ದೊಡ್ಡಬಳ್ಳಾಪುರದಲ್ಲಿ ವೈಭವದ ಕೆಂಪೇಗೌಡ ಜಯಂತಿ ಆಚರಣೆ– ಟಿ. ವಿ. ಲಕ್ಷ್ಮಿ ನಾರಾಯಣ್
ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ತಾಲ್ಲೋಕಿನಲ್ಲಿ ಒಕ್ಕಲಿಗ ಸಮಾಜದ ವತಿಯಿಂದ ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಜುಲೈ 7ರಂದು ಒಕ್ಕಲಿಗರ ಸಂಘದ ಆವರಣದಲ್ಲಿ ಅತಿ ವಿಜೃಂಭಣೆ ಯಿಂದ ಆಚರಿಸಲಾಗುವುದೆಂದು ಕೆಂಪೇಗೌಡ ಆಚರಣ ಸಮಿತಿ ಅಧ್ಯಕ್ಷರಾದ ತಳಗವಾರ ಲಕ್ಷ್ಮೀನಾರಾಯಣ ಹೇಳಿದರು.
ನಗರದ ಪಿ. ಎಲ್. ಡಿ ಬ್ಯಾಂಕ್ ನಲ್ಲಿ ಒಕ್ಕಲಿಗ ಸಮಾಜದ ವತಿಯಿಂದ ನಡೆದ ಸುದ್ದಿಗೋಷ್ಠಿಯಲ್ಲಿ ಲಕ್ಷ್ಮಿ ನಾರಾಯಣ್ ಮಾತನಾಡಿ, ನಾಡಪ್ರಭು ಕೆಂಪೇಗೌಡರ ಜಯಂತಿ ಅಂಗವಾಗಿ ಒಕ್ಕಲಿಗರ ಸಂಘದ ಆವರಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಕೆಂಪೇಗೌಡರ ಪುತ್ಥಳಿಯ ಪಲ್ಲಕ್ಕಿಯ ಬೃಹತ್ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ನಡೆಯಲಿದ್ದು, ವೇದಿಕೆಯ ಕಾರ್ಯಕ್ರಮದಲ್ಲಿ ಒಕ್ಕಲಿಗ ಸಮಾಜದ ಪ್ರತಿಭಾವಂತ ವಿದ್ಯಾರ್ಥಿ, ವಿದ್ಯಾರ್ಥಿನಿ, ಸಮಾಜದಲ್ಲಿ ಸೇವೆ ಸಲ್ಲಿಸಿರುವ ಗಣ್ಯರಿಗೆ ಸನ್ಮಾನ ಮಾಡಲಾಗುವುದು. ಉನ್ನತ ಶಿಕ್ಷಣದಲ್ಲಿ ಶೇಕಡಾ 90ಅಂಕ ಗಳಿಸಿರುವ ವಿದ್ಯಾರ್ಥಿಗಳು ಕಾರ್ಯಕ್ರಮದ ಆಯೋಜಕರನ್ನು ಸಂಪರ್ಕಿಸಿ ತಮ್ಮ ಹೆಸರನ್ನು ನೋಂದಾಯಿಸಬೇಕೆಂದು ಹೇಳಿದ ಲಕ್ಷ್ಮೀನಾರಾಯಣ ಕಾರ್ಯಕ್ರಮದಲ್ಲಿ ಇತ್ತೀಚೆಗೆ ನಡೆದ ಚುನಾವಣೆಗಳಲ್ಲಿ ಆಯ್ಕೆಯಾದ ಸಂಸತ್ ಸದಸ್ಯರು ಹಾಗೂ ವಿಧಾನಪರಿಷತ್ ಸದಸ್ಯರನ್ನು ಅಭಿನಂದಿಸಲಾಗುವುದು. ಅದ್ದೂರಿ ಕಾರ್ಯಕ್ರಮದ ಅಂಗವಾಗಿ ತಾಲೂಕಿನ ಎಲ್ಲಾ ಗ್ರಾಮಗಳಿಂದ ಕೆಂಪೇಗೌಡ ಭಾವಚಿತ್ರವನ್ನು ಹೊತ್ತ ಬೆಳ್ಳಿ ರಥಗಳು ನಗರಾ ದ್ಯಂತ ಮೆರವಣಿಗೆಯಲ್ಲಿ ಭಾಗವಹಿಸಲು