ತೂಬಗೆರೆ ಸಲ್ಲಾಪುರಮ್ಮ ದೇವಿ ನವಿಕೃತ ದೇವಾಲಯ ಲೋಕಾರ್ಪಣೆ
ದೊಡ್ಡಬಳ್ಳಾಪುರ:ತಾಲೂಕಿನ ತೂಬಗೆರೆ ಗ್ರಾಮದಲ್ಲಿ ಗ್ರಾಮದೇವತೆ ಶ್ರೀ ಸಲ್ಲಾಪುರಮ್ಮ ದೇವಾಲಯವು ಇತ್ತೀಚೆಗೆ ನವೀಕರಿಸಲ್ಪಟ್ಟು ಲೋಕಾರ್ಪಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ದೇವಾಲಯದ ಜೀರ್ಣೋದ್ಧಾರ ಕಾರ್ಯ ಯಶಸ್ವಿಯಾಗಿ ನೆರವೇರಿಸಲಾಗಿದ್ದು, ಹೊಸದಾಗಿ ನಿರ್ಮಿಸಲಾದ ಕಪ್ಪುಕಲ್ಲಿನ ದೇವಿ ವಿಗ್ರಹವನ್ನು ವೈದಿಕ ಮಂತ್ರೋಚ್ಚಾರಣೆಯ ಮಧ್ಯೆ ಪ್ರತಿಷ್ಠಾಪಿಸಲಾಯಿತು.
ಸಮಾರಂಭದ ಅಂಗವಾಗಿ ವೈದಿಕರು ಶಾಸ್ತ್ರೋಕ್ತ ವಿಧಾನದಲ್ಲಿ ಹೋಮ–ಹವನಗಳನ್ನು ನೆರವೇರಿಸಿ, ಪೂರ್ಣಾಹುತಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಭಕ್ತರು ಧಾರ್ಮಿಕ ಉತ್ಸಾಹದಿಂದ ದೇವಿಯನ್ನು ಪೂಜಿಸಿ ಆಶೀರ್ವಾದ ಪಡೆದರು.
ಲೋಕಾರ್ಪಣಾ ಸಮಾರಂಭದಲ್ಲಿ ಗ್ರಾಮಸ್ಥರು, ಸುತ್ತಮುತ್ತಲಿನ ಹಳ್ಳಿಗಳ ಭಕ್ತರು, ಹಿರಿಯರು ಹಾಗೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದು ಗ್ರಾಮ ದೇವತೆ ದೇವಿ ಸಲ್ಲಾಪುರಮ್ಮನ ಆಶೀರ್ವಾದವನ್ನು ಕೋರಿದರು. ಧಾರ್ಮಿಕ ವಿಧಿವಿಧಾನಗಳ ಬಳಿಕ ಭಕ್ತರಿಗೆ ಪ್ರಸಾದವನ್ನು ವಿತರಿಸಲಾಯಿತು.
ತೂಬಗೆರೆ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶದಲ್ಲಿ ಸಲ್ಲಾಪುರಮ್ಮ ದೇವಿ “ಗ್ರಾಮದ ಅಮ್ಮ” ಎಂಬ ನಂಬಿಕೆ ಜನಮನದಲ್ಲಿ ಬೇರೂರಿದ್ದು, ಪ್ರತಿವರ್ಷದ ಹಬ್ಬ–ಹರಿದಿನಗಳಲ್ಲಿ ನೂರಾರು ಜನರು ಇಲ್ಲಿಗೆ ಆಗಮಿಸುತ್ತಾರೆ. ಇತ್ತೀಚಿನ ಜೀರ್ಣೋದ್ಧಾರ ಹಾಗೂ ವಿಗ್ರಹ ಪ್ರತಿಷ್ಠಾಪನೆಯಿಂದ ದೇವಸ್ಥಾನವು ಇನ್ನಷ್ಟು ಭಕ್ತರ ಆಕರ್ಷಣೆಯ ಕೇಂದ್ರವಾಗಲಿದೆ ಎಂದು ದೇವಾಲಯದ ಪೂಜಾರಿ ವಿಜಯ್ ತಿಳಿಸಿದರು.