ವಿದ್ಯಾರ್ಥಿಗಳ ಉನ್ನತ ಶಿಕ್ಷಣದಿಂದ ಸರ್ವತೋಮುಖ ಪ್ರಗತಿ ಸಾಧ್ಯ– ಕೆ. ಎಂ. ಕೃಷ್ಣಮೂರ್ತಿ
ದೊಡ್ಡಬಳ್ಳಾಪುರ: ಸಮಾಜದ ಮಕ್ಕಳು ಉತ್ತಮ ಹಾಗೂ ಉನ್ನತ ಶಿಕ್ಷಣ ಹೊಂಡಬೇಕು. ಪೋಷಕರು ಈ ನಿಟ್ಟಿನಲ್ಲಿ ಹೆಚ್ಚು ಒತ್ತು ಕೊಡಬೇಕು. ಹಾಗಾದಾಗ ಮಾತ್ರ ಕುರುಬ ಸಮುದಾಯ ಆರ್ಥಿಕ ಸಾಮಾಜಿಕ ಹಾಗೂ ರಾಜಕೀಯವಾಗಿ ಅಭಿವೃದ್ಧಿ ಹೊಂದಲು ಸಾಧ್ಯ. ಜೊತೆಗೆ ಸಮಾಜ ಕೂಡಾ ಪ್ರಗತಿ ಯತ್ತ ಮುನ್ನಡೆಯಲು ಸಹಕಾರಿಯಾಗುತ್ತದೆ ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ಖಜಾಂಚಿ ಕೆ. ಎಂ. ಕೃಷ್ಣಮೂರ್ತಿ ಹೇಳಿದರು.
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪತ್ತಿನ ಸಹಕಾರ ಸಂಘ ನಗರದ ಕನಕದಾಸ ವೃತ್ತದ ಸಪ್ತಗಿರಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಂಗೊಳ್ಳಿ ರಾಯಣ್ಣ ಜಯಂತಿ ಹಾಗೂ ಕುರುಬ ಸಮುದಾಯದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಕೃಷ್ಣಮೂರ್ತಿ ಮಾತನಾಡಿ ಸಂಗೊಳ್ಳಿ ರಾಯಣ್ಣ ಪತ್ತಿನ ಸಹಕಾರ ಸಂಘ ವಿದ್ಯಾರ್ಥಿಗಳಿಗಾಗಿ ಪ್ರತಿಭಾ ಪುರಸ್ಕಾರದಂತ ಸಮುದಾಯ ಮುಖಿ ಕಾರ್ಯಗಳನ್ನು ಮಾಡುತ್ತಿರುವುದು ಶ್ಲಾಘನೀಯ. ಕುರುಬ ಸಮಾಜದ ಎಲ್ಲರು ಇಂತಹ ಕಾರ್ಯಗಳಿಗೆ ಕೈ ಜೋಡಿಸಬೇಕಿದೆ. ಜೊತೆಗೆ ವಿದ್ಯಾರ್ಥಿಗಳು ಶ್ರಮ ವಹಿಸಿ ಉನ್ನತ ಶಿಕ್ಷಣ ಪಡೆದು ಸಮುದಾಯ ಹಾಗೂ ಸಮಾಜಕ್ಕೆ ಒಳ್ಳೆಯ ಕೊಡುಗೆ ನೀಡಬೇಕಿದೆ. ಈ ನಿಟ್ಟಿನಲ್ಲಿ ರಾಜ್ಯದ ಸಿದ್ದರಾಮಯ್ಯ ಸರ್ಕಾರ ಶಿಕ್ಷಣಕ್ಕಾಗಿ ಹೆಚ್ಚು ಒತ್ತು ನೀಡುವ ಕೆಲಸ ಮಾಡುತ್ತಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕಿದೆ. ಎಂದ ಕೃಷ್ಣಮೂರ್ತಿ ಕುರುಬ ಸಮುದಾಯದ ನಾಯಕ ಸಿದ್ದರಾಮಯ್ಯನವರು ರಾಜ್ಯದ ಮುಖ್ಯಮಂತ್ರಿಯಾಗಿರುವುದು ನಮಗೆಲ್ಲ ಹೆಮ್ಮೆಯ ಸಂಗತಿ. ಮುಖ್ಯಮಂತ್ರಿಯಾಗಿ ರಾಜ್ಯದ ಬಡಜನರ ಕಲ್ಯಾಣಕ್ಕಾಗಿ ಹಲವು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ಶೋಷಿತ ವರ್ಗಗಳ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಆದರೆ ಇಂದು ರಾಜ್ಯಕ್ಕೆ ಜನಪರ ಕಾರ್ಯಕ್ರಮಗಳನ್ನು ಕೊಟ್ಟಂತ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜನಪ್ರಿಯತೆಯನ್ನು ಸಹಿಸದ ಕೆಲವು ಪಟ್ಟಭದ್ರ ಹಿತಾ ಸಕ್ತಿಗಳು ಮೂಡ ಪ್ರಕಾರಣದ ಹೆಸರಿನಲ್ಲಿ ಅಪ ಪ್ರಚಾರ ಮಾಡಿ ಅಧಿಕಾರದಿಂದ ಕೆಳಗಿಳಿಸಲು ಸಂಚು ಹೂಡಿರುವದನ್ನು ಕುರುಬ ಸಮಾಜ ಮಾತ್ರವಲ್ಲ ಎಲ್ಲಾ ಹಿಂದುಳಿದ ಸಮಾಜಗಳು ಇದನ್ನು ಖಂಡಿಸುತ್ತವೆ. ಇದನ್ನು ಖಂಡಿಸಿ ಈಗಾಗಲೇ ರಾಜ್ಯಾವ್ಯಾಪಿ ಪ್ರತಿಭಟನೆಗಳು ಪ್ರಾರಂಭವಾಗಿವೆ. ಮುಂಬರುವ ದಿನಗಳಲ್ಲಿ ಹಿಂದುಳಿದ ವರ್ಗಗಳನ್ನು ಹತ್ತಿಕ್ಕುವ ಪಟ್ಟಭದ್ರ ಹಿತಾಸಕ್ತಿಗಳಿಗೆ ರಾಜ್ಯದ ಅಹಿಂದ ವರ್ಗ ತಕ್ಕ ಉತ್ತರವನ್ನು ಕೊಡಲಿದೆ ಎಂದು ಕೃಷ್ಣ ಮೂರ್ತಿ ಹೇಳಿದರು.
ಶಾಸಕ ಧೀರಜ್ ಮುನಿರಾಜು ಮಾತನಾಡಿ ಸಂಗೊಳ್ಳಿ ರಾಯಣ್ಣನಂತಹ ಸ್ವತಂತ್ರ ಹೋರಾಟ ಗಾರನ ಹೆಸರಿನ ಪತ್ತಿನ ಸಹಕಾರ ಸಂಘ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರದಂತ ಕಾರ್ಯ ಮಾಡುತ್ತಿರುವುದು ಸ್ವಾಗತಾರ್ಹ. ವಿದ್ಯಾರ್ಥಿಗಳು ಹೆಚ್ಚು ಶಿಕ್ಷಣ ಪಡೆದರೆ ಏನಾದರು ಸಾಧನೆ ಮಾಡಲು ಸಾಧ್ಯ. ಈಗ ಎಲ್ಲಾ ಸರ್ಕಾರಗಳು ಶಿಕ್ಷಣಕ್ಕೆ ಒತ್ತು ನೀಡುತ್ತಿವೆ. ನಾನು ವಿದ್ಯಾರ್ಥಿ ಗಳ ಉನ್ನತ ಶಿಕ್ಷಣಕ್ಕಾಗಿ ಎಲ್ಲಾ ರೀತಿಯಿಂದಲೂ ಸಹಕಾರ ನೀಡುತ್ತಿದ್ದೇನೆ. ತಾಲೂಕು ಕುರುಬರ ಸಂಘದ ನಿವೇಶನಕ್ಕೆ ಬಹಳ ದಿನದಿಂದ ಬೇಡಿಕೆ ಇದೆ. ನಾನು ಕೂಡಾ ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸಿ ಸಿದ್ದರಾಮಯ್ಯನವರ ಸರ್ಕಾರ ಇರುವುದರೊಳಗಾಗಿ ತಾಲೂಕು ಕುರುಬರ ಸಂಘದ ನಿವೇಶನ ಕೊಡಿಸುವ ಕೆಲಸ ಮಾಡುತ್ತೇನೆ. ಜೊತೆಗೆ ಕುರುಬ ಸಮಾಜದ ಯಾವುದೇ ಕಾರ್ಯಗಳಿಗೂ ನಾನು ಕೈ ಜೋಡಿಸುತ್ತೇನೆ ಎಂದು ಧೀರಜ್ ಮುನಿರಾಜು ಹೇಳಿದರು.
