ಕೃಷಿ ಬದುಕನ್ನು ಅಸ್ತಿರ ಗೊಳಿಸುವ ಕೈಗಾರಿಕಾ ಯೋಜನೆಗಳನ್ನು ವಿರೋಧಿಸಿ ಸೆ.4ರಂದು ರೈತ ಸಂಘ ಪ್ರತಿಭಟನೆ
ದೊಡ್ಡಬಳ್ಳಾಪುರ :ರೈತರ ಕೃಷಿ ಪಂಪ್ಸೆಟ್ ಮೀಟರ್ಗಳಿಗೆ ಆಧಾರ್ ಜೋಡಣೆ ಮಾಡುವ ಮೂಲಕ ವಿದ್ಯುತ್ ಖಾಸಗೀಕರಣದ ಹುನ್ನಾರ ನಡೆಯುತ್ತಿರುವುದು ಸ್ಪಷ್ಟವಾಗಿದೆ. ಇದಲ್ಲದೇ ವಿದ್ಯುತ್ ಲೈನ್ಗಳಿಗೆ, ಕೈಗಾರಿಕೆಗಳಿಗೆ ಫಲವತ್ತಾದ ಕೃಷಿ ಭೂಮಿ ಸ್ವಾದೀನ ಪಡಿಸಿಕೊಂಡು ಕೃಷಿಗೆ ಸಂಚಕಾರ ತರುವ ಸರ್ಕಾರದ ನೀತಿಗಳನ್ನು ವಿರೋದಿಸಿ, ಸೆ 4ರಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ರೈತ ಸಂಘದ ಮುಖಂಡರು ತಿಳಿಸಿದ್ದಾರೆ.
ನಗರದ ಎಪಿಎಂಸಿ ರೈತ ಭವನದಲ್ಲಿ ನಡೆದ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯ ಉಪಾಧ್ಯಕ್ಷ ಕೆಂಚೇಗೌಡ, ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಮೀಟರ್ ಅಳವಡಿಸಿದ್ದಕ್ಕಾಗಿ ಉಗ್ರವಾಗಿ ಹೋರಾಟ ನಡೆಸಲಾಗಿತ್ತು. ಈ ಮುಂಚೆ ಇದ್ದ ಕರ್ನಾಟಕ ವಿದ್ಯುತ್ ಮಂಡಳಿ (ಕೆಇಬಿ)ಯನ್ನು ಐದು ವಿದ್ಯುತ್ ಸರಬರಾಜು ಕಂಪನಿಗಳನ್ನಾಗಿ ಮಾಡಿ, ಕಂಪನಿಗಳನ್ನು ಖಾಸಗೀಕರಣಕ್ಕೆ ವಹಿಸಲಾಗಿದೆ. ಈ ಕಂಪನಿಗಳು ಪಂಪ್ ಸೆಟ್ಗಳಿಗೆ ಉಚಿತ ವಿದ್ಯುತ್, ಭಾಗ್ಯ ಜ್ಯೋತಿ ಮೊದಲಾದ ಯೋಜನೆಗಳನ್ನು ಜಾರಿಗೆ ತರಲು ಹಿಂದೇಟು ಹಾಕಿ ಸರ್ಕಾರವನ್ನು ಪರೋಕ್ಷವಾಗಿ ಒತ್ತಾಯಿಸಿದ ಪಲವಾಗಿ ಇಂದು ಕ್ರಮೇಣ, ಸರ್ಕಾರ ವಿದ್ಯುತ್ ಇಲಾಖೆಯನ್ನು ಖಾಸಗೀಕರಣ ಮಾಡುವ ಹೆಜ್ಜೆ ಇರಿಸಿದೆ.ಡಿಜಿಟಲ್ ಮೀಟರ್, ಸಿಮ್ ಕಾರ್ಡ್ ಗಳ ಅಳವಡಿಕೆ ಮಾಡುವ ಮೂಲಕ ದುಬಾರಿ ವೆಚ್ಚ ಹೇರುತ್ತಿವೆ, ಹಾಗಾಗಿ ವಿದ್ಯುತ್ ಖಾಸಗೀಕರಣಕ್ಕೆ ನಮ್ಮ ಪ್ರಬಲ ವಿರೋಧ ವಿದೆ.