ದೊಡ್ಡಬಳ್ಳಾಪುರ ನಗರಸಭೆಗೆ ಸೇರಿದ 20ಎಕರೆ ಜಾಗವನ್ನು ರಕ್ಷಿಸಲು ಕನ್ನಡಿಗರ ರಕ್ಷಣಾ ವೇದಿಕೆ ಒತ್ತಾಯ

ದೊಡ್ಡಬಳ್ಳಾಪುರ: ಹಿಂದಿನ ಪುರಸಭೆಗೆ ಸೇರಿರುವ ಸರ್ವೇ ನಂಬರ್ 112ರ 20ಎಕರೆ ಜಾಗ ಹಾಲಿ ನಗರಸಭೆಗೆ ಸೇರಿದ ಸ್ವತ್ತು ಎಂದು ದಾಖಲೆಗಳಲ್ಲಿ ನಮೂದಾಗಿದ್ದು ಇದನ್ನು ರಕ್ಷಿಸುವಂತೆ ಕನ್ನಡಿಗರ ರಕ್ಷಣಾ ವೇದಿಕೆ ಒತ್ತಾಯಿಸಿದೆ.

ಇದಕ್ಕೆ ಸಂಬಂಧಿಸಿದಂತೆ ಸಂಘಟನೆ ವತಿಯಿಂದ ನಗರಸಭೆ ಪೌರಯುಕ್ತರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಸಂಘಟನೆ ಸಂಸ್ಥಾಪಕ ಬಿ. ಎಸ್. ಚಂದ್ರಶೇಖರ್ ಪತ್ರಿಕಾ ಹೇಳಿಕೆ ನೀಡಿ ನಗರಸಭೆ ಪಕ್ಕದಲ್ಲಿರುವ 20ಎಕರೆ ಜಾಗವು ಪುರಸಭೆಗೆ ಸೇರಿದೆಂದು ದಾಖಲೆಗಳು ಹೇಳುತ್ತಿವೆ. ಆದರೂ ಕೂಡಾ ಇದು ಪುರಸಭೆ ಜಾಗವೆಂದು ಮೇಲ್ನೋಟಕ್ಕೆ ಕಾಣುತ್ತಿಲ್ಲ.
ದೊಡ್ಡಬಳ್ಳಾಪುರ ನಗರ ಅತಿ ವೇಗವಾಗಿ ಬೆಳೆಯುತ್ತಿದ್ದು ಮುಂಬರುವ ದಿನಗಳಲ್ಲಿ ಪ್ರಸ್ತುತ ಜಾಗವು ನಗರದ ಕೇಂದ್ರ ಬಾಗವೆಂದು ಗೋಚರಿಸುವ ಲಕ್ಷಣಗಳು ಕಾಣುತ್ತಿವೆ. ಜೊತೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯು ಬೆಂಗಳೂರು ಉತ್ತರ ಜಿಲ್ಲೆ ಎಂದು ಘೋಷಣೆ ಯಾಗಿರುವುದರಿಂದ ಗ್ರೇಡ್. 1ನಗರಸಭೆಯಾಗಿ ಮುಂಬಡ್ತಿ ಪಡೆದುಕೊಂಡಿದೆ. ಹೀಗಾಗಿ ಮೂಲ ಸೌಕರ್ಯಗಳು ಹೆಚ್ಚಾಗಬೇಕು. ಆದ್ದರಿಂದ ಹಳೆಯ ಪುರಸಭೆ ಹೆಸರಿನಲ್ಲಿರುವ ನಗರಸಭೆಗೆ ಹೊಂದಿಕೊಂಡಿರುವ 20ಎಕರೆ ಜಾಗವನ್ನು ಅಳತೆ ಮಾಡಿಸಿ ನಗರಸಭೆಯ ಸುಪರ್ದಿಗೆ ತೆಗೆದುಕೊಳ್ಳಬೇಕಿದೆ. ಈ ಜಾಗದಲ್ಲಿ ಫುಡ್ ಪಾರ್ಕ್ ನಿರ್ಮಿಸಿದರೆ ವ್ಯಾಪಾರಿಗಳಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ. ಈ ಜಾಗ ಭಗತ್ ಸಿಂಗ್ ಕ್ರೀಡಾಂಗಣ, ಕೆ. ಎಸ್. ಆರ್. ಟಿ. ಸಿ. ಬಸ್ ಡಿಪೋ, ಹಾಗೂ ಟಿ. ಎ. ಪಿ. ಎಂ. ಸಿ. ಎಸ್ ಕಚೇರಿ ಸರ್ವೇ ನಂಬರ್ 112ಕ್ಕೆ ಸೇರಿದ್ದು ಇದೆಲ್ಲವೂ ಪುರಸಭೆ ವ್ಯಾಪ್ತಿಗೆ ಬರುವುದರಿಂದ ಈ ಜಾಗವನ್ನು ರಕ್ಷಿಸಿ ನಗರಸಭೆಗೆ ಸೇರಿಸಿಕೊಳ್ಳಬೇಕೆಂದು ಚಂದ್ರಶೇಖರ್ ಹೇಳಿದ್ದಾರೆ.
ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ವಿನಯ್ ಆರಾಧ್ಯ, ಪ್ರದಾನ ಕಾರ್ಯದರ್ಶಿ ಉದಯ್ ಕುಮಾರ್ ಸಂಘಟನಾ ಕಾರ್ಯದರ್ಶಿ ಶಿವಾನಂದ, ಸುರೇಶ ಪ್ರಶಾಂತ್ ಹಾಜರಿದ್ದರು.