ಕೆಸ್ತೂರು ಗ್ರಾಮ ಪಂಚಾಯ್ತಿ ಸದಸ್ಯರು ಮಾಡಿರುವ ಆರೋಪ ನಿರಾದಾರ–ಅಧ್ಯಕ್ಷ ರಮೇಶ್
ದೊಡ್ಡಬಳ್ಳಾಪುರ : ಕೆಸ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೆಲ ಸದಸ್ಯರು ಬೇಕಂತಲೇ ನನ್ನ (ಅಧ್ಯಕ್ಷರ) ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ , ಅವರು ಮಾಡುತ್ತಿರುವ ಆರೋಪಗಳಲ್ಲಿ ಸತ್ಯಾಂಶವಿಲ್ಲ ಎಂದು ಕೆಸ್ತೂರು ಗ್ರಾಮ ಪಂಚಾಯತಿ ಅಧ್ಯಕ್ಷ ರಮೇಶ್ ತಿಳಿಸಿದರು.
ತಮ್ಮ ಮೇಲೆ ಸದಸ್ಯರು ಮಾಡುತ್ತಿರುವ ಆರೋಪಗಳನ್ನು ಕುರಿತು ಪಂಚಾಯಿತಿ ಸಭಾಂಗಣದಲ್ಲಿ ಆಯೋಜನೆ ಮಾಡಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದರು,ಕೆಸ್ತೂರು ಗ್ರಾಮ ಪಂಚಾಯಿತಿ ಅಧ್ಯಕ್ಷರು ರಾಜೀನಾಮೆ ಕೊಡದೆ ಸ್ವಾರ್ಥ ರಾಜಕಾರಣ ಮಾಡುತ್ತಿದ್ದಾರೆ ಎಂದು ಕೆಲ ಸದಸ್ಯರು ಆರೋಪಿಸಿದ್ದಾರೆ, ಆದರೆ ಅಧ್ಯಕ್ಷರ ಹುದ್ದೆಗೆ ರಾಜೀನಾಮೆ ನೀಡುವುದು ನನ್ನ ವೈಯಕ್ತಿಕ ವಿಚಾರ, ಪಂಚಾಯಿತಿಯಲ್ಲಿ ಭ್ರಷ್ಟಾಚಾರ ನಡೆದಿದ್ದರೆ ತನಿಖೆಗೆ ಒಳಪಡಿಸಲಿ ನಾನು ಸಿದ್ಧರಿದ್ದೇನೆ ಎಂದರು.
ಕಳೆದ ನಾಲ್ಕು ತಿಂಗಳುಗಳಿಂದ ಸಾಮಾನ್ಯ ಸಭೆಯಾಗಲಿ, ಗ್ರಾಮಸಭೆಯಾಗಲಿ ಅಥವಾ ವಾರ್ಡ್ ಸಭೆಗಳಾಗಲಿ ನಡೆದಿಲ್ಲ,ರಸ್ತೆ,ನೀರು ಮತ್ತು ಸ್ವಚ್ಛತೆಯ ಬಗ್ಗೆ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳದೆ ಏಕಪಕ್ಷಿಯವಾಗಿ ನಿರ್ಧಾರಕೈಗೊಳ್ಳುತ್ತಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು ಕೆಸ್ತೂರು ಪಂಚಾಯತಿ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಸಮಸ್ಯೆಗಳಿಲ್ಲ ಸ್ಥಳೀಯ ಗ್ರಾಮಸ್ಥರಿಂದ ಯಾವುದೇ ರೀತಿ ದೂರು ದಾಖಲಾಗಿಲ್ಲ ಸದಸ್ಯರು ಬೇಕಂತಲೇ ಈ ರೀತಿಯ ಆರೋಪವನ್ನು ಮಾಡುತ್ತಿದ್ದಾರೆ ಅವರ ಹೇಳಿಕೆಯಲ್ಲಿ ಸತ್ಯವಿಲ್ಲ ಎಂದರು.
