ ವಹಿಸುವಂತೆ ಶಾಸಕರು ಸಲಹೆ ನೀಡಿದರು.
ಪೂರ್ವಭಾವಿ ಸಭೆಯಲ್ಲಿ ತಹಸೀಲ್ದಾರ್ ಡಾ.ಎಸ್.ಯು.ಅಶೋಕ್, ತಾಲ್ಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಕೆ.ಸುಷ್ಮಾ, ತಾಲ್ಲೂಕು ಟಿಎಪಿಸಿಎಂಎಸ್ ಅಧ್ಯಕ್ಷ ಬಲದೇವ್, ಉಪಾಧ್ಯಕ್ಷೆ ಲತಾಮಣಿ ಮಂಜೇಗೌಡ, ತಾಲ್ಲೂಕು ಪಶುವೈದ್ಯ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಹೆಚ್.ಎಸ್.ದೇವರಾಜು, ತಾಲ್ಲೂಕು ಅರಣ್ಯ ಇಲಾಖೆಯ ಆರ್.ಎಫ್.ಓ ಡಾ.ಅನಿತಾ, ಆರಕ್ಷಕ ನಿರೀಕ್ಷಕರಾದ ಸುಮಾರಾಣಿ, ಆನಂದೇಗೌಡ, ತಾಲ್ಲೂಕು ಆರೋಗ್ಯ ಇಲಾಖೆಯ ಅಧಿಕಾರಿ ಸತೀಶ್, ಹೇಮಗಿರಿ ಸಕ್ಕರೆ ಕಾರ್ಖಾನೆಯ ಕಬ್ಬು ಅಭಿವೃದ್ಧಿ ಅಧಿಕಾರಿ ದತ್ತಾತ್ರೇಯ, ದಿಶಾ ಸಮಿತಿ ಸದಸ್ಯ ನರಸನಾಯಕ್, ನೀರಾವರಿ ಇಲಾಖೆಯ ಎಇಇ ಆನಂದ್, ಕಸಬಾ ರಾಜಸ್ವ ನಿರೀಕ್ಷಕ ಜ್ಞಾನೇಶ್, ಗ್ರಾಮ ಲೆಕ್ಕಾಧಿಕಾರಿ ಜಗದೀಶ್, ಮುಜರಾಯಿ ಇಲಾಖೆಯ ವಿಷಯ ನಿರ್ವಾಹಕಿ ಪೂರ್ಣಿಮಾ, ಸೇರಿದಂತೆ ತಾಲ್ಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ಬಂಡಿಹೊಳೆ, ಕುಪ್ಪಹಳ್ಳಿ, ಬಿಬಿ.ಕಾವಲು, ಬಿಲ್ಲೇನಹಳ್ಳಿ, ರಂಗನಾಥಪುರ ಕ್ರಾಸ್, ಹೆತ್ತಗೋನಹಳ್ಳಿ ಸೇರಿದಂತೆ ಗ್ರಾಮಗಳ ಹಲವು ಮುಖಂಡರು ಉಪಸ್ಥಿತರಿದ್ದರು.
ಚಿತ್ರಶೀರ್ಷಿಕೆ:07.ಕೆ.ಆರ್.ಪಿ-02: ಕೆ.ಆರ್.ಪೇಟೆ: ಕೆ.ಆರ್.ಪೇಟೆ ಪಟ್ಟಣದ ಮಿನಿ ವಿಧಾನಸೌಧದ ಸಭಾಂಗಣದಲ್ಲಿ ನಡೆದ ಹೇಮಗಿರಿ ದನಗಳ ಜಾತ್ರೆ ಹಾಗೂ ಬಿಲ್ಲೇನಹಳ್ಳಿ ಶ್ರೀ ಗವಿರಂಗನಾಥಸ್ವಾಮಿ ದನಗಳ ಜಾತ್ರೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಶಾಸಕ ಹೆಚ್.ಟಿ.ಮಂಜು ಅವರು ಅಧಿಕಾರಿಗಳಿಗೆ ಜಾತ್ರೆಯ ಯಶಸ್ಸಿಗೆ ಕೈಗೊಳ್ಳಬೇಕಾದ ಪೂರ್ವಭಾವಿ ಸಿದ್ದತೆ ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಜವಾಬ್ದಾರಿಗಳನ್ನು ವಹಿಸಿ ಮಾತನಾಡಿದರು.





