ಶ್ರಾವಣ ಮಾಸದ ಪ್ರಯುಕ್ತ ಶ್ರದ್ಧಾ ಕೇಂದ್ರಗಳ ಸ್ವಚ್ಛತಾ ಅಭಿಯಾನ
ವಿಜಯಪುರ: ದೇವಾಲಯ ಎಂದರೆ ಧಾರ್ಮಿಕತೆಯ ಅಧ್ಯಾತ್ಮಿಕ ಚಟುವಟಿಕೆಗಳ ಭಕ್ತಿ ಭಾವದ ಪಾವಿತ್ರತೆಯಿಂದ ಕೂಡಿದ ಸ್ಥಳ ಎಂದು ಪಟ್ಟಣದ ಅಯ್ಯಪ್ಪ ನಗರದ ಶ್ರೀ ಧರ್ಮಶಾಸ್ತ್ರ ಅಯ್ಯಪ್ಪ ಸ್ವಾಮಿ ಸೇವಾ ಟ್ರಸ್ಟ್ ನ ಧರ್ಮ ದರ್ಶಿ ಜೆ.ವಿ.ಮುನಿರಾಜು ಗುರು ಸ್ವಾಮಿ ತಿಳಿಸಿದರು.
ಇವರು ಪಟ್ಟಣದ ಅಯ್ಯಪ್ಪ ನಗರದ ಶ್ರೀ ಧರ್ಮಶಾಸ್ತ್ರ ಅಯ್ಯಪ್ಪ ಸ್ವಾಮಿ ದೇವಾಲಯದ ಆವರಣದಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್ ನ ವತಿಯಿಂದ ಮಾರುತಿ ನಗರ ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿಗಳ ತಂಡದ ವತಿಯಿಂದ ಆಯೋಜಿಸಲಾದ ಶ್ರಾವಣ ಮಾಸದ ಪ್ರಯುಕ್ತ ನಮ್ಮ ಶ್ರದ್ಧಾ ಕೇಂದ್ರಗಳ ಸ್ವಚ್ಛತಾ ಅಭಿಯಾನವನ್ನು ಶ್ರೀ ಧರ್ಮಶಾಸ್ತ್ರ ಅಯ್ಯಪ್ಪ ಸ್ವಾಮಿ ದೇವಾಲಯದ ಆವಣದಲ್ಲಿ ಉದ್ಘಾಟಿಸಿ ಮಾತನಾಡಿ ನಮ್ಮ ಧರ್ಮಗಳ ನಂಬಿಕೆಯ ಪ್ರಕಾರ ದೇವಸ್ಥಾನವು ದೇವರು ನೆಲೆಸಿರುವ ಪವಿತ್ರ ಪುಣ್ಯ ಸ್ಥಳಗಳ ವಾಗಿದೆ. ಇಲ್ಲಿ ನಾವು ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛ ಗೊಳಿಸುವುದು ನಮ್ಮೆಲ್ಲರ ಪ್ರಥಮ ಕರ್ತವ್ಯ ವಾಗಿದ್ದು ಪರಿಸರ ಸ್ವಚ್ಛತೆಯ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂದು ತಿಳಿಸಿದರು.