ಗ್ರಾಮ ಪಂಚಾಯತಿ ಸದಸ್ಯರು ನನ್ನ ಮೇಲೆ ಸಾಕಷ್ಟು ಆರೋಪವನ್ನು ಮಾಡಿದ್ದಾರೆ ಪಂಚಾಯಿತಿಯಲ್ಲಿ ಭ್ರಷ್ಟಾಚಾರ ಆಗಿದೆ ಎಂದು ಅವರು ಆರೋಪಿಸಿದ್ದಾರೆ ಈ ಕುರಿತು ಸೂಕ್ತ ತನಿಖೆಯಾಗಲಿ, ತನಿಖೆಗೆ ಸಂಪೂರ್ಣ ಸಹಕರಿಸುತ್ತೇನೆ ಎಂದರು.
ಇ ಖಾತೆ ಮಾಡಿಕೊಡುವ ವಿಚಾರಕ್ಕೆ ಸಂಬಂಧಿಸಿದಂತೆ 1 ಲಕ್ಷ ಹಣವನ್ನ ಕಳೆದ 8 ತಿಂಗಳಿಂದ ಅವರೇ ಇಟ್ಟು ಭ್ರಷ್ಟಚಾರ ನಡೆಸಿದ್ದಾರೆಂದು ಸದಸ್ಯರಾದ ಕೃಷ್ಣಪ್ಪ ಆರೋಪಿಸಿದ್ದಾರೆ. ಸ್ಥಳೀಯ ನಿವಾಸಿ ಚಿಕ್ಕಮಸ್ತಿಯಪ್ಪ ಅವರು ಇ ಖಾತೆ ವಿಚಾರವಾಗಿ 1 ಲಕ್ಷ ಹಣ ನೀಡಿದ್ದರು ಅವರ ಸ್ವತ್ತಿನ ಕಂದಾಯ ಬಾಕಿ ಇದ್ದ ಕಾರಣ ನೀಡಿದ 1ಲಕ್ಷ ಹಣವನ್ನು ಅವರ ಮನವಿಯ ಮೇರೆಗೆ ನನ್ನ ಬಳಿ ಇರಿಸಿ ಕೊಂಡಿದ್ದೇನೆ ಬಾಕಿ ಪಾವತಿ ಮಾಡಿ ಎಂದು ಅವರಿಗೆ ಈಗಾಗಲೇ ತಿಳಿಸಲಾಗಿದೆ. ಅವರು ಹಣ ನೀಡಿದ ವಿಚಾರವನ್ನು ನಾನೆ ಸಭೆಯಲ್ಲಿ ಸರ್ವ ಸದಸ್ಯರಿಗೂ ಬಹಿರಂಗ ಪಡಿಸಿದ್ದೇನೆ ಮೋಸ ಮಾಡುವ ಉದ್ದೇಶವಿದ್ದರೆ ನಾನೇಕೆ ಬಹಿರಂಗ ಪಡಿಸುತ್ತಿದ್ದೆ..? ಎಂದರು.
ಈ ಕುರಿತು ಹಣ ಸಂದಾಯ ಮಾಡಿದ್ದ ಸ್ಥಳೀಯ ಚಿಕ್ಕ ಮಾಸ್ತಿಯಪ್ಪ ಮಾತನಾಡಿ ಹೌದು ನಾನು ಇ ಖಾತೆಗಾಗಿ 1ಲಕ್ಷ ಹಣ ನೀಡಿದ್ದು,ನನ್ನ ಕಂದಾಯ ಬಾಕಿ ಇದ್ದ ಕಾರಣ ಸಂಪೂರ್ಣ ಒಟ್ಟಿಗೆ ಕಟ್ಟುವ ನಿಟ್ಟಿನಲ್ಲಿ 1ಲಕ್ಷ ಹಣವನ್ನು ಅಧ್ಯಕ್ಷರ ಬಳಿ ಇಟ್ಟುಕೊಳ್ಳಲು ಸೂಚಿಸಿದ್ದೆ,ಬಿಟ್ಟರೆ ನನಗೆ ಯಾವುದೇ ಮೋಸ ಆಗಿಲ್ಲ ಎಂದರು.
ಇದೇ ವೇಳೆ ಸದಸ್ಯರ ಗೈರು ಹಾಜರಿಯಲ್ಲಿ ಗ್ರಾಮ ಪಂಚಾಯತಿ ಸಿಬ್ಬಂದಿ ಹಾಜರಿದ್ದರು