ಡಾ.ಬಿ.ಆರ್.ಅಂಬೇಡ್ಕರ್ ಅವರ ಆಶಯಗಳನ್ನು ನಾವೆಲ್ಲರೂ ಕಾಪಾಡಬೇಕು. ಕೆ.ಹೆಚ್.ಮುನಿಯಪ್ಪ.
ವಿಜಯಪುರ: ಸಂವಿಧಾನದ ಆಶಯಗಳನ್ನು ಉಳಿಸಬೇಕು, ಸಂವಿಧಾನವನ್ನು ನಾವೆಲ್ಲರೂ ಗೌರವಿಸುವುದರ ಜೊತೆಗೆ, ಪ್ರತಿಯೊಬ್ಬರ ಹಕ್ಕುಗಳು ಪಡೆಯುವುದರ ಜೊತೆಗೆ, ಕರ್ತವ್ಯಗಳನ್ನೂ ಪಾಲಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಹೆಚ್.ಮುನಿಯಪ್ಪ ಹೇಳಿದರು.
ಪಟ್ಟಣದ ಬಸ್ ನಿಲ್ದಾಣದಲ್ಲಿ ಕರ್ನಾಟಕ ರಾಜ್ಯ ಡಾ.ಬಿ.ಆರ್.ಅಂಬೇಡ್ಕರ್ ರಕ್ಷಣಾ ಸಮಿತಿಯ ಹಾಗೂ ಯುವ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಎಸ್.ಭಾನುಚಂದ್ರ ಅವರ ವತಿಯಿಂದ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ, ಪ್ರತಿಮೆಯನ್ನು ಉದ್ಘಾಟನೆ ಮಾಡಿದ ನಂತರ ಅವರು ಮಾತನಾಡಿದರು.
ಈ ದೇಶದಲ್ಲಿ ಸಮಾನತೆಯನ್ನು ಎತ್ತಿ ಹಿಡಿಯಬೇಕು ಎಂದು ನಿರಂತರವಾಗಿ ಹೋರಾಟ ಮಾಡಿದ ಡಾ.ಬಿ.ಆರ್.ಅಂಬೇಡ್ಕರ್ ಅವರ ಆಶಯಗಳನ್ನು ನಾವೆಲ್ಲರೂ ಕಾಪಾಡಬೇಕು. ಎಲ್ಲಾ ಸಮುದಾಯಗಳೊಂದಿಗೆ ಪ್ರೀತಿ, ವಿಶ್ವಾಸ, ಪರಸ್ಪರ ನಂಬಿಕೆಯನ್ನು ಕಾಪಾಡಿಕೊಂಡು ಹೋಗಬೇಕು, ಮಹಾತ್ಮಾಗಾಂಧಿ, ಜವಹಾರ್ ಲಾಲ್ ನೆಹರೂ, ಸರ್ಧಾರ್ ವಲ್ಲಭಬಾಯಿ ಪಟೇಲ್, ಸರೋಜಿನಿ ನಾಯ್ಡು, ಸೇರಿದಂತೆ ಹಲವಾರು ಮಹನೀಯರು ಕೊಟ್ಟಂತಹ ಮಹತ್ತರವಾದ ಹೊಣೆಗಾರಿಕೆಯನ್ನು ಹೊತ್ತುಕೊಂಡ ಅಂಬೇಡ್ಕರ್ ಅವರು, ಎಲ್ಲಾ ಧರ್ಮಗಳು, ಜಾತಿಗಳು, ಮತಗಳಿಗೆ ಸಮಾನವಾದ ಅವಕಾಶಗಳನ್ನು ನೀಡಿದ್ದಾರೆ. ಪ್ರತಿಯೊಬ್ಬರೂ ಸದುಪಯೋಗ ಮಾಡಿಕೊಳ್ಳಬೇಕು. ಪೊಲೀಸ್ ಠಾಣೆಗಳಿಗೆ ಹೋಗಿ ಕೇಸುಗಳು ದಾಖಲಿಸುವುದರ ಬದಲಿಗೆ, ಶಾಲೆಗಳನ್ನು ಉನ್ನತೀಕರಣ ಮಾಡುವ ಕೆಲಸ ಮಾಡಬೇಕು ಎಂದರು.
ಕೋಲಾರದ ಡಾ.ಬಿ.ಆರ್.ಅಂಬೇಡ್ಕರ್ ಸೇವಾ ಸಮಿತಿ ಕರ್ನಾಟಕದ ಸಂಸ್ಥಾಪಕ ಸಂದೇಶ್ ಅವರು ಮಾತನಾಡಿ, ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕಂಡ ಸಮಸಮಾಜವನ್ನು ಇದುವರೆಗೂ ನಿರ್ಮಾಣ ಮಾಡಲು ಸಾಧ್ಯವಾಗಲಿಲ್ಲ. ಜಾತಿ, ವ್ಯವಸ್ಥೆ ಎಲ್ಲಿಯವರೆಗೂ ಜೀವಂತವಾಗಿರುತ್ತದೋ ಅಲ್ಲಿಯವರೆಗೂ ಸಮಾನತೆ ಕಾಣಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಿ ಎಂದರು.
