ಕೆಸ್ತೂರು ಗ್ರಾಮಪಂಚಾಯ್ತಿ ಅಧ್ಯಕ್ಷರ ಸರ್ವಾಧಿಕಾರಿ ದೋರಣೆ, ವಚನ ಭ್ರಷ್ಟತೆ ವಿರುದ್ಧ ಸಿಡಿದೆದ್ದ ಗ್ರಾಮ ಪಂಚಾಯ್ತಿ ಸದಸ್ಯರು

ದೊಡ್ಡಬಳ್ಳಾಪುರ : 17 ಸದಸ್ಯರ ಬಲ ಹೊಂದಿರುವ ಕೆಸ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಧ್ಯಕ್ಷರನ್ನು ಕುರಿತು ಪಂಚಾಯಿತಿ ಸದಸ್ಯರಲ್ಲಿ ಅಸಮಾಧಾನ ಉಂಟಾಗಿದ್ದು,ಅಧ್ಯಕ್ಷರು ಈ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಪಂಚಾಯಿತಿ ಮುಂಭಾಗ ಪ್ರತಿಭಟನೆ ನಡೆಸಿದರು.

ಕೆಸ್ತೂರು ಗ್ರಾಮ ಪಂಚಾಯಿತಿ ಅಧ್ಯಕ್ಷರು ಎಲ್ಲಾ ಸದಸ್ಯರ ಬೆಂಬಲದೊಂದಿಗೆ 6 ತಿಂಗಳ ಅವಧಿಗೆ ಮಾತ್ರ ಅಧ್ಯಕ್ಷರಾಗಿ ಇರುವುದಾಗಿ ಹೇಳಿ ಅವರ ಅವಧಿ ಮುಗಿದು 7 ತಿಂಗಳು ಕಳೆದರೂ ರಾಜೀನಾಮೆ ಕೊಡದೆ ಸ್ವಾರ್ಥ ರಾಜಕಾರಣ ಮಾಡುತ್ತಿದ್ದಾರೆ, ಕಳೆದ ನಾಲ್ಕು ತಿಂಗಳುಗಳಿಂದ ಸಾಮಾನ್ಯ ಸಭೆಯಾಗಲಿ, ಗ್ರಾಮಸಭೆಯಾಗಲಿ ಅಥವಾ ವಾರ್ಡ್ ಸಭೆಗಳಾಗಲಿ ನಡೆದಿಲ್ಲ, ರಸ್ತೆ,ನೀರು ಮತ್ತು ಸ್ವಚ್ಛತೆಯ ಬಗ್ಗೆ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳದೆ ಏಕಪಕ್ಷಿಯವಾಗಿ ನಿರ್ಧಾರ ಕೈಗೊಳ್ಳುವ ಅವರ ಗುಣ ಸರ್ವಾಧಿಕಾರಿ ಧೋರಣೆಯನ್ನು ತೊರುತ್ತದೆ.ಸ್ಥಳೀಯ ಸಮಸ್ಯೆಗಳನ್ನ ಬಗೆಹರಿಸಲಾಗದೆ ಗ್ರಾಮಸ್ಥರಿಂದ ಪ್ರತಿನಿತ್ಯ ನಿಂದನೆಗೆ ಒಳಗಾಗುವ ಪರಿಸ್ಥಿತಿ ಎದುರಾಗಿದೆ ಎಂದು ಗ್ರಾಮ ಪಂಚಾಯತಿ ಸದಸ್ಯರು ಅಧ್ಯಕ್ಷರ ವಿರುದ್ಧ ಧಿಕ್ಕಾರ ಕೂಗಿ ತಮ್ಮ ಅಕ್ರೋಶವನ್ನು ವ್ಯಕ್ತಪಡಿಸಿದರು.

ಗ್ರಾಮ ಪಂಚಾಯತಿ ಸದಸ್ಯರಾದ ಬಿ.ಮಂಜುನಾಥ್ ಮಾತನಾಡಿ ಅಧ್ಯಕ್ಷರಾದ ರಮೇಶ್ ರವರು ತಮ್ಮ ಸ್ವಾರ್ಥಕ್ಕಾಗಿ ಅಧ್ಯಕ್ಷ ಸ್ಥಾನವನ್ನ ಬಳಸಿಕೊಂಡಿದ್ದಾರೆ, ಸ್ಥಳೀಯರ ಸಮಸ್ಯೆಗಳನ್ನ ಆಲಿಸುವ ವ್ಯವಧಾನ ಸಹ ಇಲ್ಲ.ಪೂರ್ಣಾವಧಿಗೆ ನಾನೇ ಅಧ್ಯಕ್ಷನಾಗಿರಬೇಕು, ನಂದೇ ಮಾತು ನಡೆಯಬೇಕೆಂಬ ಧೋರಣೆಯನ್ನು ಹೊಂದಿದ್ದಾರೆ, ಯಾವೊಬ್ಬ ಸದಸ್ಯರಿಗೂ ಅವರ ಮೇಲೆ ವಿಶ್ವಾಸವಿಲ್ಲದೆ ಇರುವುದರಿಂದ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕೆಂದು ಆಗ್ರಹಿಸಿದರು.