ವ್ಯವಸ್ಥೆ ಮಾಡಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ಹೋಬಳಿ ಹಾಗೂ ನಗರ ಮುಖಂಡರ ನೇತೃತ್ವದಲ್ಲಿ ಸಭೆ ನಡೆದಿದ್ದು ಕಾರ್ಯಕ್ರಮ ಯಶಸ್ವಿ ಗೊಳಿಸಲು ಪಕ್ಷಾತೀತವಾಗಿ ಎಲ್ಲಾ ಮುಖಂಡರು ಕೈ ಜೋಡಿಸಲಿದ್ದು ತಾಲೂಕಿನ ಸಮಾಜದ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಕೆಂಪೇಗೌಡ ಜಯಂತಿಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆಂದು ಲಕ್ಷ್ಮೀನಾರಾಯಣ ಹೇಳಿದರು.
ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಬಿ. ಮುನೇಗೌಡ ಮಾತನಾಡಿ ನಾಡಪ್ರಭು ಕೆಂಪೇಗೌಡರು ಬೆಂಗಳೂರಿನ ನಿರ್ಮಾತೃಗಳು. ಅವರು ಯಾವುದೇ ಜಾತಿಗೆ ಸೀಮಿತರಾಗದೆ ಸರ್ವ ಸಮಾಜಗಳ ಅಭಿವೃದ್ಧಿಗೆ ಶ್ರಮಿಸಿದರು. ವೃತ್ತಿಯಧಾರಿತ ಜಾತಿಗಳ ಹೆಸರಲ್ಲಿ ಪೇಟೆಗಳನ್ನು ನಿರ್ಮಿಸಿರುವುದಕ್ಕೆ ಬೆಂಗಳೂರು ಉದಾಹರಣೆಯಾಗಿದೆ. ಮೇಲಾಗಿ ಬೇರೆ ಕಡೆಯ ವರ್ತಕರನ್ನು ಬೆಂಗಳೂರಿಗೆ ಬರುವಂತೆ ಮಾಡಿ ಬೆಂಗಳೂರು ಉತ್ತಮ ವಾಣಿಜ್ಯ ನಗರಿ ಎಂದು ಹೆಸರಾಗುವಂತೆ ಮಾಡಿದ್ದು ಕೆಂಪೇಗೌಡರ ದೂರದೃಷ್ಟಿಯ ಚಿಂತನೆ ಎಂದೇ ಹೇಳಬಹುದು. ಸಾರ್ವಜನಿಕರ, ಪ್ರವಾಸಿಗರ, ರೈತಾಪಿ ಜನರ ಅನುಕೂಲಕ್ಕಾಗಿ ಅನೇಕ ಕೆರೆ,ಕುಂಟೆಗಳನ್ನು ನಿರ್ಮಿಸಿದ್ದಲ್ಲದೆ ಸಾಲು ಮರಗಳನ್ನು ನೆಟ್ಟು ಇಡೀ ಬೆಂಗಳೂರು ಉದ್ಯಾನನಗರಿ ಎನ್ನುವಂತೆ ಮಾಡಿದರು. ಇಂದು ಬೆಂಗಳೂರು ವಿಶ್ವದಲ್ಲಿ ಪ್ರಖ್ಯಾತಿ ಗೊಂಡಿದೆ ಎಂದರೆ ಅದಕ್ಕೆ ಮುಖ್ಯ ಕಾರಣ ಕೆಂಪೇಗೌಡರೆನ್ನುವುದರಲ್ಲಿ ಎರಡು ಮಾತಿಲ್ಲ. ಈಗಾಗಲೇ ಸರ್ಕಾರದ ವತಿಯಿಂದ ರಾಜ್ಯದಲ್ಲಿ ಎಲ್ಲೆಡೆ ಕೆಂಪೇಗೌಡ ಜಯಂತಿ ಆಚರಿಸಲಾಗಿದ್ದು, ದೊಡ್ಡಬಳ್ಳಾಪುರ ದಲ್ಲಿ ಅತಿ ವಿಜೃಂಭಣೆಯಿಂದ ನಡೆಯಲಿದೆ ಎಂದು ಮುನೇಗೌಡರು ಹೇಳಿದರು.
