ಅಂಚೆಕೊಪ್ಪಲು ಗ್ರಾಮದಲ್ಲಿ ಬೋನಿಗೆ ಬಿದ್ದ ಚಿರತೆ

ತಿಪಟೂರು: ತಾಲ್ಲೂಕಿನ ಅರಣ್ಯಪ್ರದೇಶ ವ್ಯಾಪ್ತಿಯ ಅಂಚೆಕೊಪ್ಪಲು ಗ್ರಾಮದ ಗ್ರಾಮದ ಜಮೀನೊಂದರಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಇಟ್ಟಿದ್ದ ಬೋನಿಗೆ ಬಾನುವಾರ ಮಧ್ಯರಾತ್ರಿ ಸರಿಸುಮಾರು 2 ಗಂಟೆಗೆ ಚಿರತೆಯೊಂದು ಬಿದ್ದಿದೆ.

ಗ್ರಾಮ ವ್ಯಾಪ್ತಿಯಲ್ಲಿ ಹಾವಳಿ ನೀಡುತ್ತಿದ್ದ ಚಿರತೆ ಸೆರೆಗೆ ಗ್ರಾಮಸ್ಥರು ಮಾಡಿದ್ದ ಮನವಿ ಮೇರೆಗೆ ಇಲಾಖೆ ಸಿಬ್ಬಂದಿ ಕೆರೆ ಅಂಗಳದಲ್ಲಿ ಬೋನು ಇಟ್ಟಿದ್ದರು. ಈ ಬೋನಿಗೆ ಆರು ವರ್ಷ ಪ್ರಾಯದ ಚಿರತೆ ಬಿದ್ದಿದೆ.

ಚಿರತೆಯೊಂದು ಗ್ರಾಮದಲ್ಲಿ ಆಗಾಗ ಓಡಾಡುತ್ತಾ ಗ್ರಾಮದ ಜಾನುವಾರುಗಳ ಹಾಗೂ ನಾಯಿಗಳ ಮೇಲೆ ದಾಳಿ ಮಾಡುತ್ತಿತ್ತು. ಹಾಗಾಗಿ ಚಿರತೆ ಸೆರೆಗೆ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಮನವಿ ಮಾಡಿದ್ದರು.

ಚಿರತೆ ಬೋನಿಗೆ ಬಿದ್ದಿರುವ ವಿಷಯ ತಿಳಿದು ಸ್ಥಳಕ್ಕೆ ತೆರಳಿದ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಚಿರತೆ ಸಮೇತ ಬೋನನ್ನು ನಗರದ ಪ್ರಾದೇಶಿಕ ಕಚೇರಿ ಬಳಿಗೆ ತಂದು ಸ್ವಲ್ಪಹೊತ್ತು ಇರಿಸಿದ್ದರು. ಚಿರತೆ ವಿಷಯ ತಿಳಿದು ಸಾರ್ವಜನಿಕರು ಜಮಾಯಿಸಿ ಚಿರತೆಯನ್ನು ವೀಕ್ಷಣೆ ಮಾಡಿದರು.

ಇಲಾಖೆಯ ಮೇಲಾಧಿಕಾರಿಗಳ ಸೂಚನೆಯಿಂದ ದೂರದ ಕಾಡಿಗೆ ಬಿಡಲಾಗುವುದು ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ

ವರದಿ : ಹೇಮಂತ್ ಕುಮಾರ್