ಭಾಷೆ ಉಸಿರಾದಾಗ ಮಾತ್ರ ಕನ್ನಡತನ ಉಳಿಯುತ್ತೆ: ಕಲಾವಿದ ವೆಂಕಟೇಶ್ ಅಭಿಮತ
ದೇವನಹಳ್ಳಿ :,ಪರಿವರ್ತನಾ ಕಲಾ ಸಂಸ್ಥೆ ಇಂಚರ ಸಾಂಸ್ಕೃತಿಕ ಕಲಾ ಸಂಘ ಕೆಳಗಿನಜೂಗಾನಹಳ್ಳಿ, ಡ್ರೀಮ್ ಹಂಟರ್ಸ್ ಡ್ಯಾನ್ಸ್ ಸ್ಟುಡಿಯೋ ವಿಜಯಪುರ ಕನ್ನಡ ಕಲಾಭಿಮಾನಿಗಳ ಸಂಘ ಸಹಯೋಗದಲ್ಲಿ ಐಬಸಾಪುರ ಹಾಲಿನ ಡೈರಿ ಆವರಣದಲ್ಲಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಸಾಂಸ್ಕೃತಿಕ ಹಬ್ಬವನ್ನು ಉದ್ಘಾಟಿಸಿ ಅವರು ಮಾತನಾಡುತ್ತಾ ಕನ್ನಡ ಭಾಷೆ ಜಾಗತೀಕರಣ ಭರಾಟೆಗೆ ಸಿಲುಕಿ ಪರಭಾಷಿಕರೇ ಹೆಚ್ಚಿನ ಸಂಖ್ಯೆ ಯಲ್ಲಿ ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ನೆಲೆಯೂರುತ್ತಿದ್ದು ಕನ್ನಡವು ವಿಳಾಸವಿಲ್ಲದಂತೆ ಆಗುವ ದುಸ್ಥಿತಿ ಬಂದೊದಗುತ್ತಿದೆ ಆದ್ದರಿಂದ ನಾವು ಎಚ್ಚೆತ್ತುಕೊಂಡು ನಮ್ಮ ಭುವನೇಶ್ವರಿಯನ್ನು ಉಳಿಸಿಕೊಳ್ಳಲು ಮುಂದಾಗಬೇಕೆಂದು ಕಲಾವಿದ ಬಂಡೆಪಾಳ್ಯ ವೆಂಕಟೇಶ್ ಕರೆ ನೀಡಿದರು.
ಕಾರ್ಯಕ್ರಮವನ್ನು ರೈತ ಸಂಘದ ಕಾರ್ಯದರ್ಶಿ ಐ. ಟಿ ರಾಮಾಂಜಿನಪ್ಪ ಉದ್ಘಾಟಿಸಿ ಕನ್ನಡ ರಾಜ್ಯೋತ್ಸವ ನವೆಂಬರ್ ಗೆ ಸೀಮಿತವಾಗದೆ ವರ್ಷಪೂರ್ತಿ ನಡೆದಾಗ ಮಾತ್ರ ಕನ್ನಡ ಉಳಿಯುತ್ತದೆ ಎಂದರು.
ವೇದಿಕೆಯಲ್ಲಿ ಕೋಲಾರದ ಮಿಮಿಕ್ರಿ ಕಲಾವಿದರಾದ ಪ್ರೇಮ್ ಶೇಖರ್ ಮೂಗಿನ ಸಹಾಯದಿಂದ ಶಹನಾಯಿ ನುಡಿಸಿ ಕನ್ನಡ ಕಲಾಭಿಮಾನಿಗಳನ್ನು ಅಚ್ಚರಿಗೊಳಿಸಿದರು. ದಾಬಸ್ ಪೇಟೆ ಕೆ. ದೇವರಾಜ್, ಗುಂಡಮಗೆರೆ ನಾಗರಾಜ್ ರವರಿಂದ ಕನ್ನಡ ಹಾಡುಗಳ ಸಂಗೀತ ರಸಮಂಜರಿ, ನೃತ್ಯಪಟು ದೀಪಿಕಾ ದೇವರಾಜ್ ರವರಿಂದ ಕನ್ನಡ ಗೀತೆಗಳಿಗೆ ನೃತ್ಯ ಪ್ರದರ್ಶನ, ಧಾರಾವಾಹಿ ನಟ ರಂಗಪ್ಪ ಮಹಾಲಿಂಗೇಗೌಡ ರವರಿಂದ ಪೌರಾಣಿಕ ಹಿರಣ್ಯಕಶಿಪು, ಬಬ್ರುವಾಹನ ಪಾತ್ರಗಳ ದೃಶ್ಯ ಪ್ರದರ್ಶನ ಹಾಗು ಡಾ. ದೇವನಹಳ್ಳಿ ದೇವರಾಜ್ ರವರ ನಿರ್ದೇಶನದಲ್ಲಿ ಮೈಸೂರು ರಮಾನಂದ ರಚನೆಯ ಅಪ್ಪ -ಮಗ ಹಾಸ್ಯ ನಾಟಕ ಬೂದಿಗೆರೆ ಭರತ್ ಕುಮಾರ್ ಸಂಗೀತದಲ್ಲಿ ಉತ್ತಮವಾಗಿ ಮೂಡಿಬಂದು ಕಾರ್ಯಕ್ರಮದ ಯಶಸ್ವಿಗೆ ಭಾಜನವಾಯಿತು.
ಇದೇ ಸಂದರ್ಭದಲ್ಲಿ ರಂಗಭೂಮಿ, ಕಿರುತೆರೆ, ಸಿನಿಮಾ ನಟ, ನಿರ್ದೇಶಕ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಡಾ. ದೇವನಹಳ್ಳಿ ದೇವರಾಜ್ ರವರನ್ನು ಸನ್ಮಾನಿಸಲಾಯಿತು





