ಬಸ್ ಸಮಸ್ಯೆ ಬಗೆಹರಿಸಲು ಸಾರಿಗೆ ಸಚಿವರಿಗೆ ಮನವಿ
ಬೆಂಗಳೂರು : ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಹಲವು ತಿಂಗಳಿಂದ ಸಾರಿಗೆ ಅವ್ಯವಸ್ಥೆ ಕಾಡುತ್ತಿದೆ. ಈ ಸಾರಿಗೆ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ಇಂದು ಬಸ್ ಪ್ರಯಾಣಿಕರು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರಿಗೆ ಮನವಿ ಪತ್ರ ನೀಡಿದರು.
ಇಂದು ಕೋರಮಂಗಲದ ಬಿಬಿಎಂಪಿ ಕಚೇರಿಯಲ್ಲಿ ರಾಮಲಿಂಗಾ ರೆಡ್ಡಿ ಅವರನ್ನು ಭೇಟಿಯಾಗಿ, ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಉಂಟಾಗಿರುವ ಸಾರಿಗೆ ಅವ್ಯವಸ್ಥೆ ಕುರಿತು ವಿವರಿಸಿದರು.
ದೊಡ್ಡಬಳ್ಳಾಪುರ ಬೆಂಗಳೂರು ನಗರದಿಂದ ಸುಮಾರು 38 ಕಿ.ಮೀ. ಗಳ ದೂರದಲ್ಲಿದ್ದು, ದೊಡ್ಡಬಳ್ಳಾಪುರದ ನಾಗರಿಕರು ಬೆಂಗಳೂರಿಗೆ ಬಂದು ಹೋಗಲು ಸೂಕ್ತ ಸಾರಿಗೆ ವ್ಯವಸ್ಥೆ ಇಲ್ಲದೆ ಪರದಾಡುವ ಪರಿಸ್ಥಿತಿ ತುಂಬಾ ವರ್ಷಗಳಿಂದಲೂ ಇದೆ. ಇದರಿಂದ ಪ್ರಯಾಣಿಕರಿಗೆ ತುಂಬಾ ತೊಂದರೆಯಾಗುತ್ತಿದೆ ಎಂದು ವಿವರಿಸಿದರು.
ಯಾವುದೇ ಸರ್ಕಾರ ಮತ್ತು ಶಾಸಕರು ಬಂದರೂ ಸಹ ಈ ಸಂಬಂಧ ಯಾವುದೇ ಕ್ರಮ ಕೈಗೊಂಡಿಲ್ಲದ ಕಾರಣ ನಾವು ತಮ್ಮ ಮೇಲಿನ ನಂಬಿಕೆ ಹಾಗೂ ವಿಶ್ವಾಸದಿಂದ ಮನವಿಯನ್ನು ಸಲ್ಲಿಸುತ್ತಿದ್ದೇವೆ ಎಂದು ತಿಳಿಸಿದರು.
ಈ ಮೊದಲು ಭಾಗಮಂಡಲ, ಲಕ್ಷ್ಮೇಶ್ವರ ನಂದಿಬೆಟ್ಟ ಮತ್ತು ಇತರೆ ಕೆಲವು ಜಿಲ್ಲೆಗಳಿಗೆ ಹೋಗುತ್ತಿದ್ದ ಬಸ್ಸುಗಳನ್ನು ಈ ಹಿಂದೆ ಡಿಪೋದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮ್ಯಾನೇಜರ್ ರದ್ದು ಮಾಡಿದ್ದಾರೆ. ಹಾಗೂ ಈ ಹಿಂದೆ ಕಾವೇರಿ ಭವನ, ಬೆಂಗಳೂರು, ದೊಡ್ಡಬಳ್ಳಾಪುರ ನಡುವೆ ಸಂಚರಿಸಲು ಸುಮಾರು 15-20ರಷ್ಟು ಕೆ.ಎಸ್.ಆರ್.ಟಿ.ಸಿ. ಬಸ್ಸುಗಳ ವ್ಯವಸ್ಥೆ ಕಲ್ಪಿಸಿದ್ದರು. ಆದರೆ ಇದೀಗ ಅವುಗಳ ಸಂಖ್ಯೆ ಕೇವಲ 3-4ಕ್ಕೆ ಇಳಿದಿವೆ ಎಂದು ದೂರಿದರು.
