ಫುಡ್ ಪಾರ್ಕ್ ಎಂ.ಡಿ.ಜಯದೇವ್ ಕೈಗಾರಿಕೆ ಆರಂಭಿಸಿ, ಉದ್ಯೋಗ ನೀಡುವ ಬದಲು ರಿಯಲ್ ಎಸ್ಟೇಟ್ ಬ್ಯುಸಿನೆಸ್-ಶಾಸಕ ಹೆಚ್. ಟಿ.ಮಂಜು ಗಂಭೀರ ಆರೋಪ?
ಕೆ.ಆರ್.ಪೇಟೆ:ತಾಲ್ಲೂಕಿನ ಬೂಕನಕೆರೆ ಹೋಬಳಿಯ ಬಣ್ಣೇನಹಳ್ಳಿ ಗ್ರಾಮದ ಬಳಿಯಿರುವ ಕೈಗಾರಿಕಾ ಪ್ರದೇಶದಲ್ಲಿರುವ ಮೆಘಾಫುಡ್ ಫುಡ್ ಪಾರ್ಕ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಜಯದೇವ್ ಅವರು ಕೈಗಾರಿಕೆ ಸ್ಥಾಪಿಸಿ ನಿರುದ್ಯೋಗಿಗಳಿಗೆ ಉದ್ಯೋಗ ನೀಡುವ ಬದಲು ಅಕ್ಕಪಕ್ಕದ ರೈತರಿಂದ ಭೂಮಿ ಖರೀದಿಸುವ ಕೆಲಸದಲ್ಲಿ ನಿರತರಾಗಿದ್ದು ರಿಯಲ್ ಎಸ್ಟೇಟ್ ಬ್ಯುಸಿನೆಸ್ ಮಾಡುತ್ತಿದ್ದಾರೆ ಎಂದು ಶಾಸಕ ಹೆಚ್.ಟಿ.ಮಂಜು ಗಂಭೀರ ಆರೋಪ ಮಾಡಿದರು.
ಅವರು ಕೆ.ಆರ್.ಪೇಟೆ ತಾಲ್ಲೂಕಿನ ಬೂಕನಕೆರೆ ಹೋಬಳಿಯ ಬಣ್ಣೇನಹಳ್ಳಿ ಬಳಿಯಿರುವ ಕೈಗಾರಿಕಾ ಪ್ರದೇಶದಲ್ಲಿರುವ ಮೆಘಾಫುಡ್ ಫುಡ್ ಪಾರ್ಕ್ ಸಂಸ್ಥೆಯವರು ರೈತರಿಗೆ ಕಿರುಕುಳ ನೀಡುತ್ತಿರುವ ಬಗ್ಗೆ ಸ್ಥಳೀಯ ರೈತರು ತಮ್ಮ ಜಮೀನುಗಳಿಗೆ, ಕೆರೆಗೆ ದೇವಸ್ಥಾನಕ್ಕೆ ಹೋಗಲು ಇದ್ದ ರಸ್ತೆಯನ್ನು ಮುಚ್ಚಿರುವ ಬಗ್ಗೆ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಕ್ಷೇತ್ರದ ಶಾಸಕರಾದ ಹೆಚ್.ಟಿ.ಮಂಜು ಅವರು ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದರು.
