ತೂಬಗೆರೆಯಲ್ಲಿ ಸಂಭ್ರಮದ ಭೂತನೆರಿಗೆ ಆಚರಣೆ

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ತಾಲ್ಲೂಕಿನ,ತೂಬಗೆರೆ ಗ್ರಾಮದಲ್ಲಿ 600 ವರ್ಷಗಳಿಂದ ಆಚರಿಸಿಕೊಂಡು ಬಂದಿರುವ ಪಾರಂಪರಿಕ ಜನಪದ ಆಚರಣೆ ಭೂತ ನೆರಿಗೆ ಪ್ರತಿವರ್ಷದಂತೆ ಈ ವರ್ಷವೂ ಸಹ ಆಷಾಢ ಮಾಸದ ಏಕಾದಶಿಯಾದ ಮಾರನೇ ದಿನವಾದ ದ್ವಾದಶಿಯಂದು ಭೂತ ನೆರಿಗೆ ಹಬ್ಬವನ್ನು ಆಚರಣೆ ಮಾಡಲಾಯಿತು.ಇದನ್ನು ವೀಕ್ಷಿಸಲು ಭಕ್ತಾದಿಗಳು ತಾಲೂಕಿನ ಮೂಲೆ ಮೂಲೆಗಳಿಂದ ಆಗಮಿಸಿದರು. ತೂಬಗೆರೆಯಲ್ಲಿ ಪಾರಂಪರಿಕವಾಗಿ ನಡೆದುಕೊಂಡು ಬಂದಿರುವ ಭೂತ ನೆರೆಗೆ ಹಬ್ಬ 18.7.2024 ಗುರುವಾರ ಸಂಜೆ 5.30 ಗಂಟೆಗೆ ಸಂಭ್ರಮದಿಂದ ನೆರೆವೇರಿತು.

ಹುಟ್ಟಲು ಗೋಪುರದ ಬಳಿಯಿಂದ ತಮಟೆ ವಾದ್ಯಗಳೊಂದಿಗೆ ಆರಂಭವಾದ ಭೂತಗಳ ಆರ್ಭಟ ಊರಿನ ವಿವಿಧಡೆ ಸಂಚರಿಸಿ. ಶ್ರೀ ಲಕ್ಷಿವೆಂಕಟರಮಣಸ್ವಾಮಿ ದೇವಾಲಯದಲ್ಲಿ ಮುಕ್ತಾಯವಾಗುತ್ತದೆ.
ಕೆಂಚಣ್ಣ ವೇಷಾಧಾರಿಯಾಗಿ ತೇರಿನಬೀದಿಯ ಕೃಷ್ಣಪ್ಪ {ಮುಸಲಿ} ಧರಿಸಿದರೆ ಕರಿಯಣ್ಣ ವೇಷಾಧಾರಣೆಯನ್ನು ಶೇಖರ್ ಧರಿಸಿದ್ದರು ಕೆಂಚಣ್ಣ ಕರಿಯಣ್ಣ ಭೂತ ವೇಷಾಧಾರಿಗಳು ನರಸಿಂಹಸ್ವಾಮಿ ದೇವಾಲಯದಿಂದ ಆರಂಭಗೊಂಡು ಭಕ್ತಾದಿಗಳಿಂದ ಪೂಜೆ ಸ್ವೀಕರಿಸಿ, ಧೂಪ ಹಾಕಿಸಿಕೊಂಡು ಮಂತ್ರ ಪಠಣೆಯಿಂದ ಕೆರಳಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದರು ಇದನ್ನು ವಿಕ್ಷೀಸಲು ಹೋಬಳಿ ಮತ್ತು ತಾಲ್ಲೂಕಿನ ಹಾಗೂ ಜಿಲ್ಲೆಯ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಸುಮಾರು ಹದಿನೈದು ಸಾವಿರ ಜನತೆ ಭೂತಗಳ ಆರ್ಭಟವನ್ನು ನೋಡಿ ಭಗವಂತನ ಕೃಪೆಗೆ ಪಾತ್ರರಾದರು,

