ಬಂಡೀಪುರದಲ್ಲಿ ಕಾಡಾನೆ ಜೊತೆಗೆ ಪ್ರವಾಸಿಗರ ಹುಚ್ಚಾಟ ವ್ಯಕ್ತಿಗೆ ಗಾಯ
ಗುಂಡ್ಲುಪೇಟೆ:ಬಂಡೀಪುರದಲ್ಲಿ ಕಾಡಾನೆಗಳ ಹಾವಳಿ ಗೊತ್ತೇ ಇದೆ. ಈ ಬಗ್ಗೆ ಇಲ್ಲಿನ ಸವಾರರಿಗೆ, ಪ್ರವಾಸಿಗರಿಗೆ ಅರಣ್ಯ ಇಲಾಖೆ ಸಾಕುಷ್ಟು ಬಾರಿ ಬುದ್ಧಿ ಹೇಳಿ, ದಂಡ ಹಾಕಿದರೂ ಕೆಲವರು ಕ್ಯಾರೇ ಎನ್ನದೇ ಕಾಡಾನೆಯ ಸಹವಾಸಕ್ಕೆ ಹೋಗಿ ತಗಲಾಕಿಕೊಂಡ ಪ್ರಕರಣ ನಮ್ಮಲ್ಲಿ ಸಾಕಷ್ಟಿದೆ. ಆದರೆ ನಿನ್ನೆ ನಡೆದ ಘಟನೆಯ ವಿಡಿಯೋ ನೋಡಿದರೆ ಎಂಥವರ ಜೀವ ಬಾಯಿಗೆ ಬಂದೇ ಬಿಡುತ್ತದೆ. ವ್ಯಕ್ತಿಯೋರ್ವ ಒಂಟಿ ಸಲಗವನ್ನು ಕೆಣಕಿ ಸಾವಿನ ದವಡೆಯಿಂದ ಪಾರಾಗಿದ್ದಾನೆ.
ಫೋಟೋದ ಆಸೆಗೆ ವ್ಯಕ್ತಿಯೊಬ್ಬ ತನ್ನ ಜೀವವನ್ನೇ ಕಳೆದುಕೊಳ್ಳುವ ಪರಿಸ್ಥಿತಿ ಎದುರಾದ ಘಟನೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದ ಕೆಕ್ಕನಹಳ್ಳ ಸಮೀಪ ನಡೆದಿದೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 67ರಲ್ಲಿ ಕಾಡಾನೆಯ ಫೋಟೋ ತೆಗೆಯಲು ವಾಹನದಿಂದ ಇಳಿದಿದ್ದ ವೇಳೆ ಸಲಗವೊಂದು ದಾಳಿ ಮಾಡಿದ್ದು, ತುಳಿಯಲು ಯತ್ನಿಸಿದೆ.
ತಮಿಳುನಾಡಿನ ಊಟಿ ಕಡೆಯಿಂದ ಗುಂಡ್ಲುಪೇಟೆಯತ್ತ ಬರುವಾಗ ಬಿಳಿ ಬಣ್ಣದ ಶರ್ಟ್ ಧರಿಸಿದ್ದ ವ್ಯಕ್ತಿಯು ರಸ್ತೆಬದಿ ಕಾಡಾನೆ ನಿಂತಿದ್ದನ್ನು ಕಂಡು ಫೋಟೋ ತೆಗೆಯಲು ಕೆಳಕ್ಕೆ ಇಳಿದಿದ್ದಾನೆ. ಅಷ್ಟರಲ್ಲಿ, ಆನೆಯ ಮುಂದೆ ಕಾರೊಂದು ಮೂವ್ ಆದಾಗ ರೊಚ್ಚಿಗೆದ್ದ ಆನೆಯು ಕಾರಿನ ಮೇಲೆ ದಾಳಿ ಮಾಡಲು ಮುಂದಾಗಿ ಅಲ್ಲೇ ಫೋಟೋ ತೆಗೆಯಲು ಕೆಳಗೆ ಇಳಿದಿದ್ದ ವ್ಯಕ್ತಿಯನ್ನು ಅಟ್ಟಾಡಿಸಿದೆ.
ಆನೆಯ ದಾಳಿಗೆ ಪ್ರಜ್ಞೆ ತಪ್ಪಿದ ವ್ಯಕ್ತಿ: ಆನೆ ದಾಳಿಗೆ ಒಳಗಾದ ವ್ಯಕ್ತಿಯು ಕೆಲ ಸಮಯ ರಸ್ತೆಯಲ್ಲಿಯೇ ಪ್ರಜ್ಞೆ ತಪ್ಪಿ ಬಿದ್ದಿದ್ದು ಬಳಿಕ ಅವರ ಕಡೆಯವರೇ ವಾಹನದಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಎಂಥಹ ಕಲ್ಲುಗುಂಡಿಗೆಯವರಾದರೂ ಒಂಟಿ ಸಲಗ ನಮ್ಮ ಮೇಲೆ ದಾಳಿಗೆ ಬಂದಾಗ ಪ್ರಾಣ ಹಾರಿಹೋದಂತೆ ಅನುಭವವಾಗುವುದರಲ್ಲಿ ಸಂದೇಹವೇ ಇಲ್ಲ. ಇಂತಹ ಘಟನೆಯ ವಿಡಿಯೋಗಳಾನ್ನಾದರೂ ನೋಡಿ ಜನರು ಪಾಠ ಕಲಿಯಬೇಕಿದೆ
ವರದಿ: ಆರ್ ಉಮೇಶ್ ಮಲಾರಪಾಳ್ಯ