ರೈತರು ದೇವಾಲಯಕ್ಕೆ ಹೋಗುವ ಹಾಗೂ ಕೆರೆಕಟ್ಟೆಗಳಿಗೆ ಹೋಗಲು ಇದ್ದ ಮೂಲ ರಸ್ತೆಯನ್ನು ಮುಚ್ಚಿರುವ ಬಗ್ಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಕೂಡಲೇ ರಸ್ತೆ ಬಿಟ್ಟು ಕೊಡಬೇಕು. ಕೆರೆ ಕಟ್ಟೆಗಳಿಗೆ ಹೋಗಲು ರಸ್ತೆಯನ್ನು ನಿರ್ಮಾಣ ಮಾಡಿಕೊಡಬೇಕು. ರೈತರಿಗೆ ಯಾವುದೇ ಕಿರುಕುಳ ನೀಡಬಾರದು. ಫುಡ್ ಪಾರ್ಕ್ ಅಧಿಕಾರಿಗಳು ರೈತರೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ಕೈಗಾರಿಕೆಗಳನ್ನು ನಿರ್ಮಾಣ ಮಾಡಿ ಸ್ಥಳೀಯರಿಗೆ ಉದ್ಯೋಗ ನೀಡಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 12ವರ್ಷಗಳ ಹಿಂದೆ ಫುಡ್‌ಪಾರ್ಕ್ ಉದ್ಘಾಟನೆ ಮಾಡಿ ಕೈಗಾರಿಕೆ ಆರಂಭಿಸಿ ಉದ್ಯೋಗ ನೀಡುವಂತೆ ಆದೇಶ ನೀಡಿದ್ದರೂ ಸಹ ಫುಡ್‌ಪಾರ್ಕ್ ಎಂ.ಡಿ.ಜೈದೇವ್ ಕೈಗಾರಿಕಾ ಪ್ರದೇಶದಲ್ಲಿ ಕೈಗಾರಿಕೆಗಳನ್ನು ಆರಂಭಿಸಿ ಸ್ಥಳೀಯರಿಗೆ ಉದ್ಯೋಗ ನೀಡುವ ಬದಲು 12ವರ್ಷ ಕಳೆದರೂ ಕೆಲವೇ ಕೆಲವು ಸಣ್ಣ ಕೈಗಾರಿಕೆಗಳ ಮಾತ್ರ ಆರಂಭಗೊ0ಡಿವೆ. ಗಾರ್ಮೆಂಟ್ಸ್ ನಂತಹ ಬೃಹತ್ ಕೈಗಾರಿಕೆಗಳನ್ನು ಆರಂಭಿಸಿ ಕನಿಷ್ಠ 25 ಸಾವಿರ ಮಂದಿಗೆ ಉದ್ಯೋಗ ನೀಡಲು ಅಗತ್ಯ ಕ್ರಮ ವಹಿಸಬೇಕು ಇದರ ಬಗ್ಗೆ ಗಮನ ಹರಿಸದೇ ಫುಡ್‌ಪಾರ್ಕ್ ಅಕ್ಕಪಕ್ಕದ ರೈತರ ಭೂಮಿಯನ್ನು ಕಡಿಮೆ ಬೆಲೆಗೆ ಖರೀದಿಸಿ ರೈತರನ್ನು ಭೂರಹಿತನ್ನಾಗಿ ಮಾಡುವುದನ್ನು ನಿಲ್ಲಿಸಬೇಕು. ರೈತರಿಂದ ಭೂಮಿಯನ್ನು ಖರೀದಿಸಿ ದೊಡ್ಡ ದೊಡ್ಡ ಉದ್ಯಮಿಗಳಿಗೆ ಮಾರಾಟ ಮಾಡುವ ರಿಯಲ್ ಎಸ್ಟೇಟ್ ಉದ್ಯಮ ಮಾಡುತ್ತಿರುವ ಮೆಗಾಫುಡ್ ಪಾರ್ಕ್ ವ್ಯವಸ್ಥಾಪಕ ಜಯದೇವ್ ಅವರನ್ನು ಮೊಬೈಲ್ ಕರೆ ಮಾಡಿ ತೀವ್ರ ತರಾಟೆಗೆ ತೆಗೆದುಕೊಂಡ ಶಾಸಕರು ಕೂಡಲೇ ರಿಯಲ್ ಎಸ್ಟೇಟ್ ವ್ಯವಹಾರ ನಿಲ್ಲಿಸಿ ಹೊಸ ಹೊಸ ಕೈಗಾರಿಕೆಗಳನ್ನು ಆರಂಭಿಸುವತ್ತ ತುರ್ತು ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ಸುತ್ತ ಮುತ್ತಲ ರೈತರೊಡಗೂಡಿ ಮೆಗಾಫುಡ್ ಪಾರ್ಕ್ ಕಂಪನಿಯ ವಿರುದ್ಧ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಶಾಸಕರು ಎಚ್ಚರಿಕೆ ನೀಡಿದರು. ಸುಮಾರು ಐದಾರು ಸಲ ಸಭೆ ನಡೆಸಿ ಸ್ಥಳೀಯ ಬಣ್ಣೇನಹಳ್ಳಿ ಗ್ರಾಮಸ್ಥರಿಗೆ ತೊಂದರೆ ನೀಡುತ್ತಿರುವ ಫುಡ್ ಪಾರ್ಕ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದರೂ ಸಹ ಯಾವುದೇ ಕ್ರಮ ಕೈಗೊಳ್ಳದೇ ಇರುವ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ ಶಾಸಕರು ಫುಡ್‌ಪಾರ್ಕ್ ಎಂ.ಡಿ.ಜಯದೇವ್ ರಿಯಲ್ ಎಸ್ಟೇಟ್ ಬ್ಯುಸಿನೆಸ್ ನಿಲ್ಲಿಸದೇ ಇದ್ದರೆ ಸ್ಥಳೀಯ ರೈತರೊಂದಿಗೆ ಸೇರಿ ಫುಡ್‌ಪಾರ್ಕ್ ಎಂ.ಡಿ. ಜಯದೇವ್ ಹಠಾವೋ, ಕೈಗಾರಿಕೆ ಬಚಾವೋ ಚಳುವಳಿ ನಡೆಸಬೇಕಾಗುತ್ತದೆ ಎಂದು ಶಾಸಕರಾದ ಹೆಚ್.ಟಿ.ಮಂಜು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ದಿ (ಕೆಐಎಡಿಬಿ) ಅಧಿಕಾರಿಗಳಾದ ಎಸ್.ಎಲ್.ಓ ವೆಂಕಟರಾಜು, ಇ.ಇ ಮಾದೇಶ್, ತಾಲ್ಲೂಕು ಸರ್ವೆ ಅಧಿಕಾರಿಗಳಾದ ಎಸ್.ಲೋಕೇಶ್, ಕೆ.ಟಿ.ಆನಂದ್, ಬೂಕನಕೆರೆ ಹೋಬಳಿಯ ಉಪ ತಹಶಿಲ್ದಾರ್ ಜಗದೀಶ್, ರಾಜಸ್ವ ನೀರೀಕ್ಷಕಿ ಚಂದ್ರಕಲಾಪ್ರಕಾಶ್, ಗ್ರಾಮ ಲೆಕ್ಕಾಧಿಕಾರಿ ಬಾಲಾಜಿ, ಮುಖಂಡರಾದ ತಾಲ್ಲೂಕು ಪಿ.ಎಲ್.ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಹಾಲಿ ನಿರ್ದೇಶಕ ಬಿ.ಜೆ. ಧನಂಜಯ, ತಾಲ್ಲೂಕು ಟಿಎಪಿಸಿಎಂಎಸ್ ಅಧ್ಯಕ್ಷ ಬಲದೇವ್, ಎಪಿಎಂಸಿ ಮಾಜಿ ಅಧ್ಯಕ್ಷ ಐನೋರಹಳ್ಳಿ ,ಮಲ್ಲೇಶ್, ತಾಲ್ಲೂಕು ಟಿಎಪಿಸಿಎಂಸ್ ನಿರ್ದೇಶಕರಾದ ಕಿಕ್ಕೇರಿ ಮಧು, ಕೃಷ್ಣೇಗೌಡ, ವಾಟಾಳ್ ನಾಗರಾಜು, ನಟೇಶ್, ಮಿಲ್ ವೆಂಕಟೇಶ್, ಆನಂದ್, ಶಾಸಕರ ಆಪ್ತ ಸಹಾಯಕ ಅರಳುಕುಪ್ಪೆ ಪ್ರತಾಪ್, ಧ್ರುವ, ಕುಮಾರಸ್ವಾಮಿ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.





