ತಾಲೂಕಿನ ಅಭಿವೃದ್ಧಿಗೆ ಬಿಜೆಪಿ ಕೊಡುಗೆ ಏನು? | ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾಜಿ ಶಾಸಕರ ಪ್ರಶ್ನೆ…!
ದೊಡ್ಡಬಳ್ಳಾಪುರ: ನಾಳೆಯಿಂದ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಪ್ರಣಾಳಿಕೆಯ ಐದು ಗ್ಯಾರಂಟಿಗಳ ಕಾರ್ಡ್ ಮನೆ ಮನೆಗೆ ವಿತರಣೆ ಮಾಡಿ ಪ್ರಚಾರ ಮಾಡಲಾಗುವುದು ಎಂದು ಮಾಜಿ ಶಾಸಕ ಟಿ.ವೆಂಕಟರಮಣಯ್ಯ ಹೇಳಿದರು.
ನಗರದ ದರ್ಗಾ ಜೋಗಹಳ್ಳಿಯಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ತಾಲೂಕಿಗೆ ಬಿಜೆಪಿ ಸರ್ಕಾರ ಹಾಗೂ ಪಕ್ಷದ ಕೊಡುಗೆ ಏನು ಎಂಬುದನ್ನು ಅರ್ಥ ಮಾಡಿಕೊಂಡು ಮತದಾರರು ತಮ್ಮ ಹಕ್ಕು ಚಲಾಯಿಸಬೇಕು ಎಂದ ಅವರು, ದೊಡ್ಡಬಳ್ಳಾಪುರದಲ್ಲಿ ಕಳೆದ 10 ವರ್ಷಗಳ ಅವಧಿಯಲ್ಲಿ ಕುಡಿಯುವ ನೀರು, ರಸ್ತೆ, ಸಮುದಾಯ ಭವನ, ಆಸ್ಪತ್ರೆ ಸೇರಿದಂತೆ ಮೂಲಸೌಕರ್ಯ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಆದರೂ ಮತದಾರರು ನನ್ನ ಕೈ ಹಿಡಿಯಲಿಲ್ಲ. ಹೊಸ ಶಾಸಕರು ತಾಲೂಕಿನ ಅಭಿವೃದ್ಧಿಯನ್ನೇ ಮರೆತು, ಕೇವಲ ರಾಜಕೀಯ ಮಾಡಿಕೊಂಡಿದ್ದಾರೆ ಎಂದು ಟೀಕಿಸಿದರು.
2013ರಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ 165 ಭರವಸೆಗಳಲ್ಲಿ154 ಭರವಸೆಗಳನ್ನು ಈಡೇರಿಸಿತ್ತು. ಕಳೆದ ಐದು ವರ್ಷದಲ್ಲಿ ಅಭಿವೃದ್ಧಿಗೆ ಬಿಜೆಪಿ ಸರ್ಕಾರದ ಕೊಡುಗೆ ಏನಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಈಗ ಕಾಂಗ್ರೆಸ್ ನೇತೃತ್ವದ ಸರ್ಕಾರ ನೀಡಿರುವ ಪಂಚ ಗ್ಯಾರಂಟಿಗಳು ಜನರ ಬದುಕನ್ನು ಬದಲಿಸಿವೆ. ನೇಕಾರ ಸಮುದಾಯಗಳಿಗೆ ಪ್ರತ್ಯೇಕವಾಗಿ ಆರನೇ ಗ್ಯಾರಂಟಿ ನೀಡಿದ್ದು, 20 ಎಚ್ ಪಿ ವರೆಗೆ ಉಚಿತ ವಿದ್ಯುತ್ ಒದಗಿಸಲಾಗುತ್ತಿದೆ. ಇದು ನಮ್ಮ ಕಾಂಗ್ರೆಸ್ ಸರ್ಕಾರದ ಸಾಧನೆ ಎಂದರು.
2018 ರಲ್ಲಿ ಪಕ್ಷಾಂತರ ಮಾಡಿ ದ್ರೋಹ ಎಸಗಿದ ಡಾ.ಕೆ. ಸುಧಾಕರ್ ಅವರು ಮತಯಾಚಿಸುವ ನೈತಿಕತೆ ಕಳೆದುಕೊಂಡಿದ್ದಾರೆ. ಬಿಜೆಪಿ ಹಾಗೂ ಜೆಡಿಎಸ್ ಸರ್ಕಾರದ ಅವಧಿಯಲ್ಲಿ ತಾಲೂಕಿನ ಅಭಿವೃದ್ಧಿ ಶೂನ್ಯ. ಆದರೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಬಂದ ಬಳಿಕ 250 ರೂ. ಕೋಟಿಗೂ ಹೆಚ್ಚು ಅನುದಾನ ತಂದು ಅಭಿವೃದ್ಧಿಯ ಕೆಲಸಗಳನ್ನು ಮಾಡಲಾಗಿದೆ ಎಂದು ಹೇಳಿದರು.
ಬಿಜೆಪಿ ಪಕ್ಷದವರು ಮಾತೆತ್ತಿದರೆ ಹಿಂದುತ್ವ ಎಂದೇಳಿ ಜಾತಿ- ಧರ್ಮಗಳ ನಡುವೆ ವಿಷಬೀಜ ಬಿತ್ತುತ್ತಿದ್ದಾರೆ. ಅಂಬೇಡ್ಕರ್ ಅವರು ಬರೆದ ಸಂವಿಧಾನವನ್ನೇ ಬದಲಾಯಿಸಲು ಹೊರಟವರನ್ನು ನಾವು ಗೆಲ್ಲಿಸಬೇಕಾ.. ಎಂದು ಸಾರ್ವಜನಿಕರನ್ನು ಪ್ರಶ್ನಿಸಿದರು.
ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಆಡಳಿತಕ್ಕೆ ಬಂದರೆ ಪ್ರತಿ ಕುಟುಂಬದ ಮಹಿಳೆಗೂ ವಾರ್ಷಿಕ ಒಂದು ಲಕ್ಷ ಸಹಾಯಧನ ನೀಡಲಾಗುವುದು. ಉದ್ಯೋಗಸ್ಥ ಮಹಿಳೆಯರಿಗೆ ಹಾಸ್ಟೆಲ್ ಸೌಲಭ್ಯ, ಮಹಿಳೆಯರಿಗೆ ಶೇ 50 ರಷ್ಟು ಮೀಸಲಾತಿ ಸೇರಿದಂತೆ ಹಲವು ಅನುಕೂಲಗಳನ್ನು ಮಾಡಿಕೊಡಲಾಗುವುದು. ಹಾಗಾಗಿ ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ಅವರನ್ನು ಬೆಂಬಲಿಸಿ ಆಯ್ಕೆ ಮಾಡಿ ಕಳುಹಿಸಬೇಕು ಎಂದು ಮನವಿ ಮಾಡಿದರು.
ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಸಿದ್ದರಾಮಯ್ಯ ಮಾತನಾಡಿ, 2013ರ ಹಿಂದೆ ದರ್ಗಾ ಜೋಗಹಳ್ಳಿ ಇತ್ತ ನಗರವೂ ಅಲ್ಲ. ಅತ್ತ ಹಳ್ಳಿಯೂ ಅಲ್ಲ ಎಂಬಂತಿತ್ತು. ವೆಂಕಟರಮಣಸ್ವಾಮಿ ಅವರು ಶಾಸಕರಾಗಿ ಆಯ್ಕೆಯಾದ ನಂತರ 50 ಕೋಟಿಗು ಹೆಚ್ಚು ಅನುದಾನ ತಂದು ಅಭಿವೃದ್ಧಿ ಮಾಡಿದ್ದಾರೆ. ಯಾರು ಏನು ಮಾಡಿದ್ದಾರೆ ಎಂಬುದನ್ನು ನೀವೇ ಆತ್ಮಾವಲೋಕನ ಮಾಡಿಕೊಂಡು ಮತ ಚಲಾಯಿಸಬೇಕು ಎಂದು ಮನವಿ ಮಾಡಿದರು.
ಮತ ಕೇಳಿಕೊಂಡು ಬರುವ ಬಿಜೆಪಿ-ಜೆಡಿಎಸ್ ಪಕ್ಷದವರನ್ನು ಯಾವ ಅಭಿವೃದ್ಧಿ ಮಾಡಿದ್ದಿರಾ, ಎಲ್ಲಿ ಮಾಡಿದ್ದೀರಾ ಎಂದು ಪ್ರಶ್ನಿಸಿ. ನಿಜವಾಗಿ ಜನಸೇವೆ ಮಾಡುವವರಿಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಕೆಪಿಸಿಸಿ ಪ್ರಚಾರಸಮಿತಿ ಅಧ್ಯಕ್ಷ ಜಿ.ಲಕ್ಷ್ಮಿಪತಿ, ತಾ.ಪಂ.ಮಾಜಿಅಧ್ಯಕ್ಷ ಕೆ.ಎಂ.ಕೃಷ್ಣಮೂರ್ತಿ,
ಕಸಬಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಪ್ಪಿ ವೆಂಕಟೇಶ್, ಮಹಿಳಾ ಘಟಕದ ಅಧ್ಯಕ್ಷೆ ರೇವತಿ ಅನಂತರಾಮು, ದರ್ಗಾಜೋಗಹಳ್ಳಿ ಗ್ರಾ.ಪಂ.ಅಧ್ಯಕ್ಷ ದೊಡ್ಡ ನಂಜುಂಡಪ್ಪ, ಮಾಜಿ ಅಧ್ಯಕ್ಷರು ಹಾಲಿ ಸದಸ್ಯ ನಾಗಭೂಷಣ್, ಮಾಜಿ ಉಪಾಧ್ಯಕ್ಷರುಗಳಾದ ತಿಮ್ಮರಾಜು, ಗೋವಿಂದರಾಜು, ಕಾಂಗ್ರೆಸ್ ಜಿಲ್ಲಾ ಒಬಿಸಿ ಘಟಕದ ಪ್ರಧಾನ ಕಾರ್ಯದರ್ಶಿ ರಂಗಸ್ವಾಮಿ, ಯುವ ಘಟಕದ ಉಪಾಧ್ಯಕ್ಷ ಎನ್.ಮುನಿರಾಜು, ಕಸಬಾ ಹೋಬಳಿ ಎಸ್‌ಸಿ ಘಟಕದ ಅಧ್ಯಕ್ಷ ಕೆಂಪಣ್ಣ, ಕಾಂಗ್ರೆಸ್ ಮುಖಂಡ ಚಂದ್ರಣ್ಣ ಸೇರಿದಂತೆ ನೂರಾರು ಮಹಿಳೆಯರು ಭಾಗಿಯಾಗಿದ್ದರು.