ಸದಸ್ಯರಾದ ರಾಜಣ್ಣ ಮಾತನಾಡಿ, ಸರ್ವ ಸದಸ್ಯರು ಒಮ್ಮತದಿಂದ ಸ್ಥಳೀಯ ರಮೇಶ್ ರವರನ್ನು ಗ್ರಾಮ ಪಂಚಾಯತಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದೆವು , ಆದರೆ ಇಂದು ಯಾವ ಸದಸ್ಯರಿಗೂ ಅವರು ಗೌರವ ನೀಡುತ್ತಿಲ್ಲ , ಅವರ 12 ತಿಂಗಳ ಅವಧಿಯಲ್ಲಿ ಕೇವಲ 3 ಸಾಮಾನ್ಯ ಸಭೆಗಳನ್ನು ಮಾಡಲಾಗಿದೆ, ಇದರಿಂದ ನೀರು,ರಸ್ತೆ, ಸ್ವಚ್ಛತೆ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಾಗಿಲ್ಲ, ಅಧ್ಯಕ್ಷರ ದೆಸೆಯಿಂದ ಸದಸ್ಯರಾದ ನಾವು ಗ್ರಾಮಸ್ಥರಿಂದ ಬೈಸಿಕೊಳ್ಳುವಂತಾಗಿದೆ ಎಂದರು.

ಗ್ರಾಮ ಪಂಚಾಯತಿ ಸದಸ್ಯರಾದ ಅಶ್ವಥನಾರಾಯಣ್ ಮಾತನಾಡಿ, ಹಾಲಿ ಅಧ್ಯಕ್ಷರಾಗಿ ರಮೇಶ್ ರವರು ಉಪಾಧ್ಯಕ್ಷ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದರು, ಒಂದು ಅವಕಾಶವನ್ನ ಮಾಡಿಕೊಡಲು ಸದಸ್ಯರೆಲ್ಲರು ಒಮ್ಮತದಿಂದ ರಮೇಶ್ ರವನ್ನ ಅಧ್ಯಕ್ಷರನ್ನಾಗಿ ಮಾಡಿದೆವು, 6 ತಿಂಗಳ ಅವಧಿಗೆ ಮಾತ್ರ ಅಧ್ಯಕ್ಷರನ್ನಾಗಿ ಮಾಡಿದ್ದು, ಅವಧಿ ಮುಗಿದು 7 ತಿಂಗಳಾದ್ರು ರಾಜೀನಾಮೆ ಕೊಟ್ಟಿಲ್ಲ, ರಾಜೀನಾಮೆ ಕೇಳಿದ್ರೆ ನಮ್ಮನ್ನು ಮಾತನಾಡಿಸುವದನ್ನೇ ಬಿಟ್ಟುಬಿಡುತ್ತಾರೆ, ಅವರೇ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟರೆ ಬೆಲೆ ಇರುತ್ತದೆ, ಇಲ್ಲದಿದ್ದರೆ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ತೆಗೆದು ಕೊಳ್ಳುತ್ತೇವೆ ಎಂದರು.

ಸದಸ್ಯರಾದ ಕೃಷ್ಣಪ್ಪ ಮಾತನಾಡಿ, ಕೆಸ್ತೂರು ಗ್ರಾಮ ಪಂಚಾಯಿತಿ 17 ಸದಸ್ಯರು ಒಂದೇ ಕುಟುಂಬದ ಸದಸ್ಯರಂತೆ ಪಕ್ಷಾತೀತವಾಗಿ ಇದ್ದೇವೆ, ಎಲ್ಲರ ಒಮ್ಮತದಿಂದ ರಮೇಶ್ ರನ್ನ ಅಧ್ಯಕ್ಷರನ್ನಾಗಿ ಮಾಡಿದೆವು, ಗ್ರಾಮದಲ್ಲಿ ಅಭಿವೃದ್ಧಿ ಕೆಲಸಗಳನ್ನ ಮಾಡುತ್ತಿದ್ದರೆ ಅಧ್ಯಕ್ಷರ ವಿರುದ್ಧ ನಾವು ಮಾತನಾಡುತ್ತಿರಲಿಲ್ಲ, ಸ್ವಾರ್ಥ ಮನೋಭಾವದ ವ್ಯಕ್ತಿ ಅವರು, ಅಧ್ಯಕ್ಷ ಸ್ಥಾನಕ್ಕೆ ಅವರು ಸೂಕ್ತರಲ್ಲ, ಇ ಖಾತೆ ಮಾಡಿಕೊಡುವ ವಿಚಾರಕ್ಕೆ ಸಂಬಂಧಿಸಿದಂತೆ 1 ಲಕ್ಷ ಹಣವನ್ನ ಕಳೆದ 8 ತಿಂಗಳಿಂದ ಪಂಚಾಯ್ತಿ ಖಾತೆಗೆ ವರ್ಗಾಹಿಸದೆ ಅವರೇ ಇಟ್ಟು ಭ್ರಷ್ಟಚಾರ ನಡೆಸಿದ್ದಾರೆಂದು ಆರೋಪಿಸಿದರು.

ಇದೇ ವೇಳೆ ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ಆಂಜಿನಮ್ಮ, ಕೆ.ಎಂ.ಮುರಳಿ, ವಿಜಯಕುಮಾರ್, ಮುನಿರಾಜು, ಗಾಯಿತ್ರಿ, ಮಧುಮಾಲತಿ, ರಾಜಮ್ಮ, ರಾಜಮ್ಮ , ಶೃತಿ, ಲಕ್ಷಮ್ಮ, ಪಂಕಜ ಹಾಜರಿದ್ದರು