ಇಂಡೇನ ಕಾರ್ಖಾನೆಯಿಂದ ವಿಷ ಪೂರಿತ ವಾತಾವರಣ– ರಘುನಾಥಪುರ ಗ್ರಾಮಸ್ಥರ ಆಕ್ರೋಶ

ದೊಡ್ಡಬಳ್ಳಾಪುರ :ದೊಡ್ಡಬಳ್ಳಾಪುರ ತಾಲ್ಲೋಕು ಕಸಬಾ ಹೋಬಳಿಯ ರಘುನಾಥಪುರ ಗ್ರಾಮಸ್ಥರಿಗೆ ಇಂಡೇನ ಕಾರ್ಖಾನೆ ಹೊರಬರುವ ವಿಷಪೂರಿತ ರಾಸಾಯನಿಕದಿಂದ ಆರೋಗ್ಯದ ಸಮಸ್ಯ ಹೆಚ್ಚಾಗುತ್ತಿದೆ ಎಂದು ಆರೋಪ ಮೇಲೆ ಕಾರ್ಖಾನೆಯನ್ನು ಬೇರೆಕಡೆ ವರ್ಗಾಯಿಸುವಂತೆ ಗ್ರಾಮಸ್ಥರಿಂದ ಒತ್ತಾಯಿಸಿದ್ದಾರೆ.

ಹಲವಾರು ವರ್ಷಗಳಿಂದ ದೊಡ್ಡಬಳ್ಳಾಪುರ ತಾಲ್ಲೂಕಿನ ರಘುನಾಥಪುರದಲ್ಲಿ ಕಾರ್ಯನಿರ್ವಹಿಸುತ್ತಿರುವ ಇಂಡೇನ ಕಾರ್ಖಾನೆ ವಿರುದ್ಧ ಗ್ರಾಮಸ್ಥರು ತಿರುಗಿಬಿದ್ದಿದ್ದಾರೆ. ಕಾರ್ಖಾನೆಯಿಂದ ವಿಷಪೂರಿತ ರಾಸಾಯನಿಕ ನೀರು ಅಂತರ್ಜಲ ಸೇರುತ್ತಿದ್ದು. ಕಾರ್ಖಾನೆ ಹೊರ ಸೂಸುವ ದುರ್ವಾಸನೆಯಿಂದ ಗ್ರಾಮದಲ್ಲಿ ವಾಸಿಸಲು ಸಾಧ್ಯವಾಗುತ್ತಿಲ್ಲ. ಕುಡಿಯುವ ನೀರು ಸಂಪೂರ್ಣ ಹಾಳಾಗುತ್ತಿದ್ದು. ಗ್ರಾಮಸ್ಥರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಕುರಿತು ಸ್ಥಳೀಯರಾದ ಮುನಿರಾಜಪ್ಪ ಮಾತನಾಡಿ ಕಾರ್ಖಾನೆಯು ರಾಸಾಯನಿಕ ವಸ್ತುಗಳನ್ನು ಬಳಸಿ ಕರ್ತವ್ಯ ನಿರ್ವಹಿಸುವ ಕಾರಣ ವಿಷಪೂರಿತತ್ಯಾಜ್ಯ ವಾಸನೆ ಮುಖಾಂತರ ಹೊರಬರುತ್ತದೆ. ಕಾರ್ಖಾನೆ ಸೂಸುವ ದುರ್ವಾಸನೆಯಿಂದ ಗ್ರಾಮಸ್ಥರು ಜೀವಿಸುವುದು ಕಷ್ಟಕರವಾಗಿದೆ. ಸ್ಥಳೀಯ ಕೆಲ ಪ್ರಭಾವಿ ವ್ಯಕ್ತಿಗಳ ಸಹಕಾರದಿಂದ ಕಾರ್ಖಾನೆ ಕರ್ತವ್ಯ ನಿರ್ಮಿಸುತ್ತಿದ್ದು. ಸ್ಥಳೀಯ ಗ್ರಾಮಸ್ಥರ ಜೀವಕ್ಕೆ ಬೆಲೆ ಇಲ್ಲದಂತಾಗಿದೆ. ಕಾರ್ಖಾನೆ ಬೇರೆಡೆ ಸ್ಥಳಾಂತರವಾಗುವ ಮೂಲಕ ರಘುನಾಥಪುರದ ಗ್ರಾಮಸ್ಥರ ಜೀವ ಉಳಿಸಬೇಕಿದೆ. ಗ್ರಾಮಸ್ಥರ ಆರೋಗ್ಯ ಕಾಪಾಡುವಲ್ಲಿ ಸ್ಥಳೀಯ ಸಂಸ್ಥೆಗಳು ಕರ್ತವ್ಯ ನಿರ್ವಹಿಸಬೇಕಿದೆ ಎಂದರು.

