--ಜಾಹೀರಾತು--

ಇ-ಗಸ್ತು ತಂತ್ರಾಂಶದಲ್ಲಿ ಅರಣ್ಯಗಸ್ತು ನಿಗಾಕ್ಕೆಸಚಿವರಾದ ಈಶ್ವರ್ ಖಂಡ್ರೆ ಸೂಚನೆ

On: December 3, 2025 7:27 PM
Follow us:
--विज्ञापन यहां--

Whatsapp Channel

Join Now

Telegram Group

Join Now
Spread the love

ಇ-ಗಸ್ತು ತಂತ್ರಾಂಶದಲ್ಲಿ ಅರಣ್ಯಗಸ್ತು ನಿಗಾಕ್ಕೆಸಚಿವರಾದ ಈಶ್ವರ್ ಖಂಡ್ರೆ ಸೂಚನೆ

ಚಾಮರಾಜನಗರ: ರಾಜ್ಯ ಅರಣ್ಯ ಇಲಾಖೆ ಅಭಿವೃದ್ಧಿಪಡಿಸಿರುವ ಇ-ಗಸ್ತು ತಂತ್ರಾಂಶದ ಮೂಲಕ ಇಲಾಖೆಯ ಮುಂಚೂಣಿ ಸಿಬ್ಬಂದಿ ದಿನವೊಂದಕ್ಕೆ ಎಷ್ಟು ಗಸ್ತು ತಿರುಗುತ್ತಾರೆ ಎಂಬ ಬಗ್ಗೆ ನಿಗಾ ಇಡಲು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಅವರು ಸೂಚಿಸಿದ್ದಾರೆ.

ಚಾಮರಾಜನಗರ ಕೊಳ್ಳೆಗಾಲದ ಮಲೈ ಮಹದೇಶ್ವರ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇಂದು ಚಾಮರಾಜನಗರ ಮತ್ತು ಮೈಸೂರು ವೃತ್ತದ ಅರಣ್ಯಾಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಹೊಸದಾಗಿ ರೂಪಿಸಲಾಗಿರುವ ಈ ತಂತ್ರಾಂಶದ ಬಗ್ಗೆ ಸೂಕ್ತ ಪ್ರತಿಕ್ರಿಯೆ ನೀಡಿ, ತಂತ್ರಾಂಶ ಅಭಿವೃದ್ಧಿ ಪಡಿಸಿ ಎಂದು ಆದೇಶಿಸಿದರು.

ಮಾನವ-ವನ್ಯಜೀವಿ ಸಂಘರ್ಷ ನಿಯಂತ್ರಿಸಲು ಗಸ್ತು ಅತ್ಯಂತ ಮುಖ್ಯವಾಗಿದ್ದು, ಇದನ್ನು ಬಲಪಡಿಸುವ ಅಗತ್ಯವಿದೆ. ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಈಗಾಗಲೇ ಅಳವಡಿಸಲಾಗಿರುವ ಎಂ.ಸ್ಟ್ರೈಪ್ ಜೊತೆಗೆ ನಮ್ಮ ಇ-ಗಸ್ತು ತಂತ್ರಾಂಶವನ್ನೂ ಜಾರಿ ಮಾಡಿ ನಿಗಾ ಇಡುವಂತೆ ಸಚಿವರು ಸೂಚಿಸಿದರು.

ಶಾಲೆ-ಕಾಲೇಜು ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಿ : ಇಂದಿನ ಯುವ ಪೀಳಿಗೆಗೆ ಮತ್ತು ಮಕ್ಕಳಿಗೆ ಅರಣ್ಯ ಮತ್ತು ವನ್ಯಜೀವಿಗಳ ಸ್ವಭಾವದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆಯಲ್ಲಿರುವ ಉತ್ತಮ ವಾಗ್ಮಿಗಳು ಅಥವಾ ಆಸಕ್ತ ಎನ್.ಜಿ.ಓ. ಬಳಸಿಕೊಂಡು ಜಾಗೃತಿ ಮೂಡಿಸುವ ಕಾರ್ಯ ಮಾಡಿ, ಹುಲಿ ಪ್ರತಿಷ್ಠಾನದ ಹಣದಲ್ಲಿ ಮೂರನೇ ಒಂದು ಭಾಗವನ್ನು ಅರಣ್ಯದಂಚಿನ ಗ್ರಾಮಗಳಲ್ಲಿನ ಜನ ಸಂಪರ್ಕ ಕಾರ್ಯಕ್ಕೆ ವೆಚ್ಚ ಮಾಡಿ ಎಂದು ಸಚಿವರು ನಿರ್ದೇಶನ ನೀಡಿದರು.

ಅದೇ ರೀತಿ ಹುಲಿ ಬಂದಾಗ ಏನು ಮಾಡಬೇಕು, ಚಿರತೆ, ಕರಡಿ, ಆನೆ ಬಂದರೆ ಹೇಗೆ ನಡೆದುಕೊಳ್ಳಬೇಕು, ಹಾವು ಕಂಡಾಗ ಏನು ಮಾಡಬೇಕು ಎಂಬ ಬಗ್ಗೆ ಕಾಡಿನಂಚಿನ ಮಕ್ಕಳಿಗೆ ತಿಳಿವಳಿಕೆ ಮೂಡಿಸಲು ಅಣಕು ಪ್ರದರ್ಶನಗಳನ್ನು ಏರ್ಪಡಿಸಿ ಎಂದು ಸಚಿವರು ತಿಳಿಸಿದರು.