ಪ್ರತಿ ವರ್ಷ ಆಷಾಡ ಮಾಸದ ಏಕಾದಶಿಯಾದಾ ಮಾರನೇ ದಿನ ದ್ವಾದಶಿ ಯಂದು ಪುರಾತನ ಕಾಲದಿಂದಲೂ ತೂಬಗೆರೆ ಗ್ರಾಮದಲ್ಲಿ ಈ ಭೂತನೆರಿಗೆ ಹಬ್ಬವನ್ನು ಆಚರಿಸಿ ಕೊಂಡು ಬಂದಿದ್ದಾರೆ ಅಲ್ಲದೆ ವಿಷ್ಣುವಿನ ದ್ವಾರಪಾಲಕರಾದ ಜಯ ವಿಜಯರು ಕಲಿಯುಗದಲ್ಲಿ ಕರಿಯಣ್ಣ ಕೆಂಚಣ್ಣರಾಗಿ ಪರಿವರ್ತನೆಗೊಂಡಿದ್ದು ಈ ಹಬ್ಬವನ್ನು ಸುಮಾರು 600 ವರ್ಷಗಳಿಂದ ಆಚರಣೆ ಮಾಡಿಕೊಂಡು ಬಂದಿರುವುದಾಗಿ ಗ್ರಾಮಸ್ಥರು ತಿಳಿಸುತ್ತಾರೆ ಗ್ರಾಮದಲ್ಲಿ ಈ ಭೂತ ವೇಷಾಧಾರಣೆ ಮಾಡಿಕೊಂಡು ಸಂಚರಿಸುವುದರಿಂದ ಗ್ರಾಮದಲ್ಲಿ ಯಾವುದೇ ಭೂತ ಪ್ರೇತ ಪಿಶಾಚಿಗಳು ಸುಳಿಯುವುದಿಲ್ಲ ಎಂದು ನಂಬಿದ್ದಾರೆ ಕೆಲ ಭಕ್ತರು ಬಾಳೆ ಹಣ್ಣು ಮತ್ತು ತೂಬಗೆರೆ ಗ್ರಾಮದ ವಿಶೇಷ ರೀತಿಯ ಹಲಸಿನ ಹಣ್ಣಿನ ರಸಾಯನವನ್ನು ತಯಾರಿಸಿ ಭೂತ ವೇಷಾಧರಿಗಳು ಜನತೆಯ ಮೇಲೆ ಎರಗಲು ಬಂದಾಗ ರಸಾಯನವನ್ನು ನೀಡುತ್ತಾರೆ ಅಲ್ಲದೆ ಕೆಲ ಭಕ್ತರು ಕೋಳಿಗಳನ್ನು ನೀಡುತ್ತಾರೆ ಭೂತಗಳನ್ನು ಶಾಂತಗೊಳಿಸಲು ಬಕೀಟುಗಟ್ಟಲೆ ರಸಾಯವನ್ನು ತಿನ್ನಿಸಲಾಗುತ್ತದೆ.ಕೊನೆಯಲ್ಲಿ ಭೂತ ವೇಷಧಾರಿಗಳು ಕೋಳಿಗಳ ರಕ್ತ ಹೀರುವುದೂ ಉಂಟು. ಭೂತಗಳು ಮನೆಯನ್ನು ಹೊಕ್ಕರೆ ಯಾವುದೇ ಗ್ರಹಕಾಟವಿರುವುದಿಲ್ಲ ಎಂಬುದು ಜನರ ನಂಬಿಗೆಯಾಗಿದೆ.

ವೇಷಧಾರಿಗಳ ನರ್ತನ: ಗ್ರಾಮದ ಹೊರವಲಯದ ನರಸಿಂಹ ಸ್ವಾಮಿ ದೇವಾಲಯದ ಬಳಿ ಕೋಪಗೊಳ್ಳುವ ಕೆಂಚಣ್ಣ ಕರಿಯಣ್ಣ ಕೈಯಲ್ಲಿ ಭೂತದ ಗುರಾಣಿ ಹಿಡಿದು. ನರ್ತನ ಮಾಡುತ್ತ ಕೈಯಲ್ಲಿನ ಭೆತ್ತವನ್ನು ಬೀಸುತ್ತ ಜನರ ಗುಂಪಿನತ್ತ ನುಗ್ಗಲು ಆರಂಭಿಸಿ, ಕೋಪಗೊಂಡಿರುವ ಭೂತಗಳನ್ನು ಸಮಾಧಾನ ಪಡಿಸಲು ಹಲಸಿನ ಹಣ್ಣಿನಿಂದ ತಯಾರಿಸಲಾದ ರಸಾಯನವನ್ನು ಭೂತಗಳಿಗೆ ತಿನ್ನಿಸಲಾಯಿತ್ತು. ನಂತರ ಶ್ರೀ ಲಕ್ಷಿವೆಂಕಟೇಶ್ವರ ದೇವಾಲಯದ ಬಳಿ ಭೂತ ನೆರಿಗೆ ಮುಕ್ತಾಯವಾಗುತ್ತದೆ.

ದೊಡ್ಡಬಳ್ಳಾಪುರ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಎನ್. ಅರವಿಂದ್ ಮಾತನಾಡಿ
ನಮ್ಮ ತಾತ ಮುತ್ತಾತ ಕಾಲದಿಂದ ಬಂದಿರುವ ಭೂತನೆರಿಗೆ ಹಬ್ಬ ಇಂದಿಗೂ ಆಚರಿಸಿ ಕೊಂಡು ಬಂದಿದ್ದೆವೆ ವಿಶೇಷ ಆಚರಣೆಯನ್ನು ವೀಕ್ಷೀಸಲು ತಾಲ್ಲೂಕು ಮತ್ತು ಜಿಲ್ಲೆಯ ನಾನ ಗ್ರಾಮ ಗಳಿಂದ ಜನತೆ ಆಗಮಿಸುತ್ತಾರೆ ಅಲ್ಲದೆ ಇಂತಹ ವಿಶೇಷ ಆಚರಣೆಯ ಹಬ್ಬ ಎಲ್ಲಿಯೂ ಆಚರಿಸುವುದಿಲ್ಲ ಆದರಿಂದ ಇದನ್ನು ವೀಕ್ಷಿಸಲು ಪ್ರತಿ ವರ್ಷ ಹೆಚ್ಚು ಹೆಚ್ಚಾಗಿ ಜನತೆ ಆಗಮಿಸುತ್ತಾರೆ ಎಂದು ಹೇಳಿದರು.