ಕನ್ನಡ ಪಕ್ಷದಿಂದ ಸದಸ್ಯತ್ವ ಆಂದೋಲನ
ದೊಡ್ಡಬಳ್ಳಾಪುರ :ಕನ್ನಡ ನೆಲ ಜಲ ಭಾಷೆ ಗಡಿ ಉದ್ಯೋಗ ಸಮಸ್ಯೆ ಮೊದಲಾಗಿ ರಾಜ್ಯದ ಗಂಬೀರ ಸಮಸ್ಯೆಗಳ ವಿರುದ್ದ ದನಿ ಎತ್ತಲು ರಾಜ್ಯದ ಎಲ್ಲಾ ಶಾಸಕರು ಹಾಗೂ ಸಂಸದರು ವಿಫಲರಾಗಿದ್ದಾರೆ. ಈ ದಿಸೆಯಲ್ಲಿ ನಾಡು, ನುಡಿ ಜಲ ಜನರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ಹಾಗೂ ಕನ್ನಡದ ಉಳಿವಿಗಾಗಿ ಪ್ರಾದೇಶಿಕ ಪಕ್ಷದ ಅಗತ್ಯವಿದೆ ಎಂದು ಕನ್ನಡ ಪಕ್ಷದ ರಾಜ್ಯಾಧ್ಯಕ್ಷ ಪುರುಷೋತ್ತಮ್ ಹೇಳಿದರು.
ನಗರದ ಸಂಜಯನಗರದಲ್ಲಿ ಕನ್ನಡ ಪಕ್ಷದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಕೊಳಗೇರಿ ನಿವಾಸಿಗಳಿಗೆ ಹಕ್ಕು ಪತ್ರಕ್ಕಾಗಿ ಒತ್ತಾಯ, ಜನರಿಗೆ ಮೂಲಕ ಸೌಕರ್ಯಗಳ ಬಗ್ಗೆ ದನಿ ಎತ್ತಿ ಕನ್ನಡ ಪಕ್ಷ ಜನರ ಸಮಸ್ಯೆಗಳಿಗೆ ಸ್ಪಂದಿಸದೆ.ಆದರೆ ರಾಜ್ಯದ ಶಾಸಕರು ಹಾಗೂ ಸಂಸದರು ಬೀದಿಗಳಿದು ಹೋರಾಟ ಮಾಡಿದ್ದಾರಾ ? ಅವರು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಬೇಕಾಗಿದೆ. ನೆರೆಯ ಆಂಧ್ರದ ಚುನಾವಣೆಗೆ ಇಲ್ಲಿನ ಹಣ, ಮುಡಾ ಅಕ್ರಮ, ವಾಲ್ಮೀಕಿ ನಿಗಮದ 187 ಕೋಟಿ ರೂ ಅಕ್ರಮ ಮೊದಲಾಗಿ ಜನರ ತೆರಿಗೆ ಹಣವನ್ನು ಪೋಲು ಮಾಡುತ್ತಿದ್ದಾರೆ. ಆದರೆ ನಮ್ಮ ಪ್ರಾದೇಶಿಕ ಪಕ್ಷದವರಿಗೆ ಇದು ನಮ್ಮ ಜನರ ಹಣ ಎನ್ನುವ ಭಾವನೆ ಇರುತ್ತದೆ. ರಾಜ್ಯ ಸರ್ಕಾರ ಬೆಲೆ ಏರಿಕೆಯನ್ನು ಸಮರ್ಥನೆ ಮಾಡಿಕೊಳ್ಳುತ್ತಿದೆ. ರಾಜ್ಯದಲ್ಲಿ ಪ್ರಾದೇಶಿಕವಾಗಿ ಗುರುತಿಸಿಕೊಂಡಿದ್ದ ಜೆಡಿಎಸ್ ಇಂದು ಬಿಜೆಪಿ ಜೊತೆ ಕೈ ಜೋಡಿಸಿರುವುದು ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ. ಕಾಂಗ್ರೆಸ್, ಬಿಜೆಪಿ ಮೊದಲಾದ ರಾಷ್ಠ್ರೀಯ ಪಕ್ಷಗಳು ಜನರಿಗೆ ಹಣದ ಆಸೆ ತೋರಿಸಿ, ಮತ ಗಳಿಸಿ ಅಕಾರ ಪಡೆಯುತ್ತಿದ್ದು, ಜನಹಿತವನ್ನು ಮರೆತಿವೆ. ಈ ದಿಸೆಯಲ್ಲಿ ನಮ್ಮದೇ ಆದ ಪ್ರಾದೇಶಕ ಪಕ್ಷದ ಅಗತ್ಯವಿದ್ದು, ಕನ್ನಡ ಪಕ್ಷದ ಸಂಘಟನೆಗೆ ಒತ್ತು ನೀಡಲಾಗುತ್ತಿದೆ. ರಾಜ್ಯದಲ್ಲಿ 15 ಲಕ್ಷ ಸದಸ್ಯತ್ವದ ಗುರಿ ಹೊಂದಲಾಗಿದೆ. ಸದಸ್ಯತ್ವ ಅಭಿಯಾನವನ್ನು ಕನ್ನಡ ಪಕ್ಷದ ಮುಖಂಡರಾಗಿದ್ದ ಡಾ.ವೆಂಕಟರೆಡ್ಡಿ ಅವರ ಕರ್ಮ ಭೂಮಿ ದೊಡ್ಡಬಳ್ಳಾಪುರ ದಿಂದ ಆರಂಭಿಸಲಾಗುತ್ತಿದೆ ಎಂದರು.