ಅರಣ್ಯ ಪ್ರದೇಶದಲ್ಲಿ ಹೆಚ್ಚಳವಾಗುತ್ತಿಲ್ಲ. ಬದಲಾಗಿ ವನ್ಯಜೀವಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. ಒಂದು ಗಂಡು ಹುಲಿಗೆ ಕನಿಷ್ಠ 14 ಚದರ ಕಿಲೋ ಮೀಟರ್ ಪ್ರದೇಶ ಬೇಕಿದ್ದರೆ, ಹೆಣ್ಣು ಹುಲಿಗೆ 8ರಿಂದ 10 ಚದರ ಕಿಲೋ ಮೀಟರ್ ಬೇಕಾಗುತ್ತದೆ ಎಂದು ತಜ್ಞರು ಹೇಳುತ್ತಾರೆ. ಆದರೆ ಒಂದು ಅಂದಾಜಿನ ರೀತ್ಯ ಬಂಡೀಪುರದಲ್ಲಿ 190 ಹುಲಿಗಳಿದ್ದು, ಅರಣ್ಯ ಪ್ರದೇಶ ಇರುವುದು 950 ಚದರ ಕಿಲೋ ಮೀಟರ್. ಅಂದರೆ ಕಾಡಿಗಿಂತ ಹುಲಿಯ ಸಂಖ್ಯೆ ಹೆಚ್ಚಿದೆ. ಇದಕ್ಕೆ ಸಹಬಾಳ್ವೆಯೊಂದೇ ಪರಿಹಾರವಾಗಿದೆ ಎಂದು ಹೇಳಿದರು.

ಅರಣ್ಯ ಸಿಬ್ಬಂದಿ ಗ್ರಾಮದಂಚಿನ ಜನರೊಂದಿಗೆ ಹೆಚ್ಚು ಸ್ನೇಹಪರವಾಗಿದ್ದಾಗ ಸಮಸ್ಯೆ ಪರಿಹರಿಸಲು ಸಾಧ್ಯ. ಗ್ರಾಮದ ಜನರಿಂದಲೇ ನಿಮಗೆ ಮಾಹಿತಿ ಲಭಿಸುತ್ತದೆ. ವನ್ಯಜೀವಿಗಳೂ ಸುರಕ್ಷಿತವಾಗಿರುತ್ತವೆ. ತಕ್ಷಣ ನೀವು ಸ್ಪಂದಿಸಿದರೆ ಜನರ ಜೀವ, ಬೆಳೆಯೂ ಉಳಿಯುತ್ತದೆ ಎಂದರು.

ವನ್ಯಜೀವಿಗಳು ವಸತಿ ಪ್ರದೇಶದ ಬಳಿ ಬಂದ ಬಗ್ಗೆ ಮಾಹಿತಿ ದೊರೆತ ಕೂಡಲೇ ಅಲ್ಲಿಗೆ ಧಾವಿಸಲು ವಾಹನ ಮತ್ತು ಸಿಬ್ಬಂದಿ ಸಜ್ಜಾಗಿರುವಂತೆ ನೋಡಿಕೊಳ್ಳಿ ಮತ್ತು ಹುಲಿ ಸಂಚಾರ ಇರುವ 100 ಕಿಲೋ ಮೀಟರ್ ವ್ಯಾಪ್ತಿಯ ಗ್ರಾಮಗಳ ಬಳಿ ಪ್ರತಿ 5 ಕಿಲೋ ಮೀಟರ್ ಗೆ ಒಂದು ತಾತ್ಕಾಲಿಕ ಶಿಬಿರ ಮಾಡಿ ಗಸ್ತು ಹೆಚ್ಚಿಸಿ ಎಂದು ತಿಳಿಸಿದರು.

ಹಿರಿಯ ಅಧಿಕಾರಿಗಳು ವನ್ಯಜೀವಿ-ಮಾನವ ಸಂಘರ್ಷ ಹೆಚ್ಚಿರುವ ಗ್ರಾಮಗಳಲ್ಲಿ ವಾಸ್ತವ್ಯ ಹೂಡಿ ಜನರ ಸಮಸ್ಯೆ ಆಲಿಸಬೇಕು. ಸಮಸ್ಯೆಗೆ ಪರಿಹಾರ ದೊರಕಿಸಬೇಕು ಎಂದೂ ಅರಣ್ಯ ಸಚಿವರಾದ ಈಶ್ವರ ಖಂಡ್ರೆ ಅವರು ತಿಳಿಸಿದರು.

ಶಾಸಕರಾದ ಎ.ಆರ್. ಕೃಷ್ಣಮೂರ್ತಿ, ಎಂ.ಆರ್.ಮಂಜುನಾಥ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಎಚ್.ವಿ.ಚಂದ್ರು, ಜಿಲ್ಲಾಧಿಕಾರಿ ಶಿಲ್ಪಾ ನಾಗ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್ , ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ್, ಡಿಸಿಎಫ್ ಭಾಸ್ಕರ್, ಜಿಲ್ಲಾ ಪರಿಸರ ಅಧಿಕಾರಿ ಕೆ.ಎಲ್.ಸವಿತಾ ಇಲಾಖೆಯ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ವರದಿ: ಆರ್ ಉಮೇಶ್ ಮಲಾರಪಾಳ್ಯ