*ಆಧ್ಯಾತ್ಮದ ಮೂಲಕ ಜ್ಞಾನದ ಬೆಳಕು ಚೆಲ್ಲಿ ಜನರನ್ನು ಉದ್ದರಿಸಿದ ಶಂಕರಾಚಾರ್ಯರು –ಸಿ. ಪುಟ್ಟರಂಗಶೆಟ್ಟಿ*
ಚಾಮರಾಜನಗರ:ಭಾರತೀಯ ಸಾಂಸ್ಕøತಿಕ ಇತಿಹಾಸದಲ್ಲಿ ಜ್ಞಾನದ ಬೆಳಕು ಚೆಲ್ಲಿ ಜನರನ್ನು ಆಧ್ಯಾತ್ಮದೆಡೆಗೆ ಕೊಂಡೊಯ್ದು ಉದ್ದರಿಸಿದ ಮಹಾನ್ ದಿವ್ಯಪುರುಷ ಶಂಕರಾಚಾರ್ಯರು ಎಂದು ಎಂ.ಎಸ್.ಐ.ಎಲ್ ಅಧ್ಯಕ್ಷರು ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ತಿಳಿಸಿದರು.
ನಗರದ ಜಿಲ್ಲಾಡಳಿತ ಭವನದಲ್ಲಿರುವ ಡಾ. ರಾಜ್‍ಕುಮಾರ್ ಜಿಲ್ಲಾ ರಂಗಮಂದಿರದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ‘ಆದಿಗುರು ಶ್ರೀ ಶಂಕರಚಾರ್ಯ’ ಅವರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿದ್ಯಾರ್ಥಿದೆಸೆಯಲ್ಲಿ ಶಂಕರಾಚಾರ್ಯರ ಕುರಿತು ಪಠ್ಯಪುಸ್ತಕದಲ್ಲಿ ಓದಿದ ನೆನಪುಗಳು ಇಂದಿಗೂ ಸ್ಮರಣೀಯವಾಗಿವೆ. ಆಡಂಬರ, ಮೂಢನಂಬಿಕೆ, ಸಾಮಾಜಿಕ ಅಸಮಾನತೆಯಿಂದ ಕೂಡಿದ್ದ ಅಂದಿನ ದಿನಗಳಲ್ಲಿ ಜನ ಸಾಮಾನ್ಯರಿಗೆ ಆಧ್ಯಾತ್ಮದ ದಾರಿ ತೋರಿ ಉನ್ನತೀಯಡೆಗೆ ನಡೆಸಿದರು. ಮಾನವ ಕುಲದ ಒಳಿತಿಗಾಗಿ ದುಡಿದ ಆದರ್ಶ ವ್ಯಕ್ತಿತ್ವ ಶಂಕರಾಚಾರ್ಯ ಅವರದ್ದಾಗಿದೆ ಎಂದರು.
ಶಂಕರಾಚಾರ್ಯರು ಬದುಕಿದ್ದ 32 ವರ್ಷಗಳಲ್ಲಿ ಭಾರತ ದೇಶವನ್ನು 3 ಬಾರಿ ಪ್ರದಕ್ಷಿಣೆ ಹಾಕಿ ಧರ್ಮ ಪ್ರಸಾರ ಮಾಡಿ ಸಮಾಜೋದ್ಧಾರಕ್ಕಾಗಿ ತಮ್ಮ ಇಡೀ ಜೀವನವನ್ನೆ ಮುಡಿಪಾಗಿಟ್ಟರು. ಶಂಕರಾಚಾರ್ಯರ ಮೌಲ್ಯಯುತ ಆದರ್ಶ ಚಿಂತನೆಗಳನ್ನು ಮುಂದಿನ ಪೀಳಿಗೆಗೆ ಪಸರಿಸುವ ಸಲುವಾಗಿ ಜಿಲ್ಲೆಯ ಶಿನವಸಮುದ್ರದಲ್ಲಿ ಸ್ಮಾರಕವೊಂದನ್ನು ನಿರ್ಮಿಸಲು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು ಎಂದು ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ನಗರಸಭೆ ಅಧ್ಯಕ್ಷರಾದ ಎಸ್. ಸುರೇಶ್ ಅವರು ಹಿಂದು ಧರ್ಮದ ಪುನರುಜ್ಜೀವನಕ್ಕೆ ನಾಂದಿ ಹಾಡಿದವರಲ್ಲಿ ಶ್ರೀ ಶಂಕರಾಚಾರ್ಯರು ಅಗ್ರಗಣ್ಯರಾಗಿದ್ದಾರೆ. ಅವರ ಚಿಂತನೆಗಳ ಆದರ್ಶವನ್ನು ಪಾಲಿಸೋಣ. ಅಖಂಡ ಜಗತ್ತಿಗೆ ಜ್ಞಾನದ ಬೆಳಕು ನೀಡಿದ ಶಂಕರಾಚಾರ್ಯರ ಹಾದಿಯಲ್ಲಿ ನಾವೆಲ್ಲರೂ ಮುನ್ನೆಡೆಯೋಣ ಎಂದರು.