ಪ್ರತಿ ದಿನ ಸಾವಿರಾರು ಜನರು ಬೆಂಗಳೂರಿಗೆ ಬಂದು ಹೋಗುವವರಿದ್ದು, ಅವರುಗಳಲ್ಲಿ ಹೆಚ್ಚಾಗಿ ನ್ಯಾಯಾಲಯ, ಸರ್ಕಾರಿ ಕಚೇರಿ, ಶಾಲಾ- ಕಾಲೇಜುಗಳಿಗೆ, ಆಸ್ಪತ್ರಗಳಿಗೆ ಹಾಗೂ ಖಾಸಗಿ ಕಂಪನಿಗಳಿಗೆ ಹೋಗುವ ಉದ್ಯೋಗಿಗಳು, ವ್ಯಾಪಾರಸ್ಥರು, ಅವೆನ್ಯೂ ರೋಡ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವ್ಯಾಪಾರ ನಡೆಸುತ್ತಿರುವವರರಿದ್ದು, ಸದರಿಯವರು ಸಮಯಕ್ಕೆ ಸರಿಯಾಗಿ ಬೆಂಗಳೂರಿನಿಂದ ದೊಡ್ಡಬಳ್ಳಾಪುರಕ್ಕೆ ಹೋಗಲು ಹಾಗೂ ಬರಲು ತುಂಬಾ ಕಷ್ಟಕರವಾಗಿದೆ ಎಂದು ಮನವರಿಕೆ ಮಾಡಿಕೊಟ್ಟರು.
ದೊಡ್ಡಬಳ್ಳಾಪುರ-ಕಾವೇರಿ ಭವನ ಮಾರ್ಗವಾಗಿ ಬಸ್ಸುಗಳ ಸಂಚಾರ ಇದ್ದು, ಆದರೆ, ಪ್ರಸ್ತುತ ಸಮಯಕ್ಕೆ ಸರಿಯಾಗಿ ಬಸ್ಸುಗಳು ಇಲ್ಲದೆ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿದೆ. ಈ ಬಗ್ಗೆ ಕೆ.ಎಸ್.ಆರ್.ಟಿ.ಸಿ.ಯ ಸಿಬ್ಬಂದಿಯನ್ನು ವಿಚಾರಿಸಲಾಗಿ, ಚಿಕ್ಕಬಳಾಪುರ ವಿಭಾಗಕ್ಕೆ ಸದರಿ ದೊಡ್ಡಬಳ್ಳಾಪುರ ಡಿಪೋ ಸೇರಿದ್ದು, ಅಲ್ಲಿಂದ ಸರಿಯಾಗಿ ಯಾವುದೇ ಬಸ್ಸುಗಳ ಸೇವೆ ಹಾಗೂ ಬಸ್ಸುಗಳಿಗೆ ಬೇಕಾಗುವ ಬಿಡಿ ಭಾಗಗಳು ಸರಿಯಾಗಿ ವಿತರಿಸದೇ ಇರುವುದೇ ಕಾರಣವೆಂದು ತಿಳಿಸಿರುತ್ತಾರೆ. ಆದ್ದರಿಂದ, ಈ ಮೊದಲು ಬೆಂಗಳೂರಿನ ಕೇಂದ್ರ ವಿಭಾಗಕ್ಕೆ ದೊಡ್ಡಬಳ್ಳಾಪುರ ಡಿಪೋ ಸೇರಿದ್ದು, ಈಗ ಮತ್ತೆ ಚಿಕ್ಕಬಳ್ಳಾಪುರ ವಿಭಾಗದಿಂದ ಬೇರ್ಪಡಿಸಿ ಬೆಂಗಳೂರಿನ ಕೇಂದ್ರ ಡಿಪೋಗೆ ಸೇರಿಸುವಂತೆ ಕೋರಿದರು.