“ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದ ಸಾಮಾಜಿಕ ಚಟುವಟಿಕೆಗಳ ಸಮಿತಿ ವತಿಯಿಂದ ಸಮ್ಯಕ್ ಸಮೃದ್ಧಿ ಗ್ರಾಮೀಣ ಶಿಬಿರ”
” ಜಗತ್ತನ್ನು ಉಳಿಸುವ ಬಹುದೊಡ್ಡ ಆಯುಧ ಸ್ನೇಹ, ಪ್ರೀತಿ, ವಿಶ್ವಾಸ ”
ಕರ್ನಾಟಕ ಜನಪದ ಅಕಾಡೆಮಿ ಅಧ್ಯಕ್ಷ ಡಾ.ಗೊಲ್ಲಹಳ್ಳಿ ಶಿವಪ್ರಸಾದ್ ಅಭಿಮತ
ತಾವರೆಕೆರೆ: ಹೊಸಕೋಟೆ ತಾಲೂಕಿನ ನಂದಗುಡಿ ಹೋಬಳಿಯ ಈಸ್ತೂರು ಗ್ರಾಮದಲ್ಲಿ ಬೆಂಗಳೂರಿನ ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದ ಸಾಮಾಜಿಕ ಚಟುವಟಿಕೆಗಳ ಸಮಿತಿ ವತಿಯಿಂದ ಆಯೋಜಿಸಲಾಗಿರುವ ‘ಸಮ್ಯಕ್ ಸಮೃದ್ಧಿ’ ಎಂಬ ಐದು ದಿನಗಳ ಗ್ರಾಮೀಣ ಶಿಬಿರವನ್ನು ಶಾಲಾ ಆವರಣದಲ್ಲಿ ಸಸಿ ನೆಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಜಗತ್ತು ಇಂದು ದ್ವೇಷ, ಅಸೂಯೆ, ಕ್ರೋಧ, ಮದಗಳನ್ನು ಮೈತುಂಬಿಕೊಂಡು ಬಂದೂಕು ಹಾಗೂ ಬಾಂಬುಗಳಿಂದ ಹೋರಾಟ ಮಾಡುತ್ತ ಅಳಿವಿನಂಚಿಗೆ ಹೋಗುತ್ತಿರುವಾಗ ಅದನ್ನು ಉಳಿಸುವ ಬಹುದೊಡ್ಡ ಆಯುಧವೆಂದರೆ ಸ್ನೇಹ, ಪ್ರೀತಿ, ವಿಶ್ವಾಸ ಎಂದು ಕರ್ನಾಟಕ ಜನಪದ ಅಕಾಡೆಮಿ ಅಧ್ಯಕ್ಷ ಡಾ.ಗೊಲ್ಲಹಳ್ಳಿ ಶಿವಪ್ರಸಾದ್ ಅವರು ಅಭಿಪ್ರಾಯಪಟ್ಟರು.