ಪುರಸಭೆ ಅಧ್ಯಕ್ಷೆ ಎಸ್.ಭವ್ಯಾಮಹೇಶ್ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಅವರಂತಹ ಮಹನೀಯರು, ಭಾರತ ದೇಶದಲ್ಲಿ ಹುಟ್ಟಿರುವುದು ನಮ್ಮೆಲ್ಲರ ಸೌಭಾಗ್ಯ. ಅವರು ರಚನೆ ಮಾಡಿರುವ ಸಂವಿಧಾನವು ಶ್ರೇಷ್ಟವಾಗಿದ್ದು, ಪ್ರತಿಯೊಬ್ಬರೂ ಸಂವಿಧಾನದ ಆಶಯಗಳನ್ನು ಪಾಲಿಸಬೇಕು. ಪ್ರತಿಮೆ ಅನಾವರಣಗೊಳಿಸಿದರೆ, ನಮ್ಮ ಜವಾಬ್ದಾರಿ ಮುಗಿಯುವುದಿಲ್ಲ. ಅವರ ಪ್ರತಿಮೆಯನ್ನು ನೋಡಿದಾಗಲೆಲ್ಲಾ, ಅವರ ಚಿಂತನೆಗಳು ನಮಗೆ ಅರಿವಾಗಬೇಕು. ನಮ್ಮ ಗುರಿ ಸ್ಪಷ್ಟವಾಗಿರಬೇಕು ಎಂದರು.
ಸಾಂಸ್ಕೃತಿಕ ಕಲಾತಂಡಗಳು ಮತ್ತು ತಮಟೆ ವಾದನಗಳೊಂದಿಗೆ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರವಿರುವ ಬ್ಯಾನರ್ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಅವರಿಂದ 250 ಮಕ್ಕಳಿಗೆ ನೋಟ್ ಪುಸ್ತಕಗಳು, ಬ್ಯಾಗ್ ಗಳನ್ನು ವಿತರಣೆ ಮಾಡಿದರು. ಮಹಿಳೆಯರಿಗೆ ಸೀರೆಗಳು ವಿತರಣೆ, ಬಡವರಿಗೆ ಕಂಬಳಿಗಳು ವಿತರಣೆ ಮಾಡಿದರು. ದೇವರ ಮಳ್ಳೂರು ಮಹೇಶ್ ತಂಡದಿಂದ ಕ್ರಾಂತಿಗೀತೆಗಳ ಕಾರ್ಯಕ್ರಮ ನಡೆಯಿತು.
ಜಾರಿನಿರ್ದೇಶನಾಲಯದ ಅಧಿಕಾರಿಗಳು, ಕಾಂಗ್ರೆಸ್ ಪಕ್ಷದ ಶಾಸಕರನ್ನೆ ಟಾರ್ಗೆಟ್ ಮಾಡ್ತಿದ್ದಾರೆ. ಅವರಿಗೆ ದಾಳಿ ನಡೆಸಲು ಅಧಿಕಾರವಿದೆ. ಆದರೆ, ಎಲ್ಲಾ ಪಕ್ಷಗಳವರ ಮೇಲೆಯೂ ನಡೆಸಲಿ, ಉದ್ದೇಶ ಪೂರ್ವಕವಾಗಿ ಕಾಂಗ್ರೆಸ್ ಪಕ್ಷವನ್ನು ಟಾರ್ಗೆಟ್ ಮಾಡ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಸಚಿವ ಕೆ.ಹೆಚ್.ಮುನಿಯಪ್ಪ ಹೇಳಿದರು.
ಬಯಾಪ ಅಧ್ಯಕ್ಷ ಶಾಂತಕುಮಾರ್, ನಿರ್ದೇಶಕ ಪ್ರಸನ್ನಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಿನ್ನೂರು ವೆಂಕಟೇಶ್, ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಗೌಸ್ ಖಾನ್, ಪುರಸಭೆ ಸದಸ್ಯ ಎಂ.ನಾರಾಯಣಸ್ವಾಮಿ, ಸಿ.ಜಗನ್ನಾಥ್, ಎಂ.ಎನ್.ಎಸ್.ನಾರಾಯಣಸ್ವಾಮಿ, ಮರವೇ ಕೆಂಪಣ್ಣ, ಕರ್ನಾಟಕ ದಲಿತ ಜನಸೇನೆ ರಾಜ್ಯಾಧ್ಯಕ್ಷ ಟಿ.ಭರತ್, ಜಾಂಬವ ಯುವಸೇನೆ ರಾಜ್ಯಾಧ್ಯಕ್ಷ ರಮೇಶ್ ಚಕ್ರವರ್ತಿ, ಕೆ.ಎಂ.ಮಹೇಶ್, ಸೈಪುಲ್ಲಾ, ಜಾಲಿಗೆ ಮುನಿರಾಜು, ಡಾ.ಬಿ.ಆರ್.ಅಂಬೇಡ್ಕರ್ ರಕ್ಷಣಾ ಸಮಿತಿಯ ರಾಜ್ಯಾಧ್ಯಕ್ಷ ಸಿ.ಶ್ರೀನಿವಾಸ್, ಕಾರಹಳ್ಳಿ ಶ್ರೀನಿವಾಸ್, ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ರಬ್ಬನಹಳ್ಳಿ ಗಿರೀಶ್, ಯುವ ಕಾಂಗ್ರೆಸ್ ಅಧ್ಯಕ್ಷ ಎಸ್.ಭಾನುಚಂದ್ರ, ಆಟೋ ಸುರೇಶ್, ಚಂದ್ರು, ಐ.ಬಿ.ದೇವರಾಜ್, ನರಸಿಂಹಮೂರ್ತಿ, ಮುಂತಾದವರು ಹಾಜರಿದ್ದರು.