ಸರ್ಕಾರವೇ ಜಾಗ ನೀಡಿ ಹಕ್ಕು ಪತ್ರ, ಖಾತೆ ಮಾಡಿಕೊಟ್ಟ ಜಾಗವನ್ನು ಒಕ್ಕಲೆಬ್ಬಿಸುವ ಕ್ರಮಕ್ಕೆ ನಿವಾಸಿಗಳ ಆಕ್ರೋಶ
ದೊಡ್ಡಬಳ್ಳಾಪುರ:ತಾಲೂಕಿನ,ದೊಡ್ಡಬೆಳವಂಗಲ ಹೋಬಳಿ ಹುಲ್ಲಕಂಟೆ ಗ್ರಾಮದಲ್ಲಿ ವಸತಿ ರಹಿತ ಬಡವರಿಗೆ ಹಕ್ಕುಪತ್ರ ನೀಡಿ ಮನೆ ನಿರ್ಮಾಣಕ್ಕೆ ಸಹಾಯಧನ ಜತೆಗೆ ಗ್ರಾಮ ಪಂಚಾಯಿತಿಯಲ್ಲಿ ಖಾತೆ ಮಾಡಿ ಕೊಟ್ಟು, ಮೂಲ ಸೌಲಭ್ಯವನ್ನು ಒದಗಿಸಿ 5೦ ವರ್ಷಗಳ ನಂತರ ಜಾಗ ನಿಮ್ಮದಲ್ಲ ಎಂದು ಅಧಿಕಾರಿಗಳು ಕ್ಯಾತೆ ತೆಗೆದಿದ್ದಾರೆ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ದೊಡ್ಡಬಳ್ಳಾಪುರ ತಾಲ್ಲೂಕಿನ ಹುಲುಕುಂಟೆ ಗ್ರಾಮದಲ್ಲಿ 1989-90 ರಿಂದ ಗುಡಿಸಲಿನಲ್ಲಿ ವಾಸಿಸುತ್ತಿದ್ದ ಬಡವರಿಗೆ 2001 ರಲ್ಲಿ ಸರ್ವೆ ನಂ. 162 ರಲ್ಲಿ ಗುಡಿಸಲು, ಮನೆಗಳಿದ್ದ ಜಾಗಕ್ಕೆ 94 ಸಿ ಅಡಿಯಲ್ಲಿ ತಾತ್ಕಾಲಿಕ ಹಕ್ಕುಪತ್ರಗಳನ್ನು ತಹಸೀಲ್ದಾರ್ ನೀಡಿದ್ದಾರೆ. ಅಂದಿನಿಂದ 35ಕ್ಕೂ ಹೆಚ್ಚು ಕುಟುಂಬಗಳು ಅಲ್ಲಿಯೇ ವಾಸಿಸುತ್ತಿವೆ. ಸ್ಥಳೀಯ ಗ್ರಾಮ ಪಂಚಾಯಿತಿ ಬಿ-ಖಾತೆಯನ್ನು ನೀಡಿ ಸೌಲಭ್ಯವನ್ನು ಒದಗಿಸಿದೆ. ಆದರೆ, ಈಗ ಹಳೆ ಮನೆಯ ಜಾಗದಲ್ಲಿ ಹೊಸ ಮನೆ ಕಟ್ಟಲು ಅನುಮತಿ ಹಾಗೂ ಇ-ಖಾತೆ ಮಾಡಿಕೊಡಲು ನಿಮ್ಮದಲ್ಲಿ ಜಾಗ ಎಂಬ ಕಾರಣ ಹೇಳಿ ತಡೆಯೊಡ್ಡಲಾಗುತ್ತಿದೆ ಎನ್ನುವ ಆರೋಪ ಕೇಳಿಬಂದಿದೆ.
ದಿಕ್ಕು ತೋಚದಂತಾದ ಕುಟುಂಬಗಳು :40 ವರ್ಷದ ಕೆಲ ಮನೆಗಳು ಶಿಥಿಲವಾಗಿದ್ದು ಹೊಸ ಮನೆ ನಿರ್ಮಾಣ ಮಾಡಲು ಅನುಮತಿ ನೀಡುತ್ತಿಲ್ಲ. ಇದರಿಂದ ವಿದ್ಯುತ್ ಸಮಸ್ಯೆ, ಸಾಲ ಸೌಲಭ್ಯ, ಇ-ಖಾತೆ ನೀಡಲು ತಕರಾರು ಸೇರಿದಂತೆ ಅನೇಕ ಸಮಸ್ಯೆಗಳು ಎದುರಾಗಿವೆ. ಈ ಜಾಗ ನಿಮ್ಮದಲ್ಲ ಎನ್ನುವ ಪರಿಣಾಮ ೩೨ಕ್ಕೂ ಹೆಚ್ಚು ಕುಟುಂಬಗಳು ದಿಕ್ಕುತೋಚದಂತಾಗಿವೆ.
ಕAದಾಯ ಇಲಾಖೆ ಎಡವಟ್ಟು : ಮನೆ ನಿರ್ಮಾಣವಾಗಿರುವ ಜಾಗವನ್ನು ಪರಿಶೀಲನೆ ಮಾಡಿ ಸರ್ವೆ ನಂ.102 ಎಂದು ತಾತ್ಕಾಲಿಕ ಹಕ್ಕುಪತ್ರವನ್ನು ದಾಖಲೆ ಮಾಡಿಕೊಟ್ಟರು. ಆದರೆ ಈಗ ಮನೆ ನಿರ್ಮಾಣ ಮಾಡಿರುವ ಜಾಗ ಸರಕಾರಿ ಓಣಿ ಎಂದು ಪಹಣಿಯಲ್ಲಿ ನಮೂದಾಗಿದ್ದು, ಹೊಡ್ಡ ಹಳ್ಳದ ಜಾಗವು ಸರ್ವೆ ನಂ.102 ಎಂದು ನಮೂದಾಗಿರುವುದು ಮನೆ ಮಾಲೀಕರ ಗೊಂದಲಕ್ಕೆ ಕಾರಣವಾಗಿದೆ. ಅಲ್ಲದೇ, ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಈ ಬಗ್ಗೆ ಕಂದಾಯ ಇಲಾಖೆ ಹಾಗೂ ಆರ್‌ಡಿಸಿಆರ್ ಇಲಾಖೆ ಜಂಟಿ ತನಿಖೆ ನಡೆಸಿ ಸರಿಪಡಿಸುವ ಅವಕಾಶವಿದ್ದರೂ ಅಧಿಕಾರಿಗಳು ಬದ್ಧತೆ ತೋರುತ್ತಿಲ್ಲ.
ಮನವಿಗೆ ಸ್ಪಂದಿಸುತ್ತಿಲ್ಲ; ಹುಲುಕುಂಟೆ ಗ್ರಾಮದ ಜನರು ಸ್ಥಳೀಯ ಗ್ರಾಮ ಪಂಚಾಯಿತಿ ಪಿಡಿಒ, ಇಒ, ತಹಸೀಲ್ದಾರ್, ಜಿಲ್ಲಾಧಿಕಾರಿ, ಸಿಎಂ ಇಲಾಖೆಗೂ ಮಾಹಿತಿ ನೀಡಿದರೂ, ಅನೇಕ ಬಾರಿ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದರೂ, ಪ್ರಯೋಜನವಾಗಿಲ್ಲ. ಇದರಿಂದ 35ಕ್ಕೂ ಹೆಚ್ಚು ಕುಟುಂಬಗಳು ದಿನನಿತ್ಯ ಕಚೇರಿಗಳಿಗೆ ಅಲೆಯುವಂತಾಗಿದೆ