ಮಾಜಿ ಶಾಸಕ ವೆಂಕಟರಮಣಯ್ಯ ಮಾತನಾಡಿ ಕುರುಬ ಸಮಾಜದ ಪ್ರತಿಯೊಬ್ಬ ವಿದ್ಯಾರ್ಥಿಗಳು ಉನ್ನತ ಶಿಕ್ಷಣದತ್ತ ಗಮನ ಹರಿಸಬೇಕು. ಹಾಗಾದಾಗ ಮಾತ್ರ ಸಮುದಾಯ ಹಾಗೂ ಸಮಾಜ ನಿಮ್ಮನ್ನು ಗುರುತಿಸುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಬಡ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹಲವಾರು ಯೋಜನೆಗಳನ್ನು ರೂಪಿಸಿದೆ. ಕುರುಬರ ಸಂಘದ ನಿವೇಶನದ ಬಗ್ಗೆ ಈಗಾಗಲೇ ನಾನು ಸಾಕಷ್ಟು ಪ್ರಯತ್ನ ಪಟ್ಟಿದ್ದೇನೆ. ಮುಂಬರುವ ದಿನಗಳಲ್ಲಿ ಸಿದ್ದರಾಮಯ್ಯನವರ ಜೊತೆ ಚರ್ಚಿಸಿ ತಾಲೂಕು ಕುರುಬ ಸಮುದಾಯದ ಮುಖಂಡರ ಸಹಕಾರದೊಂದಿಗೆ ಶೀಘ್ರದಲ್ಲಿ ಸಂಘಕ್ಕೆ ನಿವೇಶನ ಕೊಡಿಸಲು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹತ್ತನೇ ತರಗತಿ ಹಾಗೂ ದ್ವಿತೀಯ ಪಿ. ಯು. ಸಿ. ಪರೀಕ್ಷೆಯಲ್ಲಿ 23…24ನೇ ಸಾಲಿನಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿ, ವಿದ್ಯಾರ್ಥಿನಿಯರನ್ನು ಪ್ರತಿಭಾ ಪುರಸ್ಕಾರದ ಮೂಲಕ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಮಾಜಿ ಸಚಿವ ವರ್ತೂರ್ ಪ್ರಕಾಶ್, ಕರ್ನಾಟಕ ಪ್ರದೇಶ ಯುವ ಕುರುಬರ ಸಂಘದ ರಾಜ್ಯಾಧ್ಯಕ್ಷ ಭಗವಂತರಾಯ ಗೌಡ ಪಾಟೀಲ್, ತಾಲೂಕು ಕುರುಬರ ಸಂಘದ ಗೌರವಾಧ್ಯಕ್ಷ ತಿಮ್ಮೆಗೌಡ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿಶ್ವನಾಥ್ ರೆಡ್ಡಿ, ನಗರಸಭೆ ಮಾಜಿ ಅಧ್ಯಕ್ಷ ಮುದ್ದಪ್ಪ, ಕರ್ನಾಟಕ ಪ್ರದೇಶ ಕುರುಬರ ಸಂಘದ ನಿರ್ದೇಶಕ ಕೇಶವಮೂರ್ತಿ, ನಗರಸಭಾ ಸದಸ್ಯರಾದ ಮಲ್ಲೇಶ್, ಚಂದ್ರ ಮೋಹನ್, ಅರಳು ಮಲ್ಲಿಗೆ ಗ್ರಾ. ಪಂ. ಅಧ್ಯಕ್ಷೆ ನಿರ್ಮಲಾ ಸಿದ್ದೇಗೌಡ, ಮಾಜಿ ಅಧ್ಯಕ್ಷ ಮಲ್ಲೇಶ್, ವಕೀಲರ ಸಂಘದ ಕಾರ್ಯದರ್ಶಿ ಕೃಷ್ಣಮೂರ್ತಿ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸಂಘದ ಅಧ್ಯಕ್ಷ ವೆಂಕಟೇಶ್, ಪದಾಧಿಕಾರಿಗಳಾದ ರವಿ, ಮುನಿರಾಜು, ಪಾಪಣ್ಣ, ಮಂಜುನಾಥ್ ಸೇರಿದಂತೆ ತಾಲೂಕು ಕುರುಬ ಸಮಾಜದ ಹಲವಾರು ಮುಖಂಡರು ಭಾಗವಹಿಸಿದ್ದರು.