ಸುವೀಕ್ಷಾ ಆಸ್ಪತ್ರೆಯಲ್ಲಿ ಸೀನಿಯರ್ ಚೇಂಬರ್ ವತಿಯಿಂದ ವೈದ್ಯರ ದಿನಾಚರಣೆ
ವಿಜಯಪುರ: ಯಾರೇ ಆದರೂ ಜ್ವರ, ತಲೆನೋವು, ನೆಗಡಿ ಮುಂತಾದವುಕ್ಕೆ ಹಾಗೂ ಯೂಟ್ಯೂಬ್ಬ್, ಇನ್ಸ್ಟಾಗ್ರಾಮ್, ಫೇಸ್ಬುಕ್ ಮುಂತಾದವುಗಳಿಂದ ನೋಡಿಕೊಂಡು, ಚಿಕಿತ್ಸೆ ಪಡೆಯದೇ ನೇರವಾಗಿ ವೈದ್ಯರ ಬಳಿಗೆ ಬಂದು ತೋರಿಸಿ, ಚಿಕಿತ್ಸೆ ಪಡೆಯುವುದರಿಂದ ಯಾವುದೇ ಅನಾಹುತಗಳು ಸಂಭವಿಸುವುದಿಲ್ಲ ಎಂದು ಸುವೀಕ್ಷಾ ಆಸ್ಪತ್ರೆಯ ವೈದ್ಯ ಡಾ.ಸ್ವರೂಪ್ ಹೇಳಿದರು.
ಪಟ್ಟಣದ ದೇವನಹಳ್ಳಿ ರಸ್ತೆಯ ಸುವೀಕ್ಷಾ ಆಸ್ಪತ್ರೆಯಲ್ಲಿ, ವಿಜಯಪುರ ಸೀನಿಯರ್ ಚೇಂಬರ್ ಹಾಗೂ ಸರ್ಕಾರಿ ಹಿರಿಯ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಹಿರಿಯ ವಿದ್ಯಾರ್ಥಿಗಳ ಸಂಘದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ವೈದ್ಯರ ದಿನಾಚರಣೆ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ, ಮಾತನಾಡುತ್ತಿದ್ದರು.
ಪ್ರತಿಯೊಬ್ಬರು ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಮೊಬೈಲ್ಗಾಗಿ ನೀಡುವ ಸಮಯವನ್ನು ಕುಟುಂಬದ ಸದಸ್ಯರೊಂದಿಗೆ ಕಳೆಯಿರಿ. ಆಗ ದೊರೆಯುವ ಆನಂದ ಮನುಷ್ಯರನ್ನು ಹೆಚ್ಚು ಆರೋಗ್ಯವಾಗಿರುವಂತೆ ನೋಡಿಕೊಳ್ಳುತ್ತದೆ. “ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ” ಇದ್ದು ಪಾಶ್ಚಿಮಾತ್ಯ ಸಂಸ್ಕೃತಿಯ ಆಹಾರ ರೀತಿಗಳಿಗೆ ಒಳಗಾಗದೆ ಪ್ರತಿದಿನ ಕನಿಷ್ಠ ವ್ಯಾಯಾಮದಲ್ಲಿ ತೊಡಗಿಕೊಳ್ಳಿ ಎಂದು ತಿಳಿಸಿದರು.
ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ವಿ.ಎಂ.ಕಿಶೋರ್ ಕುಮಾರ್ ಮಾತನಾಡಿ, ಪಟ್ಟಣದಲ್ಲಿ ರಾತ್ರಿಯಾದ ಸಮಯದಲ್ಲಿ ವೈದ್ಯರ ಸೇವೆ ದೊರಕದ ಸಂದರ್ಭದಲ್ಲಿ ಡಾ.ನಟರಾಜ್ ರವರ ತಂಡ ವಿಜಯಪುರದಲ್ಲಿ ಸುವೀಕ್ಷಾ ಆಸ್ಪತ್ರೆಯನ್ನು ತೆರೆದು, ದಿನದ 24 ಗಂಟೆಯೂ ವೈದ್ಯರ ಸೇವೆ ದೊರೆಯುವಂತೆ ಮಾಡಿರುವುದಲ್ಲದೆ ಬಹಳಷ್ಟು ಕಾಯಿಲೆಗಳಿಗೆ ಜನತೆ ಬೆಂಗಳೂರಿಗೆ ಹೋಗಬೇಕಾಗಿತ್ತು. ಬೆಂಗಳೂರಿನಿಂದ ಅನುಭವಹೊಂದಿರುವ ವೈದ್ಯರ ಮೂಲಕ ಚಿಕಿತ್ಸೆ ದೊರೆಯುತ್ತಿರುವುದು ಸಂತಸದ ವಿಚಾರವಾಗಿದೆ.
ಸೀನಿಯರ್ ಚೇಂಬರ್ ವಿಜಯಪುರ ಘಟಕದ ಅಧ್ಯಕ್ಷ ಅನೀಸ್ ಉರ್ ರೆಹಮಾನ್, ಆಸ್ಪತ್ರೆಯ ವೈದ್ಯರಾದ ಡಾ.ಸ್ವರೂಪ್, ಮಕ್ಕಳ ತಜ್ಞ ಡಾ.ಮಾಧವ್, ಮೂಳೆ ತಜ್ಞ ಡಾ. ಮಂಜುನಾಥ್, ಸ್ತ್ರೀರೋಗ ತಜ್ಞ ಡಾ.ವಂದನಾ, ಡಾ. ಹೇಮಲತಾ, ಡಾ. ಶಾಂತೇಶ್, ಅವರನ್ನು ಶಾಲು ಹೊದಿಸಿ, ಹಾರ ನೀಡಿ, ಕೇಕ್ ಕತ್ತರಿಸಿ, ಸಿಹಿ ನೀಡುವ ಮೂಲಕ ಸತ್ಕರಿಸಲಾಯಿತು.
ಆಸ್ಪತ್ರೆಯ ಆಡಳಿತ ಅಧಿಕಾರಿ ಮುನೇಗೌಡ, ಸೀನಿಯರ್ ಚೇಂಬರ್ ನ ಕಾರ್ಯದರ್ಶಿ ಅಶೋಕ್, ಜಂಟಿಕಾರ್ಯದರ್ಶಿ ವೆಂಕಟೇಶ್, ಮಾಜಿ ಅಧ್ಯಕ್ಷ ವೆಂಕಟೇಶ್, ಹಿರಿಯ ವಿದ್ಯಾರ್ಥಿಗಳ ಸಂಘದ ಕಾರ್ಯದರ್ಶಿ ಡಾ.ಶಿವಕುಮಾರ್, ಖಜಾಂಚಿ ವಿ.ವಿಶ್ವನಾಥ್, ಜೆಸಿಐ ಸಂಸ್ಥೆಯ ಮಾಜಿ ಅಧ್ಯಕ್ಷ ಜನಾರ್ಧನ್, ವಕೀಲ ಜಯರಾಮ್, ಯಾಸಿಮ್, ಸುಬಾನ್ ಬೇಗ್, ಜಾವಿದ್, ಮುಂತಾದವರು ಹಾಜರಿದ್ದರು.