ಸರ್ಕಾರ ಚುನಾವಣಾ ಪೂರ್ವದಲ್ಲಿ ನೀಡಿದ್ದ ಭರವಸೆ ಒಂದನ್ನೂ ಈಡೇರಿಸಿಲ್ಲ ಭೂಸ್ವಾ ಧೀನದ ವಿರುದ್ದ ಚನ್ನರಾಯಪಟ್ಟಣದ ರೈತರು ಪ್ರತಿಭಟನೆ ನಡೆಸುತ್ತಿದ್ದಾಗ ನೀಡಿದ್ದ ಭರವಸೆಗಳು ಈಡೇರಿಸಲಿಲ್ಲ . ಈ ಹಿಂದೆ ಹೊಸಕೋಟೆ ತಾಲೂಕಿನಲ್ಲಿ ಎಸ್.ಇ.ಜೆಡ್ ವಿಶೇಷ ವಲಯದ ಯೋಜನೆಗೆ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಅದನ್ನು ಕೈಬಿಟ್ಟು ಈಗ ಉಪ ನಗರದ ಯೋಜನೆಯಡಿ ಹೆಸರು ಬದಲಾವಣೆ ಮಾಡಿ, ರೈತರ ಭೂಮಿ ಪಡೆಯಲಾಗುತ್ತಿದೆ. ಫಲವತ್ತಾದ ಕೃಷಿ ಭೂಮಿ ಸ್ವಾಧೀನವಿಲ್ಲ ಎಂದು ಹೇಳುತ್ತಾರೆ, ಆದರೆ ಶೇ.65 ರಿಂದ 70 ಭಾಗ ನೀರಾವರಿ ಭೂಮಿಯೇ ಇದೆ. ಭೂಮಿ ವಶ ಪಡಿಸಿಕೊಳ್ಳುವದರಲ್ಲಿ ಶೇ. 35 ಭಾಗ ಜಮೀನು ರಸ್ತೆ, ವಿದ್ಯುತ್ ಗೆ ಕಳೆದು ಹೋಗುತ್ತಿದೆ. ಇದರ ಬಗ್ಗೆ ನಮ್ಮ ವಿರೋಧವಿದೆ ಎಂದರು.
ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಪ್ರಸನ್ನ ಮಾತನಾಡಿ, ವಿದ್ಯುತ್ ಖಾಸಗೀಕರಣದ ಪ್ರಕ್ರಿಯೆಗಳು ಕ್ರಮೇಣ ಜರುಗುತ್ತಿದ್ದು, ಇದು ರೈತರಿಗೆ ಮಾರಕವಾಗಿದೆ. ಪವರ್ ಗ್ರಿಡ್ನಿಂದ ರೈತರ ಜಮೀನುಗಳಲ್ಲಿ ಹಾದು ಹೋಗುವ ಬೃಹತ್ ವಿದ್ಯುತ್ ಕಂಬಗಳು ರೈತರ ಕೃಷಿಗೆ ಸಂಚಕಾರ ತಂದಿವೆ,ಇದರಿಂದ ರೈತರ ಜಮೀನಿಗೆ ಬೆಲೆಯೂ ಸಿಗುವುದಿಲ್ಲ ಸರ್ಕಾರ 1:4 ದರದಲ್ಲಿ ಭೂಮಿ ಖರೀದಿ ಮಾಡಿ, ಆನಂತರ ವಿದ್ಯುತ್ ಲೈನ್ಗಳನ್ನು ಎಳೆಯಲಿ. ಇಲ್ಲವೇ ಅಂಡರ್ ಗ್ರೌಂಡ್ ಕೇಬಲ್ಗಳನ್ನು ಅಳವಡಿಸಲಿ. ಅದು ಬಿಟ್ಟು ರೈತರ ಜಮೀನುಗಳ ಮೇಲೆ ಅತಿಕ್ರಮಣ ಮಾಡುವುದು ಎಷ್ಟು ಸರಿ. ಕೈಗಾರಿಕೆಗಳಿಂದ ಜನಸಾಂದ್ರತೆ ಹೆಚ್ಚಾಗಿ ಜನರ ಜೀವನ ಕಷ್ಟವಾಗುತ್ತದೆ ಎಂದರು.
