ಮಹಾಪುರುಷರ ಜಯಂತಿ ಕಾರ್ಯಕ್ರಮಗಳನ್ನು ಎಲ್ಲಾ ಸಮುದಾಯದ ಜನರು ಆಚರಿಸುವಂತಾಗಬೇಕು ಜಿಲ್ಲಾಧಿಕಾರಿ ಶಿಲ್ಪಾ ನಾಗ್

ಚಾಮರಾಜನಗರ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ ಭಗೀರಥ ಮಹರ್ಷಿ ಜಯಂತಿ ಆಚರಣೆಯ ಸರಳ ಕಾರ್ಯಕ್ರಮ ಉದ್ಘಾಟಿಸಿ, ಭಗೀರಥರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಅವರು ಮಾತನಾಡಿದರು.

ಎಲ್ಲ ಸಮುದಾಯಗಳಲ್ಲೂ ಆದರ್ಶ ಪುರುಷರಿದ್ದು ಅವರ ಜಯಂತಿಗಳನ್ನು ಅದೇ ಸಮುದಾಯದವರು ಆಚರಣೆ ಮಾಡುವರು. ಭಗೀರಥ ಮಹರ್ಷಿ ಕಠಿಣ ತಪಸ್ಸು ಆಚರಿಸಿ ಗಂಗೆಯನ್ನು ಧರೆಗೆ ಇಳಿಸಿದ ವಿಚಾರ ರೋಚಕವಾಗಿದೆ. ಉಪ್ಪಾರ ಸಮುದಾಯ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಅವರು ಮಾತನಾಡಿ ರಾಮಾಯಣ, ಮಹಾಭಾರತದಲ್ಲಿ ಮಹರ್ಷಿಗಳ ಉಲ್ಲೇಖವಿದೆ. ಭಗೀರಥ ಮಹರ್ಷಿಗಳು ತಮ್ಮ ಪೂರ್ವಜರ ಮುಕ್ತಿಗಾಗಿ ಗಂಗೆಯನ್ನು ಧರೆಗೆ ಇಳಿಸಿದರು. ಇವರ ಆದರ್ಶಗಳನ್ನು ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಕಠಿಣ ಕೆಲಸಗಳಿಗೆ ಹೆಸರುವಾಸಿಯಾಗಿರುವ ಭಗೀರಥರು ಇಂದಿನ ಯುವಜನತೆಗೆ ಮಾದರಿಯಾಗಿದ್ದಾರೆ ಎಂದರು.

ಶಿಕ್ಷಕರಾದ ಗೋವಿಂದರಾಜು ಮಾತನಾಡಿ ಕ್ರಿ.ಶ.1236ರ ಹೊಯ್ಸಳ ಬಲ್ಲಾಳನ ತಾಮ್ರ ಶಾಸನದಲ್ಲಿ ಉಪ್ಪಾರರ ಬಗ್ಗೆ ಉಲ್ಲೇಖವಿದೆ. ಪಾವಗಡ ಹಾಗೂ ಹೈದರಾಲಿ ಶಾಸನಗಳಲ್ಲೂ ಉಪ್ಪಾರ ಜನಾಂಗದ ಇತಿಹಾಸವನ್ನು ಕಾಣಬಹುದು. ಉಪ್ಪು ತಯಾರಿಕೆ ವೃತ್ತಿಯಲ್ಲಿ ತೊಡಗಿದ್ದ ಉಪ್ಪಾರ ಜನಾಂಗಕ್ಕೆ 1880ರಲ್ಲಿ ಬ್ರಿಟಿಷರು ನಿರ್ಬಂಧ ಹೇರಿ, ತಾವೇ ಉಪ್ಪು ತಯಾರಿಕೆ ಪ್ರಾರಂಭ ಮಾಡಿದ ಪರಿಣಾಮ ಉಪ್ಪಾರರು ಬೇರೆ ಬೇರೆ ವೃತ್ತಿಗಳನ್ನು ಕೈಗೊಂಡರು. ಜನಾಂಗ ಸಂಘಟಿತರಾಗುವ ಜೊತೆಗೆ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಶಾಲೆಯಿಂದ ಹೊರಗುಳಿಯುವುದನ್ನು ತಪ್ಪಿಸಬೇಕು ಹಾಗೂ ಬಾಲ್ಯವಿವಾಹ ಪದ್ಧತಿ ಸಂಪೂರ್ಣವಾಗಿ ತೊಡೆದು ಹಾಕಬೇಕು ಎಂದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆನಂದ್ ಪ್ರಕಾಶ್ ಮೀನಾ, ಉಪವಿಭಾಗಾಧಿಕಾರಿ ಶಿವಮೂರ್ತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಎಸ್. ಚಿದಂಬರ, ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಎಲ್ಲಾ ಸಮುದಾಯದ ಮುಖಂಡರು, ಈ ಕಾರ್ಯಕ್ರಮದಲ್ಲಿ ಹಾಜರಿದ್ದರು.

ವರದಿ ಆರ್ ಉಮೇಶ್ ಮಲಾರಪಾಳ್ಯ