ಪರಿಶ್ರಮ ನಿಷ್ಠೆಗೆ ಮತ್ತೊಂದು ಹೆಸರೇ ಕೆ. ಎಂ. ಹೆಚ್– ಧೀರಜ್ ಮುನಿರಾಜು

ದೊಡ್ಡಬಳ್ಳಾಪುರ: ನಿಷ್ಠಾವಂತ ಸಹಸ್ರಾರು ಸಂಘ ಪರಿವಾರ ಹಾಗೂ ಬಿಜೆಪಿ ಕಾರ್ಯಕರ್ತರಿಗೆ ಕೆ. ಎಂ. ಹೆಚ್. ಸ್ಫೂರ್ತಿ ಯಾಗಿದ್ದಾರೆ. ಪಕ್ಷ ನಿಷ್ಠೆಗೆ ಮತ್ತೊಂದು ಹೆಸರೇ ಹನುಮಂತರಾಯಪ್ಪ ಎಂದು ಶಾಸಕ ಧೀರಜ್ ಮುನಿರಾಜು ಹೇಳಿದರು.

ನಗರದ ಕೆ. ಎಂ. ಹೆಚ್. ಕಾನ್ವೆಂಷನ್ ಹಾಲ್ ನಲ್ಲಿ ಭಾನುವಾರ ಆಯೋಜಿಸಿದ್ದ ನಡೆದದ್ದೇ ದಾರಿ.. ಹಿರಿಯ ರಾಜಕೀಯ ಮುತ್ಸದ್ದಿ ಕೆ. ಎಂ. ಹನುಮಂತರಾಯಪ್ಪ ನವರ ಜೀವನ ಕಥಾನಕ ಬಿಡುಗಡೆ ಹಾಗೂ ಅಭಿನಂದನಾ ಸಮಾರಂಭದಲ್ಲಿ ಧೀರಜ್ ಮಾತನಾಡಿ ಕಕ್ಕೇಹಳ್ಳಿ ಎಂಬ ಕುಗ್ರಾಮದಲ್ಲಿ ಹುಟ್ಟಿ ಕೇಂದ್ರ ರೇಷ್ಮೆ ಮಂಡಳಿ ಅಧ್ಯಕ್ಷ ರಾಗುವ ತನಕ ಬೆಳೆದದ್ದು ಹನುಮಂತರಾಯಪ್ಪ ನವರ ನಿಷ್ಠೆ ಹಾಗೂ ಪರಿಶ್ರಮವನ್ನು ತೋರಿಸುತ್ತದೆ. ಪಕ್ಷ ನಿಷ್ಠೆ ಹಾಗೂ ಸಂಘಟನಾತ್ಮಕ ಚಟುವಟಿಕೆಗಳು ಹಾಗೂ ಸೈದ್ದಾಂತಿಕ ಬದ್ಧತೆ ಹನುಮಂತರಾಯಪ್ಪ ನವರನ್ನು ಉನ್ನತ ಮಟ್ಟಕ್ಕೇರಿಸಿದೆ. ರಾಜ್ಯದಲ್ಲಿ ಪಕ್ಷ ಅಷ್ಟೇನೂ ಅಸ್ತಿತ್ವದಲ್ಲಿಲ್ಲದ ಕಾಲದಲ್ಲಿ ಆಡಳಿತರೂಢ ಕಾಂಗ್ರೆಸ್ ಪಕ್ಷವನ್ನು ಎದುರಿಸಿ ದೊಡ್ಡಬಳ್ಳಾಪುರ ಪುರಸಭೆಯಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದ ಕೀರ್ತಿ ಹನುಮಂತರಾಯಪ್ಪ ನವರಿಗೆ ಸಲ್ಲುತ್ತದೆ. ರಾಜ್ಯ ಮಟ್ಟದ ಹೊರತಾಗಿ ರಾಷ್ಟ್ರ ಮಟ್ಟದ ಬಿಜೆಪಿ ನಾಯಕರಾದ ಅಟಲ್ ಬಿಹಾರಿ ವಾಜಪೇಯಿ, ಎಲ್. ಕೆ. ಅಡ್ವಾಣಿ, ಮುರುಳಿ ಮನೋಹರ ಜೋಶಿ, ಅನಂತಕುಮಾರ್ ಸೇರಿದಂತೆ ಹಲವಾರು ದೆಹಲಿ ನಾಯಕರ ಜೊತೆ ನಿರಂತರ ಸಂಪರ್ಕ ವಿದ್ದದ್ದು ಹನುಮಂತರಾಯಪ್ಪ ನವರು ಎಂತಾ ಪ್ರಭಾವಿ ಎನ್ನುವುದನ್ನು ಸಾಬೀತು ಮಾಡಿದೆ ಎಂದು ಹೇಳಿದರು.

