ವಿಜಯಪುರ-ಶಿಡ್ಲಘಟ್ಟ ಮುಖ್ಯರಸ್ತೆಯಲ್ಲಿ, ಸೂಚನಾ ಫಲಕಗಳು ಅಳವಡಿಕೆ ಮಾಡಿ, ಸುರಕ್ಷತಾ ಕ್ರಮ ಕೈಗೊಳ್ಳಲು ಒತ್ತಾಯ

ವಿಜಯಪುರ: ವಿಜಯಪುರ ಪಟ್ಟಣದಿಂದ ಶಿಡ್ಲಘಟ್ಟದ ಕಡೆಗೆ ಸಂಚರಿಸುವ, ಮುಖ್ಯರಸ್ತೆಯ ನಡುವೆ ಇರುವ ಭಟ್ರೇನಹಳ್ಳಿ ಕೆರೆಯ ಏರಿಯ ಬಳಿಯಲ್ಲಿ ಸಾಗುವ ರಸ್ತೆಯು, ಅಪಘಾತಗಳ ಸ್ಥಳವಾಗಿದ್ದು, ಇಲ್ಲಿ ಅಗತ್ಯವಾದ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಈ ರಸ್ತೆಯಲ್ಲಿ ಬಹಳಷ್ಟು ಅಪಘಾತಗಳಾಗುತ್ತಿವೆ. ಹಲವರು ಪ್ರಾಣ ಕಳೆದುಕೊಂಡಿದ್ದರೆ, ಕೆಲವರು ಶಾಶ್ವತವಾಗಿ ಅಂಗವಿಕಲರಾಗಿದ್ದಾರೆ. ಶಿಡ್ಲಘಟ್ಟ-ಬೆಂಗಳೂರಿನ ನಡುವಿನ ಮುಖ್ಯರಸ್ತೆಯಾಗಿದ್ದು, ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚರಿಸುವ ರಸ್ತೆಯಾಗಿರುವ ಕಾರಣ, ಅಪಘಾತದ ವಲಯವಾಗಿದೆ. ಇದು,ಅಪಘಾತದ ವಲಯವೆಂಬ ಯಾವುದೇ ಎಚ್ಚರಿಕೆಯ ಫಲಕವನ್ನು ಅಳವಡಿಸಿಲ್ಲ. ವೇಗಮಿತಿಯನ್ನು ನಿಗದಿಗೊಳಿಸುವಂತಹ ಸೂಚನಾ ಫಲಕಗಳೂ ಹಾಕಿಲ್ಲ.
ರಾತ್ರಿಯ ವೇಳೆ ಈ ರಸ್ತೆಯಲ್ಲಿ ಬೀದಿದೀಪಗಳು ಇಲ್ಲದ ಕಾರಣ, ವಾಹನ ಸವಾರರಿಗೆ, ರಸ್ತೆಯ ತಿರುವುಗಳಾಗಲಿ, ರಸ್ತೆಯ ಪಕ್ಕದಲ್ಲಿ ಹಳ್ಳ ಇರುವುದಾಗಲಿ, ವಾಹನ ಚಾಲಕರಿಗೆ ಗೊತ್ತಾಗುವುದಿಲ್ಲ. ಆದ್ದರಿಂದ ಅಪಘಾತಕ್ಕೆ ತುತ್ತಾಗುತ್ತಿದ್ದಾರೆ. ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಗಮನಹರಿಸಿ, ಎಚ್ಚರಿಕೆಯ ಫಲಕಗಳನ್ನು ಅಳವಡಿಸಬೇಕು. ಎಲ್ಲಾ ಫಲಕಗಳಿಗೂ ಎಲ್.ಇ.ಡಿ.ಸ್ಟಿಕ್ಕರ್ ಅಂಟಿಸಬೇಕು. ಸ್ಥಳೀಯ ಗ್ರಾಮ ಪಂಚಾಯಿತಿಯವರು, ರಸ್ತೆಯಲ್ಲಿ ಅಕ್ಕಯಮ್ಮ ದೇವಾಲಯದಿಂದ ಭಟ್ರೇನಹಳ್ಳಿಯ ಕೆರೆಯ ಮರವೇಯವರೆಗೂ ವಿದ್ಯುತ್ ದೀಪಗಳನ್ನು ಅಳವಡಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ತೋಟಗಳ ರೈತರಿಗೆ ಅಪಾಯ: ವಿಜಯಪುರ-ಶಿಡ್ಲಘಟ್ಟದ ಮುಖ್ಯರಸ್ತೆಯ ಪಕ್ಕದಲ್ಲೆ ಇರುವ ರೈತರ ತೋಟಗಳಿಂದ ಜೋಳ, ಹಿಪ್ಪುನೇರಳೆ ಸೇರಿದಂತೆ, ವಿವಿಧ ಬೆಳೆಗಳನ್ನು ಬೆಳೆಯುವಂತಹ ರೈತರು, ಬೆಳೆಗಳನ್ನು ಸಾಗಿಸಿಕೊಂಡು ಬರಲು ರಸ್ತೆಗೆ ಬರುವಾಗ, ವೇಗವಾಗಿ ಬರುವ ವಾಹನಗಳಿಗೆ ಸಿಲುಕುತ್ತಿದ್ದಾರೆ. ಇದರಿಂದ ಹಲವರು ಗಾಯಗೊಂಡು ಅಂಗವಿಕಲರಾಗಿದ್ದಾರೆ. ಆದ್ದರಿಂದ ಹೆಚ್ಚಿನ ಅಪಾಯವಾಗುವ ಮೊದಲೇ ಸಂಬಂಧಪಟ್ಟವರು ಸೂಕ್ತ ಕ್ರಮ ಕೈಗೊಳ್ಳಬೇಕಿದೆ ಎಂದು ಸ್ಥಳೀಯ ನಿವಾಸಿ ಮುನಿರಾಜು ಅವರು ಒತ್ತಾಯಿಸಿದ್ದಾರೆ.