ಪಂಚ ಗ್ಯಾರಂಟಿಗಳನ್ನ ತಲುಪಿಸುವಲ್ಲಿ ಅಧಿಕಾರಿಗಳ ಕಾರ್ಯಕ್ಷಮತೆ ಹೆಚ್ಚಿದೆ
ಜಡಿಗೆನಹಳ್ಳಿಯಲ್ಲಿ ಕುಂದು ಕೊರತೆ ಸಭೆ : ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಬಚ್ಚೇಗೌಡ ಹೇಳಿಕೆ
ಹೊಸಕೋಟೆ:ಕಾಂಗ್ರೆಸ್ ಸರ್ಕಾರ ಜಾರಿ ಮಾಡಿರುವ ಐದು ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಫಲಾನುಭವಿಗಳಿಗೆ ತಲುಪಿಸುವಲ್ಲಿ ಅಧಿಕಾರಿಗಳ ಕಾರ್ಯಕ್ಷಮತೆ ಹೆಚ್ಚಾಗಿದೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಚಿಕ್ಕ ಹುಲ್ಲೂರು ಬಚ್ಚೇಗೌಡ ತಿಳಿಸಿದರು.
ತಾಲೂಕಿನ ಜಡಿಗೇನಹಳ್ಳಿ ಗ್ರಾಮ ಪಂಚಾಯತ್ ಆವರಣದಲ್ಲಿ ನಡೆದ ಗ್ಯಾರಂಟಿ ಯೋಜನೆಗಳ ಕುಂದು ಕೊರತೆ ಸಭೆಯಲ್ಲಿ ಮಾತನಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಚುನಾವಣಾ ಪ್ರಣಾಳಿಕೆಯಲ್ಲಿ ತಿಳಿಸಿದಂತೆ ಪಂಚ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿತು. ಆ ಯೋಜನೆಗಳು ಸಮರ್ಪಕವಾಗಿ ಅರ್ಹ ಫಲಾನುಭವಿಗಳಿಗೆ ತಲುಪಿಸುವ ದೃಷ್ಟಿಯಿಂದ ಸಮಿತಿ ರಚನೆ ಮಾಡಿ ಫಲಾನುಭವಿಗಳೊಂದಿಗೆ ಸಭೆ ನಡೆಸಿ ಕುಂದುಕೊರತೆಯನ್ನು ಆಲಿಸಲಾಗುತ್ತಿದೆ. ಕಾಂಗ್ರೆಸ್ ಸರ್ಕಾರ ಯಾವುದೇ ರೀತಿಯ ಮಧ್ಯವರ್ತಿಗಳಿಲ್ಲದೆ ನೇರವಾಗಿ ಫಲಾನುಭವಿಗಳಿಗೆ ಗ್ಯಾರಂಟಿ ಯೋಜನೆಗಳನ್ನು ನೀಡುತ್ತಿದೆ. ಕೆಲವು ಯೋಜನೆಗಳಿಗೆ ಸಾಕಷ್ಟು ತಾಂತ್ರಿಕ ಅಡಚಣೆ ಇರುವ ಪರಿಣಾಮವಾಗಿ ಸಂಬಂದಪಟ್ಟ ಗ್ರಾಮ ಪಂಚಾಯಿತಿಗೆ ಲಿಖಿತವಾಗಿ ದೂರನ್ನು ನೀಡಿದರೆ ಸಮಿತಿ ಅಧಿಕಾರಿಗಳ ಮೂಲಕ ಬಗೆಹರಿಸುತ್ತೆ ಎಂದರು.
ಇನ್ನು ಸಭೆಯಲ್ಲಿ ಸಾಕಷ್ಟು ಮಹಿಳೆಯರು ಮಾಲೂರು ಘಟಕದಿಂದ ಬೆಂಗಳೂರಿಗೆ ಸಂಚಾರ ಮಾಡುವ ಕೆಎಸ್‌ಆರ್‌ಟಿಸಿ ಬಸ್ಸುಗಳು ಜಡಿಗೇನಹಳ್ಳಿ ಗ್ರಾಮದಲ್ಲಿ ಸಾಕಷ್ಟು ಬಾರಿ ನಿಲ್ಲಿಸಲ್ಲ. ಇನ್ನೂ ಬಸ್ಗಳಲ್ಲಿ ಟಿಕೆಟ್ ಕೊಡಲು ನಿರ್ವಾಹಕರು ಮಹಿಳೆಯರ ಮೇಲೆ ಕೋಪಗೊಂಡು ಮಾತನಾಡುತ್ತಾರೆ. ಅದರಿಂದ ಈ ರೀತಿಯ ವರ್ತನೆ ನಿಲ್ಲಬೇಕು. ಈ ವಿಚಾರವಾಗಿ ಘಟಕದ ವ್ಯವಸ್ಥಾಪಕರ ಗಮನಕ್ಕೆ ಗ್ಯಾರೆಂಟಿ ಯೋಜನಾ ಅನುಷ್ಠಾನ ಸಮಿತಿ ತರಬೇಕು ಎಂದರು.
ಗ್ಯಾರೆಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾ ಸದಸ್ಯ ಹೇಮಣ್ಣ, ತಾಲೂಕು ಸಮಿತಿ ಸದಸ್ಯರಾದ ಅಮ್ಜದ್ ಬೇಗ್, ಬೋಧನಾ ಹೊಸಹಳ್ಳಿ ಮಂಜುನಾಥ್, ತಾಪಂ ಕಾರ್ಯನಿರ್ವಹಣಾಧಿಕಾರಿ ಮುನಿಯಪ್ಪ, ಗ್ರಾಮ ಪಂಚಾಯತ್ ಅಧ್ಯಕ್ಷ ಕೆವಿ.ವೆಂಕಟೇಗೌಡ, ಉಪಾಧ್ಯಕ್ಷೆ ರಾಧಿಕಾ, ಪಿಡಿಓ ಲೋಕೇಶ್ ಹಾಜರಿದ್ದರು.





