ಬಿ.ತಿಮ್ಮಸಂದ್ರ ಗ್ರಾಮದಲ್ಲಿ ಕೊಳಚೆ ನೀರು ಹರಿದುಹೋಗಲು ಕಾಲುವೆ ನಿರ್ಮಾಣ ಮಾಡುವಂತೆ ಒತ್ತಾಯ

ಶಿಡ್ಲಘಟ್ಟ: ವಾಸದ ಮನೆಗಳ ಪಕ್ಕದಲ್ಲಿದ್ದ ರಾಜಕಾಲುವೆಯನ್ನು ಮುಚ್ಚಿ ಹಾಕಿರುವ ಕಾರಣ, ಕೊಳಚೆ ನೀರು ಹರಿಯಲು ಕಾಲುವೆಯಿಲ್ಲದೆ, ಕೊಳಚೆ ನೀರೆಲ್ಲಾ ಮನೆಗಳ ಸಮೀಪ ಕುಂಟೆಯಂತೆ ನಿಂತಿದ್ದು, ಇದರಿಂದ ದುರ್ವಾಸನೆ ಬೀರುವುದರ ಜೊತೆಗೆ, ಸುತ್ತಮುತ್ತಲಿನಲ್ಲಿ ವಾಸವಾಗಿರುವ ಜನರು, ಅನೈರ್ಮಲ್ಯದಿಂದ ಪರದಾಡುವಂತಾಗಿದೆ. ಕೊಳಚೆ ನೀರು ಹರಿದು ಹೋಗುವುದಕ್ಕೆ ಕಾಲುವೆ ನಿರ್ಮಾಣ ಮಾಡಿಕೊಡಬೇಕು ಎಂದು ಬಿ.ತಿಮ್ಮಸಂದ್ರ(ಟಿ.ಬುಸನಹಳ್ಳಿ) ಗ್ರಾಮದ ಯಲ್ಲಪ್ಪ ಒತ್ತಾಯಿಸಿದ್ದಾರೆ.
ತಾಲೂಕಿನ ಜಂಗಮಕೋಟೆ ಹೋಬಳಿಯ ಕುಂಬಿಗಾನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಬಿ.ತಿಮ್ಮಸಂದ್ರ(ಟಿ.ಬುಸನಹಳ್ಳಿ) ಗ್ರಾಮದಲ್ಲಿ, ಪರಿಶಿಷ್ಟರು ವಾಸವಾಗಿರುವ ಮನೆಗಳ ಪಕ್ಕದಲ್ಲಿ ರಾಜಕಾಲುವೆಯಿದೆ. ಈ ಕಾಲುವೆಯನ್ನು ಮುಚ್ಚಿಹಾಕಿದ್ದಾರೆ. ಕಾಲುವೆ ಮುಚ್ಚಿ ಹಾಕಿರುವುದರ ಪರಿಣಾಮವಾಗಿ, ಮನೆಗಳಲ್ಲಿ ಉಪಯೋಗಿಸಿ, ಚರಂಡಿಯ ಮೂಲಕ ಹೊರಗೆ ಬಿಟ್ಟ ನೀರೆಲ್ಲವೂ ಮನೆಗಳ ಸಮೀಪದಲ್ಲಿ ಕುಂಟೆಯಂತೆ ನಿಂತಿವೆ. ಮುಂದೆ ಹೋಗಲು ಚರಂಡಿಯಿಲ್ಲ. ಕುಂಟೆಯಂತೆ ನಿಂತಿರುವ ಕೊಳಚೆ ನೀರಿನಿಂದಾಗಿ, ಸಂಜೆಯಾಗುತ್ತಿದ್ದಂತೆ ದುರ್ವಾಸನೆ ಬರುತ್ತಿದೆ. ಪಕ್ಕದಲ್ಲೆ ವಾಸವಾಗಿರುವ ನಾವು, ನೆಮ್ಮದಿಯಾಗಿ ಊಟ ಮಾಡುವುದಕ್ಕೂ ಸಾಧ್ಯವಾಗುತ್ತಿಲ್ಲ. ಸೊಳ್ಳೆಗಳ ಕಾಟ ಜಾಸ್ತಿಯಾಗಿದೆ. ಮನೆಗಳಲ್ಲಿ ಹಸುಗೂಸುಗಳಿವೆ ಅವುಗಳನ್ನು ಸಂರಕ್ಷಣೆ ಮಾಡುವುದಕ್ಕೂ ಕಷ್ಟವಾಗುತ್ತಿದೆ ಎಂದು ಅವರು ದೂರಿದರು.