ಜಿಲ್ಲಾ ಕಾರ್ಯದರ್ಶಿ ಜಿಂಕೆಬಚ್ಚಹಳ್ಳಿ ಸತೀಶ್ ಮಾತನಾಡಿ, ಬಾಶೆಟ್ಟಿಹಳ್ಳಿಯಲ್ಲಿ ಅಪೇರೆಲ್ ಪಾರ್ಕ್ ಮೂರನೇ ಹಂತಕ್ಕೆ ವಶಪಡಿಸಿಕೊಂಡ ಜಮೀನಿನಲ್ಲಿ ಬಹಳಷ್ಟು ಇನ್ನೂ ಕೈಗಾರಿಕೆಗಳು ಸ್ಥಾಪನೆಯಾಗಿಲ್ಲ ಆದರೆ ಸರ್ಕಾರ ಇದೀಗ ದೊಡ್ಡಬಳ್ಳಾಪುರದ ಸುತ್ತಮುತ್ತ ಕೈಗಾರಿಕೆಗಳಿಗೆ ಭೂಸ್ವಾಧೀನ ಮಾಡಿಕೊಳ್ಳುತ್ತಿದೆ.
ದೊಡ್ಡಬಳ್ಳಾಪುರ ದಾಬಸ್ ಪೇಟೆ ನಡುವೆ ಸ್ಥಾಪನೆಯಾಗಲಿರುವ ಕೆ.ಎಚ್.ಐ.ಆರ್ ಸಿಟಿಗೆ 2 ಸಾವಿರ ಎಕರೆ ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ. ಆದರೆ ಸ್ಥಳೀಯರಿಗೆ ಕೆಲಸ ಮಾತ್ರ ಸಿಗುವುದಿಲ್ಲ ಕೈಗಾರಿಕೆಗಳಿಂದ ಕೊಳಗೇರಿ ಆರಂಭವಾಗಿ, ಕುಡಿಯುವ ನೀರಿನ ಸಮಸ್ಯೆ ಎದುರಾಗಲಿದೆ. ಅಂತರ್ಜಲ ಕಲುಷಿತ ಗೊಳ್ಳಲಿದೆ. ಕೃಷಿ ಬದುಕನ್ನು ಅಸ್ಥಿರಗೊಳಿಸುವ ಇಂತಹ ಯೋಜನೆಗಳನ್ನು ನಾವು ವಿರೋಸಬೇಕಿದ್ದು, ಸೆ.4 ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.
ಈ ಸಂದರ್ಭದಲ್ಲಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ತಾಲೂಕು ಘಟಕದ ಅಧ್ಯಕ್ಷ ಹನುಮೇಗೌಡ, ಕಾರ್ಯದರ್ಶಿ ಆರ್.ಎಸ್.ಸತೀಶ್, ಮುಖಂಡ ಶಿರವಾರ ರವಿ, ದೇವನಹಳ್ಳಿ ತಾ.ಕಾರ್ಯದರ್ಶಿ ರಮೇಶ್, ದೇವನಹಳ್ಳಿ ನಾರಾಯಣಸ್ವಾಮಿ ಮೊದಲಾದವರು ಭಾಗವಹಿಸಿದ್ದರು.