ಮುಖ್ಯಭಾಷಣ ಮಾಡಿದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು ಹಾಗೂ ಉಪನ್ಯಾಸಕರಾದ ಸುರೇಶ್ ಎನ್. ಋಗ್ವೇದಿ ಅವರು ಕೇರಳದ ಕಾಲಟಿ ಗ್ರಾಮದಲ್ಲಿ ಜನಿಸಿದ ಶಂಕರಾಚಾರ್ಯರು ತಮ್ಮ ಆಧ್ಯಾತ್ಮದ ನೆಲೆಯನ್ನಾಗಿಸಿಕೊಂಡದ್ದು ಕರ್ನಾಟಕದ ಶೃಂಗೇರಿಯನ್ನು. ಶೃಂಗೇರಿ ಮಾನವ ಕಲ್ಯಾಣ ದ್ಯೋತಕವಾಗಿದೆ. ಕರ್ನಾಟಕ ಸರ್ಕಾರ ಕಳೆದ 22 ವರ್ಷಗಳಿಂದ ಶಂಕರಾಚಾರ್ಯ ಜಯಂತಿ ಆಚರಿಸುವ ಮೂಲಕ ಅವರಿಗೆ ಗೌರವ ಸಲ್ಲಿಸುತ್ತಿದೆ. ಜಗತ್ತಿಗೆ ಆಧ್ಯಾತ್ಮದ ಸಂದೇಶ ನೀಡಿದ ಶಂಕರಾಚಾರ್ಯರ ಹೆಸರಿನಲ್ಲಿ ಪ್ರಶಸ್ತಿ ನೀಡಲು ಸರ್ಕಾರ ನಿರ್ಧರಿಸಿದೆ ಎಂದರು.
ಕವಿಗಳು, ಸಂಶೋಧಕರು ಆಗಿದ್ದ ಶಂಕರಾಚಾರ್ಯರು 200ಕ್ಕೂ ಹೆಚ್ಚು ಸಾಹಿತ್ಯ ಗ್ರಂಥಗಳನ್ನು ರಚಿಸಿದ್ದಾರೆ. ಅವರ ಮಾತೃಭಕ್ತಿ ಇಡೀ ಮಾನವಕುಲಕ್ಕೆ ಮಾದರಿಯಾಗಿದೆ. ಅಪಾರ ಜ್ಞಾನಸಂಪತ್ತು ಹೊಂದಿದ್ದ ಶಂಕರರು ಬಡತನ ನಿರ್ಮೂಲನೆಗೆ ಒತ್ತು ನೀಡಿದರು. ತಮ್ಮೊಳಗಿನ ವ್ಯಕ್ತಿತ್ವದಿಂದ ಶಂಕರರು ಎಲ್ಲರನ್ನೂ ತಮ್ಮೆಡೆಗೆ ಸೆಳೆದರು. ಜಗತ್ತಿನಲ್ಲಿ ಉಳಿದಿರುವ ಕೆಲವೇ ನಾಗರಿಕತೆಗಳಲ್ಲಿ ಒಂದಾಗಿರುವ ಭಾರತೀಯ ನಾಗರಿಕತೆಗೆ ಶಂಕರರು ಭದ್ರಬುನಾದಿ ಹಾಕಿದ್ದರು. ಜ್ಞಾನಕ್ಕೆ ಯಾವುದೇ ಜಾತಿ ಇಲ್ಲ. ಜ್ಞಾನವೇ ಸರ್ವಶ್ರೇಷ್ಠವಾದದ್ದು ಎಂದು ಸಾರಿದ ಶಂಕರಾಚಾರ್ಯರ ಜನ್ಮದಿನವನ್ನು ಸರ್ಕಾರ ವಿಶ್ವ ತತ್ವಜ್ಞಾನಿಗಳ ದಿನವನ್ನಾಗಿ ಘೋಷಿಸಿದೆ ಎಂದು ಸುರೇಶ್ ಋಗ್ವೇದಿ ತಿಳಿಸಿದರು.
ಚೂಡಾ ಅಧ್ಯಕ್ಷರಾದ ಮಹಮ್ಮದ್ ಅಸ್ಗರ್ ಮುನ್ನಾ ಹಾಗೂ ನಗರಸಭೆ ಉಪಾಧ್ಯಕ್ಷರಾದ ಮಮತ ಅವರು ಶಂಕರಾಚಾರ್ಯರ ಕುರಿತು ಕಾರ್ಯಕ್ರಮದಲ್ಲಿ ಮಾತನಾಡಿದರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ನಂಜುಂಡಯ್ಯ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಶೃತಿ, ಬ್ರಾಹ್ಮಣ ಮಹಾಸಭಾ ಜಿಲ್ಲಾಧ್ಯಕ್ಷರಾದ ಜಿ.ಎಂ. ಹೆಗಡೆ, ಮುಖಂಡರಾದ ಬಾಲಸುಬ್ರಮಣ್ಯ, ನಾಗಲಕ್ಷ್ಮಿ, ಇತರರು ಕಾರ್ಯಕ್ರಮದಲ್ಲಿ ಇದ್ದರು.
ವರದಿ ಆರ್ ಉಮೇಶ್ ಮಲಾರಪಾಳ್ಯ