ನೇಕಾರಿಕೆ ಸಂಕಷ್ಟ ತೀವ್ರ ಹಿನ್ನೆಲೆಯಲ್ಲಿ ಬೀದಿಗಿಳಿದ ನೇಕಾರ ಸಂಘಟನೆಗಳು
ದೊಡ್ಡಬಳ್ಳಾಪುರ:ತಾಲ್ಲೂಕಿನ ಸೀರೆ ಮಾರುಕಟ್ಟೆಗೆ ಸೂರತ್‌ನಲ್ಲಿ ಆಧುನಿಕ ಮಗ್ಗಗಳಿಂದ ತಯಾರಿಸಿದ ಸೀರೆಗಳು ಲಗ್ಗೆ ಇಟ್ಟಿವೆ. ಇದರಿಂದ ನೇಯ್ಗೆ ಉದ್ಯಮಕ್ಕೆ ಸಾಕಷ್ಟು ಸಮಸ್ಯೆ ಆಗುತ್ತಿದ್ದು, ಇದಕ್ಕೆ ಕಡಿವಾಣ ಹಾಕುವಂತೆ ಹಾಗೂ ನೇಕಾರರ ಅನೇಕ ಬೇಡಿಕೆಗಳನ್ನು ಈಡೇರಿಸುವಂತೆ ಅಗ್ರಹಿಸಿ ನಗರದ ತಾಲೂಕು ಕಚೇರಿಯ ಮುಭಾಂಗದಲ್ಲಿ ವಿವಿಧ ನೇಕಾರರ ಸಂಘಟನೆಗಳು ಬೃಹತ್ ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಂಡಿ ದ್ದವು.
ಈ ವೇಳೆ ನೇಕಾರರ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಪಿ.ಎ ವೆಂಕಟೇಶ್ ಮಾತನಾಡಿ, ನೇಯ್ಗೆ ಉದ್ಯಮದ ಉಳಿವಿಗಾಗಿ ನಡೆಸುತ್ತಿರುವ ಹೋರಾಟ. ಈ ಹೋರಾಟದ ಯಶಸ್ಸಿಗೆ ನೇಯ್ಗೆ ಉದ್ಯಮವನ್ನು ಬಂದ್ ಮಾಡಿಕೊಂಡು ಬಂದಿದ್ದೇವೆ. ಮಗ್ಗಗಳನ್ನು ನಿಲ್ಲಿಸಿ ಇಂದು ಧರಣಿ ಮಾಡಲಾಗುತ್ತಿದೆ. ಜವಳಿ ಮಂತ್ರಿಗಳು, ಜವಳಿ ಇಲಾಖೆಯ ಉನ್ನತ ಅಧಿಕಾರಿಗಳು ಸ್ಥಳಕ್ಕೆ ಬರಬೇಕು. ಸಮಸ್ಯೆ ಬಗೆಹರಿಸುವವರೆಗೂ ಇಲ್ಲಿಯೇ ಇರುತ್ತೇವೆ. ಹೋರಾಟದ ಯಶಸ್ಸಿಗೆ ಎಲ್ಲರೂ ಕೈಜೋಡಿಸಬೇಕು. ಸೂರತ್ ಆಧುನಿಕ ಮಗ್ಗದಿಂದ ತಯಾರಿಸಿದ ಸೀರೆಗಳು ನಮ್ಮ ಮಾರುಕಟ್ಟೆ ಪ್ರವೇಶಿಸಿದೆ. ಇದರಿಂದ ದೊಡ್ಡಬಳ್ಳಾಪುರದ ಸೀರೆಗಳ ಬೇಡಿಕೆ ಕುಸಿತವಾಗಿದೆ. ಅಲ್ಲಿನ ಸೀರೆಗಳನ್ನು ತಂದು ಕಡಿಮೆ ದರದಲ್ಲಿ ಮಾರಾಟ ಮಾಡಲಾಗುತ್ತದೆ. ಇದರಿಂದ ಸಮಸ್ಯೆ ಆಗುತ್ತಿದ್ದು, ಸರಕಾರ ನಮ್ಮ ಸಮಸ್ಯೆ ಬಗೆಹರಿಸಬೇಕು. ಕೃಷಿ ನಂತರ ಹೆಚ್ಚು ಉದ್ಯೋಗ ಸೃಷ್ಟಿ ಮಾಡಿದ ಕ್ಷೇತ್ರ ಎಂದರೆ ಅದು ಜವಳಿ ಕ್ಷೇತ್ರ. ಸರಕಾರ ನಮ್ಮ ಸಮಸ್ಯೆ ಬಗೆಹರಿಸಬೇಕು. ದೊಡ್ಡಬಳ್ಳಾಪುರ ನೇಕಾರರು ಒಂದಾಗಿದ್ದೇವೆ. ಇದು ಹೋರಾಟದ ಆರಂಭ. ನೇಕಾರರ ಕಲ್ಯಾಣ ಮಂಡಳಿ ರಚನೆ ಮಾಡಿ ೧೦೦೦ ಕೋಟಿ ಮೀಸಲಿಡಬೇಕು. ನೇಕಾರರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಬೇಕು ಎಂದರು.
ಮಾಜಿ ಶಾಸಕ ಟಿ. ವೆಂಕಟರಮಣಯ್ಯ ಮಾತನಾಡಿ ನೇಕಾರರು ನಿಯೋಗ ಮಾಡಿಕೊಂಡು ದೆಹಲಿಗೆ ತೆರಳಿ ಕೇಂದ್ರ ಸರಕಾರಕ್ಕೆ ಇಲ್ಲಿನ ಸಮಸ್ಯೆ ಬಗ್ಗೆ ತಿಳಿಸೋಣ. ರಾಜ್ಯದ ಜವಳಿ ಮಂತ್ರಿಗಳನ್ನು ತಾಲ್ಲೂಕಿಗೆ ಕರೆದುಕೊಂಡು ಬರುತ್ತೇನೆ. ಸೂರತ್‌ನಿಂದ ಸೀರೆ ತರುವವರ ಮನೆಗಳಿಗೆ ಭೇಟಿ ನೀಡಿ ಸೂರತ್ ಸೀರೆಯಿಂದ ಆಗುವ ಸಮಸ್ಯೆ ಬಗ್ಗೆ ಮನವರಿಕೆ ಮಾಡೋಣ. ನೇಕಾರರ ಉಳಿವಿಗಾಗಿ ಈ ಹೋರಾಟ ಬಹಳ ಮುಖ್ಯವಾಗಿದ್ದು ಕೇಂದ್ರ ಸರಕಾರ ನಮ್ಮ ರಾಜ್ಯ ನೇಕಾರರಿಗೂ ಹೆಚ್ಚಿನ ಸೌಲಭ್ಯ ಕಲ್ಪಿಸಬೇಕು ಎಂದರು.
ನೇಕಾರಿಕೆ ಸಂಕಷ್ಟ ಹಿನ್ನೆಲೆ ನೇಕಾರಿಕೆಗೆ ಸಂಬಂಧ ಪಟ್ಟ ಎಲ್ಲಾ ವಿಭಾಗಗಳ ಸಂಘಟನೆಗಳು, ಕಾರ್ಮಿಕಸಂಘಟನೆಗಳು ತಾಲೂಕು ಕನ್ನಡ ಪಕ್ಷ, ಹಲವಾರು ಸಂಘಟನೆಗಳ ಜೊತೆಗೆ ತಾಲೂಕಿನ ಪ್ರಮುಖ ರಾಜಕೀಯ ಪಕ್ಷಗಳು ಪ್ರತಿಭಟನೆಯಲ್ಲಿ ಭಾಗವಹಿಸಿ ನೇಕಾರರ ಹೋರಾಟವನ್ನು ಬೆಂಬಲಿಸಿದ್ದು ವಿಶೇಷವಾಗಿತ್ತು.





