ಗಾಳಿಪಟ ಹಾರಿಸುವ ಕಲೆಗೆ ಆಸಕ್ತಿ ಕ್ಷೀಣಿಸುತ್ತಿದೆಶಾಸಕ ದೀರಜ್ ಮುನಿರಾಜು

ದೊಡ್ಡಬಳ್ಳಾಪುರ :ಗಾಳಿಪಟ ಕಲಾ ಸಂಘದ ವತಿಯಿಂದ ನಗರದ ಭಗತ್‌ಸಿಂಗ್ ಕ್ರೀಡಾಂಗಣದಲ್ಲಿ ನಡೆದ ರಾಜ್ಯ ಮಟ್ಟದ ಗಾಳಿಪಟ ಹಾರಿಸುವ ಸ್ಪರ್ಧೆಯಲ್ಲಿ ವಿವಿಧ ಸಂದೇಶಗಳನ್ನು ಹೊತ್ತ ನೂರಾರು ಗಾಳಿಪಟಗಳು ಬಾನಂಗಳದಲ್ಲಿ ಹಾರಾಡಿದವು

ಗ್ರಾಮೀಣ ಬಾಗದ ಗಾಳಿಪಟ ಕಲೆಗೆ ಉತ್ತೇಜನ ಅಗತ್ಯವಿದೆ. ಗಾಳಿಪಟ ಹಾರಿಸುವ ಮೂಲಕ ಸ್ಪರ್ಧೆಗೆ ಚಾಲನೆ ನೀಡಿದ ಶಾಸಕ ದೀರಜ್ ಮುನಿರಾಜು ಮಾತನಾಡಿ, ಗಾಳಿಪಟ ಹಾರಿಸುವ ಜಾನಪದ ಕಲೆ ಇತ್ತೀಚೆಗೆ ಕಡಿಮೆಯಾಗುತ್ತಿದ್ದು, ಇಂದಿನ ಪೀಳಿಗೆ ಆಸಕ್ತಿ ವಹಿಸಬೇಕಿದೆ. ಪ್ರವಾಸೋದ್ಯಮ, ಜಾನಪದ ಪರಿಷತ್ತು ಮೊದಲಾದ ಇಲಾಖೆಗಳು ಗಾಳಿಪಟ ಕಲೆಗೆ ಉತ್ತೇಜನ ನೀಡಲು ಯೋಜನೆಗಳನ್ನು ರೂಪಿಸಬೇಕಿದ್ದು, ದೊಡ್ಡಬಳ್ಳಾಪುರ ಇದಕ್ಕೆ ಕೇಂದ್ರವಾಗಬೇಕಿದೆ. ಇತ್ತೀಚೆಗೆ ಬೆಳಗಾವಿ, ಕಾರವಾರಗಳಲ್ಲಿ ಗಾಳಿಪಟ ಉತ್ಸವಗಳು ನಡೆಯುತ್ತಿದ್ದು, ದೊಡ್ಡಬಳ್ಳಾಪುರದ ಕಲಾವಿದರು ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಗಾಳಿಪಟ ಸ್ಪರ್ಧೆ ಹಾಗೂ ಬ್ಯಾಂಕಾಂಕ್‌ನ ಅಂತರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಗಳಿಸಿರುವುದು ಅಭಿನಂದನೀಯ ಎಂದರು.

ನಗರಸಭಾ ಸದಸ್ಯ ಟಿ.ಎನ್.ಪ್ರಭುದೇವ್ ಮಾತನಾಡಿ, ಗಾಳಿಪಟ ಕಲೆಯಲ್ಲಿ ದೊಡ್ಡಬಳ್ಳಾಪುರ ತನ್ನದೇ ಆದ ಅಸ್ತಿತ್ವ ಹೊಂದಿದ್ದು, ರಾಜ್ಯ ಹಾಗೂ ರಾಷ್ಟ್ರಮಟ್ಟದ ಗಾಳಿಪಟ ತಜ್ಞರು ನಮ್ಮ ಊರಿನಲ್ಲಿರುವುದು ಹೆಮ್ಮೆಯ ವಿಚಾರ. ಹಿರಿಯ ಜಾನಪದ ವಿದ್ವಾಂಸ ಎಚ್.ಎಲ್.ನಾಗೇಗೌಡ ಅವರು ದೊಡ್ಡಬಳ್ಳಾಪುರದ ಗಾಳಿಪಟ ಕಲಾವಿದರನ್ನು ಜಾನಪದ ಲೋಕದಲ್ಲಿ ನಡೆಯುತ್ತಿದ್ದ ಗಾಳಿಪಟ ತಯಾರಿಕಾ ಶಿಬಿರಕ್ಕೆ ಕರೆಸಿಕೊಂಡು, ತರಬೇತಿ ನೀಡಿಸಿದ್ದಾರೆ. ಇಂದಿನ ಪೀಳಿಗೆ ಗಾಳಿಪಟ ಕಲೆಯನ್ನು ಉಳಿಸಿ ಬೆಳೆಸಬೇಕಿದೆ ಎಂದರು.
ಗಾಳಿಪಟ ಕಲಾಸಂಘದ ಅಧ್ಯಕ್ಷ ಎಲ್.ಎನ್.ಶ್ರೀನಾಥ್ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಎಸ್.ರವಿಕುಮಾರ್, ನಗರಸಭಾ ಸದಸ್ಯರಾದ ಎಸ್.ಪದ್ಮನಾಭ, ಬಂತಿ ವೆಂಕಟೇಶ,ಆರ್.ಲಕ್ಷ್ಮೀಪತಿ, ಶಿವರಾಜ, ಮಾಜಿ ಅಧ್ಯಕ್ಷ ಕೆ.ಬಿ.ಮುದ್ದಪ್ಪ, ಮುಖಂಡರಾದ ಗೋಪಿ, ಮಂಜುನಾಥ ಮೊದಲಾದವರು ಭಾಗವಹಿಸಿದ್ದರು.