ಪ್ರಕೃತಿ ನಾಶದಿಂದ ಮಳೆ ಕ್ಷೀಣಜ್ಯೋತಿಕುಮಾರ್

ದೊಡ್ಡಬಳ್ಳಾಪುರ :ಮರ ಗಿಡಗಳನ್ನು ನಾಶಮಾಡಿರುವ ಕಾರಣ
ಹವಾಮಾನ ವೈಪರೀತ್ಯದಿಂದ ಮಳೆ ಕ್ಷೀಣಿಸುತ್ತಿರುವುದರಿಂದ ನೀರಿನ ಮಟ್ಟ ಕುಸಿಯುತ್ತಿದೆ. ಅಂತರ್ಜಲವನ್ನು ಉಳಿಸಲು ಪ್ರತಿಯೊಬ್ಬರಲ್ಲೂ ಅರಿವು ಮೂಡಿಸಬೇಕು ಎಂದು ಕೇಂದ್ರೀಯ ಅಂತರ್ಜಲ ಮಂಡಳಿಯ ಪ್ರಾದೇಶಿಕ ನಿರ್ದೇಶಕ ಜ್ಯೋತಿಕುಮಾರ್ ಹೇಳಿದರು.

ನಗರದ ತಾಲೂಕು ಪಂಚಾಯಿತಿಯಲ್ಲಿ ಕೇಂದ್ರೀಯ ಅಂತರ್ಜಲ ಮಂಡಳಿ ವತಿಯಿಂದ ಗುರುವಾರ ನಡೆದ ಜಲಧಾರೆ ನಕಾಶಿಕೆಮತ್ತು ಅಂತರ್ಜಲ ಸಂರಕ್ಷಣೆ ಕುರಿತ ಕಾರ್ಯಗಾರದಲ್ಲಿ ಅವರು ಮಾತನಾಡಿ,ಸಕಾಲಕ್ಕೆ ಮಳೆಯಾಗದೇ ಇರುವುದರಿಂದ ಅಂತರ್ಜಲದ ಮಟ್ಟ ನಿರಂತರವಾಗಿ ಕ್ಷೀಣಿಸುತ್ತಿದೆ. ಇದರಿಂದ ಕುಡಿಯುವ ನೀರಿಗೆ ಕೊರತೆಯಾಗುತ್ತಿದೆ. ಅಂತರ್ಜಲ ಅಭಿವೃದ್ಧಿ ಕುರಿತು ಪ್ರತಿಯೊಬ್ಬರಲ್ಲೂ ಅರಿವು ಮೂಡಿಸುವ ಹೊಣೆ ನಮ್ಮದಾಗಬೇಕು ಎಂದರು.ಅಂತರ್ಜಲ ಮರುಪೂರಣದಿಂದ ನೀರಿನ ಮಟ್ಟ, ಅದರ ಗುಣಮಟ್ಟ ಕಾಪಾಡಿ ಕೊಳ್ಳಬಹುದಾಗಿದೆ. ಅಂತರ್ಜಲ ಪೂರಣಕ್ಕಿಂತ ಅದರ ಬಳಕೆ ಹೆಚ್ಚಾಗಿ ಅಸಮತೋಲನ ಸ್ಥಿತಿ ಉಂಟಾಗಿದೆ. ಇದನ್ನು ಸರಿಪಡಿಸಬೇಕಾದರೆ ಅಂತರ್ಜಲ ಕೃತಕ ಮರುಪೂರಣ ರಚನೆಗಳನ್ನು ನಿರ್ಮಿಸುವುದು ಅವಶ್ಯಕ ಎಂದು ತಿಳಿಸಿದರು.