ಬಿ. ಡಿ. ಸಿ. ಸಿ. ಬ್ಯಾಂಕ್ ನಿರ್ದೇಶಕ ಜಿ. ಚುಂಚೇಗೌಡರು, ಜಿಲ್ಲಾಪಂಚಾಯತ್ ಮಾಜಿ ಅಧ್ಯಕ್ಷ ಸಿ. ಡಿ. ಸತ್ಯನಾರಾಯಣ ಗೌಡರು, ಜಿ. ಪಂ. ಮಾಜಿ ಸದಸ್ಯ ಕುರುವಿಗೆರೆ ನರಸಿಂಹಯ್ಯ ಸೇರಿದಂತೆ ಅನೇಕರು ಮಾತನಾಡಿ ಕೆಂಪೇಗೌಡರು ಬರೀ ಒಕ್ಕಲಿಗ ಸಮುದಾಯಕ್ಕೆ ಸೀಮಿತರಾಗದೆ ಸಮಾಜದ ಎಲ್ಲಾ ಜಾತಿ ಜನಾಂಗದ ಶ್ರೇಯೋಭಿವೃದ್ಧಿಗೆ ಶ್ರಮಿಸಿದವರು. ಹಾಗಾಗಿ ಸಮಾಜದ ಎಲ್ಲಾ ಜಾತಿ ಜನಾಂಗದವರು ಕೆಂಪೇಗೌಡರನ್ನು ಅಭಿಮಾನಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ತಾಲೂಕಿನಲ್ಲಿ ನಡೆಯುತ್ತಿರುವ ನಾಡಪ್ರಭು ಕೆಂಪೇಗೌಡ ಜಯಂತಿಯ ಕಾರ್ಯಕ್ರಮಕ್ಕೆ ಸಮಾಜದ ಬಂದುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಬೇಕೆಂದು ಹೇಳಿದರು.
ತಾಲೂಕು ಜೆ. ಡಿ. ಎಸ್. ಅಧ್ಯಕ್ಷ ಲಕ್ಷ್ಮೀಪತಿ, ತಾ. ಪಂ ಮಾಜಿ ಅಧ್ಯಕ್ಷ ಶಶಿದರ, ಮಹಿಳಾ ಒಕ್ಕಲಿಗರ ಸಂಘದ ಅಧ್ಯಕ್ಷೆ ಶಾಂತಮ್ಮ, ಸಮಾಜದ ಮುಖಂಡರಾದ ಮಂಡಿ ಬ್ಯಾಡರಹಳ್ಳಿ ಅಶ್ವಥ್ ನಾರಾಯಣ್, ರೋಜಿಪುರ ಶೇಖರ್, ವಿಶ್ವಾಸ್ ಗೌಡ,ಪುರುಷೋತ್ತಮ ಗೌಡ, ಸೋಮಶೇಖರ್, ಮುನಿಪಾಪಯ್ಯ, ವೇಣುಕುಮಾರ್ ಸೇರಿದಂತೆ ಹಲವಾರು ಯುವ ಮುಖಂಡರು ಸುದ್ದಿ ಗೋಷ್ಠಿಯಲ್ಲಿ ಭಾಗವಹಿಸಿದ್ದರು.