ರಘುನಾಥಪುರದ ನಿವಾಸಿ ಅನಿತಾ ಮಾತನಾಡಿ ಕಾರ್ಖಾನೆ ಹೊರ ಸೂಸುವ ದುರ್ವಾಸನೆಯಿಂದ ಮನೆಗಳಲ್ಲಿ ವಾಸಿಸುವುದು ಕಷ್ಟಕರವಾಗಿದೆ. ಮಕ್ಕಳು ಪ್ರತಿನಿತ್ಯ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದು ಪರಿಸ್ಥಿತಿಗೆ ಗಂಭೀರತೆ ಗ್ರಾಮದ ಮುಖಂಡರಿಗೆ ಅರ್ಥವಾಗುತ್ತಿಲ್ಲ. ನೀರು ಸಂಪೂರ್ಣ ಜಿಡ್ಡುಮಯವಾಗಿದ್ದು ಕುಡಿಯಲು ಯೋಗ್ಯವಲ್ಲದ ನೀರಾಗಿ ಪರಿವರ್ತನೆಗೊಂಡಿದೆ. ಇನ್ನಾದರೂ ಈ ಕುರಿತು ಸ್ಥಳಿಯ ಮುಖಂಡರು, ಅಧಿಕಾರಿಗಳು ಗಮನಹರಿಸಿ ಕಾರ್ಖಾನೆಯನ್ನು ವರ್ಗಾವಣೆ ಮಾಡಬೇಕಾಗಿ ಮನವಿ ಮಾಡುತ್ತೇನೆ ಎಂದು ತಿಳಿಸಿದರು.

ಸ್ಥಳೀಯ ಮುಖಂಡರಾದ ಆರ್.ಎಂ.ಮಹದೇವ್ ಮಾತನಾಡಿ ಕಳೆದ 25 ವರ್ಷಗಳಿಂದ ನಿರಂತರವಾಗಿ ಈ ಸಮಸ್ಯೆಯನ್ನು ಗ್ರಾಮದ ಜನತೆ ಎದುರಿಸುತ್ತಿದ್ದು. ಈ ಕುರಿತು ಸಾಕಷ್ಟು ಬಾರಿ ದೂರು ಸಲ್ಲಿಸಿದರು ಕಾರ್ಖಾನೆ ಸಿಬ್ಬಂದಿ ತಲೆಕೆಡಿಸಿಕೊಳ್ಳುತ್ತಿಲ್ಲ. ಕೆಲ ಸ್ಥಳೀಯ ಪ್ರಭಾವಿಗಳ ಬೆಂಬಲದಿಂದ ಕಾರ್ಖಾನೆ ಚಾಲನೆಯಲ್ಲಿದ್ದು. 1500ಕ್ಕೂ ಅಧಿಕ ಜಲಸಂದ್ರತೆ ಹೊಂದಿರುವ ರಘುನಾಥಪುರದ ಗ್ರಾಮಸ್ಥರ ಜೀವದ ಜೊತೆ ಕಾರ್ಖಾನೆ ಚೆಲ್ಲಾಟವಾಡುತ್ತಿದೆ. ಕಾರ್ಖಾನೆ ಮುಚ್ಚುವುದು ನಮ್ಮ ಉದ್ದೇಶವಲ್ಲ. ಕಾರ್ಖಾನೆ ವರ್ಗಾವಣೆ ಮಾಡುವ ಮುಖಾಂತರ ಸ್ಥಳೀಯ ಗ್ರಾಮಸ್ಥರ ಜೀವ ಉಳಿಯಲಿ ಎಂಬುದೇ ನಮ್ಮೆಲ್ಲರ ಆಶಯ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು

ಗ್ರಾಮಸ್ಥರ ಆರೋಪದ ಹಿನ್ನೆಲೆ ಕಾರ್ಖಾನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕೆಲ ಕಾರ್ಮಿಕರು ರಘುನಾಥಪುರ ಗ್ರಾಮದ ಗ್ರಾಮಸ್ಥರ ಮನೆಗಳಿಗೆ ಭೇಟಿಕೊಟ್ಟು ಖಾಲಿ ಪೇಪರ್ ಮೇಲೆ ಸಹಿ ಪಡೆದುಕೊಂಡಿದ್ದಾರೆ ಎಂದು ಸ್ಥಳೀಯ ಗ್ರಾಮಸ್ಥರು ಆರೋಪಿಸಿದ್ದಾರೆ. ಇದಕ್ಕೆ ಪುಷ್ಠಿ ನೀಡುವಂತೆ ಸ್ಥಳೀಯ ನಿವಾಸಿ ಅನಿತಾ ಮಾತನಾಡಿ ಕಾರ್ಖಾನೆಯಿಂದ ಕೆಲ ಕಾರ್ಮಿಕರು ಮನೆಗೆ ಭೇಟಿಕೊಟ್ಟು ಸಹಿ ಮಾಡುವಂತೆ ತಿಳಿಸಿದರು. ಖಾಲಿ ಪತ್ರದೊಂದಿಗೆ ಮನೆಗೆ ಭೇಟಿ ಕೊಟ್ಟ ಕಾರ್ಮಿಕರು ಪರಿಚಯಸ್ಥರಾದ ಕಾರಣ ಸಹಿ ಮಾಡಿಕೊಟ್ಟಿದ್ದೇವೆ. ಏತಕ್ಕಾಗಿ ಸಹಿ ಮಾಡಬೇಕು ಎಂಬ ಮಾಹಿತಿ ನೀಡದೆ ಸಹಿ ಪಡೆದುಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.