ಕ್ರೀಡೆಗಳು ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣಗಳು ಬೆಳೆಸಲು ಸಹಕಾರಿ–ನರೇಂದ್ರ ಕುಮಾರ್
ಶಿಡ್ಲಘಟ್ಟ: ತಾಲೂಕಿನ ಜಂಗಮಕೋಟೆ ಜ್ಞಾನ ಜ್ಯೋತಿ ಶಾಲೆಯ ಆವರಣದಲ್ಲಿ, ಹೋಬಳಿ ಮಟ್ಟದ ಕ್ರೀಡಾಕೂಟಕ್ಕೆ ಮಂಗಳವಾರ ಚಾಲನೆ ನೀಡಲಾಯಿತು.
ಕ್ಷೇತ್ರ ಶಿಕ್ಷಣಾಧಿಕಾರಿ ನರೇಂದ್ರಕುಮಾರ್ ಅವರು, ಕ್ರೀಡಾಕೂಟವನ್ನು ಉದ್ಘಾಟನೆ ಮಾಡಿದರು. ಈ ವೇಳೆ ಮಾತನಾಡಿದ ಅವರು, ಕ್ರೀಡೆಗಳು ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣಗಳನ್ನು ಬೆಳೆಸಲು ಸಹಕಾರಿಯಾಗುವುದರ ಜೊತೆಗೆ, ದೈಹಿಕವಾಗಿ ಸದೃಢತೆಯನ್ನು ಕಾಪಾಡಿಕೊಳ್ಳಲು ಹೆಚ್ಚು ಅನುಕೂಲವಾಗಲಿವೆ. ಒತ್ತಡವನ್ನು ಹೇಗೆ ನಿಭಾಯಿಸಬೇಕು ಎನ್ನುವುದನ್ನು ಕ್ರೀಡೆಯಿಂದ ಕಲಿಯಬಹುದು. ಪಠ್ಯ ಚಟುವಟಿಕೆಗಳೊಂದಿಗೆ ಕ್ರೀಡೆಯೂ ಪಠ್ಯೇತರ ಚಟುವಟಿಕೆಯಾಗಿದೆ. ವಿದ್ಯಾರ್ಥಿಗಳು, ಕ್ರೀಡೆಯಲ್ಲಿ ಸೋಲು-ಗೆಲುವುಗಳನ್ನು ಸಮಾನವಾಗಿ ಸ್ವೀಕಾರ ಮಾಡಿಕೊಳ್ಳಬೇಕು. ಒಂದು ಸೋಲು, ನೂರಾರು ಗೆಲುವುಗಳನ್ನು ತಂದು ಕೊಡಬಲ್ಲದು ಎಂದರು.
ಜ್ಞಾನಜ್ಯೋತಿ ಶಾಲೆಯ ಮೇಲ್ವಿಚಾರಕಿ ಲಕ್ಷ್ಮೀವಾಸುದೇವ್ ಮಾತನಾಡಿ, ವಿದ್ಯಾರ್ಥಿಗಳು, ಕ್ರೀಡಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು, ತೀರ್ಪುಗಾರರು ಕೊಡುವಂತಹ ತೀರ್ಪುಗಳನ್ನು ಗೌರವಿಸಬೇಕು. ಕ್ರೀಡಾಸ್ಫೂರ್ತಿ ಮೆರೆಯಬೇಕು. ಆಯಾ ಶಾಲಾ ಶಿಕ್ಷಕರುಗಳು ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶನ ಮಾಡಬೇಕು ಎಂದರು.
ವಿದ್ಯಾರ್ಥಿಗಳು, ಓಟದ ಸ್ಪರ್ಧೆ, ಗುಂಡು ಎಸೆತ, ಎತ್ತರ ಜಿಗಿತ, ಉದ್ದಜಿಗಿತದಂತಹ ಅಥ್ಲೆಟಿಕ್ಸ್ ಕ್ರೀಡೆಗಳನ್ನು ಆಡಿದರು. ೧೫ ಶಾಲೆಗಳಿಂದ ೪೨೦ ಮಂದಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ದೈಹಿಕ ಶಿಕ್ಷಕದ ಸಂಘದ ಅಧ್ಯಕ್ಷ ಪ್ರಕಾಶ್ ಬಾಬು, ತಾಲ್ಲೂಕು ದೈಹಿಕ ಶಿಕ್ಷಣ ಸಂಯೋಜಕ ವೈ.ಎನ್.ದೇವೇಂದ್ರಪ್ಪ, ಕಸ್ತೂರಿಬಿರಾದರ್, ಉಪಪ್ರಾಂಶುಪಾಲೆ ಕಲ್ಪನಾ, ಶಶಿಕಲಾ, ದೈಹಿಕ ಶಿಕ್ಷಕರಾದ ರಾಜಣ್ಣ, ಅಶ್ವಥನಾರಾಯಣ, ಮುಂತಾದವರು ಹಾಜರಿದ್ದರು.
೧೯.ಎಸ್.ಡಿ.ಎಲ್.ಪಿ.೦೨: ಶಿಡ್ಲಘಟ್ಟ ತಾಲೂಕಿನ ಜಂಗಮಕೋಟೆಯ ಜ್ಞಾನಜ್ಯೋತಿ ಶಾಲೆಯ ಆವರಣದಲ್ಲಿ ಆಯೋಜಿಸಿದ್ದ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ವಿದ್ಯಾರ್ಥಿಗಳು ಓಟದ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.