ಮಾಜಿ ಶಾಸಕ ಗಂಟಿಗಾನ ಹಳ್ಳಿ ಕೃಷ್ಣಪ್ಪ ಮಾತನಾಡಿ ಕಾಂಗ್ರೆಸ್ ನಲ್ಲಿ ಟಿಕೆಟ್ ಸಿಗದಿದ್ದಾಗ ನನ್ನನ್ನು ಬಿಜೆಪಿ ಗೆ ಕರೆತಂದು ಟಿಕೆಟ್ ಕೊಡಿಸಿದ್ದಲ್ಲದೆ ನನ್ನನ್ನು ಶಾಸಕರನ್ನಾಗಿ ಮಾಡಿದ್ದರಲ್ಲಿ ಹನುಮಂತರಾಯಪ್ಪ ನವರ ಪಾತ್ರ ದೊಡ್ಡದಿದೆ. ಕೆ. ಎಂ. ಹೆಚ್. ಒಬ್ಬ ಅಪ್ರತಿಮ ಕೆಲಸಗಾರ ಎಂಬುದು ಹಲವು ಸಂದರ್ಭಗಳಲ್ಲಿ ಸಾಬೀತಾಗಿದೆ. ಇಂದು ದೊಡ್ಡಬಳ್ಳಾಪುರ ದಲ್ಲಿ ಬಿಜೆಪಿ ಅಧಿಕಾರದಲ್ಲಿ ಇದೆ ಎಂದರೆ ಅದಕ್ಕೆ ಹನುಮಂತರಾಯಪ್ಪ ನವರ ಶ್ರಮ ಪ್ರಮುಖ ಕಾರಣ ವೆನ್ನಬಹುದು. ಈ ವಯಸಿನಲ್ಲಿ ಅವರ ಕಾರ್ಯ ಚಟುವಟಿಕೆ ಮೆಚ್ಚುವಂತದ್ದು ಎಂದು ಹೇಳಿದರು.