ಕನ್ನಡ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಜಯಕುಮಾರ್ ಮಾತನಾಡಿ, ಕನ್ನಡ ಪಕ್ಷ ಸ್ಥಾಪನೆಯಾಗಿ 52 ವರ್ಷಗಳಾಗಿವೆ. ಕನ್ನಡ ಮನಸ್ಸುಗಳು ಪಕ್ಷದ ಸದಸ್ಯರಾಗುವ ಮೂಲಕ ಸಂಘಟನೆಯನ್ನು ಬಲಪಡಿಸಬೇಕು ಎಂದರು.
ಕನ್ನಡ ಪಕ್ಷದ ಹಿರಿಯ ಮುಖಂಡ ಸಂಜೀವ್ ನಾಯಕ್ ಮಾತನಾಡಿ, ರಾಷ್ಠ್ರೀಯ ಪಕ್ಷಗಳಿಂದ ಜನರಿಗೆ ಅನ್ಯಾಯವಾಗುತ್ತಿದೆ. ಈಗ ಪಕ್ಷವನ್ನು ಬಲಿಷ್ಟಗೊಳಿಸಲು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕನ್ನಡ ಪಕ್ಷದಿಂದ ಅಭ್ಯರ್ಥಿಯನ್ನಾಗಿಸಲು ಚಿಂತಿಸಲಾಗಿದೆ. ನಾಡು ನುಡಿಯ ಚಿಂತನೆ ಇರುವವರು, ರೈತಪರ ಸಂಘಟನೆಗಳು, ಕನ್ನಡ ಪಕ್ಷದ ಬಗ್ಗೆ ಕಾಳಜಿ ಹೊಂದಿರುವವರು ಹಾಗೂ ಹಿಂದೆ ಕನ್ನಡ ಪಕ್ಷವನ್ನು ತೊರೆದು ಬೇರೆ ಪಕ್ಷಕ್ಕೆ ಹೋಗಿರುವವರು ಪ್ರಾಮಾಣಿಕವಾಗಿ ಸಹ ಮತ್ತೆ ಪಕ್ಷಕ್ಕೆ ಬರುವುದಾದರೆ ಸ್ವಾಗತಿಸುತ್ತೇವೆ. ಮುಂದಿನ 4 ವರ್ಷಗಳಲ್ಲಿ ಪಕ್ಷವನ್ನು ಬಲಗೊಳಿಸಲು ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ ಎಂದರು.
ಇದೇ ವೇಳೆ ದೊಡ್ಡಬಳ್ಳಾಪುರದ ಕನ್ನಡ ಪಕ್ಷದ ಹಿರಿಯ ಮುಖಂಡ ಸಂಜೀವ್ ನಾಯಕ್ ಅವರನ್ನು ಕನ್ನಡ ಪಕ್ಷದ ಕೇಂದ್ರ ಸಮಿತಿಯ ಉಪಾಧ್ಯಕ್ಷರನ್ನಾಗಿ, ಡಿ.ಪಿ.ಆಂಜನೇಯ ಅವರನ್ನು ಪ್ರಧಾನ ಕಾರ್ಯ ದರ್ಶಿಯನ್ನಾಗಿ ಹಾಗೂ ಮುನಿಪಾಪಯ್ಯ ಅವರನ್ನು ಬೆಂಗಳೂರು ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಕನ್ನಡ ಪಕ್ಷದ ರಾಜ್ಯಾಧ್ಯಕ್ಷ ಪುರುಷೋತ್ತಮ್ ಆದೇಶ ಪತ್ರಗಳನ್ನು ನೀಡಿದರು.
ಕಾರ್ಯಕ್ರಮದಲ್ಲಿ ಕನ್ನಡ ಪಕ್ಷದ ರಾಜ್ಯ ಕಾರ‍್ಯ ದರ್ಶಿಗಳಾದ ಡಾ.ಹಿರೇಮಠ, ವಿಜಯ ಸೂರ್ಯ, ದೇವಕುಮಾರ್, ಮುಖಂಡರಾದ ಸುಲೋಚನಾ ವೆಂಕಟರೆಡ್ಡಿ, ಡಿ.ಪಿ.ಆಂಜನೇಯ,ಮುನಿಪಾಪಯ್ಯö, ತಾಲೂಕು ಅಧ್ಯಕ್ಷ ವೆಂಕಟೇಶ್, ಡಾ.ಶ್ರೀನಿವಾಸನ್ ಗುರೂಜಿ, ಜಯಮ್ಮ ಮುನಿರಾಜು, ಜಿಲ್ಲಾ ಕಾರ‍್ಯದರ್ಶಿ ಶಿವಕುಮಾರ್, ತಾಲೂಕು ಉಪಾಧ್ಯಕ್ಷ ಗುರು ಮೂರ್ತಿ, ಪ್ರಧಾನ ಕಾರ್ಯದರ್ಶಿ ಬೋರೇಗೌಡ, ಮೊದಲಾದವರು ಹಾಜರಿದ್ದರು.