ಜು.13 ರಂದು ಕೆ. ಹೆಚ್ ಮುನಿಯಪ್ಪರವರಿಂದ ಡಾ. ಬಿ ಆರ್ ಅಂಬೇಡ್ಕರ್ ಪುತ್ತಳಿ ಅನಾವರಣ

ವಿಜಯಪುರ: ವಿಜಯಪುರ ಪಟ್ಟಣದ ಬಸ್ ನಿಲ್ದಾಣದಲ್ಲಿ, ಪ್ರತಿಷ್ಟಾಪನೆಗೊಂಡಿರುವ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರ, ಪುತ್ತಳಿ ಅನಾವರಣ ಸಮಾರಂಭವನ್ನು ಜು.13 ರಂದು ಬೆಳಿಗ್ಗೆ 10 ಗಂಟೆಗೆ ಆಯೋಜನೆ ಮಾಡಲಾಗಿದೆ ಎಂದು ಡಾ.ಬಿ.ಆರ್.ಅಂಬೇಡ್ಕರ್ ರಕ್ಷಣಾ ಸಮಿತಿಯ ರಾಜ್ಯಾಧ್ಯಕ್ಷ ತೇಜಾವಾಯ್ಸ್ ಶ್ರೀನಿವಾಸ್ ಹೇಳಿದರು.
ಪಟ್ಟಣದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಯುವಮುಖಂಡ ಎಸ್ ಭಾನುಚಂದ್ರ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ, ಪುತ್ತಳಿ ಅನಾವರಣವನ್ನು ಜಿಲ್ಲಾ ಉಸ್ತುವಾರಿ ಸಚಿವ ಕೆ.ಹೆಚ್.ಮುನಿಯಪ್ಪ ನೆರವೇರಿಸಲಿದ್ದಾರೆ. ಚಿಕ್ಕಬಳ್ಳಾಪುರ ಸಂಸದ ಡಾ.ಕೆ ಸುಧಾಕರ್, ಪುರಸಭೆ ಅಧ್ಯಕ್ಷೆ ಎಸ್.ಭವ್ಯಾಮಹೇಶ್, ಡಾ.ಬಿ.ಆರ್.ಅಂಬೇಡ್ಕರ್ ಸೇವಾ ಸಮಿತಿ ಕೋಲಾರದ ಸಂದೇಶ್ ರವರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ವಿವಿಧ ಸಂಘಟನೆಗಳು, ಸಂಘ ಸಂಸ್ಥೆಗಳ ಮುಖಂಡರುಗಳು ಭಾಗವಹಿಸುತ್ತಿದ್ದು, ವಿಜಯಪುರ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ನೆರೆಯ ತಾಲ್ಲೂಕುಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿ, ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಮನವಿ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ, ಮಹಿಳೆಯರಿಗೆ ಸೀರೆ, ವೃದ್ಧರಿಗೆ ಬೆಡ್ ಶೀಟ್, ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ಮತ್ತು ಬ್ಯಾಗ್ ವಿತರಣೆ ಮಾಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಕರ್ನಾಟಕ ದಲಿತ ಜನಸೇನೆ ರಾಜ್ಯಾಧ್ಯಕ್ಷ ಟಿ.ಭರತ್ ಅವರು ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಅವರ ಪುತ್ತಳಿ ಅನಾವರಣಗೊಳ್ಳುತ್ತಿರುವುದು. ಒಂದು ಮಾದರಿಯಾದ ಕಾರ್ಯಕ್ರಮವಾಗಿದ್ದು, ಸ್ಥಳೀಯ ಆಡಳಿತದವರು, ಪುತ್ತಳಿಗೆ ಸೂಕ್ತವಾದ ಭದ್ರತೆಯನ್ನು ಮಾಡಿಕೊಡಬೇಕು ಎಂದು ಒತ್ತಾಯಿಸಿದ ಅವರು, ಪ್ರತಿ ವರ್ಷ ಏಫ್ರಿಲ್.14 ರಂದು ನಡೆಯಲಿರುವ ಅಂಬೇಡ್ಕರ್ ಜಯಂತಿ ಕಾರ್ಯಕ್ರಮವನ್ನು ಇಲ್ಲೆ ಮಾಡುವ ಮೂಲಕ ಅವರಿಗೆ ಗೌರವ ಸೂಚಿಸಬೇಕು ಎಂದರು.
ಮುಖಂಡರಾದ ಎಸ್.ಭಾನುಚಂದ್ರ, ಡಾ.ಬಿ.ಆರ್.ಅಂಬೇಡ್ಕರ್ ರಕ್ಷಣಾ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ರಾಘವ, ಸುರೇಶ್, ದೇವರಾಜ್, ಅರುಂಧತಿ ಸೇವೆ ಸಮಿತಿಯ ಎನ್.ನರಸಿಂಹಮೂರ್ತಿ, ವೇಣುಗೋಪಾಲ್, ಕೆ.ಮುನಿಯಪ್ಪ, ಕಣ್ಣಪ್ಪ, ಮುನಿರಾಜು, ಲಕ್ಷ್ಮೀನಾರಾಯಣ ಮುಂತಾದವರು ಹಾಜರಿದ್ದರು.