ವಿಜ್ಞಾನಿ ಜಯಪ್ರಕಾಶ್ ಮಾತನಾಡಿ, ನೈಸರ್ಗಿಕವಾಗಿ ದೊರೆಯುವ ಅಂತರ್ಜಲ ಅಮೂಲ್ಯವಾದ ಸಂಪತ್ತು. ಈ ಕುರಿತು ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸಬೇಕು ಎಂದು ಅವರು ಹೇಳಿದರು. ರೈತರು ತಮ್ಮ ಕೃಷಿ ಭೂಮಿಯನ್ನು ಸಮತಟ್ಟಾಗಿಸುವುದರಿಂದ ನೀರನ್ನು ಇಂಗಿಸಬಹುದು. ಇಳಿಜಾರು ಪ್ರದೇಶವಿದ್ದರೆ ಮೆಟ್ಟಿಲು ಮೆಟ್ಟಿಲುಗಳಾಗಿ ಪರಿವರ್ತಿಸಬೇಕು ಎಂದು ತಿಳಿಸಿದರು ಹರಿಯುವ ನೀರಿಗೆ ಅಡ್ಡಗಟ್ಟೆ ನಿರ್ಮಾಣ ಮಾಡುವ ಜತೆಗೆ ಬದುಗಳ ಮೇಲೆ ಹುಲ್ಲು ಅಥವಾ ಗಿಡಗಳನ್ನು ಬೆಳೆಸುವುದು, ತಗ್ಗು ಪ್ರದೇಶಗಳಿಗೆ ನೀರು ಬಂದು ನಿಲ್ಲುವಂತೆ ಕಾಲುವೆನಿರ್ಮಾಣ ಮಾಡುವುದರಿಂದ ಅಂತರ್ಜಲ ಮರುಪೂರೈಕೆ ಮಾಡಿಕೊಳ್ಳಬಹುದು ಎಂದರು.

ತಾ.ಪಂ ಇಒ ಎನ್ ಮುನಿರಾಜು ಮಾತನಾಡಿ,ನೀರಿಲ್ಲದೆ ಯಾವುದೇ ಜೀವಿಯೂ ಬದುಕಲು ಸಾಧ್ಯವಿಲ್ಲ. ನಮ್ಮ ಸುತ್ತಮುತ್ತಲಿನ ಅರಣ್ಯ, ಪರಿಸರ ಹಾಗೂ ಭೂಮಿಯಲ್ಲಿನ ಖನಿಜ ಸಂಪತ್ತು ನಾಶದಿಂದಾಗಿ ವರ್ಷದಿಂದ ವರ್ಷಕ್ಕೆ ಮಳೆ ಪ್ರಮಾಣ ಕಡಿಮೆಯಾಗುತ್ತಿದೆ ಎಂದು ತಿಳಿಸಿದರು.

ಕಳೆದೆರಡು ದಶಕಗಳಲ್ಲಿ ಕೊಳವೆಬಾವಿಗಳನ್ನು ಕೊರೆಸುವುದು ಹೆಚ್ಚಾಗಿರುವ ಪರಿಣಾಮ ಅಂತರ್ಜಲದ ಬಳಕೆಯು ಅತ್ಯಧಿಕ ಹಂತವನ್ನು ತಲುಪಿ, ಅದರ ಮಟ್ಟ ಕುಸಿಯುತ್ತಿದೆ. ಮುಂದಿನ ಪೀಳಿಗೆಯ ಉಳಿವಿಗಾಗಿ ಅಂತರ್ಜಲ ಸಂರಕ್ಷಣೆ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದರು. ಭವಿಷ್ಯದಲ್ಲಿ ನೀರಿಗಾಗಿ ಪರದಾಟ ನಡೆಸುವ ಪರಿಸ್ಥಿತಿ ನಿರ್ಮಾಣ ಆಗಲು ಹೆಚ್ಚು ಸಮಯ ಬೇಕಾಗಿಲ್ಲ. ಮಳೆಯ ಪ್ರಮಾಣ ಗಣನೀಯವಾಗಿ ಕುಂಠಿತಗೊಂಡಿರುವುದರಿಂದ ಅಂತರ್ಜಲದ ಬಗ್ಗೆ ಮಾಹಿತಿ ಅಗತ್ಯವಾಗಿದೆ. ಹಿಂದೆ ಹಳ್ಳಗಳು ಒಣಗುತ್ತಿದ್ದವು, ನಂತರ ಬಾವಿಗಳೇ ಬರಿದಾಗುತ್ತಿವೆ, ಮುಂದೆ ಕೊಳವೆ ಬಾವಿಗಳಿಗೂ ಅಪಾಯ ತಪ್ಪಿದ್ದಲ್ಲ ಎಂದು ಎಚ್ಚರಿಸಿದರು.

ಈ ವೇಳೆ ಕಾರ್ಯಕ್ರಮದಲ್ಲಿ ಅಂತರ್ಜಲ ಇಲಾಖೆಯ ಉಪನಿರ್ದೇಶಕಿ ಜಾನಕಿ.ಪಿ, ಅಟಲ್ ಭೂಜಲ್ ನೋಡಲ್ ಅಧಿಕಾರಿ ಪಲ್ಲವಿ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.