ನಮ್ಮ ಗ್ರಾಮಗಳಲ್ಲಿ ಬಹುಕಾಲದಿಂದಲೂ ಜೀವನಪರ ಹಾಗೂ ಜೀವಪರವಾದ ಒಂದು ವ್ಯವಸ್ಥೆ ಇತ್ತು. ಅದೇನೆಂದರೆ ಮನೆ ಮುಂದೆ ಮಾರ್ಕೇಟ್, ಮನೆ ಹಿಂದೆ ಮೆಡಿಕಲ್ ಕಿಟ್, ಮಧ್ಯದಲ್ಲಿ ಮನೆ ಇತ್ತು. ಯಾವುದೇ ಧನದಾಹೀ ವ್ಯಾಪಾರದ ಸೋಂಕುಗಳಿಲ್ಲದೆ ನಮಗೆ ಬೇಕಾದ ಸೊಪ್ಪುತರಕಾರಿಗಳನ್ನು ನಾವೇ ಬೆಳೆದುಕೊಳ್ಳುತ್ತಿದ್ದೆವು. ನಮ್ಮ ಆರೋಗ್ಯಕ್ಕೆ ಅನುಕೂಲಕರವಾದ ಬಳ್ಳಿಗಳು ಹಾಗೂ ಕಾಯಿಗಳನ್ನು ಬೆಳೆದಿಟ್ಟುಕೊಂಡು ಆತಂಕವಿಲ್ಲದೆ ಬದುಕುತ್ತಿದ್ದೆವು. ಆದರೆ ಇಂದು ನಾವು ತಿನ್ನುವ ಆಹಾರ ವಿಷಮಯವಾಗಿದ್ದು, ಕಾಸುಕೊಟ್ಟು ವಿಷವನ್ನು ತಿನ್ನುವಂತಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಇಡೀ ಜಗತ್ತನ್ನು ಕಟ್ಟಿದ್ದು ಹಳ್ಳಿ. ಜೀವಸಂಬಂಧ, ಕಲಾಸಂಬಂಧ, ಸೇವಾಸಂಬಂಧಗಳನ್ನು ಗಟ್ಟಿಯಾಗಿಸುವ ಹಳ್ಳಿಗಳು ಉಳಿದರೆ ಮಾತ್ರ ಜಗತ್ತು ಉಳಿಯುತ್ತದೆ. ಹಳ್ಳಿಗಳು ನಾಶವಾದರೆ ನಾವೂ ಜಗತ್ತೂ ನಾಶವಾಗುತ್ತದೆ. ಜಗತ್ತಿನ ಭವಿಷ್ಯವನ್ನು ಬೆಳಗಬೇಕಾದರೆ ಮೊದಲು ನಾವು ಹಳ್ಳಿಗಳನ್ನು ಉಳಿಸಿಕೊಳ್ಳಬೇಕಾಗಿದೆ. ಅದಕ್ಕಾಗಿ ನಾವೆಲ್ಲರೂ ನಮ್ಮೊಳಗಿನ ಕಸ ಮತ್ತು ವಿಷವನ್ನು ತೊಳೆದುಕೊಂಡು ಜೀವಸಂಬಂಧಗಳ ಪ್ರೀತಿಯ ರಸಬಳ್ಳಿಯನ್ನು ಹಳ್ಳಿಯಿಂದ ದಿಲ್ಲಿಯ ವರೆಗೆ ಹಬ್ಬಿಸಬೇಕಾಗಿದೆ. ಸರ್ವಜೀವಪರವಾದ ಸ್ವಯಂಸೇತುವೆಗಳನ್ನು ಕಟ್ಟಿಕೊಂಡು ಪ್ರೀತಿಬಳ್ಳಿಯನ್ನು ವಿಶ್ವದಾದ್ಯಂತ ಹಬ್ಬಿಸಿ ಯುದ್ಧರಹಿತ ಜಗತ್ತನ್ನು ನಿರ್ಮಿಸಬೇಕಾಗಿದೆ ಎಂದರು.