ರಾಷ್ಟ್ರೀಯ ಯುವ ಯೋಜನೆಯ ರಾಜ್ಯ ಸಂಯೋಜಕ ಡಾ.ವಿ. ಪ್ರಶಾಂತ ಮಾತನಾಡಿ ನಮ್ಮೆಲ್ಲರಿಗೂ ಸ್ವಚ್ಛತೆಯ ಅರಿವು ಅಗತ್ಯವಾಗಿ ಬೇಕೇ ಬೇಕು. ಅದರಲ್ಲಿಯೂ ಸಹ ದೇವಾಲಯಗಳಿಗೆ ನಿತ್ಯ ನೂರಾರು ಭಕ್ತರು ಆಗಮಿಸುತ್ತಾರೆ. ಇಂಥ ಸ್ಥಳಗಳು ಪ್ಲಾಸ್ಟಿಕ್ ಮುಕ್ತ ಪ್ರದೇಶ ವಾಗಬೇಕು ಹಾಗೂ ವಿವಿಧ ದೇವಾಲಯಗಳ ಪ್ರಾಚೀನ ಪರಂಪರೆಯ ಶಿಲ್ಪ ಕಲೆಯನ್ನು ನಾವು ಹಾಳಾಗದಂತೆ ರಕ್ಷಿಸುವ ಜವಾಬ್ದಾರಿಯು ಕೂಡ ನಮ್ಮದಾಗಿದೆ. ಆದ್ದರಿಂದ ಸರ್ವಧರ್ಮ ಸಮನ್ವಯವಾಗಿ ಸರ್ವ ಭಕ್ತಾದಿಗಳು ಒಟ್ಟುಗೂಡಿ ಕೈಗೊಳ್ಳುವ ಸ್ವಚ್ಛತಾ ಕಾರ್ಯಕ್ರಮ ಗಳು ಶ್ಲಾಘನೀಯ ವಾಗಿದೆ ಎಂದರು.
ಶ್ರದ್ದಾ ಕೇಂದ್ರದ ಸ್ವಚ್ಛತಾ ಕಾರ್ಯಕ್ರಮದ ಅಂಗವಾಗಿ ದೇವಾಲಯದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪ್ಲಾಸ್ಟಿಕ್, ಪಾರ್ತೇನಿಯಂ ನಿರ್ಮೂಲನೆ, ಕಂಚಿನ ಆಭರಣ, ನೀರಿನ ತೊಟ್ಟಿ, ದೇವಾಲಯದ ಆವರಣದಲ್ಲಿರುವ ಸಾಮೂಹಿಕ ಶೌಚಾಲಯಗಳ ಸ್ವಚ್ಛತೆ, ಸುತ್ತಮುತ್ತಲಿರುವ ಮರ ಗಿಡಗಳಿಗೆ ಫಾತಿ ಮಾಡಲಾಯಿತು ಮತ್ತು ಸೂಕ್ತ ಸ್ಥಳಗಳಲ್ಲಿ ಸ್ವಚ್ಛತೆಯ ಅರಿವಿನ ಬಗ್ಗೆ ವಿವಿಧ ರೀತಿಯ ಜಾಗೃತಿ ಮೂಡಿಸುವ ಸ್ವಚ್ಛತಾ ಫಲಕಗಳನ್ನು ಅಳವಡಿಸಲಾಯಿತು.
ಸ್ವಚ್ಛತಾ ಸೇವಾ ಕಾರ್ಯಕ್ರಮದ ಉಪಸ್ಥಿಯಲ್ಲಿ ಸಮಾಜ ಸೇವಕ ರವಿ, ಮಾಧ್ಯಮ ವರದಿಗಾರ ಕೃಷ್ಣಮೂರ್ತಿ, ಕರ್ನಾಟಕ ರಾಜ್ಯ ವನ್ನಿಕುಲ ಕ್ಷತ್ರಿಯ ತಿಗಳ ಸಂಘದ ಸದಸ್ಯ ಎನ್.ಕನಕರಾಜು, ಮಾರುತಿ ನಗರ ಕ್ಷೇತ್ರದ ಸೇವಾ ಪ್ರತಿನಿಧಿ ಎನ್. ಮಾನಸ ಹಾಗೂ ಸೇವಾ ಪ್ರತಿನಿಧಿಗಳಾದ ಮಮತಾ, ಶಶಿ, ಅಶ್ವಿನಿ ಮಧುಚಂದ್ರ,ಯಾಸ್ಮಿನ್ ತಾಜ್, ಶಬಾನ, ರೇಷ್ಮಾ, ದಿವಾಕರ್ ಮತ್ತು ಶ್ರೀ ಕ್ಷೇತ್ರದ ಅಯ್ಯಪ್ಪ ಭಕ್ತಾದಿಗಳು ಹಾಜರಿದ್ದರು.