ಬಾಂಗ್ಲಾ ದೇಶದ ಹಿಂದೂಗಳ ರಕ್ಷಣೆಗೆ ರಾಷ್ಟ್ರ ಪತಿಗಳಿಗೆ ಮನವಿ ಪತ್ರ

ದೊಡ್ಡಬಳ್ಳಾಪುರ :ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ಹಿಂಸಾತ್ಮಕ ಅಕ್ರಮಣವನ್ನು ನಿಲ್ಲಿಸಿ, ಹಿಂದೂಗಳಿಗೆ ರಕ್ಷಣೆ ನೀಡಿ ಹಾಗೂ ಸಂತ್ರಸ್ಥರ ನೆರವಿಗೆ  ವಿಶ್ವಸಂಸ್ಥೆ ಧಾವಿಸಲಿ  ಎಂದು ಹಿಂದೂ ಹಿತ ರಕ್ಷಣಾ ಸಮಿತಿಯ ಮುಖಂಡ ಕೆ ಎಂ ಹನುಮಂತರಾಯಪ್ಪ ಒತ್ತಾಯಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ಆಕ್ರಮಣವನ್ನು ತಡೆಯುವ ನಿಟ್ಟಿನಲ್ಲಿ  ವಿಶ್ವಸಂಸ್ಥೆ ಮುಂದಾಗ ಬೇಕಿದೆ. ಹಾಗೂ ಭಾರತ ದೇಶದ ರಾಷ್ಟ್ರಪತಿಗಳು ಹಾಗೂ ಪ್ರಧಾನ ಮಂತ್ರಿಗಳು ಬಾಂಗ್ಲಾದೇಶದ ಹಿಂದುಗಳ ನೆರವಿಗೆ ನಿಲ್ಲಬೇಕಿದೆ ಎಂದರು.
 ಕೇವಲ 3-4 ದೇಶಗಳಲ್ಲಿ ಮಾತ್ರ ಉಳಿದಿರುವ ಹಿಂದುಗಳನ್ನು ರಕ್ಷಿಸುವ ಹೊಣೆ ಎಲ್ಲರ ಮೇಲಿದೆ ಬಾಂಗ್ಲಾದೇಶದಲ್ಲಿ ಹಿಂದುಗಳು ಅಲ್ಪಸಂಖ್ಯಾತರಾಗಿದ್ದಾರೆ  ಅವರ ಮೇಲೆ ಹಿಂಸಾತ್ಮಕ ಕೃತ್ಯಗಳು ನಿರಂತರವಾಗಿ ನಡೆಯುತ್ತಿದ್ದು ಈ ಕುರಿತು ಜವಾಬ್ದಾರಿಯುತ ಇಲಾಖೆಗಳು ಮಾತನಾಡಬೇಕಿದೆ. ವಿಶ್ವಸಂಸ್ಥೆ ಈ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ತಡೆಯುವಂತೆ ಹಿಂದೂ ಹಿತರಕ್ಷಣ ಸಮಿತಿ ಒತ್ತಾಯಿಸುತ್ತದೆ ಎಂದರು.
ಸಮಿತಿಯ ಮುಖಂಡ ನರೇಶ್ ರೆಡ್ಡಿ ಮಾತನಾಡಿ ಗೌರವಾನ್ವಿತ ರಾಷ್ಟ್ರಪತಿಯವರಿಗೆ ಹಿಂದೂ ಹಿತರಕ್ಷಣಾ ಸಮಿತಿಯ ಮೂಲಕ ಆಗ್ರಹ ಪಡಿಸುವುದೇನೆಂದರೆ ನಮ್ಮ  ಪಕ್ಕದ ನೆರೆಯ ಬಾಂಗ್ಲಾದೇಶವು ತೀವ್ರ ಹಿಂಸಾಚಾರದಿಂದ ಬಳಲುತ್ತಿದೆ. ಬಾಂಗ್ಲಾದೇಶದ ಚುನಾಯಿತ ಪ್ರಧಾನಿ  ದೇಶವನ್ನು ತೊರೆದ ನಂತರ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ನಿಷ್ಕ್ರಿಯವಾಗಿದೆ. ಈ ಗೊಂದಲಮಯ ಪರಿಸ್ಥಿತಿಯಲ್ಲಿ ಅಲ್ಲಿನ ಹಿಂದೂ ಧಾರ್ಮಿಕ ಕೇಂದ್ರಗಳು, ಹಿಂದೂ ವ್ಯಾಪಾರ ಸಂಸ್ಥೆಗಳು, ಮತ್ತು ಹಿಂದೂ ಮನೆಗಳನ್ನು ಗುರಿಯಾಗಿಸಿಕೊಂಡು ತೀವ್ರ ರೀತಿಯ ಧಾಳಿ ನಡೆಯುತ್ತಿದೆ. ಬಾಂಗ್ಲಾದೇಶದಾದ್ಯಂತ ಪ್ರತಿ ಜಿಲ್ಲೆಯಲ್ಲೂ ಹಿಂದೂ ರುದ್ರ ಭೂಮಿಗಳು, ನೂರಾರು ಮಠ ಮಂದಿರಗಳು ಭಾರಿ ಪ್ರಮಾಣದಲ್ಲಿ ಹಾನಿಯಾಗಿದೆ. ಕಾಲಕಾಲಕ್ಕೆ ಸಂಭವಿಸುವ ಇಂತಹ ಗಲಭೆಗಳ ಪರಿಣಾಮ ವಿಭಜನೆಯ ಸಮಯದಲ್ಲಿ ಬಾಂಗ್ಲಾದೇಶದಲ್ಲಿ ಶೇಕಡಾ 28ರಷ್ಟಿದ್ದ  ಹಿಂದೂಗಳು ಈಗ ಶೇಕಡಾ 8ಕ್ಕೆ ಬಂದು ಇಳಿದಿದ್ದಾರೆ.ಹೀಗಾಗಿ ಬಾಂಗ್ಲಾದೇಶದಲ್ಲಿರುವ  ಹಿಂದೂಗಳ ಸಂರಕ್ಷಣೆಗೆ ಭಾರತ ಸರ್ಕಾರ ಮಧ್ಯ ಪ್ರವೇಶಿಸಬೇಕೆಂದು ಸಮಿತಿಯು ಕೋರುತ್ತದೆ ಎಂದರು.
 ಸುದ್ದಿಗೋಷ್ಠಿಯಲ್ಲಿ ಹಿಂದೂ ಮುಖಂಡರಾದ ಭಾಸ್ಕರ್ ಭಗತ್, ರವಿಕುಮಾರ್, ಮುದ್ದಪ್ಪ, ನಾಗೇಶ್, ವೆಂಕಟರಾಜು,ನರಸಿಂಹಮೂರ್ತಿ, ಡಾ. ನಾರಾಯಣ್, ಶ್ರೀನಿವಾಸ್ ಗುರು ಸೇರಿದಂತೆ ಹಲವರು ಉಪಸ್ಥಿತರಿದ್ದರು.