ಅಮ್ಮನು ಹಾಡುವ ಜೋಗುಳಕ್ಕೆ ಮಿಗಿಲಾದ ಸಂಗೀತ ಜಗತ್ತಿನಲ್ಲಿಲ್ಲ. ಮನುಷ್ಯ ಆಲಿಸುವ ಮೊದಲ ತಾಯಿಯ ಲಾಲಿಹಾಡಿನ ಮುಂದೆ ಆಧುನಿಕ ಸಂಗೀತಗಳು ಶೂನ್ಯ ಎನಿಸುತ್ತವೆ. ಆದರೆ ನಾವಿಂದು ಹಳ್ಳಿಯನ್ನೂ, ಅಮ್ಮನನ್ನೂ ಮರೆತು ಮೊಬೈಲು ಹಾಗೂ ರಿಯಾಲಿಟಿ ಶೋಗಳ ಭ್ರಮಗಳಿಗೆ ಸಿಕ್ಕಿಹಾಕಿಕೊಂಡು ನಮ್ಮ ತಾಯ್ನೆಲವನ್ನು ನಾವೇ ಅವಮಾನಿಸುತ್ತಿದ್ದೇವೆ ಹಾಗೂ ಅನುಮಾನಿಸುತ್ತಿದ್ದೇವೆ. ಸೂಕ್ಷ್ಮ ಸಂವೇದನೆಯ ಇಲ್ಲದ ಯಾಂತ್ರಿಕ ಜೀವನಯಾನದಿಂದ ಅನಗತ್ಯವಾದುದನ್ನು ನಾವು ಸ್ವೀಕರಿಸುತ್ತಾ ನಮ್ಮ ನಾಶಕ್ಕೆ ನಾವೇ ಸಿದ್ಧರಾಗುತ್ತಿದ್ದೇವೆ. ಜೀವಪ್ರೀತಿಯ ಹಳ್ಳಿಗಳತ್ತ ಹೊಸತಲೆಮಾರಿನ ಜನತೆ ನಡೆದು ಹೊಸಕನಸು ಕಟ್ಟಿಕೊಂಡು ಹೊಸಹೊಸ ಕ್ರಿಯೆಗಳ ಮೂಲಕ ಹಸನಾದ ಬದುಕನ್ನು ಕಟ್ಟಿಕೊಳ್ಳುವಂತಾಗಲಿ ಎಂದು ಆಶಿಸಿದರು.
ಕಾರ್ಯಕ್ರಮವು ಈಸ್ತೂರು ಗ್ರಾಮದ ಸದಸ್ಯರಾದ ಸಿ.ಮುರಳಿಮೋಹನ್ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಈಸ್ತೂರಿನ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ರಮಾ ಮಂಜುಳ, ಇಟ್ಟಸಂದ್ರ ಗ್ರಾಮಪಂಚಾಯಿತಿಯ ಅಧ್ಯಕ್ಷರಾದ ಸರೋಜಮ್ಮ ಜಯರಾಂ, ಉಪಾಧ್ಯಕ್ಷರಾದ ನಾರಾಯಣಮ್ಮ ಚಚೆನ್ನಕೇಶವಯ್ಯ, ಎಂಪಿಸಿಎಸ್ ಅಧ್ಯಕ್ಷರಾದ ಕೇಶವಮೂರ್ತಿ ಅವರು ಮುಖ್ಯ ಅತಿಥಿಯಾಗಿದ್ದರು. ವಿವಿಯ ಸಾಮಾಜಿಕ ಚಟುಚಟಿಕೆಗಳ ಸಮಿತಿಯ ಸಂಯೋಜಕ ಡಾ.ವಿನೋದ್ ಬಾಬುರಾವ್ ಮೇಘಶ್ಯಾಮ್ ಅವರು ಪ್ರಾಸ್ತವಿಕವಾಗಿ ಮಾತನಾಡಿದರು. ಸಿಎಸ್‌ಎ ಸಮಿತಿಯ ಸಂಯೋಜಕರಾದ ಡಾ.ಎಂ.ಭೈರಪ್ಪ ಅವರು ಸ್ವಾಗತಿಸಿದರು ಹಾಗೂ ಡಾ.ಆಶ್ವಿತಾ ಶೆಟ್ಟಿ ಅವರು ವಂದಿಸಿದರು. ಸಿಎಸ್‌ಎ ಸಮಿತಿಯ ಸದಸ್ಯರಾದ ಡಾ.ಪ್ರಿಯಾಂಕ್ ಘೋಷ್, ಡಾ.ಲೀಲಾವತಿ ಆರ್., ಹರೀಶ್‌ಕುಮಾರ್ ಎಂ., ಶಿಲ್ಪ ಆರ್ ಅವರು ಉಪಸ್ಥಿತರಿದ್ದರು. ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದ ಎಪ್ಪತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಬಿರಾರ್ಥಿಗಳಾಗಿ ಭಾಗವಹಿಸಿದ್ದರು.