ನಾನು, ಈಗಾಗಲೇ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ತಹಶೀಲ್ದಾರ್, ಜಿಲ್ಲಾ ಉಸ್ತುವಾರಿ ಸಚಿವರೂ ಸೇರಿದಂತೆ ಎಲ್ಲರಿಗೂ ಮನವಿಗಳು ಕೊಟ್ಟಿದ್ದೇನೆ. ಜಿಲ್ಲಾ ಉಸ್ತುವಾರಿ ಸಚಿವರು ಕೂಡಲೇ ಪರಿಶೀಲನೆ ನಡೆಸುವಂತೆ ಜಿಲ್ಲಾಧಿಕಾರಿಗೆ ಬರೆದಿದ್ದರಾದರೂ ಇದುವರೆಗೂ ಸಮಸ್ಯೆ ಬಗೆಹರಿಸಿಲ್ಲ. ನಾವು ಪರಿಶಿಷ್ಡ ಜಾತಿಗೆ ಸೇರಿದ್ದು, ನಾವು ವಾಸವಾಗಿರುವ ಕಾಲೋನಿಗಳಲ್ಲಿ ರಸ್ತೆಗಳಿಗಾಗಿ ಮೀಸಲಿಟ್ಟಿರುವ ಜಾಗವನ್ನೂ ಒತ್ತುವರಿ ಮಾಡಿಕೊಂಡಿದ್ದಾರೆ. ಕೂಡಲೇ ಸರ್ವೆ ಮಾಡಿ, ರಸ್ತೆಗಳನ್ನು ಬಿಡಿಸಿಕೊಡಬೇಕು. ಸರ್ಕಾರಿ ಗೋಮಾಳದಲ್ಲಿ ಗ್ರಾಮಸ್ಥರಿಗೆ ನಿವೇಶನಗಳಿಗಾಗಿ ಭೂಮಿಯನ್ನು ಮಂಜೂರು ಮಾಡಿಕೊಡಬೇಕು. ಯಾರು, ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡು ನಕಲಿ ದಾಖಲೆಗಳನ್ನು ಸೃಷ್ಟಿಸಿ, ೫೩ ಆಗಲಿ, ೫೭ ಆಗಲಿ ಹಾಕಿಕೊಳ್ಳದೆ, ಬಗರ್ ಹುಕ್ಕುಂ ಸಾಗುವಳಿ ಮಾಡದೇ ಭೂಮಿ ಮಂಜೂರು ಮಾಡಿಸಿಕೊಂಡಿದ್ದಾರೋ ಅವರ ಮೇಲೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಕರ್ನಾಟಕ ರಾಜ್ಯ ಮಾದಿಗ ದಂಡೋರ ತಾಲ್ಲೂಕು ಅಧ್ಯಕ್ಷ ನಾರಾಯಣಸ್ವಾಮಿ ಮಾತನಾಡಿ, ಪರಿಶಿಷ್ಟರು ವಾಸವಾಗಿರುವ ಕಾಲೋನಿಗಳಲ್ಲಿ ಅವರಿಗೆ ತೊಂದರೆಯುಂಟಾಗುತ್ತಿದ್ದರೂ, ಸರ್ಕಾರಿ ಭೂಮಿ ಒತ್ತುವರಿ ಮಾಡಿಕೊಂಡಿರುವುದನ್ನು ತೆರವುಗೊಳಿಸದ ಅಧಿಕಾರಿಗಳ ಕ್ರಮ ಖಂಡನೀಯ. ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು, ನಕಾಶೆಯಂತೆ ರಾಜಕಾಲುವೆಯನ್ನು ಗುರ್ತಿಸಬೇಕು. ಕಾಲುವೆಯ ಮೂಲಕ ಕೊಳಚೆನೀರು ಹಾದುಹೋಗುವಂತೆ ವ್ಯವಸ್ಥೆ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.