ಅಭಿನಂದನೆ ಸ್ವೀಕರಿಸಿದ ಹನುಮಂತರಾಯಪ್ಪ ಮಾತನಾಡಿ ಕಳೆದ ನಲವತ್ತು ವರ್ಷಗಳ ಹಿಂದೆ ಮಗ್ಗದ ಕೂಲಿ ಕೆಲಸಕ್ಕೆ ಎಂದು ದೊಡ್ಡಬಳ್ಳಾಪುರಕ್ಕೆ ಬಂದವನು ನಾನು ನಿರಂತರ ಪರಿಶ್ರಮದಿಂದ ಬೆಳೆದಿದ್ದೇನೆ ಶ್ರಮ ವಹಿಸಿ ಕೆಲಸ ಮಾಡಿದರೆ ಮೇಲೆ ಬರಬಹುದು ಎನ್ನುವುದಕ್ಕೆ ನಾನೆ ಉದಾಹರಣೆ. ಕಷ್ಟಪಟ್ಟು ದುಡಿದು ಮೇಲೆ ಬರಬೇಕೆನ್ನುವ ಹಂಬಲ ನನ್ನ ಜೀವನದ ದಿಕ್ಕನ್ನೇ ಬದಲಿಸಿತು. ರಾಜಕೀಯವಾಗಿ ಏಳು ಬೀಳುಗಳನ್ನು ಕಂಡಿದ್ದೇನೆ. ಹಾಗೆಯೇ ಹಲವಾರು ಪ್ರಮುಖ ಹುದ್ದೆಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದೇನೆ. ಅದರ ಜೊತೆಯಲ್ಲಿ ಸಾಮಾಜಿಕ ಕಾರ್ಯಗಳಲ್ಲಿ ಪ್ರಾಮಾಣಿಕವಾಗಿ ತೊಡಗಿಸಿ ಕೊಂಡು ಕೆಲಸ ಮಾಡುತ್ತಿರುವುದು ನನಗೆ ಆತ್ಮ ತೃಪ್ತಿ ತಂದಿದೆ. ದೊಡ್ಡಬಳ್ಳಾಪುರದ ಒಳ ಹೊರಗನ್ನು ಅರಿತು ಅವಿರತ ಪರಿಶ್ರಮದಿಂದ ಬೆಳೆದಿದ್ದೇನೆ. ಏನೂ ಅಲ್ಲದ ನನ್ನನ್ನು ಉನ್ನತ ಮಟ್ಟಕ್ಕೆರಿಸಿದ ದೊಡ್ಡಬಳ್ಳಾಪುರದ ಮಣ್ಣಿಗೆ ನಾನು ಋಣಿಯಾಗಿದ್ದೇನೆ ಎಂದು ಹನುಮಂತರಾಯಪ್ಪ ಹೇಳಿದರು.

ಆದಿಚುಂಚನಗಿರಿ ವಿಜಯನಗರ ಶಾಖಾ ಮಠದ ಸೌಮ್ಯ ನಾಥ ಸ್ವಾಮೀಜಿ ಹಾಗೂ ತಪಸಿ ಹಳ್ಳಿ ದಿವ್ಯ ಜ್ಞಾನಾನಂದ ಸ್ವಾಮೀಜಿ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದರು. ಇದೆ ಸಂದರ್ಭದಲ್ಲಿ ಮ. ಚಿ. ಕೃಷ್ಣ ವಿರಚಿತಾ ಹನುಮಂತರಾಯಪ್ಪ ನವರನ್ನು ಕುರಿತಾದ ವನಸುಮ ದೊಳೆನ್ನ ಮನ ಕುಣಿ ನಲಿದಾಡುತಿದೆ ಎಂಬ ಪುಸ್ತಕವನ್ನು ಬಿಡುಗಡೆ ಗೊಳಿಸಲಾಯಿತು.

ಸಮಾರಂಭದಲ್ಲಿ ವಿದ್ಯಾ ವಾಚಸ್ಪತಿ ಅರಳುಮಲ್ಲಿಗೆ ಪಾರ್ಥಸಾರಥಿ, ಯಲಹಂಕ ಶಾಸಕ ವಿಶ್ವನಾಥ್ ಮಾಜಿ ಶಾಸಕ ಅಪಕಾರನಹಳ್ಳಿ ವೆಂಕಟರಮಣಯ್ಯ, ಡಾ. ಟಿ. ಹೆಚ್. ಅಂಜಿನಪ್ಪ, ವಿಹೆಚ್. ಪಿ. ಮುಖಂಡ ಮಂಜುನಾಥ್, ಪುರಸಭೆ ಮಾಜಿ ಉಪಾಧ್ಯಕ್ಷ ಡಿ. ವಿ. ನಾರಾಯಣ ಶರ್ಮ, ತ. ನ. ಪ್ರಭುದೇವ್, ಹುಲಿಕಲ್ ನಟರಾಜ್ ಜ್ಯೋತಿ ಪರಶುರಾಮ್ ಸೇರಿದಂತೆ ಹಲವಾರು ಗಣ್ಯರು ಮುಖಂಡರು ಕೆ. ಎಂ. ಹೆಚ್. ಅಭಿಮಾನಿಗಳು ಭಾಗವಹಿಸಿದ್ದರು.